Rahu- Ketu Transit 2023: ಮೀನಕ್ಕೆ ರಾಹು, ಕನ್ಯಾಗೆ ಕೇತು ಪ್ರವೇಶ; ಮೇಷದಿಂದ ಮೀನದ ತನಕ ಯಾರಿಗೇನು ಫಲ?

ಇದೇ ಅಕ್ಟೋಬರ್ 30ನೇ ತಾರೀಕಿನಂದು ರಾಹು- ಕೇತುಗಳು ತಮ್ಮ ಸಂಚಾರವನ್ನು ಹೊಸ ರಾಶಿಯಿಂದ ಆರಂಭ ಮಾಡುತ್ತವೆ. ರಾಹು, ಮೀನ ರಾಶಿಗೆ ಪ್ರವೇಶ ಮಾಡಿದರೆ, ಕೇತು ಕನ್ಯಾ ರಾಶಿಗೆ ಪ್ರವೇಶಿಸುತ್ತದೆ. ಈ ಎರಡು ಗ್ರಹಗಳು ಅಪ್ರದಕ್ಷಿಣೆಯಾಗಿ ಸಂಚಾರ ಮಾಡುವಂಥವು. ಮತ್ತು ಈ ಎರಡೂ ಗ್ರಹಗಳು ಒಂದು ರಾಶಿಯಲ್ಲಿ ಹದಿನೆಂಟು ತಿಂಗಳು ಇರುತ್ತವೆ.

Rahu- Ketu Transit 2023: ಮೀನಕ್ಕೆ ರಾಹು, ಕನ್ಯಾಗೆ ಕೇತು ಪ್ರವೇಶ; ಮೇಷದಿಂದ ಮೀನದ ತನಕ ಯಾರಿಗೇನು ಫಲ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2023 | 7:12 PM

ಇದೇ ಅಕ್ಟೋಬರ್ 30ನೇ ತಾರೀಕಿನಂದು ರಾಹು- ಕೇತುಗಳು ತಮ್ಮ ಸಂಚಾರವನ್ನು ಹೊಸ ರಾಶಿಯಿಂದ ಆರಂಭ ಮಾಡುತ್ತವೆ. ರಾಹು ಮೀನ ರಾಶಿಗೆ ಪ್ರವೇಶ ಮಾಡಿದರೆ, ಕೇತು ಕನ್ಯಾ ರಾಶಿಗೆ ಪ್ರವೇಶಿಸುತ್ತದೆ. ಈ ಎರಡು ಗ್ರಹಗಳು ಅಪ್ರದಕ್ಷಿಣೆಯಾಗಿ ಸಂಚಾರ ಮಾಡುವಂಥವು. ಮತ್ತು ಈ ಎರಡೂ ಗ್ರಹಗಳು ಒಂದು ರಾಶಿಯಲ್ಲಿ ಹದಿನೆಂಟು ತಿಂಗಳು ಇರುತ್ತವೆ. ಇವೆರಡು ರಾಶಿಗಳ ಮಧ್ಯೆ ಏಳು ಮನೆಗಳ ಅಂತರ ಇರುತ್ತದೆ. ಆದ್ದರಿಂದ ಇದನ್ನು ಸಮಸಪ್ತಕ ಎನ್ನಲಾಗುತ್ತದೆ. ಈ ಬದಲಾವಣೆಯಿಂದ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಮೇಲೆ ಆಗುವ ಪರಿಣಾಮ ಏನು ಆಗಲಿದೆ ಎಂಬುದನ್ನು ಓದಿಕೊಳ್ಳಿ.

