Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 8ರಿಂದ 14ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 8ರಿಂದ 14ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 8ರಿಂದ 14ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 16ರ ದಿನಭವಿಷ್ಯ
Follow us
ಸ್ವಾತಿ ಎನ್​ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2024 | 12:05 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 8ರಿಂದ 14ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ಹಿಂದೆ ನೀವು ತೆಗೆದುಕೊಂಡಿದ್ದ ತೀರ್ಮಾನದಿಂದಾಗಿ ಬಹಳ ಚಿಂತೆ ಮಾಡುವಂತಾಗುತ್ತದೆ. ಆ ವೇಳೆ ನಿಮಗೆ ಒಳ್ಳೆ ಆದಾಯ ಬರುತ್ತದೆ, ಉತ್ತಮ ಆದಾಯ ಮೂಲವಾಗುತ್ತದೆ ಎಂದು ಭಾವಿಸಿ ಒಪ್ಪಿಕೊಂಡಿದ್ದ ಒಪ್ಪಂದದಿಂದ ಈಗ ಹೊರಗೆ ಬಂದು ಬಿಡೋಣ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಸ್ನೇಹಿತರು ಕೂಡ ನಿಮ್ಮ ತೀರ್ಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಲಿದ್ದಾರೆ. ಸಂಭಾವಿತರಂತೆ ಮೇಲುನೋಟಕ್ಕೆ ಕಾಣುತ್ತಿದ್ದಾರೆ ಎಂಬ ಕಾರಣಕ್ಕೆ ಅವರು ಹೇಳಿದ್ದಕ್ಕೆಲ್ಲ ಹೂಂಗುಟ್ಟಬೇಕು ಎಂದೇನಿಲ್ಲ. ವ್ಯವಹಾರದಲ್ಲಿ ಒಳ್ಳೇತನ, ವೈಯಕ್ತಿಕ ವಿಚಾರಗಳು ಅಡ್ಡ ಬಾರದಂತೆ ನೋಡಿಕೊಳ್ಳಿ. ಮಕ್ಕಳ ಭವಿಷ್ಯಕ್ಕಾಗಿ ನೀವು ಏನು ಆಲೋಚನೆ ಮಾಡುತ್ತಿದ್ದೀರೋ ಅದು ಸಾಕಾರ ಆಗುವುದಕ್ಕೆ ಏನು ಮಾಡಬೇಕು ಎಂಬ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಈ ವಾರದಲ್ಲಿ ಸಾಧ್ಯವಾದರೆ ಕೆಲ ಸಮಯ ಧ್ಯಾನವನ್ನು ಮಾಡುವುದಕ್ಕೆ ಪ್ರಯತ್ನಿಸಿ. ಕೃಷಿಕರು ಸಣ್ಣ ಪುಟ್ಟ ಸಂಗತಿಗಳಿಗೂ ಕ್ಷಮೆ ಕೇಳುವಂಥ ಸ್ಥಿತಿ ನಿರ್ಮಾಣ ಆಗಬಹುದು. ನಿಮ್ಮ ಆತ್ಮವಿಶ್ವಾಸವೇ ಕರಗಿಹೋಗುವಂತಹ ಕೆಲವು ಬೆಳವಣಿಗೆಗಳು ಆಗಲಿವೆ. ಮೂರನೇ ವ್ಯಕ್ತಿಗಳು ನಿಮ್ಮ ನಿರ್ಧಾರಗಳಲ್ಲಿ ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂಬ ಭಾವನೆ ಕಾಡುವುದಕ್ಕೆ ಆರಂಭಿಸುತ್ತದೆ. ಕೆಲವು ತೀರ್ಮಾನಗಳು ಸದ್ಯಕ್ಕೆ ತೆಗೆದುಕೊಳ್ಳುವುದು ಬೇಡ ಎಂದೇನಾದರೂ ಅನಿಸಿದರೆ ಮುಂದೂಡಿ. ವೃತ್ತಿನಿರತರಿಗೆ ಕೆಲಸ- ಕಾರ್ಯಗಳಲ್ಲಿ ಮೊದಲಿನ ವಿಶ್ವಾಸದಿಂದ ತೊಡಗಿಸಿಕೊಳ್ಳುವುದು ಕಷ್ಟ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ದೃಷ್ಟಿ ದೋಷ ಕೂಡ ಕಾಡಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ಸಹ ಸಂಬಂಧ ಹಾಳಾಗುವಂತೆ ಜೋರು ಜಗಳ ಆಗಬಹುದು, ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳ ಮೇಲೆ ಪೋಷಕರ ಆರ್ಥಿಕ ಸ್ಥಿತಿಯ ಒತ್ತಡ ಬೀಳುತ್ತದೆ. ಏಕಾಗ್ರತೆಯಿಂದ ಅಧ್ಯಯನ ಮಾಡುವುದು ಅಸಾಧ್ಯ ಎಂದೆನಿಸುವುದಕ್ಕೆ ಶುರುವಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಕಣ್ಣಿನ ಸಮಸ್ಯೆಗಳು ಕಾಡಬಹುದು. ಮಹಿಳೆಯರಿಗೆ ಫುಡ್ ಪಾಯಿಸನ್, ವೈರಲ್ ಜ್ವರ, ಪಿತ್ತ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಗಳು ಕಾಡಬಹುದು, ಜಾಗ್ರತೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನನಗೆ ವಿಷಯ- ವಿಚಾರಗಳು ಗೊತ್ತಿದೆ ಎಂದುಕೊಳ್ಳುವುದು ತಪ್ಪಲ್ಲ. ಆದರೆ ಎಲ್ಲರ ಜತೆಗೆ ಮಾತನಾಡುವಾಗ ಉತ್ಸಾಹದಿಂದಲೋ ಅಥವಾ ಉದ್ರೇಕದಿಂದಲೋ ನನಗೇ ಎಲ್ಲ ಗೊತ್ತಿದೆ ಎಂದು ಮಾತನಾಡಲಿಕ್ಕೆ ಹೋಗಬೇಡಿ. ಒಂದು ವೇಳೆ ಉದ್ಯೋಗ ಸ್ಥಳದಲ್ಲಿ ಯಾವುದಾದರೂ ಚರ್ಚೆ ನಡೆಯುವಾಗಲೋ ಅಥವಾ ನಿಮ್ಮ ಅಪ್ರೈಸಲ್ ನಡೆಯುವಾಗಲೋ ಇಂಥದ್ದೇನೋ ಮಾತನಾಡಿದಲ್ಲಿ ನಿಮ್ಮನ್ನೇ ಗುರಿ ಮಾಡಿಕೊಂಡು, ಕಷ್ಟದ ಕೆಲಸಗಳನ್ನು ತಗುಲಿ ಹಾಕುತ್ತಾರೆ ಅಥವಾ ತುಂಬ ಕಡಿಮೆ ಸಮಯದಲ್ಲಿ ಅಗಾಧ ಪ್ರಮಾಣದ ಕೆಲಸ ಮಾಡುವಂತೆ ಜವಾಬ್ದಾರಿ ವಹಿಸಿ, ಆ ನಂತರ ಸಮಯವೇ ಕೊಡದೆ ಬಿಟ್ಟೂ ಬಿಡದೆ ಕಾಡುತ್ತಾರೆ. ಆದ್ದರಿಂದ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ನಿಮ್ಮ ಎದುರಿಗೆ ಇರುವ ವ್ಯಕ್ತಿಯು ಏನು ಆಲೋಚನೆ ಮಾಡಬಹುದು ಎಂಬುದರ ಅಂದಾಜು ಮಾಡಿಕೊಂಡು ಮಾತನಾಡಿ. ಕೃಷಿಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇನ್ನೂ ಕೆಲವರು ಪ್ರಾಣಿಗಳ ಕಡಿತಕ್ಕೆ ಒಳಗಾಗಬಹುದು. ಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸುವಂಥ ಸಾಧ್ಯತೆಗಳು ಸಹ ಇವೆ. ಎಷ್ಟು ಪ್ರಯತ್ನಿಸಿದರೂ ಒಂದಲ್ಲ ಒಂದು ಬಗೆಯಲ್ಲಿ ನಷ್ಟವನ್ನು ಕಾಣಲೇಬೇಕಾಗುತ್ತದೆ. ಇದರ ಜತೆಗೆ ಕುಟುಂಬದಲ್ಲಿ ಸಣ್ಣ- ಪುಟ್ಟ ಜಗಳಗಳಿಂದ ನಿಮ್ಮ ಆತ್ಮಸ್ಥೈರ್ಯ ಕುಗ್ಗಿಹೋಗುತ್ತದೆ. ವೃತ್ತಿನಿರತರಿಗೆ ಜತೆಯಲ್ಲಿ ಕೆಲಸ ಮಾಡುವುದಕ್ಕೆ ಒಳ್ಳೆ ಕೆಲಸಗಾರರು ದೊರೆಯುವ ಯೋಗ ಇದೆ. ಅಂಥ ಸನ್ನಿವೇಶದಲ್ಲಿ ಕೂಡಲೇ ಅವರಿಗೆ ನಿಮ್ಮ ನಿರ್ಧಾರವನ್ನು ತಿಳಿಸಿದಲ್ಲಿ ಉತ್ತಮ. ಒಂದು ವೇಳೆ ನಂತರ ತಿಳಿಸಿದರಾಯಿತು ಎಂದುಕೊಂಡಲ್ಲಿ ಅವರು ಬೇರೆ ಕಡೆಗೆ ಸೇರಿಕೊಂಡು, ನೀವು ಬೇಸರ ಪಡುವಂತಾಗುತ್ತದೆ. ಯಾವುದೇ ವಿಚಾರದಲ್ಲಿ ಆಲಸ್ಯ ಮಾಡಬೇಡಿ. ವಿದ್ಯಾರ್ಥಿಗಳು ನಿಮಗೆ ಬೇಕಾದ ವಸ್ತುಗಳನ್ನು ಎರಡೆರಡು ಬಾರಿ ಖರೀದಿಸಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಒಂದು ಆ ವಸ್ತುವನ್ನು ನೀವೇ ಕಳೆದುಕೊಳ್ಳಬಹುದು ಅಥವಾ ಯಾರಾದರೂ ಕಳುವು ಮಾಡಬಹುದು. ಒಟ್ಟಿನಲ್ಲಿ ಜಾಗ್ರತೆಯಿಂದ ಇರಿ. ಮಹಿಳೆಯರಿಗೆ ತಾಯಿ ಅಥವಾ ಅಕ್ಕ ಇಂಥವರ ಅನಾರೋಗ್ಯ ವಿಚಾರ ಆತಂಕಕ್ಕೆ ಕಾರಣ ಆಗುತ್ತದೆ. ಆರ್ಥಿಕವಾಗಿಯೂ ದೊಡ್ಡ ಹೊರೆ ಆಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ವಾರ ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಬೇಕು ಎಂಬ ನಿಮ್ಮ ಪ್ರಯತ್ನ ಅಷ್ಟೇನೂ ಉತ್ತಮ ಫಲವನ್ನು ನೀಡುವುದಿಲ್ಲ. ನಿಮಗೆ ಗೊತ್ತಾಗದೆ ಅಥವಾ ಅರಿವಿಗೆ ಬಾರದೆ ಯಾರ ಎದುರು ಏನನ್ನು ಮಾತನಾಡಬಾರದೋ ಅವರೆದುರು ಕೆಲವು ವಿಚಾರಗಳನ್ನು ಮಾತನಾಡಿ, ಆ ನಂತರದಲ್ಲಿ ಪರಿತಪಿಸುವಂತಾಗುತ್ತದೆ. ಒಂದು ವೇಳೆ ಇದೇ ವಿಚಾರಕ್ಕೆ ಕುಟುಂಬ ಸದಸ್ಯರ ದೃಷ್ಟಿಯಲ್ಲಿ ನೀವು ಬಹಳ ಚಿಕ್ಕವರಂತೆ ಆದಲ್ಲಿ ನಿಮ್ಮದೇ ಸರಿ ಎಂದು ಮೊಂಡು ವಾದ ಹೂಡುತ್ತಾ ಕೂರಬೇಡಿ. ಅದನ್ನು ಒಪ್ಪಿಕೊಂಡು, ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಆಲೋಚನೆಯನ್ನು ಮಾಡಿ. ನಿಮ್ಮಲ್ಲಿ ಕೆಲವರಿಗೆ ರಕ್ತದ ಕೊರತೆ ಕಾಡಬಹುದು. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವಂತೆ ವೈದ್ಯರು ಸೂಚಿಸಬಹುದು. ಇದರಿಂದ ಖರ್ಚು ಜಾಸ್ತಿ ಆಗುವುದು ಒಂದು ಕಡೆಯಾದರೆ, ಆತಂಕ ಇನ್ನೊಂದು ಕಡೆ ಕಾಡಲಿದೆ. ಕೃಷಿಕರಿಗೆ ಬಹಳ ನಂಬಿಕೆ ಇಟ್ಟು ಮಾಡಿದ್ದ ಕೆಲಸಗಳು ಅಂದುಕೊಂಡಂತೆ ಆಗದೆ ಭಾರೀ ಬೇಸರ ಆಗಲಿದೆ. ಇದರಿಂದ ಸಮಯ, ಹಣ, ಶ್ರಮ ಎಲ್ಲವೂ ವ್ಯರ್ಥವಾಯಿತು ಎಂದು ಬೇಸರ ಮಾಡಿಕೊಳ್ಳಲಿದ್ದೀರಿ. ಇನ್ನು ನಿಮ್ಮದೇ ವಲಯದಲ್ಲಿ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಾಧ‌್ಯತೆ ಇದೆ. ಇದರಿಂದ ಎದೆಗುಂದಬೇಡಿ. ಈ ಸಮಸ್ಯೆ ತಾತ್ಕಾಲಿಕ ಮಾತ್ರ. ವೃತ್ತಿನಿರತರು ಈಗಾಗಲೇ ಮುಗಿದು ಹೋಗಿದ್ದ ಒಪ್ಪಂದಗಳು ಮತ್ತೆ ಮುಂದುವರಿಯುತ್ತದೆ ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ನಿರಾಸೆ ಆಗಬಹುದು. ಆ ಒಪ್ಪಂದು ಮುಂದುವರಿಯದೇ ಹೋಗಬಹುದು. ಇದರಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ವಾಹನಗಳಿಂದ ಬಿದ್ದು ಪೆಟ್ಟು ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಅದರಲ್ಲೂ ವೇಗವಾಗಿ ಚಾಲನೆ ಮಾಡಲೇಬಾರದು. ಮಹಿಳೆಯರಿಗೆ ಮದುವೆ ವಿಚಾರದಲ್ಲಿ ನಾನಾ ಅಡೆತಡೆಗಳು ಎದುರಾಗಬಹುದು. ಈಗಾಗಲೇ ಆಗಿರುವ ನಿಶ್ಚಿತಾರ್ಥ ಮುರಿದು ಬೀಳುವಂಥ ಸನ್ನಿವೇಶ ಸೃಷ್ಟಿ ಆಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮಿಂದ ಆಗಬೇಕಾದದ್ದು ಏನೂ ಇಲ್ಲ. ಎಂಥ ಪರಿಸ್ಥಿತಿಯಲ್ಲಿ ಇದ್ದರೂ ನಿಮ್ಮ ಬಳಿ ಸಹಾಯ ಕೇಳಿಕೊಂಡು ಬರುವುದಿಲ್ಲ ಎಂದು ಯಾರು ಮಾತನಾಡಿರುತ್ತಾರೋ ಅಂಥವರೇ ಈ ವಾರ ಒಂದಿಲ್ಲೊಂದು ನೆರವು ಕೇಳಿಕೊಂಡು ಬರಬಹುದು. ಮುಖ್ಯವಾಗಿ ಅನುಭವದ ಮೂಲಕ ಹಾಗೂ ಓದಿನ ಮೂಲಕ ನೀವು ಪಡೆದಂಥ ಜ್ಞಾನಕ್ಕೆ ವಿಪರೀತ ಬೇಡಿಕೆ ಕಾಣಿಸಿಕೊಳ್ಳಲಿದೆ. ದೊಡ್ಡ ದೊಡ್ಡ ಸಂಸ್ಥೆಗಳಿಗೆ ಕನ್ಸಲ್ಟಂಟ್ ಆಗಿ ನಿಮ್ಮನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ನಿಮ್ಮಲ್ಲಿ ವಿಚಾರಿಸಿಕೊಂಡು ಬರಬಹುದು. ಪ್ರಯಾಣದಿಂದ ಅನುಕೂಲಗಳು ಆಗಲಿವೆ. ಬಟ್ಟೆ ವ್ಯಾಪಾರಿಗಳು, ನೀರಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುತ್ತಿರುವವರು ಅಥವಾ ಔಷಧ ವ್ಯಾಪಾರಿಗಳಿಗೆ ಆದಾಯದಲ್ಲಿ ಉತ್ತಮ ಹೆಚ್ಚಳ ಆಗಲಿದೆ, ಜತೆಗೆ ಆದಾಯ ಮೂಲಗಳು ಸಹ ಜಾಸ್ತಿ ಆಗಲಿವೆ. ಕೃಷಿಕರು ಈಗ ಬೆಳೆಯುತ್ತಿರುವ ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇನ್ನು ಮಕ್ಕಳ ಹೆಸರಿಗೆ ಆಸ್ತಿ ಹಂಚಿಕೆ ಮಾಡುವ ಬಗ್ಗೆ ಕೂಡ ಆಲೋಚಿಸುವ ಸಾಧ್ಯತೆಗಳಿವೆ. ದೈಹಿಕವಾಗಿ ಸ್ವಲ್ಪ ಕಾಲ ವಿರಾಮ ಪಡೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ಈ ವಾರದಲ್ಲಿ ಪಶು ಸಾಕಣೆ ಆರಂಭಿಸುವುದಕ್ಕೆ ಯೋಜನೆ ರೂಪಿಸಬಹುದು, ಈಗಾಗಲೇ ಮಾಡುತ್ತಿದ್ದಲ್ಲಿ ಅದರ ವಿಸ್ತರಣೆ ಮಾಡಬಹುದು. ವೃತ್ತಿನಿರತರಿಗೆ ನಿಮ್ಮ ಮಾತಿನ ಮೂಲಕ ಹಲವರನ್ನು ಆಕರ್ಷಿಸುವುದರಲ್ಲಿ ಯಶಸ್ವಿ ಆಗಲಿದ್ದೀರಿ. ಹೊಸ ಕ್ಲೈಂಟ್ ಗಳು ಹುಡುಕಿಕೊಂಡು ಬರಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಹೊಸ ಸೇವೆಗಳನ್ನು ನೀಡಲು ಶುರು ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಏಕಾಏಕಿ ಹಲವು ಕೆಲಸಗಳು ಒಟ್ಟಿಗೆ ಮಾಡಬೇಕಾಗಲಿದೆ. ಆದರೆ ಸಂತೋಷದ ವಿಷಯ ಏನೆಂದರೆ ನಿಮ್ಮ ಸಾಮರ್ಥ್ಯ ಸಹ ಅದಕ್ಕೆ ತಕ್ಕ ಹಾಗೆ ವೃದ್ಧಿ ಆಗಲಿದೆ. ಮಹಿಳೆಯರು ಸಂತಾನದ ನಿರೀಕ್ಷೆಯಲ್ಲಿ ಇದ್ದರೆ ಶುಭ ಸುದ್ದಿ ಕೇಳಲಿದ್ದೀರಿ. ಹೊಸ ವಸ್ತ್ರಾಭರಣಗಳನ್ನು ಖರೀದಿಸುವ ಯೋಗ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ವಾರ ನಿಮ್ಮ ನೆನಪಿನ ಶಕ್ತಿ ಕೈ ಕೊಡುತ್ತಿದೆಯೇನೋ ಎಂಬ ಆತಂಕ ನಿಮ್ಮನ್ನು ಕಾಡಲಿದೆ. ಏಕಾಗ್ರತೆಯಿಂದ ಕೆಲಸ ಮಾಡುವುದು ಅಸಾಧ್ಯ ಎನಿಸುವುದಕ್ಕೆ ಶುರುವಾಗಲಿದೆ. ಯಾವುದೇ ಕೆಲಸ ಮುಗಿಸಿದ ಮೇಲೆ ಸಂದೇಹ ಅಥವಾ ನಿಮ್ಮ ಮೇಲೆ ನಿಮಗೇ ವಿಶ್ವಾಸ ಮೂಡದಿರುವುದು ಈ ರೀತಿಯ ಬೆಳವಣಿಗೆಗಳು ಆಗಲಿವೆ. ಪಾದಕ್ಕೆ ಸಂಬಂಧಿಸಿ ಕೆಲವು ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇನ್ನು ಯೂರಿಕ್ ಆಸಿಡ್ ನಿಂದ ಉಂಟಾಗುವ ಸಮಸ್ಯೆಗಳು ಕೆಲವು ಕಾಡಬಹುದು. ಈಗಾಗಲೇ ಅಂಥದ್ದೊಂದು ತೊಂದರೆ ಅನುಭವಿಸುತ್ತಿದ್ದೀರಿ ಅಂತಾದಲ್ಲಿ ಅದು ಉಲ್ಬಣ ಆಗಬಹುದು. ಆರಂಭದಲ್ಲಿಯೇ ಸೂಕ್ತ ವೈದ್ಯರಲ್ಲಿ ತೋರಿಸಿಕೊಂಡು, ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ನಿಮ್ಮ ಕೆಲಸದ ಒತ್ತಡದ ನೆಪ ಮಾಡಿಕೊಂಡು, ವೈದ್ಯರ ಬಳಿ ಹೋಗದಿದ್ದರೆ ಆ ನಂತರ ಪರಿಸ್ಥಿತಿ ಬಿಗಡಾಯಿಸುತ್ತದೆ. ಕೃಷಿಕರಿಗೆ ನಿಮ್ಮ ಮಾತಿನ ಬಗ್ಗೆ ಇತರರು ವಿಪರೀತ ಅನುಮಾನವನ್ನು ವ್ಯಕ್ತಪಡಿಸಲಿದ್ದಾರೆ. ಇನ್ನು ಕೆಲವರು ನೀವು ಹೇಳುತ್ತಿರುವುದು ಸುಳ್ಳು ಎಂದು ವಾದವನ್ನೇ ಮಾಡುವುದಕ್ಕೆ ಶುರು ಮಾಡುತ್ತಾರೆ. ಆದ್ದರಿಂದ ನಂಬದ ಜನರ ಮುಂದೆ ವಿಶ್ವಾಸಾರ್ಹತೆ ಸಾಬೀತು ಮಾಡುವುದಕ್ಕೆ ಹೋಗಬೇಡಿ. ನೀವಲ್ಲ, ನಿಮ್ಮ ಕೆಲಸ ಮಾತನಾಡುವುದಕ್ಕೆ ಅವಕಾಶ ಕೊಡಿ. ವೃತ್ತಿನಿರತರು ನಿಮ್ಮ ಕ್ಲೈಂಟ್ ಗಳ ಜತೆಗೆ ಜಗಳ- ಕಲಹಗಳನ್ನು ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ನೀವು ಎಷ್ಟು ಪ್ರಾಮಾಣಿಕವಾಗಿ ವಿವರಣೆ ನೀಡುವುದಕ್ಕೆ ಪ್ರಯತ್ನಿಸಿದರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ವಿದ್ಯಾರ್ಥಿಗಳು ಈ ವಾರ ಆತುರಾತುರವಾಗಿ ಮಾಡಿದ ಕೆಲಸಗಳಿಂದ ಅನಾಹುತಗಳು ಸಂಭವಿಸಬಹುದು. ಆದ್ದರಿಂದ ನಿಮ್ಮ ಜವಾಬ್ದಾರಿಗಳನ್ನು ಗಡುವು ಮುಗಿಯುವ ತನಕ ಮುಗಿಸದೇ ಇರಬೇಡಿ. ಇನ್ನು ಸ್ನೇಹಿತರು ಸಹಾಯ ಮಾಡುತ್ತಾರೆ ಅಂತಲೂ ಕಾಯುತ್ತಾ ಕೂರಬೇಡಿ. ಮಹಿಳೆಯರಿಗೆ ಕೆಲವರು ಬೇಕೆಂತಲೇ ನಿಂದೆ- ಅಪವಾದಗಳನ್ನು ಹೊರಿಸಬಹುದು. ಇದರಿಂದ ವಿಚಲಿತರಾಗಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯಾರು ಏನೇ ಅಂದುಕೊಳ್ಳಲಿ ನನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂದು ಹೊರಡಲಿದ್ದೀರಿ. ಆರಂಭದಲ್ಲಿ ನಿಮಗೂ ನಿಮ್ಮ ನಿರ್ಧಾರದಿಂದ ಆತಂಕ, ಭಯ ಕಾಡುತ್ತದೆ. ಆದರೆ ಅದರಿಂದ ಕ್ರಮೇಣ ಒಳ್ಳೆಯದಾಗುತ್ತಾ ಇದೆ ಎಂಬುದು ಅರಿವಿಗೆ ಬರಲಿದೆ. ಇತರರಿಗೆ ಮಾದರಿ ಆಗುವಂಥ ಕೆಲವು ಕೆಲಸಗಳನ್ನು ನೀವು ಮಾಡಿ ಮುಗಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳು ಅಚ್ಚರಿಯಿಂದ ನಿಮ್ಮ ಕಡೆಗೆ ನೋಡುವಂತಾಗುತ್ತದೆ. ಇನ್ನು ಮನೆಯಲ್ಲೂ ಸಂಭ್ರಮದ ವಾತಾವರಣ ಇರುತ್ತದೆ. ವಿವಾಹ ವಯಸ್ಕರಾಗಿದ್ದು, ಮದುವೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಮನಸ್ಸಿಗೆ ಮೆಚ್ಚುವಂಥ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶಗಳು ಹುಡುಕಿಕೊಂಡು ಬರಬಹುದು. ಈಗಿರುವ ಹುದ್ದೆಗಿಂತ ಬಹಳ ಉತ್ತಮವಾದ ಸ‌್ಥಾನ- ಮಾನ ದೊರೆಯಬಹುದು. ಕೃಷಿಕರು ಈಗಿರುವ ಭೂಮಿಯ ಅಕ್ಕಪಕ್ಕದಲ್ಲೇ ಇನ್ನಷ್ಟು ಭೂಮಿಯನ್ನು ಖರೀದಿಸಬಹುದು ಅಥವಾ ಗುತ್ತಿಗೆಗೆ ಪಡೆಯುವಂಥ ಯೋಗ ಕಂಡುಬರುತ್ತಿದೆ. ಕೆಲವರಿಗೆ ಸದ್ಯಕ್ಕೆ ಎಷ್ಟು ಹಣ ಇದೆಯೋ ಅಷ್ಟನ್ನು ಕೊಡಿ, ಬಾಕಿ ಉಳಿದಿದ್ದಕ್ಕೆ ಸಮಯ ನೀಡುವುದಾಗಿ ಮಾರಾಟಕ್ಕೆ ಇಟ್ಟವರೇ ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಿನ ಸಮಯದ ಅನುಕೂಲ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಆಲೋಚಿಸುವುದು ಒಳ್ಳೆಯದು. ವೃತ್ತಿನಿರತರು ವಿಲಾಸಿ ವಾಹನಗಳನ್ನು ಖರೀದಿಸಬಹುದು ಅಥವಾ ನಿಮ್ಮ ಕ್ಲೈಂಟ್ ಗಳೇ ನಿಮಗೆ ನೀಡಬೇಕಾದ ಹಣದ ಬದಲಿಗೆ ವಾಹನವನ್ನು ತೆಗೆದುಕೊಳ್ಳುವಂತೆ ಹೇಳಬಹುದು. ಸಾಮಾಜಿಕವಾಗಿಯೂ ನಿಮ್ಮನ್ನು ಗುರುತಿಸುವವರು ಹೆಚ್ಚಾಗಲಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವ ಕೂಡ ದೊರೆಯುವ ಯೋಗ ಇದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಮೋಘ ಸಾಧನೆ ಮಾಡುವಂಥ ಯೋಗ ಕಂಡುಬರುತ್ತಿದೆ. ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುವಂಥ ದಿನಗಳು ಇದಾಗಿರುತ್ತವೆ. ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳ, ವಿದೇಶಕ್ಕೆ ಪ್ರಯಾಣ, ಪ್ರಮುಖ ಹುದ್ದೆಗಳಿಗೆ ನಿಮ್ಮ ಹೆಸರು ಕೇಳಿಬರಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮಗೆ ಗುರು ಸಮಾನರಾದವರು ಈ ವಾರ ಹಲವು ರೀತಿಯಲ್ಲಿ ಅನುಕೂಲ ಮಾಡಲಿದ್ದಾರೆ. ಅವರು ನೀಡುವ ಸಲಹೆ- ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ. ವಾಹನ ಕಲಿಕೆಯನ್ನು ಆರಂಭಿಸಬೇಕು ಅಥವಾ ಬೇರೆ ಯಾವುದಾದರೂ ಕೋರ್ಸ್ ಸೇರಬೇಕು ಅಂದುಕೊಳ್ಳುವವರಿಗೆ ಈ ವಾರ ಉತ್ತಮವಾಗಿದೆ. ಜತೆಗೆ ನಿಮಗೆ ಅದನ್ನು ಕಲಿಸುವುದಕ್ಕೆ ಒಳ್ಳೆ ಗುರುಗಳು ದೊರೆಯಲಿದ್ದಾರೆ. ನಿಧಾನಕ್ಕೆ ಆದರೂ ಪರವಾಗಿಲ್ಲ ಎಂದುಕೊಂಡಿದ್ದ ಕೆಲವು ಕೆಲಸಗಳು ನಿರೀಕ್ಷೆಗಿಂತ ಬಹಳ ಬೇಗ ಮುಗಿಯಲಿವೆ. ಅಷ್ಟೇ ಅಲ್ಲ, ನಿಮಗೆ ಒಳ್ಳೆ ಹೆಸರನ್ನು ತಂದುಕೊಡಲಿದೆ. ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿಯಿದೆ ಅಥವಾ ಹಣಕಾಸು ಹಂಚಿಕೆ ಆಗಬಹುದು ಎಂದೇನಾದರೂ ನಿರೀಕ್ಷೆಯಲ್ಲಿ ಇದ್ದಲ್ಲಿ ಈ ವಾರ ಉತ್ತಮವಾದ ಸುದ್ದಿ ಕೇಳಬಹುದು. ಇನ್ನು ನೀವು ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದೇನಾದರೂ ಅಂದುಕೊಳ್ಳುತ್ತಿದ್ದಲ್ಲಿ ಅದಕ್ಕೆ ಬೇಕಾದ ಅನುಕೂಲಗಳು ದೊರೆಯಲಿವೆ. ಕೃಷಿಕರು ಜಮೀನಿನಲ್ಲಿ ಕೆಲವು ಕೆಲಸಗಳನ್ನು ಮಾಡಿಸಬೇಕು, ಕೃಷಿ ಯಂತ್ರೋಪಕರಣಗಳನ್ನು ಖರೀದಿಸಬೇಕು, ಬೇಲಿ- ತಂತಿ ಅಳವಡಿಸಬೇಕು ಎಂದೇನಾದರೂ ಅಂದುಕೊಂಡು, ಅದಕ್ಕಾಗಿ ಹಣಕಾಸಿನ ಸಾಲ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ನಿಮಗೆ ದೊರೆಯಲಿದೆ. ವೃತ್ತಿನಿರತರು ನಿಮ್ಮ ಪ್ರತಿಸ್ಪರ್ಧಿಗಳಿಂದ ಭಾರೀ ಸ್ಪರ್ಧೆಯನ್ನು ಎದುರಿಸಬೇಕಾದೀತು. ಆದರೆ ಅದನ್ನು ಮೀರಿ ಯುಶಸ್ಸು ಪಡೆಯಲಿದ್ದೀರಿ. ಈ ಹಿಂದೆ ನೀವು ಪಟ್ಟಂಥ ಶ್ರಮಕ್ಕೆ ಫಲ ದೊರೆಯುವುದಕ್ಕೆ ಶುರು ಆಗಲಿದೆ. ದೊಡ್ಡ ದೊಡ್ಡ ಸಂಸ್ಥೆಗಳವರು ನಿಮ್ಮ ಬಳಿಗೆ ಬರಲಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಂದಾಗಿ ಭಾರೀ ಜನಪ್ರಿಯ ಆಗುವಂಥ ಯೋಗ ಕಂಡುಬರುತ್ತಿದೆ. ನಾಟಕ, ಸಂಗೀತ, ಕ್ರೀಡೆಗಳು ಮೊದಲಾದವುಗಳಲ್ಲಿ ತುಂಬ ಒಳ್ಳೆ ಪ್ರದರ್ಶನ ನೀಡಲಿದ್ದೀರಿ. ಮಹಿಳೆಯರಿಗೆ ವಿವಾಹ ವಯಸ್ಕರಾಗಿದ್ದಲ್ಲಿ ಮನಸ್ಸಿಗೆ ಒಪ್ಪುವಂಥ ವರ ಸಂಬಂಧ ಹುಡುಕಿಕೊಂಡು ಬರಬಹುದು. ಅದರಲ್ಲೂ ವಿದೇಶಗಳಲ್ಲಿ ಇರುವಂಥವರು, ತುಂಬ ಒಳ್ಳೆ ಹುದ್ದೆಯಲ್ಲಿ ಇರುವಂಥ ವರ ದೊರೆಯಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಗುರಿ ಹಾಗೂ ಅದನ್ನು ತಲುಪುವುದಕ್ಕೆ ಆರಿಸಿಕೊಳ್ಳುವ ದಾರಿಯು ಉತ್ತಮ ಫಲಿತಾಂಶವನ್ನು ನೀಡಲಿದೆ. ಇತರರಿಗೂ ಸಹಾಯ ಮಾಡುತ್ತಾ ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳುತ್ತಾ ಸಾಗುವುದರಿಂದ ಒಂದು ಬಗೆಯ ತೃಪ್ತಿ ನಿಮ್ಮಲ್ಲಿ ಇರಲಿದೆ. ಮನೆಯಲ್ಲಿ ಇರುವಂಥ ಕೆಲವು ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೋ ಅಥವಾ ಹಾಗೇ ಕೊಟ್ಟು ಬಿಡುವುದಕ್ಕೋ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಉದ್ಯೋಗ ವಿಚಾರವಾಗಿ ನೀವು ಈ ಹಿಂದೆ ತೆಗೆದುಕೊಂಡ ತೀರ್ಮಾನದಿಂದಾಗಿ ಈ ವಾರ ಉತ್ತಮ ಫಲಿತಾಂಶಗಳನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ನಿಮಗೆ ದೊರೆಯಬಹುದಾದ ಬಡ್ತಿ, ವೇತನ ಹೆಚ್ಚಳ ಅಥವಾ ಪ್ರಮುಖ ಜವಾಬ್ದಾರಿಗಳ ಬಗ್ಗೆ ಮೇಲಧಿಕಾರಿಗಳು ಸೂಚನೆ ನೀಡಲಿದ್ದಾರೆ. ಸ್ವತಃ ನಿಮಗೇ ಮುಂದೆ ನಡೆಯಬಹುದಾದ ಒಳ್ಳೆಯ ವಿಚಾರ ಅನುಭವಕ್ಕೆ ಬರಲಿದೆ. ಕೃಷಿಕರು ಹಾಕಿಕೊಂಡ ಲೆಕ್ಕಾಚಾರದಂತೆಯೇ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಪೋಡಿ- ಸರ್ವೇ ಸೇರಿದಂತೆ ಸರ್ಕಾರಕ್ಕೆ ಹಾಕಿಕೊಂಡಿದ್ದ ಅರ್ಜಿಯು ಇಷ್ಟು ಸಮಯ ಒಂದಲ್ಲ ಒಂದು ಕಾರಣಕ್ಕೆ ತಡವಾಗುತ್ತಿತ್ತು ಎಂದಾದಲ್ಲಿ ಈ ವಾರ ಅದು ಮುಗಿಯಲಿದೆ. ಇನ್ನು ನಿಮ್ಮ ಬಳಿ ಕೆಲವರು ಜಮೀನು ಮಾರಾಟ ಮಾಡುತ್ತೀರಾ ಎಂದು ಕೇಳಿಕೊಂಡು ಬರಬಹುದು. ಹಾಗೂ ಉತ್ತಮ ಬೆಲೆಯನ್ನು ಕೊಡಿಸುವುದಾಗಿಯೂ ಹೇಳಬಹುದು. ವೃತ್ತಿಪರರಿಗೆ ಈಗಿರುವ ಕಚೇರಿಯಲ್ಲಿ ಕೆಲವು ಬದಲಾವಣೆಗಳು ಮಾಡಿಸಬೇಕು ಎಂದೆನಿಸಬಹುದು. ಒಂದು ವೇಳೆ ಇತರರ ಬಳಿ ವೃತ್ತಿ ನಿರ್ವಹಣೆ ಮಾಡುತ್ತಿರುವವರು ಸ್ವಂತವಾಗಿ ಶುರು ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಸ್ವಲ್ಪ ಹೆಚ್ಚಾಗಲಿದೆ. ಮನೆಯಲ್ಲಿ ಕೆಲವು ಕಾರ್ಯಕ್ರಮಗಳು ದಿಢೀರ್ ಆಯೋಜನೆ ಆಗುವುದರಿಂದ ನಿಮ್ಮ ಲಕ್ಷ್ಯ ಆಚೀಚೆ ಆಗಬಹುದು. ಅದು