Saturn Retrograde: ಮೀನ ರಾಶಿಯಲ್ಲಿ ನಾಲ್ಕೂವರೆ ತಿಂಗಳು ಶನಿ ವಕ್ರೀ ಸಂಚಾರ; ಯಾವ ರಾಶಿಗೆ ಶುಭ?
ಮೀನ ರಾಶಿಯಲ್ಲಿ ಸ್ಥಿತವಾಗಿರುವ ಶನಿ ಗ್ರಹವು ಜುಲೈ 13ರಿಂದ ಈ ವರ್ಷದ ನವೆಂಬರ್ 28ನೇ ತಾರೀಕಿನ ತನಕ ವಕ್ರೀ ಸಂಚಾರದಲ್ಲಿ ಇರುತ್ತದೆ. ಈ ಅವಧಿಯು ಹನ್ನೆರಡು ರಾಶಿಗಳವರ ಪಾಲಿಗೆ ಬದಲಾವಣೆಯ ಪರ್ವ ಕಾಲವಾಗಿರುತ್ತದೆ. ಏಕೆಂದರೆ ವಕ್ರೀ ಸಂಚಾರದಲ್ಲಿನ ಗ್ರಹವು ಅಧಿಕ ಫಲವನ್ನು ನೀಡುತ್ತದೆ, ಜೊತೆಗೆ ಕುಂಭ ರಾಶಿಯಲ್ಲಿ ಸಂಚರಿಸಿದರೆ ಏನು ಫಲವನ್ನು ನೀಡುತ್ತದೋ ಅವುಗಳನ್ನು ನೀಡುತ್ತದೆ. ಆದ್ದರಿಂದ ಹನ್ನೆರಡು ರಾಶಿಗಳವರು ಹಾಗೂ ಭಾರತದ ಮೇಲೆ ಈ ವಕ್ರೀ ಸಂಚಾರದ ಫಲ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದೇ ಜುಲೈ 13ನೇ ತಾರೀಕು ಶನಿ (Saturn) ಗ್ರಹ ಮೀನ (Pisces) ರಾಶಿಯಲ್ಲಿ ವಕ್ರಗತಿ ಸಂಚಾರ ಆರಂಭಿಸುತ್ತದೆ. ಇದು ಈ ವರ್ಷದ ನವೆಂಬರ್ 28ನೇ ತಾರೀಕಿನ ತನಕ ಇರುತ್ತದೆ. ಇದರಿಂದಾಗಿ ಶನಿ ಗ್ರಹ ಕುಂಭ (Aquarius) ರಾಶಿಯಲ್ಲಿ ಇರುವಾಗ ಯಾವ ಫಲವನ್ನು ನೀಡುತ್ತದೋ ಅದನ್ನು ಕಾಣಬಹುದಾಗಿರುತ್ತದೆ. ಕುಂಭ ರಾಶಿಯು ಶನಿ ತ್ರಿಕೋನವಾಗುತ್ತದೆ. ಮೀನ ರಾಶಿಯಲ್ಲಿಯೇ ಮಂದನಿದ್ದರೂ ಅದರ ಫಲ ಮಾತ್ರ ಕುಂಭ ರಾಶಿಯ ಸಂಚಾರ ಕಾಲದಲ್ಲಿ ಏನಿರುತ್ತದೋ ಅದಾಗಿರುತ್ತದೆ. ಆದ್ದರಿಂದ ಕಾಲಪುರುಷನಿಗೆ ಕುಂಭವು ಲಾಭ ಸ್ಥಾನವಾಗುತ್ತದೆ. ಈ ನಾಲ್ಕೂವರೆ ತಿಂಗಳ ಕಾಲ ಜಾಗತಿಕವಾಗಿಯೇ ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕವಾದ ಬದಲಾವಣೆಗಳನ್ನು ಕಾಣಬಹುದು.
ಶನಿ ಗ್ರಹಕ್ಕೆ ಮಕರ (Capricorn) ಹಾಗೂ ಕುಂಭ ರಾಶಿಗಳು ಸ್ವಂತ ಮನೆ ಆಗುತ್ತವೆ. ಅಂದರೆ ಆ ಎರಡೂ ರಾಶಿಗಳ ರಾಶ್ಯಾಧಿಪತಿ ಶನಿ ಗ್ರಹ. ಇನ್ನು ತುಲಾ (Libra) ರಾಶಿಯು ಶನಿ ಗ್ರಹಕ್ಕೆ ಉಚ್ಚ ಸ್ಥಾನವಾದರೆ, ಮೇಷವು (Aries) ನೀಚ ಸ್ಥಾನವಾಗುತ್ತದೆ. ಸಾಮಾನ್ಯವಾಗಿ ಶನಿ ಗ್ರಹವು ಒಂದು ರಾಶಿಯಲ್ಲಿ ಮೂವತ್ತು ತಿಂಗಳ ಕಾಲ ಇರುತ್ತದೆ, ಅಂದರೆ ಎರಡೂವರೆ ವರ್ಷ. ಇನ್ನು ಯಾವುದೇ ಗ್ರಹ ವಕ್ರ ಗತಿಯಲ್ಲಿ ಇದ್ದಾಗ ಅಧಿಕ ಫಲವನ್ನು ನೀಡುತ್ತದೆ.
ಆದರೆ, ಭಾರತದ ಪರಿಸ್ಥಿತಿಯನ್ನು ಈ ಗ್ರಹ ಸ್ಥಿತಿಯನ್ನು ಆಧರಿಸಿ ಅವಲೋಕಿಸಿದಾಗ ಒಂದಿಷ್ಟು ಆತಂಕವನ್ನು ಸೂಚಿಸುತ್ತದೆ. ಯಾಕೆಂದರೆ ಭಾರತವು ಸ್ವಾತಂತ್ರ್ಯ ಪಡೆದಾಗಿನ ಸಮಯದಲ್ಲಿ ಕರ್ಕಾಟಕದಲ್ಲಿ ಶನಿ ಸ್ಥಿತವಾಗಿತ್ತು. ಆದ್ದರಿಂದ ಕುಂಭ ರಾಶಿಯಲ್ಲಿ ಶನಿ ಸಂಚರಿಸುವುದು ಭಾರತಕ್ಕೆ ಉತ್ತಮವಾದ ಫಲ ನೀಡುವಂಥದ್ದಾಗಿರುವುದಿಲ್ಲ. ಸಂಘರ್ಷ, ದಾಳಿ, ಹಿಂಸಾಚಾರ, ಅವಮಾನ, ಮರಣಕ್ಕೆ ಸಮಾನವಾದಂಥ ಅವಮಾನಗಳು ಆಗುವ ಸಾಧ್ಯತೆ ಇರುತ್ತದೆ. ಇನ್ನು ಯುದ್ಧದ ಸನ್ನಿವೇಶ, ಅಥವಾ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಗಳು, ಕೋಮು ದಳ್ಳುರಿ, ಹಿಂಸಾಚಾರ, ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಹವಾಮಾನ ವೈಪರೀತ್ಯ, ದೊಡ್ಡ ಮಟ್ಟದ ಕಲಹ- ಜಗಳ, ಹಿಂಸಾ ಕೃತ್ಯಗಳು ನಡೆಯುವ ಸಾಧ್ಯತೆ ಇರುತ್ತದೆ. ಇನ್ನು ಯಾರದು ಕರ್ಕಾಟಕ ಲಗ್ನವೋ ಕರ್ಕಾಟಕ ರಾಶಿಯೋ ಅಥವಾ ಜನನ ಕಾಲದಲ್ಲಿ ಶನಿ ಗ್ರಹವು ಕರ್ಕಾಟಕ ರಾಶಿಯಲ್ಲಿ ಸ್ಥಿತವಾಗಿರುತ್ತದೆಯೋ ಅಂಥವರಿಗೆ ಹಳೇ ಸಮಸ್ಯೆಗಳು ಮತ್ತೆ ಕಾಡುವುದಕ್ಕೆ ಆರಂಭವಾಗುತ್ತವೆ. ಮುಗಿಯಿತು ಅಂದುಕೊಂಡಿದ್ದು ಮತ್ತೆ ವಕ್ಕರಿಸಿತಲ್ಲಾ ಎಂದೆನಿಸುವ ರೀತಿಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಈ ಹಿಂದೆ ಆಗಿದ್ದ ಸಾಲ, ವ್ಯಾಜ್ಯ, ಕೋರ್ಟ್- ಕಚೇರಿ, ಪೊಲೀಸ್ ಠಾಣೆಯ ವಿಚಾರಗಳು ಗಂಭೀರ ಸ್ಥಿತಿಯನ್ನು ತಂದೊಡ್ಡಬಹುದು. ಅಥವಾ ವ್ಯಾಜ್ಯ- ಜಗಳ- ಕಲಹಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಂಡೆ ಎಂದು ಸಮಾಧಾನವಾಗಿದ್ದಲ್ಲಿ ಅದು ಸದ್ಯಕ್ಕೆ ಬಗೆಹರಿದಿಲ್ಲ ಎಂದು ಅನುಭವಕ್ಕೆ ಬರುತ್ತದೆ.
ಕರ್ಕಾಟಕ, ತುಲಾ, ಕುಂಭ ಈ ರಾಶಿಗಳವರಿಗೆ ಕ್ರಮವಾಗಿ ಅಷ್ಟಮ, ಪಂಚಮ ಹಾಗೂ ಜನ್ಮ ಶನಿಯ ಪ್ರಭಾವ ಅನುಭವಕ್ಕೆ ಬರಲಿದೆ. ಒಟ್ಟಾರೆಯಾಗಿ ವೈಯಕ್ತಿಕವಾಗಿ ಯಾವ ರಾಶಿಯವರ ಮೇಲೆ ಏನು ಪರಿಣಾಮ ಎಂಬುದನ್ನು ನೋಡುವುದಾದರೆ, ಹೀಗಿದೆ:
ಮೇಷ: ದಿಢೀರನೆ ಲಾಭ ಬರಬಹುದು. ವ್ಯಯದಲ್ಲಿನ ಶನಿ ಏಕಾಏಕಿ ಲಾಭ ಸ್ಥಾನದ ಫಲವನ್ನು ನೀಡುವುದಕ್ಕೆ ಆರಂಭಿಸುತ್ತಾನೆ. ನೀವು ಮಾಡಿದ ಕೆಲಸಕ್ಕೆ ಆಗ ಹಣ ಕೊಡ್ತೀನಿ, ಈಗ ಕೊಡ್ತೀನಿ ಎಂದು ಸತಾಯಿಸುತ್ತಿದ್ದಲ್ಲಿ ಅದು ನಿಮ್ಮ ಕೈ ಸೇರುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಿಮ್ಮಲ್ಲಿ ಕೆಲವರು ವಿಲಾಸಿ ವಾಹನಗಳ ಖರೀದಿ ಮಾಡಬಹುದು. ಕನಿಷ್ಠ ಪಕ್ಷ ಈ ನಾಲ್ಕು ತಿಂಗಳು ವ್ಯಯ ಶನಿಯ ಪ್ರಭಾವ ತಗ್ಗುತ್ತದೆ.
ವೃಷಭ: ಅಬ್ಬಾ ಸುಧಾರಿಸಿಕೊಂಡೆ ಅಂದುಕೊಳ್ಳುವಷ್ಟರಲ್ಲಿ ಉದ್ಯೋಗ, ವೃತ್ತಿಯಲ್ಲಿ ಸಣ್ಣ ಮಟ್ಟದ ಕಿರಿಕಿರಿ ಆಗಬಹುದು. ನಿಮಗೆ ಬಹಳ ಆಪ್ತರಾದವರಿಗೆ ಕೆಲವು ಆಪತ್ತು ಸಂಭವಿಸುವ ಸಾಧ್ಯತೆಗಳಿವೆ. ಇನ್ನೊಬ್ಬರ ಸಹಾಯ ಅಥವಾ ನೆರವು ಅಥವಾ ನೈಪುಣ್ಯವನ್ನು ನೆಚ್ಚಿಕೊಂಡು ನೀವು ಯಾವ ಕೆಲಸಕ್ಕೂ ಇಳಿಯಬೇಡಿ. ಮನೆಯಲ್ಲಿ ಹಿರಿಯರು, ಕಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಬೇಕಾಗುತ್ತದೆ.
ಮಿಥುನ: ತಂದೆ ಅಥವಾ ತಂದೆ ಸಮಾನರಾದವರಿಂದ ಅಥವಾ ಅವರ ಕಾರಣದಿಂದ ನಿಮಗೆ ಆತಂಕ- ಬೇಸರ ಉಂಟಾಗಬಹುದು. ಅದೃಷ್ಟದ ಪರೀಕ್ಷೆಗೆ ಇಳಿದಿದ್ದವರಿದ್ದರೆ ಹಣ ಕೈ ಬಿಟ್ಟುಹೋಗಬಹುದು. ನಿಮಗೆ ಸಿಗಬೇಕಾದದ್ದು, ಅಥವಾ ನಿಮಗೇ ಸಿಗುತ್ತದೆ ಎಂಬ ಭರವಸೆ ಸಿಕ್ಕಿದ್ದು ಕೈ ಜಾರಿ ಹೋಗುವ ಸಾಧ್ಯತೆ ಇರುತ್ತದೆ. ಯಾವುದನ್ನೂ ವಿಪರೀತ ನೆಚ್ಚಿಕೊಳ್ಳುವುದಕ್ಕೆ, ಅವಲಂಬಿಸದಿರುವುದು ಕ್ಷೇಮ.
ಕರ್ಕಾಟಕ: ನಿಮ್ಮ ಹಳೇ ಸಮಸ್ಯೆಗಳೆಲ್ಲ ಒಟ್ಟೊಟ್ಟಿಗೆ ಹುಡುಕಿಕೊಂಡು ಬಂದಂತೆ ಅನುಭವ ಆಗುತ್ತದೆ. ಎಲ್ಲ ಸರಿಹೋಯಿತು, ಮಾತುಕತೆ ಆಡಿ ಬಗೆಹರಿಸಿಕೊಂಡಿದ್ದೀನಿ ಅಂತ ನೆಮ್ಮದಿಯಾಗಿ ಇರುವವರಿಗೆ ಮತ್ತೆ ಆತಂಕ ಶುರುವಾಗಲಿದೆ. ಅವಮಾನಗಳು, ಬಂಧು- ಬಾಂಧವರು, ಸ್ನೇಹಿತರಿಂದಲೇ ಚುಚ್ಚು ಮಾತುಗಳು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ಇರಬೇಕು.
ಸಿಂಹ: ವಿವಾಹಿತರಿದ್ದಲ್ಲಿ ಸಂಗಾತಿ ಜೊತೆಗೆ ವ್ಯಾಜ್ಯ, ಜಗಳ- ಕಲಹಗಳು ಆಗದಂತೆ ನೋಡಿಕೊಳ್ಳುವುದು ಮುಖ್ಯ. ತಾತ್ಕಾಲಿಕ ಪಾಲುದಾರಿಕೆ ವ್ಯವಹಾರಗಳಿಗೆ ಮುನ್ನುಗ್ಗಿ ಹೋಗಬೇಡಿ. ದೂರ ಪ್ರಯಾಣ ಮಾಡಬೇಕಾದಲ್ಲಿ ಪರಿಸ್ಥಿತಿಯ ಅವಲೋಕನ ಮಾಡುವುದು ಬಹಳ ಮುಖ್ಯ. ನಿಮ್ಮದಲ್ಲದ ತಪ್ಪಿಗೆ ಹೊಣೆಗಾರರನ್ನಾಗಿ ಮಾಡಬಹುದು. ಇವಷ್ಟೇ ಅಲ್ಲ, ಇವೆಲ್ಲದರ ಹೊರತಾಗಿಯೂ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಲೇಬೇಕು.
ಕನ್ಯಾ: ಅಂದುಕೊಳ್ಳದ ರೀತಿಯಲ್ಲಿ ಕೆಲವು ಆದಾಯ, ಲಾಭ ಬರುವ ಸಾಧ್ಯತೆಗಳಿವೆ. ವಿಪರೀತವಾಗಿ ನಿಮಗೆ ಕಿರಿಕಿರಿ ಮಾಡುತ್ತಿದ್ದ ಶತ್ರುಗಳು ತಮ್ಮದೇ ಕೆಲಸದಲ್ಲಿ ಮುಳುಗಿ ಹೋಗಿ, ನಿಮ್ಮನ್ನು ಕೆಲ ಸಮಯ ಮರೆತೇ ಹೋಗುತ್ತಾರೆ. ಬಹಳ ತೊಂದರೆ ಕೊಡುತ್ತಿದ್ದ ಆರೋಗ್ಯ ಸಮಸ್ಯೆಗೆ ಸೂಕ್ತ ಔಷಧೋಪಚಾರ, ಸರಿಯಾದ ವೈದ್ಯರ ಮಾರ್ಗದರ್ಶನ ದೊರೆಯಬಹುದು. ನಿಮ್ಮ ಕೆಲವು ವ್ಯಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಸಾಧ್ಯತೆ ಕಾಣುತ್ತದೆ.
ತುಲಾ: ಮಕ್ಕಳ ಸಲುವಾಗಿ ಅಥವಾ ಮಕ್ಕಳಿಂದ ಮಾನಸಿಕವಾದ ಯಾತನೆಯನ್ನು ಅನುಭವಿಸುವಂತೆ ಆಗಬಹುದು. ನಿಮ್ಮ ಹಳೇ ಅಭ್ಯಾಸವೊಂದು ವರ್ಚಸ್ಸಿಗೆ ಹಾನಿ ಮಾಡಬಹುದು. ಒಂದು ವೇಳೆ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಸರಿಯಾದ ಫಾಲೋ ಅಪ್ ಚೆಕ್ ಅಪ್ ಮಾಡಿಸಿಕೊಳ್ಳಿ. ಅತಿ ಬುದ್ಧಿವಂತಿಕೆ ಮಾಡಿ, ಸಮಸ್ಯೆಗೆ ನೀವಾಗಿಯೇ ಸಿಲುಕಿಕೊಳ್ಳುವ ಸಾಧ್ಯತೆಯಿದೆ, ಜಾಗ್ರತೆಯಿಂದ ಇರಿ.