ಮೇಷ

ನಿಮ್ಮ ವ್ಯಯ ಸ್ಥಾನದಲ್ಲಿ ರಾಹು ಸಂಚರಿಸುತ್ತದೆ, ಆರನೇ ಮನೆಯಲ್ಲಿ ಕೇತು ಸಂಚಾರ ಆಗುತ್ತದೆ. ಖರ್ಚು, ಖರ್ಚು, ಖರ್ಚು ಸಿಕ್ಕಾಪಟ್ಟೆ ಆಗುತ್ತದೆ. ನಿಮ್ಮ ಸ್ನೇಹಿತರು ಯಾರು, ಮತ್ತು ಅವರಿಂದ ನಿಮಗೆ ಎಂಥ ಇಮೇಜ್ ತಗುಲಿ ಹಾಕಿಕೊಳ್ಳುತ್ತಿದೆ ಎಂಬುದರ ಬಗ್ಗೆ ಗಮನ ನೀಡುವುದು ಮುಖ್ಯ. ಯಾವ ರೀತಿಯಿಂದ ಸಾಲ ಸಿಕ್ಕರೂ ಪಟಕ್ಕನೆ ತೆಗೆದುಕೊಳ್ಳುವ ಮನಸ್ಥಿತಿ ಏರ್ಪಡುತ್ತದೆ. ಈ ಕಾರಣದಿಂದ ನಿಮಗೆ ಬೇಕೋ ಬೇಡವೋ ಸಾಲ ತೆಗೆದುಕೊಂಡು ಬಿಡುತ್ತೀರಿ. ಆ ನಂತರದಲ್ಲಿ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಈ ಸಂಚಾರದ ಅವಧಿಯಲ್ಲಿ ಶಾರ್ಟ್ ಕಟ್ ಗಳನ್ನು, ಅಂದರೆ ಅಡ್ಡದಾರಿಗಳನ್ನು ಹಿಡಿಯುವುದಕ್ಕೆ ಸನ್ನಿವೇಶ- ಅವಕಾಶ ಎರಡೂ ಇರುತ್ತದೆ. ಆದರೆ ನ್ಯಾಯವಾಗಿ ನಡೆದುಕೊಂಡಲ್ಲಿ ನೆಮ್ಮದಿಯಿಂದ ಇರಬಹುದು. ಇನ್ನು ಶುಭ ಫಲ ಏನು ಅಂತ ನೋಡುವುದಾದರೆ ಹಣಕಾಸಿನ ಹರಿವಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಸಾಲ ಕೇಳಿದರೇನೇ ಸಲೀಸಾಗಿ ಸಿಗುತ್ತದೆ ಅಂದಮೇಲೆ ಕೇಳಬೇಕಾ? ಜತೆಗೆ ನಿಮಗೆ ಬರಬೇಕಾದ ಹಣಕ್ಕೆ ಒಂದಿಷ್ಟು ಗಟ್ಟಿ ಪ್ರಯತ್ನ ಹಾಕಬೇಕು. ಭೂಮಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ.

ವೃಷಭ

ನಿಮ್ಮ ರಾಶಿಗೆ ಲಾಭ ಸ್ಥಾನದಲ್ಲಿ ರಾಹು ಸಂಚಾರ ಆಗಲಿದೆ. ಮುಖ್ಯವಾಗಿ ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳನ್ನು ಕಾಣಬಹುದು. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ರಾಜೀ- ಸಂಧಾನದ ಮೂಲಕ ಸರಿ ಪಡಿಸಿಕೊಳ್ಳುವುದಕ್ಕೆ ನೆರವು ದೊರೆಯಲಿದೆ. ನೀವು ನಿರ್ವಹಿಸುವ ಹಣಕಾಸಿಗೆ ಸಂಬಂಧಿಸಿದ ಜವಾಬ್ದಾರಿಗಳಲ್ಲಿ ಮನಸ್ಸಿಗೆ ಸಮಾಧಾನ ಎನಿಸುವಂಥ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ನಿಮಗೆ ಬರಬೇಕಾದ ಲಾಭದಲ್ಲಿ ಪ್ರಮಾಣ ಕಡಿಮೆ ಆಗಬಹುದು ಅಥವಾ ಬರುವುದು ತಡ ಆಗಬಹುದು, ಆದರೆ ಲಾಭ ಬರುತ್ತದೆ. ಇಷ್ಟು ಸಮಯ ವ್ಯಯ ಸ್ಥಾನದಲ್ಲಿ ಇದ್ದ ರಾಹುವಿನಿಂದಾಗಿ ಆಗುತ್ತಿದ್ದ ಖರ್ಚು- ವೆಚ್ಚ, ನಷ್ಟವನ್ನು ಸಂಭಾಳಿಸುವಲ್ಲಿ ಯಶಸ್ಸು ಕಾಣುತ್ತೀರಿ. ಕನ್ಯಾ ರಾಶಿಯಲ್ಲಿ ಕೇತು ಸಂಚರಿಸುವುದರಿಂದ ಆರೋಗ್ಯ ವಿಚಾರದಲ್ಲಿ ಹಾಗೂ ಮಕ್ಕಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನಿಮಗೆ ಈ ಹಿಂದೆ ಇದ್ದ ಅನಾರೋಗ್ಯ ಸಮಸ್ಯೆಗಳು ಉಲ್ಬಣ ಆಗಬಹುದು. ಮಕ್ಕಳ ಶಿಕ್ಷಣ, ಆರೋಗ್ಯದಲ್ಲಿ ಕುಂಠಿತ ಆಗಬಹುದು. ಆ ಕಡೆಗೆ ಲಕ್ಷ್ಯವನ್ನು ನೀಡಿ.

ಮಿಥುನ

ನಿಮ್ಮ ಕರ್ಮ ಸ್ಥಾನ, ಅಂದರೆ ಹತ್ತನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಆತಂಕದ ಸನ್ನಿವೇಶಗಳನ್ನು ಎದುರಿಸಲಿದ್ದೀರಿ. ನಿಮಗೆ ವಹಿಸುವ ಅದೆಷ್ಟೇ ಸಣ್ಣ ಪ್ರಮಾಣದ ಕೆಲಸವಾದರೂ ಶ್ರದ್ಧೆಯಿಂದ ಮಾಡಿ, ಅನುಸರಿಸಬೇಕಾದ ನಿಯಮಗಳಲ್ಲಿ ಯಾವುದೇ ರಾಜೀ ಆಗಬೇಡಿ. ಆಪ್ತರು ಹಾಗೂ ಮನೆಯ ಹಿರಿಯರ ಆರೋಗ್ಯ ಸಮಸ್ಯೆಗಳು ನಿಮ್ಮಲ್ಲಿ ಆತಂಕಕ್ಕೆ ಕಾರಣ ಆಗಬಹುದು. ಈ ಮೊದಲು ಇದ್ದ ಆತ್ಮವಿಶ್ವಾಸದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಉದ್ಯೋಗ ಬದಲಾವಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅಂತಾದರೆ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅದರಲ್ಲೂ ವಿದೇಶದ ಕೆಲಸ- ಕಾರ್ಯಗಳಾದಲ್ಲಿ ಇನ್ನೂ ಹೆಚ್ಚು ಮುಂಜಾಗ್ರತೆಯನ್ನು ತೆಗೆದುಕೊಳ್ಳಿ. ಈ ಅವಧಿಯಲ್ಲಿ ಹಗಲುಗನಸು ಜಾಸ್ತಿ ಆಗುತ್ತದೆ. ವಾಸ್ತವ ನೆಲೆಗಟ್ಟಿನಲ್ಲಿ ನಿಂತು, ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ನಾಲ್ಕನೇ ಮನೆಯಲ್ಲಿ ಕೇತು ಸಂಚರಿಸುವಾಗ ನಿಮಗಿಂತ ಅನುಭವಿಗಳ, ಹಿರಿಯರ ಜತೆಗಿನ ಒಡನಾಟದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪಗಳು ಕಾಣಿಸಿಕೊಳ್ಳಲಿವೆ. ವಾಹನ, ಮನೆ ದುರಸ್ತಿಗೆ ಹೆಚ್ಚಿನ ಖರ್ಚಾಗಲಿದೆ. ಮಾತನಾಡುವಾಗ ಜಾಗ್ರತೆ. ಪ್ರತಿ ಮಾತಿಗೂ ಬೇರೆ ಬೇರೆ ಅರ್ಥ ಕಲ್ಪಿಸುವುದಕ್ಕೆ ನಿಮ್ಮ ಸುತ್ತಲಿನ ಜನ ಪ್ರಯತ್ನಿಸುತ್ತಾರೆ.

ಕರ್ಕಾಟಕ

ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ಉಳಿದ ಗ್ರಹ ಸ್ಥಿತಿಗಳು ಸಹ ಗೋಚಾರದಲ್ಲಿ ನಿಮಗೆ ಉತ್ತಮ ಸ್ಥಿತಿಯಲ್ಲಿಯೇನೂ ಇಲ್ಲ. ಸಾಧ್ಯವಾದಲ್ಲಿ ಅಥವಾ ಈಗಾಗಲೇ ಏನೂ ಮಾಡಿಸಿಕೊಂಡಿಲ್ಲ ಎಂದಾದಲ್ಲಿ ನವಗ್ರಹ ಶಾಂತಿ ಹೋಮವನ್ನು ಮಾಡಿಸಿಕೊಳ್ಳುವುದು ಕ್ಷೇಮ. ಒಂದು ವೇಳೆ ಆರ್ಥಿಕವಾಗಿ ಅನುಕೂಲ ಇಲ್ಲ ಎಂದಾದಲ್ಲಿ ನವಗ್ರಹ ದೇವಸ್ಥಾನಗಳಿಗೆ ತೆರಳಿ ಪ್ರದಕ್ಷಿಣೆಯನ್ನು ಮಾಡಿ. ಯಾರು ಡೆಡ್ ಲೈನ್ ಇಟ್ಟುಕೊಂಡು ಕೆಲಸ ಮಾಡುತ್ತೀರಿ, ಅಂಥವರಿಗೆ ಈಗ ಸವಾಲಿನ ಸಮಯ ಆಗಿರುತ್ತದೆ. ಆಲಸ್ಯದ ಕಾರಣಕ್ಕೋ ಅಥವಾ ಏಕಾಗ್ರತೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೋ ನಿಮಗೆ ಬರುವಂಥ ಕೆಲಸದ ಪ್ರಮಾಣದಲ್ಲಿ ಕಡಿಮೆ ಆಗಬಹುದು ಅಥವಾ ನೀವಾಗಿಯೇ ಕಡಿಮೆ ಮಾಡಿಕೊಳ್ಳುವಂತೆ ಆಗಲಿದೆ. ಇನ್ನು ಒಂದೇ ಕೆಲಸಕ್ಕೆ ಬಹಳಷ್ಟು ಸಲ ಪ್ರಯತ್ನಿಸಬೇಕಾದ, ಮಾಡಿದ್ದನ್ನೇ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಮೂರನೇ ಮನೆಯಲ್ಲಿ ಕೇತು ಸಂಚರಿಸುವಾಗ ಸೋದರ ಸಂಬಂಧದಲ್ಲಿ ಸ್ವಲ್ಪ ಮಟ್ಟಿಗಿನ ಭಿನ್ನಾಭಿಪ್ರಾಯ ಬಂದರೂ ನಿಮಗೆ ಬರಬೇಕಾದ ಆಸ್ತಿ, ಹಣ, ಒಡವೆಯ ಪಾಲು ಕೈ ಸೇರಲಿದೆ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವ ಕಡೆಗೆ ಗಮನವನ್ನು ನೀಡಿ.

ಸಿಂಹ

ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ಈ ಅವಧಿಯಲ್ಲಿ ಅವಮಾನಕ್ಕೆ ಗುರಿ ಆಗುತ್ತೀರಿ. ಇಷ್ಟು ಸಣ್ಣ ತಪ್ಪು ತಾನೇ ಯಾರು ಗಮನಿಸುವುದಕ್ಕೆ ಸಾಧ್ಯ, ಕೆಲಸ ಬೇಗ ಮುಗಿದುಹೋಗುತ್ತದೆ ಎಂದುಕೊಂಡು ಯಾವ ತೀರ್ಮಾನವನ್ನು ಸಹ ತೆಗೆದುಕೊಳ್ಳಬೇಡಿ. ಚರ್ಮಕ್ಕೆ ಸಂಬಂಧಿಸಿದಂತೆ ಅಲರ್ಜಿ ಈಗಾಗಲೇ ಇದ್ದಲ್ಲಿ ಅದು ಉಲ್ಬಣಿಸಲಿದೆ. ಅಥವಾ ಈ ಅವಧಿಯಲ್ಲಿ ಕಾಣಿಸಿಕೊಳ್ಳಬಹುದು. ದೂಳಿನ ಅಲರ್ಜಿ ಇದ್ದವರು ಮಾಮೂಲಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಭೂಮಿಗೆ ಸಂಬಂಧಿಸಿದಂತೆ ಯಾವುದಾದರೂ ವ್ಯವಹಾರ ಮಾಡುತ್ತೀರಿ ಎಂದಾದರೂ ಸರಿಯಾದ ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಂಡು ಮುಂದುವರಿಯಿರಿ. ದೊಡ್ಡ ಮೊತ್ತದ ಅಡ್ವಾನ್ಸ್ ನೀಡಬೇಕು ಎಂದಿದ್ದರೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಆ ನಂತರ ತೀರ್ಮಾನವನ್ನು ತೆಗೆದುಕೊಳ್ಳಿ. ಎರಡನೇ ಮನೆಯಲ್ಲಿ ಕೇತು ಸಂಚರಿಸುವುದರಿಂದ ಕುಟುಂಬದಲ್ಲಿ ಅಸಮಾಧಾನಗಳು ಜಾಸ್ತಿ ಆಗಲಿವೆ. ಯಾರದೋ ಮೇಲಿನ ಸಿಟ್ಟನ್ನು ಸಂಗಾತಿ ಮೇಲೆ ತೋರಿಸುವಂತಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಅಸಮಾಧಾನ ಇರುತ್ತದೆ.