ಮನೆಯ ಕೆಲಸವೇ ಇರಬಹುದು ಅಥವಾ ಉದ್ಯೋಗ, ವೃತ್ತಿ- ವ್ಯವಹಾರಗಳೇ ಇರಬಹುದು ಮಹಿಳೆಯರು ಹೆಚ್ಚು ಹುಮ್ಮಸ್ಸಿನಲ್ಲಿ ಕೆಲಸ- ಕಾರ್ಯಗಳಲ್ಲಿ ತೊಡಗಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕುಟುಂಬ ಸದಸ್ಯರ ಅನಾರೋಗ್ಯ, ಅವರ ವರ್ತನೆಯಿಂದ ಸ್ವಲ್ಪ ಮಟ್ಟಿಗೆ ಆತಂಕ- ಬೇಸರ ಕಾಡಲಿದೆ. ನೀವು ಲೆಕ್ಕ ಹಾಕಿಕೊಂಡು ಮಾಡಿದ್ದ ಹಲವು ಕೆಲಸಗಳು ಪೂರ್ಣಗೊಂಡಿದೆ ಎಂದು ನಿಮಗೆ ಅನಿಸುತ್ತದೆ. ಆದರೆ ಅದರಲ್ಲಿ ಸ್ವಲ್ಪ ಭಾಗವಾದರೂ ಹಾಗೇ ಉಳಿದು, ನಿಮ್ಮ ವರ್ಚಸ್ಸಿಗೆ ಹಾನಿ ಮಾಡಬಹುದು. ನೀವು ವಹಿಸಿಕೊಂಡ ಯಾವುದೇ ಕೆಲಸ ಇರಲಿ, ಅದು ಎಲ್ಲ ರೀತಿಯಿಂದಲೂ ಸರಿಯಾಗಿ ಆಗಿದೆ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರವಷ್ಟೇ ಸಂಬಂಧಪಟ್ಟವರಿಗೆ ಸಲ್ಲಿಕೆ ಮಾಡಿ. ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ಏನಾದರೂ ವಹಿಸಿದರೆ ಆ ನಂತರ ನಿಮಗೆ ಕೆಟ್ಟ ಹೆಸರು ಬರಲಿದೆ. ಈ ಹಿಂದೆ ಯಾವಾಗಲೋ ಅಪ್ಲೈ ಮಾಡಿದ್ದ ಹುದ್ದೆಯೊಂದರ ಇಂಟರ್ ವ್ಯೂ ನಿಮಗೆ ಈ ವಾರ ಬರಬಹುದು. ಇದರಿಂದ ನಿಮ್ಮ ಮನಸ್ಸಿನಲ್ಲಿ ಗೊಂದಲ ಶುರುವಾಗಲಿದೆ. ಸಾಧ್ಯವಾದಷ್ಟೂ ಅನುಭವಿಗಳು- ಹಿರಿಯರ ಸಲಹೆ- ಸೂಚನೆ ತೆಗೆದುಕೊಂಡು ಈ ವಿಚಾರದ ನಿರ್ಧಾರ ಮಾಡಿ. ಕೃಷಿಕರು ನಿಮ್ಮ ಕಣ್ಣೆದುರಿನಲ್ಲೇ ಆಗುವ ವಂಚನೆಯನ್ನು ತಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮ್ಮ ಬಾಯಿ ಮುಚ್ಚಿಸುವಂಥ ಕೆಲಸಗಳಾಗುತ್ತವೆ. ಆ ನಂತರದಲ್ಲಿ ಈ ಬಗ್ಗೆ ಗೊತ್ತಾದಾಗಲೂ ಅದು ನಿಮ್ಮ ಅಸಮರ್ಥತೆ ಎಂದು ಹೀಗಳೆಯಲಾಗುತ್ತದೆ. ಆದ್ದರಿಂದ ಇಂಥ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸರಿಯಾಗಿ ಯೋಜನೆ ರೂಪಿಸಿಕೊಳ್ಳುವುದು ಒಳ್ಳೆಯದು. ವೃತ್ತಿನಿರತರು ನಿಮ್ಮ ಕೈಯಲ್ಲಿರುವ ಅವಕಾಶಗಳ ಬಗ್ಗೆ ಗಮನವನ್ನು ನೀಡಿ. ಅದನ್ನು ಅಚ್ಚುಕಟ್ಟಾಗಿ ಮುಗಿಸಿ. ಅದನ್ನು ಬಿಟ್ಟು, ಅವಕಾಶಗಳು ಸಿಗುತ್ತಿವೆ ಎಂಬ ಕಾರಣಕ್ಕೆ ಮಿತಿ ಮೀರಿ ಒಪ್ಪಿಕೊಂಡಲ್ಲಿ ಅವುಗಳನ್ನು ಪೂರ್ತಿ ಮಾಡಲಾಗದೆ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ಜತೆಗೆ ನಿಮ್ಮ ವಿಶ್ವಾಸಾರ್ಹತೆಗೂ ಹಾನಿಯಾಗುತ್ತದೆ. ವಿದ್ಯಾರ್ಥಿಗಳು ದಿಢೀರ್ ಅಂತ ಪ್ರಯಾಣ ಮಾಡಬೇಕಾಗುತ್ತದೆ. ಅಲ್ಲಿ ಆಹಾರ ಅಥವಾ ನಿರೀನ ವ್ಯತ್ಯಾಸವಾಗಿ, ಆರೋಗ್ಯ ಸಮಸ್ಯೆ ಎದುರಾಗಬಹುದು. ಆದ್ದರಿಂದ ಈ ವಿಚಾರದಲ್ಲಿ ಜಾಗ್ರತೆ ವಹಿಸಿ. ಮಹಿಳೆಯರು ಗಾಸಿಪ್ ಗಳಿಂದ ದೂರ ಇದ್ದಷ್ಟೂ ನೆಮ್ಮದಿಯಿಂದ ಇರಬಹುದು. ಇತರರ ಬಗ್ಗೆ ಹಗುರವಾಗಿ ಮಾತನಾಡಬೇಡಿ.

ಲೇಖನ- ಎನ್‌.ಕೆ.ಸ್ವಾತಿ

ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