Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನವರಿ 22ರಿಂದ 28ರ ತನಕ ನಿಮ್ಮ ವಾರಭವಿಷ್ಯ ತಿಳಿದುಕೊಳ್ಳಿ

ಜನವರಿ 22ರಿಂದ 28ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನವರಿ 22ರಿಂದ 28ರ ತನಕ ನಿಮ್ಮ ವಾರಭವಿಷ್ಯ ತಿಳಿದುಕೊಳ್ಳಿ
ಪ್ರಾತಿನಿಧಿಕ ಚಿತ್ರImage Credit source: onmanorama.com
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 22, 2023 | 5:55 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜನವರಿ 22ರಿಂದ 28ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಹಣಕಾಸಿನ ಅನುಕೂಲ, ಮನೆಯಲ್ಲಿ ಕುಟುಂಬಸ್ಥರ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಒಪ್ಪಿಕೊಂಡ ಕೆಲಸ ಮುಗಿಸುವುದರೊಳಗೆ ಬಹಳ ಶ್ರಮ ಪಡಬೇಕಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಆಯಾ ವ್ಯಾಪ್ತಿಯಲ್ಲಿ ಮೆಚ್ಚುಗೆ, ಗೌರವ- ಸಮ್ಮಾನಗಳು ದೊರೆಯುವ ಅವಕಾಶಗಳು ಉಂಟು. ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಪ್ರಭಾವಿಗಳ ಶಿಫಾರಸು ದೊರೆತು, ಶೀಘ್ರ ಸಾಲ ಮಂಜೂರಾಗಲಿದೆ. ವೃತ್ತಿನಿರತರಿಗೆ ನಾನಾ ಸವಾಲುಗಳು ಎದುರಾಗಲಿವೆ. ಈ ಹಿಂದೆ ನೀವೇ ಆಡಿದ್ದ ಮಾತು ಅಥವಾ ಇನ್ನೊಬ್ಬರ ವಿಚಾರವಾಗಿ ಸಾರ್ವಜನಿಕವಾಗಿ ಮಂಡಿಸಿದ್ದ ಅಭಿಪ್ರಾಯಕ್ಕೆ ಈಗ ಆಕ್ಷೇಪಗಳು ವ್ಯಕ್ತ ಆಗುತ್ತವೆ. ದೇವತಾ ಕಾರ್ಯಗಳಿಗೆ ಹಣಕಾಸಿನ ದೇಣಿಗೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ವಿನಾಕಾರಣದ ಪ್ರಯಾಣ ಮತ್ತು ಇದರಿಂದ ಅನಗತ್ಯವಾಗಿ ಖರ್ಚುಗಳು ಆಗಲಿವೆ. ಮಹಿಳೆಯರು ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಹೆಚ್ಚು ಲಾಭ ದೊರೆಯಲಿದೆ. ಬಂದ ಲಾಭದಿಂದ ಚಿನ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಸಾಧ್ಯವಾದಲ್ಲಿ ಈ ವಾರದಲ್ಲಿ ಬರುವ ಗುರುವಾರದಂದು ನೀವು ಗುರುಗಳಾಗಿ ಭಾವಿಸುವವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೊಂದಲದ ಅವಧಿ ಇದಾಗಿರಲಿದೆ. ಈಗಿನ ಕೆಲಸ ಬದಲಾವಣೆ ಮಾಡುವ ಬಗ್ಗೆ ಆಲೋಚಿಸಲಿದ್ದೀರಿ. ಕೆಲವರು ಪ್ರಾಜೆಕ್ಟ್ ಬೇರೆ ಬದಲಾಯಿಸಿಕೊಡುವಂತೆ ಮನವಿ ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ನೆಮ್ಮದಿ ಯಾವುದರಲ್ಲಿದೆ ಎಂಬುದನ್ನು ಆಲೋಚಿಸಿ. ಏಕೆಂದರೆ ನೀವಾಗಿಯೇ ಕೇಳಿಕೊಂಡ ಹುದ್ದೆ, ಕೆಲಸ ನಿಮಗೇ ಸಮಸ್ಯೆಯಾಗಿ ಕಾಡುವ ಅವಕಾಶಗಳು ಜಾಸ್ತಿ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕೆಲಸ ಮಾಡುವವರು ಇತರರಿಗೆ ಜಾಮೀನಾಗಿ ನಿಲ್ಲುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ಏಕೆಂದರೆ ಹೀಗೆ ಜಾಮೀನಾಗಿ ನಿಲ್ಲುವ ಮೂಲಕ ಸಮಸ್ಯೆ ಸಿಲುಕಿಕೊಳ್ಳಬಹುದು. ವೃತ್ತಿನಿರತರು ಸ್ವಂತ ಕಚೇರಿಗೆ ಬದಲಾವಣೆ ಆಗಬಹುದು ಅಥವಾ ಇರುವ ಕಚೇರಿಯಿಂದ ಬೇರೆ ಕಚೇರಿಗೆ ಸ್ಥಳಾಂತರ ಆಗುವ ಯೋಗ ಇದೆ. ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದು ಬ್ಯಾಂಕ್ ಲೋನ್ ಅಥವಾ ಬೇರೆ ಪ್ರಯಾಣ ಸಿದ್ಧತೆಯನ್ನು ನಡೆಸುತ್ತಿದ್ದಲ್ಲಿ ಅನುಕೂಲಗಳು ಒದಗಿಬರಲಿದೆ. ದೀರ್ಘ ಕಾಲದ ಗೆಳೆಯರ ಸಹಾಯ ಒದಗಿ ಬರಲಿದೆ. ಮಹಿಳೆಯರಿಗೆ ಒಂದು ವೇಳೆ ಈ ಹಿಂದೆ ಕೆಲಸ ಮಾಡುತ್ತಿದ್ದು, ತಾತ್ಕಾಲಿಕ ಅಥವಾ ದೀರ್ಘ ವಿರಾಮ ಪಡೆದುಕೊಂಡಿದ್ದೀರಿ ಅಂತಾದರೆ ಮತ್ತೆ ಉದ್ಯೋಗ ಹುಡುಕುತ್ತಿರುವವರಿಗೆ ಶುಭ- ಅನುಕೂಲ ಇದೆ. ಕೆಲವರಿಗೆ ತಾತ್ಕಾಲಿಕವಾಗಿಯಾದರೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ ಯೋಗ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ನಂಬಿದ್ದ ವ್ಯಕ್ತಿಗಳು, ಸತ್ಯಗಳು ಬದಲಾಗುವಂಥ ವಾರ ಇದು. ನಮ್ಮ ಕೆಲಸಗಳನ್ನು ನಾವೇ ಮಾಡಬೇಕು, ಇನ್ನೊಬ್ಬರಿಗೆ ನಮ್ಮ ಕನಸುಗಳನ್ನು ಒಪ್ಪಿಸಬಾರದು ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಆರಂಭವಾಗುತ್ತದೆ. ಈ ಬದಲಾವಣೆ ಬರುವುದಕ್ಕೆ ನೀವು ಒಂದಿಷ್ಟು ಬೆಲೆಯನ್ನು ಸಹ ತೆರಬೇಕಾಗುತ್ತದೆ. ತುಂಬ ಮುಖ್ಯವಾದ ದಾಖಲೆ- ಪತ್ರಗಳನ್ನು ಸರಿಯಾಗಿ ಇಡುವಂತೆ ನಿಮಗೆ ಹೇಳಿದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆಯಿಂದ ಇರಿ. ಕೃಷಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಭೂಮಿ ವಿಸ್ತರಣೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ದೊಡ್ಡ ಪ್ರಮಾಣದ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಸಾಧ್ಯತೆ ಇದೆ ಅಥವಾ ಭೂಮಿ ಖರೀದಿಗಾಗಿಯೇ ಹಣಕಾಸು ಸಂಸ್ಥೆಗಳಲ್ಲಿ ಸಾಲ ಕೂಡ ಮಾಡಬಹುದು. ವೃತ್ತಿ ನಿರ್ವಹಿಸುವವರಿಗೆ ಹೊಸ ಪೀರೋಪಕರಣಗಳು, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ಖರ್ಚಿನ ಮೇಲೆ ನಿಗಾ ಇಡಿ. ವಿದ್ಯಾರ್ಥಿಗಳು ಪರಿಚಯಸ್ಥರ ಮನೆಗೆ ಹೋದಾಗ ವಿಪರೀತ ಸ್ವಾತಂತ್ರ್ಯ ತೆಗೆದುಕೊಂಡು ಎಲ್ಲೆಂದರಲ್ಲಿ ಓಡಾಡಬೇಡಿ. ಏಕೆಂದರೆ ಅಲ್ಲಿ ಏನಾದರೂ ವಸ್ತುಗಳು ಕಾಣೆಯಾದಲ್ಲಿ ನಿಮ್ಮ ಮೇಲೆ ಆರೋಪಗಳು ಬರುವ ಸಾಧ್ಯತೆ ಇದೆ. ಮಹಿಳೆಯರು ಸಂತಾನಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಶುಭ ವಾರ್ತೆ ಕೇಳುವ ಯೋಗ ಇದೆ. ಮನೆ ಸದಸ್ಯರಿಂದ ಆರ್ಥಿಕ ಬೆಂಬಲ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಆಹಾರ- ನೀರಿನ ಬಗ್ಗೆ ಗಮನ ವಹಿಸುವುದು ಮುಖ್ಯ ಆಗುತ್ತದೆ. ಬಹಳ ಕಾಲದಿಂದ ಮುಗಿಯದ ಉಳಿದಿದ್ದ ಕೆಲಸಗಳು ಈಗ ವೇಗ ಪಡೆದುಕೊಂಡು, ಪೂರ್ಣಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗುತ್ತವೆ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಬಗ್ಗೆ ಒಳ್ಳೆ ಮಾತನಾಡುವ ಮೂಲಕ ವರ್ಚಸ್ಸು ಹೆಚ್ಚಾಗಲಿದೆ. ಯಾವುದಾದರೂ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದೀರಿ ಅಂತಾದರೆ ಆ ಕೆಲಸದಲ್ಲಿನ ಸವಾಲುಗಳು ಮತ್ತು ನಿಮ್ಮ ಸಾಮರ್ಥ್ಯ- ಮಿತಿಗಳನ್ನು ಒಮ್ಮೆ ಅಳೆದು, ಆಲೋಚಿಸಿ ಒಪ್ಪಿಕೊಳ್ಳಿ. ಕೃಷಿ ಹಾಗೂ ಕೃಷಿ ಸಂಬಂಧಿ ಕೆಲಸಗಳನ್ನು ಮಾಡುವವರಿಗೆ ಅನಗತ್ಯ ವಾದ- ವಿವಾದಗಳು ಆಗುವ ಅವಕಾಶ ಇದೆ. ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರು ಬಳಸುವ ಭಾಷೆ, ಆರಿಸಿಕೊಳ್ಳುವ ಪದಗಳಲ್ಲಿ ಜಾಗ್ರತೆಯಿಂದ ಇರಬೇಕು. ಇಲ್ಲದಿದ್ದಲ್ಲಿ ವಿವಾದಗಳು ಹೆಗಲೇರಲಿವೆ. ವೃತ್ತಿನಿರತರಿಗೆ ವಿಸ್ತರಣೆಗೆ ಸೂಕ್ತ ಸಮಯ ಇದು. ಹೊಸ ಶಾಖೆ ತೆರೆಯಬೇಕು, ಒಂದಿಷ್ಟು ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ವೃತ್ತಿಯ ಸಲುವಾಗಿ ಕೆಲವು ಸಲಕರಣೆ, ವಾಹನ ಖರೀದಿ ಮಾಡಬೇಕು ಎಂದು ತೀರ್ಮಾನ ಮಾಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಖ್ಯಾತಿ ಗಳಿಸುವಂಥ ಸಮಯ ಇದೆ. ಇದರಿಂದ ನಿಮ್ಮ ಪಾಲಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ನಾನಾ ರೀತಿಯಲ್ಲಿ ಕಿರಿಕಿರಿ ಆಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಶುಭ ಕಾರ್ಯಗಳಲ್ಲಿ ಭಾಗವಹಿಸುವ ಸಲುವಾಗಿ ದೂರದ ಪ್ರದೇಶಗಳಿಗೆ ತೆರಳುವ ಯೋಗ ಇದೆ. ಈ ಸಂದರ್ಭದಲ್ಲಿ ಬಂಧು- ಬಾಂಧವರು, ಸ್ನೇಹಿತರ ಜತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಹೊಸ ವಸ್ತ್ರಾಭರಣ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಡಿಜಿಟಲ್ ಆಸ್ತಿಗಳಲ್ಲಿ ಹಣ ತೊಡಗಿಸಿದವರು ಹೂಡಿಕೆಯನ್ನು ಹಿಂಪಡೆದುಕೊಳ್ಳಲಿದ್ದೀರಿ. ಪುಷ್ಕಳವಾದ ಊಟ- ತಿಂಡಿ ಸವಿಯುವಂಥ ಸಾಧ್ಯತೆ ಇದೆ. ಕೃಷಿಕರಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯಲಿದೆ. ಇದರಿಂದ ನಿಮ್ಮ ಹಣಕಾಸಿನ ಹೊರೆ ಇಳಿಯುವುದಕ್ಕೆ ಸಹಾಯ ಆಗಲಿದೆ. ಎಲ್ಲರೂ ಸಾಧ್ಯವಿಲ್ಲ ಎಂದು ಕೈ ಬಿಟ್ಟಿದ್ದ ಕೆಲಸ ನೀವು ಮಾಡಿ, ಮುಗಿಸಿ ಸೈ ಎನಿಸಿಕೊಳ್ಳಲಿದ್ದೀರಿ. ಮನೆಯಲ್ಲಿನ ಶುಭ ಕಾರ್ಯಗಳ ನೇತೃತ್ವವನ್ನು ನೀವೇ ವಹಿಸಿಕೊಳ್ಳಬೇಕಾಗುತ್ತದೆ. ಕೆಲಸದ ಒತ್ತಡದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ನಿಮ್ಮ ಆರೋಗ್ಯದ ಫಾಲೋ ಅಪ್ ಚೆಕಪ್ ಮಾಡಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ಇಂಥ ಸಂಗತಿಗಳನ್ನು ನಿರ್ಲಕ್ಷ್ಯ ಮಾಡಬೇಡಿ. ವೃತ್ತಿನಿರತರಿಗೆ ಆದಾಯ ಹೆಚ್ಚಳ ಮಾಡಿಕೊಳ್ಳಲೇಬೇಕಾದ ಅನಿವಾರ್ಯ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪ್ರೋತ್ಸಾಹದ ವಾತಾವರಣ ಇಲ್ಲ ಎಂಬ ಕಾರಣಕ್ಕೆ ಬೇಸರ ಮೂಡಬಹುದು. ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣ ಆಗಬಹುದು. ಆದ್ದರಿಂದ ಸೂಕ್ತ ವೈದ್ಯರಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ವಾರ ಯಾವುದೇ ಕೆಲಸದಲ್ಲಿ ನಿಮ್ಮ ತಂತ್ರ, ಯೋಜನೆ ಚೆನ್ನಾಗಿರುತ್ತದೆ. ಈ ಹಿಂದೆ ನಿಮಗೆ ಕೈ ಕೊಟ್ಟಿದ್ದ ನಿರ್ಧಾರಗಳ ಹಿಂದಿನ ಕಾರಣಗಳನ್ನು ಗುರುತಿಸಿ, ತಪ್ಪುಗಳು ಪುನರಾವರ್ತನೆ ಆಗದಂತೆ ಜಾಗ್ರತೆ ವಹಿಸುತ್ತೀರಿ. ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವರರು ವಹಿಸಿದ ಗುರಿಯನ್ನು ತಲುಪಿ, ಹೆಚ್ಚಿನ ಬೋನಸ್ ಗಳಿಸುತ್ತೀರಿ. ನಿಮ್ಮಲ್ಲಿ ಕೆಲವರು ವಿರಾಮ ಪಡೆದುಕೊಳ್ಳುವುದಕ್ಕೆ, ನೈಸರ್ಗಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಆಲೋಚನೆ ಮಾಡಬಹುದು. ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರಿಗೆ ಹಲವು ಕೆಲಸಗಳು ಅರಮರ್ಧವಾಗಿ ನಿಲ್ಲುವ ಸಾಧ್ಯತೆಗಳಿವೆ. ಇತರರ ಜವಾಬ್ದಾರಿಗಳನ್ನು ಪೂರೈಸುವುದಾಗಿ ಒಪ್ಪಿಕೊಳ್ಳುವ ಮುನ್ನ ಸಾಧ್ಯಾಸಾಧ್ಯತೆಯನ್ನು ಆಲೋಚಿಸುವುದು ಮುಖ್ಯವಾಗುತ್ತದೆ. ಮನೆಯ ದುರಸ್ತಿಗಾಗಿ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ವೃತ್ತಿನಿರತರಿಗೆ ಪ್ರತಿಸ್ಪರ್ಧಿಗಳ ವಿರುದ್ಧ ಕೈ ಮೇಲಾಗುವಂಥ ಸಾಧ್ಯತೆ ಇದೆ. ಯಾರಾದರೂ ನಿಮಗೆ ಸವಾಲು ಹಾಕಿದ್ದಲ್ಲಿ ಆ ಸವಾಲುಗಳಲ್ಲಿ ನಿಮ್ಮ ಗೆಲುವು ಪಕ್ಕಾ ಆಗಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಯಾವುದಾದರೂ ಒಂದೋ ಎರಡೋ ವಿಷಯಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಲ್ಲಿ ಸೂಕ್ತ ಶಿಕ್ಷಕರ ಪರಿಚಯ ಆಗುವ ಮೂಲಕ ಕಲಿಕೆಯಲ್ಲಿ ಮುನ್ನಡೆಗೆ ಸಹಾಯ ಆಗಲಿದೆ. ಮಹಿಳೆಯರಿಗೆ ಈ ಹಿಂದಿನ ತಪ್ಪುಗಳು ಅಥವಾ ಇತರರಿಗೆ ಗೊತ್ತಿಲ್ಲ ಅಂದುಕೊಂಡ ತಪ್ಪನ್ನು ಮುಂದು ಮಾಡಿಕೊಂಡು ಕೆಲವರು ಬ್ಲ್ಯಾಕ್ ಮೇಲ್ ಮಾಡಬಹುದು. ಇಂಥದ್ದಕ್ಕೆ ಬಲಿಯಾಗಬೇಡಿ. ಕುಟುಂಬಸ್ಥರು, ಸ್ನೇಹಿತರ ಸಹಾಯ ಪಡೆದು, ಸಮಸ್ಯೆ ಬಗೆಹರಿಸಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಆದಾಯದ ಮೂಲಗಳು ಹೆಚ್ಚು ಮಾಡಿಕೊಳ್ಳುವುದಕ್ಕೆ ದಾರಿ ಗೋಚರ ಆಗಲಿದೆ. ಹೊಸಬರ ಪರಿಚಯ, ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈಗ ನಿಮ್ಮ ಮುಂದಿರುವ ಸವಾಲು ಏನೆಂದರೆ, ಹಳಬರ ಸ್ನೇಹವನ್ನು ಉಳಿಸಿಕೊಂಡು, ಹೊಸಬರ ಜತೆಗಿನ ಬಾಂಧವ್ಯವನ್ನು ಸಹ ಉಳಿಸಿಕೊಳ್ಳಿ. ಸ್ನೇಹಿತರೇ ತಾನೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಧೋರಣೆ ನಿಮಗೆ ತರವಲ್ಲ, ಇದರಿಂದ ಆಪ್ತರನ್ನು ದೂರ ಮಾಡಿಕೊಳ್ಳಬೇಕಾದೀತು, ಜಾಗ್ರತೆ. ಕೃಷಿಕರು- ಕೃಷಿ ಅವಂಬಿತ ಕೆಲಸಗಳನ್ನು ಮಾಡುವವರಿಗೆ ವಿವಾಹಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ಸಂಬಂಧಿಕರು ತಮ್ಮ ಮನೆಯಲ್ಲಿನ ಶುಭ ಕಾರ್ಯಗಳಿಗೆ ನಿಮಗೆ ಆಹ್ವಾನ ನೀಡಬಹುದು. ಹಳೆಯ ಸಿಟ್ಟು, ದ್ವೇಷ ಸಾಧಿಸುತ್ತಾ ಹೋಗದಿರಿ. ಹೊಸ ವಾಹನವನ್ನೂ ಖರೀದಿಸುವ ಯೋಗ ಇದೆ. ವೃತ್ತಿನಿರತರಿಗೆ ಕೆಲವು ತಪ್ಪಾದ ಸಲಹೆಗಳು, ಮಾರ್ಗದರ್ಶನ ನೀಡುತ್ತಾ ದಾರಿ ತಪ್ಪಿಸುವಂಥ ಸಾಧ್ಯತೆ ಇದೆ. ಆದ್ದರಿಂದ ಯಾರನೇ ಆಗಲಿ ಅವರ ಮೇಲ್ನೋಟದ ವರ್ತನೆ ಆಧಾರದ ಮೇಲೆ ನಂಬದಿರಿ. ವಿದ್ಯಾರ್ಥಿಗಳಿಗೆ ಹೊಸಬರ ಜತೆಗೆ ಸ್ನೇಹ ಮಾಡುವಾಗ ಅವರ ಹಿನ್ನೆಲೆಯನ್ನು ಗಮನಿಸುವುದು ಮುಖ್ಯ. ಇಲ್ಲದಿದ್ದಲ್ಲಿ ಕೆಟ್ಟ ಹೆಸರು ಪಡೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಮನೆಯಲ್ಲೂ ನಂಬಿಕೆ ಹೋಗುತ್ತದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಚೂಪಾದ ವಸ್ತುಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಇಲ್ಲದಿದ್ದರೆ ಗಾಯಗಳಾಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ದೇವತಾ ಕಾರ್ಯಗಳಲ್ಲಿ ಆಸಕ್ತಿ ಜಾಸ್ತಿ ಆಗುತ್ತದೆ. ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಕಾನೂನು- ಕಟ್ಟಳೆ ವಿಚಾರಗಳಲ್ಲಿ ಖರ್ಚುಗಳಾಗುವಂಥ ಸಾಧ್ಯತೆ ಇದೆ. ಸಂಚಾರ ನಿಯಮಗಳನ್ನು ಪಾಲಿಸುವ ಕಡೆಗೆ ಗಮನ ನೀಡಿ, ಇಲ್ಲದಿದ್ದಲ್ಲಿ ಭಾರೀ ಬೆಲೆಯನ್ನು ತೆರಬೇಕಾದೀತು. ವೈಯಕ್ತಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ. ಈ ಸಲಹೆ ನಿರ್ಲಕ್ಷ್ಯ ಮಾಡಿದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರಗಳಾಗುವ ಸಾಧ್ಯತೆ ಇದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಇದಕ್ಕಾಗಿ ಆಸ್ತಿಯನ್ನು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯನ್ನು ಅಡಮಾನ ಮಾಡುವ ಸಾಧ್ಯತೆ ಇದೆ. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿ ಅಥವಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡಲಿಕ್ಕಾಗದೆ ಟೀಕೆಗೆ ಗುರಿ ಆಗಲಿದ್ದೀರಿ. ವೃತ್ತಿನಿರತರಿಗೆ ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮನೆಗೆ ಹೊಸದಾಗಿ ಸಾಕು ಪ್ರಾಣಿಗಳನ್ನು ತರುವ ಸಾಧ್ಯತೆ ಇದೆ. ಇನ್ನು ಮಹಿಳೆಯರು ಕುಟುಂಬ ವೆಚ್ಚದ ಕಡೆಗೆ ಗಮನವನ್ನು ನೀಡಬೇಕು ಹಾಗೂ ಹಾಕಿಕೊಂಡ ಬಜೆಟ್ ವ್ಯಾಪ್ತಿಯೊಳಗೆ ಖರ್ಚಿನ ಪ್ರಮಾಣ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಮೇಲೆ ಸ್ನೇಹಿತರು, ಸಂಬಂಧಿಕರ ಅವಲಂಬನೆ ಹೆಚ್ಚಾಗಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯ ವಿಚಾರವು ಚಿಂತೆಗೆ ಕಾರಣ ಆಗಬಹುದು. ಪ್ರೇಮಿಗಳು ಇದ್ದಲ್ಲಿ, ಇನ್ನೂ ಈ ವಿಚಾರ ಮನೆಗೆ ಗೊತ್ತಾಗಿಲ್ಲ ಎಂದಾದಲ್ಲಿ ಮೂರನೇ ವ್ಯಕ್ತಿಗಳ ಮೂಲಕ ವಿಚಾರ ಗೊತ್ತಾಗಿ, ಆತಂಕದ ಸನ್ನಿವೇಶ ಸೃಷ್ಟಿಯಾಗಲಿದೆ. ಆದ್ದರಿಂದ ಹೊರಗೆ ಸುತ್ತಾಡದಿರುವುದು ಉತ್ತಮ. ಇಲ್ಲದಿದ್ದಲ್ಲಿ ನಿಮ್ಮ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳಿಕೊಂಡುಬಿಡಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ಪನ್ನಗಳ ಖರೀದಿಗಾಗಿ ವರ್ತಕರು ಅಥವಾ ಕಂಪನಿ ಜತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದು ಒಪ್ಪಂದದ ಮಟ್ಟಕ್ಕೆ ಬಾರದಿದ್ದರೂ ಒಂದಿಷ್ಟು ಉತ್ತಮ ಬೆಳವಣಿಗೆ ಆಗಲಿದೆ. ಸ್ನೇಹಿತರ ನೆರವಿನಿಂದ ಆದಾಯದ ಮೂಲಗಳು ಜಾಸ್ತಿ ಮಾಡಿಕೊಳ್ಳುವುದಕ್ಕೆ ಅವಕಾಶದ ಬಾಗಿಲುಗಳು ತೆರೆದುಕೊಳ್ಳಲಿವೆ. ವೃತ್ತಿನಿರತರು ದ್ವಿಚಕ್ರ ವಾಹನವನ್ನೋ, ಕಾರನ್ನೋ ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು ಅಥವಾ ಸಾಲವಂತೂ ಮಾಡಲಿದ್ದೀರಿ. ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಸರಿಯಾಗಿ ಹಾಕಿಟ್ಟುಕೊಳ್ಳಿ. ಶಕ್ತಿ ಮೀರಿ, ಸಾಲ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಆಟೋಟಗಳಲ್ಲಿ ಉತ್ತಮ ಹೆಸರು ಪಡೆಯುವ ಯೋಗ ಇದೆ. ರಾಜಕಾರಣದಲ್ಲಿ ಇರುವ ಮಹಿಳೆಯರಿಗೆ ಪದೋನ್ನತಿ ಇದೆ.

ಲೇಖನ- ಎನ್‌.ಕೆ.ಸ್ವಾತಿ