ಕನ್ಯಾ

ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ವಿವಾಹಿತರಿಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಕೈ ಚಾಚಬೇಡಿ. ಅಥವಾ ಪುರುಷರಾದಲ್ಲಿ ಸ್ತ್ರೀಯರ ಜತೆಗೆ ಹಾಗೂ ಸ್ತ್ರೀಯರಾಗಿದ್ದಲ್ಲಿ ಆಕರ್ಷಿತರಾಗುವ ಹಾಗೂ ಇದರಿಂದಾಗಿ ಸಮಾಜದ ದೃಷ್ಟಿಯಲ್ಲಿ ಕೆಟ್ಟದಾಗಿ ಬಿಂಬಿತರಾಗುವ ಯೋಗ ಇದೆ. ಆದ್ದರಿಂದ ಇಂಥ ಸಂಗತಿಗಳು ಮುನ್ನೆಲೆಗೆ ಬರುತ್ತಿದ್ದಂತೆ ಜಾಗೃತರಾಗಿ ವರ್ತಿಸುವುದು ಮುಖ್ಯವಾಗುತ್ತದೆ. ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದರೆ ನಿಮ್ಮ ಕೈಗೆ ಆಫರ್ ಲೆಟರ್ ಬಂದು, ಎಲ್ಲವೂ ಖಾತ್ರಿ ಆಗುವ ತನಕ ಎಲ್ಲ ಕಡೆ ಹೇಳಿಕೊಂಡು ಬರಬೇಡಿ. ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಗಣಪತಿಯ ಆರಾಧನೆ ಮಾಡಿ, ಆ ನಂತರ ಇನ್ನಷ್ಟು ಗಟ್ಟಿಯಾಗಿ ಯತ್ನ ಮಾಡಿರಿ. ಕೇತು ಗ್ರಹ ಜನ್ಮ ರಾಶಿಯಲ್ಲೇ ಸಂಚರಿಸುವುದರಿಂದ ಮಾನಸಿಕವಾಗಿ ಖಿನ್ನತೆ ಕಾಡಲಿದೆ. ಯೂರಿನ್ ಇನ್ ಫೆಕ್ಷನ್, ಕಿಡ್ನಿ ಸ್ಟೋನ್, ಫುಡ್ ಪಾಯಿಸನ್ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಸಿಟ್ಟಿನ ಭರದಲ್ಲಿ ಕೆಟ್ಟ ಮಾತುಗಳನ್ನು ಆಡುವ ಮೂಲಕ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುತ್ತೀರಿ. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಕಡಿಮೆ ಆಗಲಿದೆ. ಯಾವುದೇ ಕೆಲಸ ಆಗುವುದೋ ಇಲ್ಲವೋ ಎಂಬ ಚಿಂತೆ ಕಾಡಲಿದೆ.

ಇದನ್ನೂ ಓದಿ:  ರಾಶಿಭವಿಷ್ಯ, ಈ ರಾಶಿಯವರನ್ನು ಇತರರು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ ಎಚ್ಚರ!

ತುಲಾ

ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ಯಾರು ಮತ್ತು ಯಾವ ಸಂಗತಿಗಳು ನಿಮ್ಮ ಪಾಲಿಗೆ ಇಷ್ಟು ಸಮಯ ಅಡೆ- ತಡೆಯಂತೆ ಅನಿಸುತ್ತಿದ್ದವೋ ಅವುಗಳನ್ನು ನೀವಾಗಿಯೇ ದಾಟಿಕೊಳ್ಳಲಿದ್ದೀರಿ. ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸುವ ಯಾವ- ಯಾರ ಪ್ರಯತ್ನವೂ ಸಫಲ ಆಗುವುದಿಲ್ಲ. ಹಣ ಕೊಟ್ಟು ಸಿಕ್ಕಿ ಹಾಕಿಕೊಂಡಿರುವಂಥ ವ್ಯವಹಾರಗಳನ್ನು ಬಿಡಿಸಿಕೊಳ್ಳುವುದಕ್ಕೆ ಅವಕಾಶಗಳು ಸೃಷ್ಟಿ ಆಗಲಿವೆ. ಪ್ರಬಲ ವ್ಯಕ್ತಿಗಳ ನೆರವು ನಿಮಗೆ ದೊರೆಯಲಿದೆ. ಒಂದು ವೇಳೆ ಸಮಸ್ಯೆ ಎಂದೇನಾದರೂ ಆದಲ್ಲಿ ಕಣ್ಣಿಗೆ ಸಂಬಂಧಿಸಿದಂತೆ ಆಗಬಹುದು. ಕಣ್ಣಿನ ಪೊರೆ, ಈಗಾಗಲೇ ಕನ್ನಡಕವನ್ನು ಬಳಸುತ್ತಿದ್ದಲ್ಲಿ ಅದರ ಪವರ್ ಜಾಸ್ತಿ ಆಗುವುದು ಇಂಥ ತೊಂದರೆಗಳು ಎದುರಾಗಬಹುದು. ಇನ್ನು ಯಾರು ಭೂಮಿ- ಜಮೀನು ಮಾರಾಟದ ಬ್ರೋಕರ್ ಗಳಾಗಿ ಕೆಲಸ ಮಾಡುತ್ತೀರೋ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಸನ್ನಿವೇಶ ಸಿಗಲಿದೆ. ಆದರೆ ನೆನಪಿನಲ್ಲಿ ಇಟ್ಟುಕೊಳ್ಳಿ ಪಾರದರ್ಶಕವಾಗಿ ನಡೆದುಕೊಳ್ಳಿ, ಸುಲಭಕ್ಕೆ ಹಣ ಮಾಡಬಹುದು ಎಂದು ಅಡ್ಡ ದಾರಿ ಹಿಡಿಯದಿರಿ. ಹೊಸಬರು, ಅಪರಿಚಿತರ ಜತೆಗೆ ವ್ಯವಹಾರ ಮಾಡುವಾಗ ಕಾಗದ- ಪತ್ರಗಳು ಸರಿಯಾಗಿವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ವೃಶ್ಚಿಕ

ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ರಾಹು ಗ್ರಹದ ಸಂಚಾರ ಆಗಲಿದೆ. ನಿಮ್ಮ ಹಿಂದಿನ ತಪ್ಪುಗಳು ಅಥವಾ ಕೆಲಸಗಳಲ್ಲಿ ಆಗಿದ್ದ ಸಣ್ಣ- ಪುಟ್ಟ ದೋಷಗಳಿಗೆ ಈಗ ಬೆಲೆ ಕಟ್ಟುವಂಥ ಸನ್ನಿವೇಶ ಎದುರಾಗುತ್ತದೆ. ಬೆನ್ನು- ಭುಜದ ನೋವು, ಕಣ್ಣಿನ ಸೋಂಕು, ಜೀರ್ಣಾಂಗದ ಸಮಸ್ಯೆ, ತೂಕದ ಹೆಚ್ಚಳ ಇಂಥದ್ದರಿಂದ ಈಗಾಗಲೇ ಬಳಲುತ್ತಿದ್ದಲ್ಲಿ ಜಾಗ್ರತೆ ವಹಿಸಿ, ಸೂಕ್ತ ವೈದ್ಯೋಪಚಾರ ತೆಗೆದುಕೊಳ್ಳುವ ಕಡೆಗೆ ಗಮನ ನೀಡಿ. ಇನ್ನು ಮಕ್ಕಳ ಭವಿಷ್ಯ ಅಥವಾ ಶಿಕ್ಷಣ ಅಥವಾ ಮದುವೆ ವಿಚಾರವು ಆತಂಕಕ್ಕೆ ಕಾರಣವಾಗುತ್ತದೆ. ಇನ್ನೇನು ಎಲ್ಲ ಕೆಲಸ ಆಯಿತು ಅಂದುಕೊಳ್ಳುವ ಹೊತ್ತಿಗೆ ಏನೋ ಒಂದು ಸಮಸ್ಯೆ ಕಾಡಲಿದೆ. ಈ ಅವಧಿಯಲ್ಲಿ ಪಾಪ ಕರ್ಮಾಸಕ್ತಿಗಳು ಹೆಚ್ಚಾಗುತ್ತವೆ. ಏನಾಗಿ ಬಿಡುತ್ತದೆ ಎಂಬ ಧೋರಣೆ ಬರುತ್ತದೆ. ಅದರಿಂದ ಮಾನಸಿಕವಾಗಿ ನಿಗ್ರಹ ಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಹನ್ನೊಂದನೇ ಮನೆಯಲ್ಲಿ ಕೇತು ಸಂಚರಿಸುವಾಗ ದೇವಾಲಯಗಳ ಪಾರುಪತ್ತೇದಾರರಿಗೆ ಸನ್ಮಾನ, ಗೌರವ ಇತ್ಯಾದಿಗಳು ದೊರೆಯಲಿವೆ. ಮನೆ- ಸೈಟು ಅಥವಾ ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸ್ಥಳ ಸಿಗಲಿದೆ.

ಧನುಸ್ಸು

ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ಮನೆ ದುರಸ್ತಿ, ವಾಹನ ದುರಸ್ತಿ ಜಾಸ್ತಿ ಆಗಲಿದೆ. ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಿಸಬೇಕಾದೀತು. ಖರ್ಚಿನ ಪ್ರಮಾಣ ಕೈ ಮೀರಿ ಹೋಗುತ್ತದೆ. ಆದರೂ ಮಾಡಿಸಿದ ಕೆಲಸದಲ್ಲಿ ಸಮಾಧಾನ ಇರುವುದಿಲ್ಲ. ನಿಮ್ಮ ಆಪ್ತರು, ಸ್ನೇಹಿತರು, ಸಂಬಂಧಿಗಳ ವಿರೋಧ ಕಟ್ಟಿಕೊಳ್ಳಲಿದ್ದೀರಿ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಚಾರಗಳು ಇದ್ದಲ್ಲಿ ಕೂತು ಮಾತನಾಡಿ, ಸರಿ ಮಾಡಿಕೊಳ್ಳಿ. ಇನ್ನು ತಾಯಿ ಅಥವಾ ತಾಯಿಗೆ ಸಮಾನರಾದವರ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಆತಂಕಕ್ಕೆ ಗುರಿ ಮಾಡುತ್ತವೆ. ಜಠರ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಉಲ್ಬಣ ಆಗಬಹುದು. ಫ್ಯಾಟಿ ಲಿವರ್ ಈಗಾಗಲೇ ಇದೆ ಅಂತಾದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು ಅಥವಾ ಈಗ ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗಲಿದೆ. ಮಹಿಳೆಯರಿಗೆ ತವರು ಮನೆಯವರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಹತ್ತನೇ ಮನೆಯಲ್ಲಿ ಕೇತು ಸಂಚರಿಸುವಾಗ ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು, ಹೊಸ ವ್ಯಾಪಾರ ಶುರು ಮಾಡುತ್ತೇನೆ ಎಂದು ಹೊರಡಬೇಡಿ. ಮನೆಯ ಹಿರಿಯರ ಅನಾರೋಗ್ಯಕ್ಕೆ ಅಂತಲೇ ಕೆಲಸ ಬಿಡುವ ಆಲೋಚನೆ ಮೂಡಲಿದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಆಲೋಚನೆ ಮಾಡಿ.

