Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 27ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 27ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 27ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವು ಮಾಡಿದ ಕೆಲಸ ನಿಮ್ಮ ಪಾಲಿಗೆ ಅತ್ಯುತ್ತಮವಾದದ್ದು ಎಂದೆನಿಸಬಹುದು. ಆದರೆ ನಿಮ್ಮ ಸುತ್ತಮುತ್ತಲಿನವರಿಗೆ, ಮೇಲಧಿಕಾರಿಗಳಿಗೆ, ಕುಟುಂಬದ ಸದಸ್ಯರಿಗೆ, ಸಂಬಂಧಿಗಳಿಗೆ ಆಕ್ಷೇಪ ಮಾಡುವುದಕ್ಕೆ ಅವಕಾಶವಾಗಿ ಕಾಣಿಸಿಕೊಳ್ಳಲಿದೆ. ಇಷ್ಟು ಸಮಯ ನಿಮ್ಮ ಮೇಲೆ ಇರಿಸಿದ್ದ ನಂಬಿಕೆಗೆ ಪೆಟ್ಟು ಬೀಳುವ ರೀತಿಯಲ್ಲಿ ನೀವು ಯಾವುದೆಲ್ಲ ಖರ್ಚು ಮಾಡಿದ್ದೀರಿ, ವೆಚ್ಚಗಳನ್ನು ಮಾಡಿದ್ದೀರಿ ಅವುಗಳೆಲ್ಲದರ ಪಟ್ಟಿಯನ್ನು ನೀಡುವಂತೆ ಕೇಳುವ ಸಾಧ್ಯತೆಗಳಿವೆ. ನಿಮಗೆ ಬಹಳ ಹತ್ತಿರದವರು ಅಥವಾ ಆಪ್ತರ ಅನಾರೋಗ್ಯ ಬಹಳ ಚಿಂತೆಗೆ ಗುರಿ ಮಾಡಲಿದೆ. ಇಷ್ಟು ಸಮಯ ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದವರು ಕೊಂಕು ಮಾತುಗಳನ್ನು ಆಡಲು ಆರಂಭಿಸುತ್ತಾರೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವು ಬಹಳ ಕಷ್ಟ ಆಗಬಹುದು ಅಂದುಕೊಂಡಿದ್ದ ಕೆಲವು ಕೆಲಸಗಳು ಹೂವು ಎತ್ತಿದಷ್ಟು ಸಲೀಸಾಗಿ ಆಗಿ ಹೋಗಲಿವೆ. ಮನೆಯಲ್ಲಿ ದಿಢೀರನೆ ಶುಭ ಕಾರ್ಯಗಳನ್ನು ಆಯೋಜನೆ ಮಾಡುವ ಸಾಧ್ಯತೆಗಳಿವೆ. ಇಷ್ಟು ಅವಧಿ ಕೆಲಸ ಮಾಡಿಸದೆ ಹಾಗೆ ಬಿಟ್ಟಿದ್ದ ಜಮೀನುಗಳು ಏನಾದರೂ ಇದ್ದರೆ ಅಲ್ಲಿ ಕೆಲಸ ಮಾಡಿಸಲು ಶುರು ಮಾಡಲಿದ್ದೀರಿ ಅಥವಾ ಆ ಬಗ್ಗೆ ಚರ್ಚೆ ಆದರೂ ಆರಂಭಿಸಲಿದ್ದೀರಿ. ಕುಟುಂಬ ಸದಸ್ಯರ ಸಲುವಾಗಿ ದ್ವಿಚಕ್ರ ವಾಹನ ಅಥವಾ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವ ಸಾಧ್ಯತೆಗಳು ಕಂಡುಬರುತ್ತವೆ. ಈ ದಿನ ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೋಗುವ ಮೊದಲಿಗೆ ನಿಮ್ಮ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಹೊರಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಬಹಳ ಸಂತೋಷದಿಂದ ನಿಮ್ಮ ಈ ದಿನ ಕಳೆಯುತ್ತದೆ. ನಿಮಗೆ ಬಹಳ ಹತ್ತಿರವಾದವರು, ಪ್ರೀತಿ ಪಾತ್ರರೊಂದಿಗೆ ಮಾತುಕತೆ ಆಡುವ ಮೂಲಕ, ಅವರೊಂದಿಗೆ ಸಮಯ ಕಳೆಯುವ ಮೂಲಕ ಒಂದು ರೀತಿಯ ಸಂತೋಷ, ಸಮಾಧಾನ ನಿಮ್ಮಲ್ಲಿ ಇರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದಿಂದ ನಿಮ್ಮ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಇದು ಕುಟುಂಬದ ಸದಸ್ಯರ ಅನುಭವಕ್ಕೂ ಬರುವುದರಿಂದ ನಿಮ್ಮ ಬಗ್ಗೆ ಗೌರವ ಹೆಚ್ಚಾಗಲಿದೆ. ಆದರೆ ತಂದೆ- ತಾಯಿಯ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಸ್ವಲ್ಪ ಮಟ್ಟಿಗೆ ಚಿಂತೆಗೆ ಗುರಿ ಮಾಡಲಿದೆ. ನಿಮ್ಮ ಮೊಬೈಲ್ ಫೋನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ಈ ದಿನ ಖಚಿತಪಡಿಸಿಕೊಳ್ಳಿ, ಏಕೆಂದರೆ ಪ್ರಮುಖವಾದ ಅವಕಾಶವೊಂದು ನಿಮಗೆ ಬರಲಿದ್ದು, ಮೊಬೈಲ್ ಫೋನಿನ ಸಮಸ್ಯೆಯ ಕಾರಣಕ್ಕೆ ಅದು ತಪ್ಪಿ ಹೋಗದಂತೆ ನೋಡಿಕೊಳ್ಳಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ದಿನ ಸಣ್ಣ ಪುಟ್ಟ ವಿಚಾರಗಳಿಗೂ ಸಿಟ್ಟು ಬರುವಂತಾಗುತ್ತದೆ. ಈಗಾಗಲೇ ಶೇಕಡಾ 80ರಷ್ಟು ಮುಗಿಸಿ ಆದ ಕೆಲಸವನ್ನು ಮತ್ತೊಮ್ಮೆ ಮೊದಲಿನಿಂದ ಆರಂಭಿಸಬೇಕಾದ ಸನ್ನಿವೇಶ ಎದುರಾಗಬಹುದು. ಸರ್ಕಾರಿ ಉದ್ಯೋಗಿಗಳಾಗಿ ಇರುವವರ ವಿರುದ್ಧ ಮೇಲಧಿಕಾರಿಗಳಿಗೆ ಅಥವಾ ಪ್ರಮುಖ ಹುದ್ದೆಯಲ್ಲಿ ಇರುವಂತಹವರಿಗೆ ದೂರು ನೀಡುವಂತಹ ಸಾಧ್ಯತೆಗಳಿವೆ. ಈ ದಿನ ಸಾಧ್ಯವಾದಷ್ಟು ತಾಳ್ಮೆ, ಸಂಯಮದಿಂದ ಇರುವುದಕ್ಕೆ ಪ್ರಯತ್ನಿಸಿ. ಕೋಪದಲ್ಲಿ ಒಂದು ವೇಳೆ ನೀವು ಆಡುವ ಮಾತುಗಳು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು, ಜಾಗ್ರತೆ. ನಿಮಗೆ ಎಷ್ಟೇ ಹತ್ತಿರದವರಾದರೂ ಸರಿ, ಇತರರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವಿರಿ. ಸಂಗಾತಿ ಮಕ್ಕಳ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ನಿಮ್ಮ ಪಾಲಿಗೆ ಇದೆ. ಈ ಹಿಂದೆ ಯಾವಾಗಲೋ ನೀವು ಮಾಡಿಕೊಟ್ಟಿದ್ದ ಕೆಲಸವನ್ನು ಮೆಚ್ಚಿಕೊಂಡು, ಈಗ ನಿಮಗೆ ಕೆಲವು ಆರ್ಡರ್ ದೊರೆಯುವ ಸಾಧ್ಯತೆಗಳಿವೆ. ಕೋರ್ಟು- ಕಚೇರಿ ವಿಚಾರಗಳು ಇದ್ದಲ್ಲಿ ನಿಮ್ಮ ಕೈ ಮೇಲಾಗುವ ಸಾಧ್ಯತೆಗಳಿವೆ. ನಿಮ್ಮ ಎಲ್ಲ ನಿರ್ಧಾರ, ತೀರ್ಮಾನ ಹಾಗೂ ಕೆಲಸಗಳಲ್ಲಿ ತಲೆ ತೂರಿಸಿಕೊಂಡು ಬರುತ್ತಿದ್ದಾರೆ ಎಂದೆನಿಸುವ ವ್ಯಕ್ತಿಯೊಬ್ಬರಿಗೆ ಗಂಭೀರವಾದ ಎಚ್ಚರಿಕೆಯನ್ನು ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ನೀವು ಹವ್ಯಾಸವಾಗಿ ಪರಿಗಣಿಸಿದಂಥದ್ದನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ದಿನ ಎಲ್ಲರೂ ತಮ್ಮ ಮಾತಿನ ಮೂಲಕ ನಿಮಗೆ ಬೇಸರ ಮಾಡುವವರೇ ಸಿಗುತ್ತಿದ್ದಾರೆ ಎಂದೆನಿಸಲು ಶುರುವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ನಾನಾ ರೀತಿಯಲ್ಲಿ ಕಿರಿಕಿರಿಗಳು ಆಗುತ್ತವೆ. ಯಾವುದೇ ಮುಖ್ಯ ವಿಚಾರ ಅಥವಾ ನಿಮ್ಮ ಪಾಲಿನ ಜವಾಬ್ದಾರಿಗಳು ಇದ್ದರೆ, ಅದು ಪೂರ್ಣವಾಗಿದ್ದರೆ ಅಥವಾ ಅದರ ಸ್ಥಿತಿ ಏನೇ ಇದ್ದರೂ ಆ ಬಗ್ಗೆ ಮೇಲಧಿಕಾರಿಗಳಿಗೆ ಬರೀ ಬಾಯಿ ಮಾತಿನಲ್ಲಿ ಹೇಳಲು ಹೋಗಬೇಡಿ. ಒಂದು ಮೇಲ್ ಅಥವಾ ಅಧಿಕೃತವಾದ ಸಂವಹನದ ಮೂಲಕ ತಿಳಿಸಿದರೆ ಕ್ಷೇಮ. ಖಾಸಗಿ ಕಂಪನಿಗಳ ಉದ್ಯೋಗಿಗಳಾಗಿದ್ದು, ಅದರಲ್ಲೂ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಈ ದಿನ ತಮಗೆ ಖಚಿತವಾಗಿ ಗೊತ್ತಿರುವ ಸಂಗತಿಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನೀವು ಸಾಮಾನ್ಯವಾಗಿ ಆಡಿದ ಮಾತುಗಳಿಗೆ ವಿಪರೀತ ಅರ್ಥಗಳನ್ನು ಕಲ್ಪಿಸಿ, ಜಗಳ ಮಾಡುವ ಸಾಧ್ಯತೆಗಳಿವೆ. ಭೂಮಿಗೆ ಸಂಬಂಧಪಟ್ಟಂತಹ ಯಾವುದೇ ಪ್ರಮುಖ ನಿರ್ಧಾರಗಳನ್ನು ಈ ದಿನದ ಮಟ್ಟಿಗೆ ಮಾಡದಿರುವುದು ಉತ್ತಮ. ಒಂದು ವೇಳೆ ಈ ದಿನ ಆ ವ್ಯವಹಾರ ಮಾಡಲೇಬೇಕು ಎಂದಾದರೆ ಶಿವನನ್ನು ಮನದಲ್ಲಿ ಸ್ಮರಿಸಿ ಅಥವಾ ಶಿವನ ದೇವಸ್ಥಾನಕ್ಕೆ ತೆರಳಿ ದರ್ಶನವನ್ನು ಪಡೆದುಕೊಳ್ಳಿ. ಸಂಗಾತಿಯ ಬಗ್ಗೆ ಬಾಯಿ ತಪ್ಪಿ ಆಡಿದ ಮಾತಿನಿಂದಲೋ ಅಥವಾ ತಮಾಷೆಯಾಗಿ ಆಡಿದ ಮಾತಿನಿಂದಲೋ ಮಾತು ಬಿಡುವಂತಹ ಪರಿಸ್ಥಿತಿ ಏರ್ಪಡಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಏನಾದರೂ ಸಲಹೆಯನ್ನು ನೀಡಿದರೆ ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ದಿನ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಯಾವ ಹಣ ಇನ್ನು ಬಾರದು ಎಂದುಕೊಂಡಿರುತ್ತೀರೋ ಅದನ್ನು ಪಡೆಯುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಹೂವು, ಹಣ್ಣು, ತರಕಾರಿ ಇಂಥದ್ದರ ವ್ಯಾಪಾರ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಆದರೆ ಈ ದಿನದ ಮಟ್ಟಿಗೆ ನಿಮಗಿರುವ ಪ್ರಮುಖ ಎಚ್ಚರಿಕೆ ಏನೆಂದರೆ, ಮನೆಯಲ್ಲಿರುವ ಹಿರಿಯ ಸದಸ್ಯರ ಆರೋಗ್ಯ ವಿಚಾರದ ಬಗ್ಗೆ ಬಹಳ ಜಾಗ್ರತೆಯನ್ನು ವಹಿಸಿ. ಮನೆಯಲ್ಲಿ ಎಲ್ಲಿಯಾದರೂ ಜಾರಿ ಬಿದ್ದು ಗಾಯ ಮಾಡಿಕೊಳ್ಳುವ ಮತ್ತು ಅದು ವಿಪರೀತ ಆತಂಕಕ್ಕೆ ಕಾರಣ ಆಗುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ವರ್ತಕರಿಗೆ, ಅದರಲ್ಲೂ ಧಾನ್ಯಗಳ ವ್ಯಾಪಾರವನ್ನು ಮಾಡುವಂತಹ ವರ್ತಕರಿಗೆ ತಮ್ಮ ಆದಾಯದಲ್ಲಿ ಹೆಚ್ಚಳ ಆಗಲಿದೆ. ಈಗ ಇರುವಂತಹ ಮಳಿಗೆ ಅಥವಾ ಗೋದಾಮು ಇನ್ನಷ್ಟು ವಿಶಾಲವಾಗಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಏನಾದರೂ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಬಹಳ ಸಮಯ ತೆಗೆದುಕೊಳ್ಳಬಹುದು ಅಂದುಕೊಂಡಿದ್ದ ಕೆಲವು ಸಂಗತಿಗಳು ಸಲೀಸಾಗಿ ಬಗೆಹರಿಯಲಿವೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ತಮ್ಮ ಹುಟ್ಟೂರಿಗೆ ಅಥವಾ ತಂದೆ-ತಾಯಿ ಸಂಬಂಧಿಗಳು ಎಲ್ಲಿದ್ದಾರೋ ಅಲ್ಲಿಗೆ ವಾಪಸ್ ಬಂದು ಬಿಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