ಮಕರ

ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ರಾಹು ಗ್ರಹ ಸಂಚಾರ ಶುರುವಾಗುತ್ತದೆ. ಸದ್ಯದ ಗೋಚಾರ ಸ್ಥಿತಿಯಲ್ಲಿ ರಾಹು ನಿಮಗೆ ಅನುಕೂಲಕರವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಮನೆ ಅಥವಾ ಸೈಟು ಮಾರಾಟಕ್ಕೆ ಇಟ್ಟಿದ್ದಲ್ಲಿ ಸೂಕ್ತ ಖರೀದಿದಾರರು ದೊರೆಯಲಿದ್ದಾರೆ. ಸಾಲ ತೀರಿಸಿಕೊಳ್ಳುವುದಕ್ಕೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಸೋದರ ಸಂಬಂಧಿಗಳ ಜತೆಗೆ ಉತ್ತಮ ಸಮಯ ಕಳೆಯುವಂಥ ಯೋಗ ಇದೆ. ಈ ಅವಧಿಯಲ್ಲಿ ನಿಮ್ಮ ಸಾಲ, ಆರ್ಥಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಹೊಸ ವ್ಯವಹಾರಗಳನ್ನು ಶುರು ಮಾಡಿದವರಿಗೆ ಅದು ಕೈ ಹಿಡಿಯಲಿದೆ. ಈಗಾಗಲೇ ಹೌಸಿಂಗ್ ಸೊಸೈಟಿಗೆ ಸೈಟಿಗಾಗಿ ಹಣ ಕಟ್ಟಿಯಾಗಿದೆ ಎಂದಾದಲ್ಲಿ ನಿಮ್ಮ ಹೆಸರಿಗೆ ನೋಂದಣಿ ಆಗುವುದಕ್ಕೆ ಬೇಕಾದಂಥ ಪ್ರಕ್ರಿಯೆ ಸಲೀಸಾಗಿ ಮುಗಿಯಲಿದೆ. ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ಸಾಲ ಮಾಡಬೇಕಾಗಬಹುದು ಅಥವಾ ಒಡವೆಗಳನ್ನು ಮಾರಬೇಕಾಗಬಹುದು. ಒಂಬತ್ತನೇ ಮನೆಯಲ್ಲಿ ಕೇತು ಸಂಚರಿಸುವುದರಿಂದ ಆಲಸ್ಯ ಜಾಸ್ತಿ ಆಗಲಿದೆ. ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ಮನಸ್ತಾಪ ಸೃಷ್ಟಿ ಆಗಬಹುದು. ಅಭಿಪ್ರಾಯ ಭೇದಗಳನ್ನು ಕೂತು- ಮಾತನಾಡಿ ಬಗೆಹರಿಸಿಕೊಳ್ಳಿ. ಯಾವುದೇ ಕೆಲಸವನ್ನು ಡೆಡ್ ಲೈನ್ ಗಿಂತ ಬಹಳ ಮುಂಚಿತವಾಗಿ ಮುಗಿಸುವುದಕ್ಕೆ ಪ್ರಯತ್ನಿಸಿ.

ಕುಂಭ

ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ದಂಪತಿ ಅಥವಾ ಪ್ರೇಮಿಗಳ ಮಧ್ಯೆ ಅನುಮಾನ, ಸಂದೇಹಗಳು ಮೂಡಲಿವೆ. ಯಾವುದೇ ವಿಚಾರವನ್ನು ಮುಚ್ಚಿಡುವುದಕ್ಕೆ ಅಥವಾ ಅರೆ- ಬರೆ ಮಾಹಿತಿ ನೀಡುವುದರಿಂದ ಮನಸ್ತಾಪಗಳು ಸಹ ಮೂಡಲಿದೆ. ನಿಮ್ಮ ಆದಾಯಕ್ಕೆ ಮೀರಿದ ಖರ್ಚುಗಳು ಮೈ ಮೇಲೆ ಬೀಳಲಿವೆ. ನಿಮಗೆ ಏನು ಅಗತ್ಯ, ಎಷ್ಟು ಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಿಸಿಕೊಳ್ಳಿ. ಇಎಂಐ ಸಿಗುತ್ತದೆ ಅಥವಾ ಕಡಿಮೆ ಬಡ್ಡಿಗೆ ಸಿಗುತ್ತದೆ ಎಂಬ ಕಾರಣಕ್ಕೆ ನಿಮ್ಮ ಅಗತ್ಯವನ್ನೂ ಮೀರಿದ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳನ್ನು ಖರೀದಿ ಮಾಡಿದಲ್ಲಿ ಆ ನಂತರ ಪರಿತಪಿಸುವಂತೆ ಆಗುತ್ತದೆ. ಹಣಕಾಸಿನ ವಿಚಾರ ಇರಬಹುದು ಅಥವಾ ಸಹಾಯ ಮಾಡುವುದೇ ಆಗಿರಬಹುದು, ಮಾತು ನೀಡುವ ಮುಂಚೆ ಅದನ್ನು ಈಡೇರಿಸುವುದಕ್ಕೆ ಸಾಧ್ಯವಾ ಎಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ನಿಮ್ಮ ಹೆಸರು, ಶಿಫಾರಸು ದುರುಪಯೋಗ ಆಗದಂತೆ ಎಚ್ಚರಿಕೆಯನ್ನು ವಹಿಸಿ. ಎಂಟನೇ ಮನೆಯಲ್ಲಿ ಕೇತು ಸಂಚರಿಸುವಾಗ ಉತ್ಸಾಹದ ಕೊರತೆ ಕಾಣಿಸುತ್ತದೆ. ವಾಹನವನ್ನು ನೀವೇ ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕು. ರಾತ್ರಿ ಪ್ರಯಾಣವನ್ನು ಮಾಡಬೇಡಿ.

ಮೀನ

ನಿಮ್ಮ ರಾಶಿಗೆ ಜನ್ಮದಲ್ಲೇ ಅಂದರೆ ಒಂದನೇ ಮನೆಯಲ್ಲಿ ರಾಹು ಸಂಚಾರ ಆಗಲಿದೆ. ಇಂಥ ಸನ್ನಿವೇಶದಲ್ಲಿ ಆಪ್ತರಿಂದ ಬೇರ್ಪಡುವ, ದೂರವಾಗುವಂಥ ಸಾಧ್ಯತೆ ಇದೆ. ತಂದೆ- ತಾಯಿ ಆರೋಗ್ಯದಲ್ಲಿ ಸಮಸ್ಯೆಗಳು ಇದ್ದಲ್ಲಿ ಸೂಕ್ತ ವೈದ್ಯೋಪಚಾರ ದೊರಕಿಸುವ ಬಗ್ಗೆ ಗಮನವನ್ನು ನೀಡಿ. ಒತ್ತಡದ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಅದು ಕೆಲಸದಲ್ಲಿ ಇರಬಹುದು ಅಥವಾ ಮನೆಯಲ್ಲಿಯೇ ಇರಬಹುದು. ಭ್ರಮಾಧೀನ ಸ್ಥಿತಿಯಲ್ಲಿ ಇರುವಂತೆ ಅನಿಸಲಿದೆ. ನಿದ್ರೆ ಮಾಡಲಿಕ್ಕೆ ಆಗುವುದಿಲ್ಲ. ಎಂಥದ್ದೋ ಅಡೆತಡೆ ಆದಂತೆ ಅನಿಸುವುದಕ್ಕೆ ಶುರು ಆಗುತ್ತದೆ. ನಿಮ್ಮ ನಿಯತ್ತು, ಪ್ರಾಮಾಣಿಕತೆ ಬಗ್ಗೆ ಪದೇಪದೇ ಪ್ರಶ್ನೆಗಳು ಏಳಲಿವೆ. ನಿಮ್ಮನ್ನು ನೀವು ಸಾಬೀತು ಮಾಡುವುದರಲ್ಲೇ ಹೈರಾಣಾಗುತ್ತೀರಿ. ರಾಹುವಿನ ಆರಾಧನೆ ಮಾಡುವುದರಿಂದ ದೊಡ್ಡ ಸಮಸ್ಯೆಗಳಿಂದ ರಕ್ಷಣೆ ದೊರೆಯಲಿದೆ. ಇತರರ ವಾಹನವನ್ನಾಗಲೀ ಅಥವಾ ವಸ್ತುಗಳನ್ನಾಗಲೀ ಈ ಅವಧಿಯಲ್ಲಿ ಬಳಸಲಿಕ್ಕೆ ಹೋಗಬೇಡಿ. ಇನ್ನು ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಕೇತು ಸಂಚರಿಸಲಿದ್ದು, ಈ ಅವಧಿಯಲ್ಲಿ ನಿಮ್ಮದಲ್ಲದ ತಪ್ಪಿಗೂ ಕ್ಷಮೆ ಕೇಳಬೇಕಾಗುತ್ತದೆ. ಆದರೆ ಇದರಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗುತ್ತದೆ.