ವೃಶ್ಚಿಕ: ಮಾತು- ಬುದ್ಧಿ- ವಿವೇಕದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಮಾಡಿ. ನೀವಾಗಿಯೇ ಯಾರ ಮೇಲೂ ಜಗಳಕ್ಕೆ ಬೀಳಬೇಡಿ. ಕೋರ್ಟ್ ಕಚೇರಿ ಅಂತೇನಾದರೂ ಅಲೆದಾಟ ಆಗಬಹುದು. ಪೊಲೀಸ್ ಸ್ಟೇಷನ್ ನಲ್ಲಿಯೇ ಇತ್ಯರ್ಥವಾಗಲಿ ಅಂತೆಲ್ಲ ಹೊರಡಬೇಡಿ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ.
ಧನುಸ್ಸು: ಅಣ್ಣ- ತಮ್ಮಂದಿರ ಮಧ್ಯೆ ಆಸ್ತಿ ವ್ಯಾಜ್ಯಗಳೇನಾದರೂ ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಇನ್ನು ನಿಮ್ಮ ಕೀರ್ತಿ- ಪ್ರತಿಷ್ಠೆ- ಸಾಧನೆಗೆ ಪ್ರಾಶಸ್ತ್ಯವನ್ನು ನೀಡಲಿದ್ದೀರಿ. ಅದಕ್ಕಾಗಿ ಕೆಲವು ತಲೆ ನೋವಿನ ಸಂಗತಿಗಳನ್ನು ನೀವಾಗಿಯೇ ನಿವಾರಿಸಿಕೊಳ್ಳಲಿದ್ದೀರಿ. ಧೈರ್ಯ ಸಾಲುತ್ತಿಲ್ಲ ಎಂಬ ಕಾರಣಕ್ಕೆ ಯಾವುದಾದರೂ ಪ್ರಾಜೆಕ್ಟ್ ಅಥವಾ ಕೆಲಸದಿಂದ ದೂರ ಉಳಿದಿದ್ದಲ್ಲಿ ಅವುಗಳನ್ನು ಮಾಡಿ ಮುಗಿಸುವುದಕ್ಕೆ ಇದು ಸೂಕ್ತ ಕಾಲವಾಗಲಿದೆ.
ಮಕರ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಈಗ ಬರುತ್ತಿರುವ ಆದಾಯವನ್ನು ನೆಚ್ಚಿಕೊಂಡು, ದೊಡ್ಡ ಮಟ್ಟದ ಸಾಲ ಮಾಡುವುದಕ್ಕೋ ಅಥವಾ ಹೂಡಿಕೆ, ವ್ಯಾಪಾರ ಮಾಡುವುದಕ್ಕೋ ಈ ಅವಧಿಯಲ್ಲಿ ಮುಂದಾಗಬೇಡಿ. ವಿವಾಹಿತರಿದ್ದಲ್ಲಿ ಸಂಗಾತಿ ಜೊತೆಗೆ ಜಗಳ- ಕಲಹಗಳು ಆಗಬಹುದು. ಪ್ರೇಮಿಗಳಿಗೂ ಇದೇ ಮಾತು ಅನ್ವಯ ಆಗುತ್ತದೆ. ಈ ಅವಧಿಯಲ್ಲಿ ಮಾತು ಆಡಿದರೂ ತಪ್ಪು, ಮಾತೇ ಆಡದಿದ್ದರೂ ತಪ್ಪು ಎಂದೆನಿಸಬಹುದು. ಗಂಟಲು, ಕಣ್ಣು, ಕಾಲಿನ ಮೀನಖಂಡದ ಆರೋಗ್ಯದ ಕಡೆಗೆ ಲಕ್ಷ್ಯ ಕೊಡಿ.
ಕುಂಭ: ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಜನ್ಮ ಶನಿಯ ಪ್ರಭಾವ ನಿಮ್ಮ ಮೇಲೆ ಬೀರುವುದಕ್ಕೆ ಶುರು ಆಗುತ್ತದೆ. ನಿಮ್ಮ ಆತ್ಮವಿಶ್ವಾಸಕ್ಕೆ ಮೊದಲಿಗೆ ಪೆಟ್ಟು ಬೀಳುತ್ತದೆ. ಶನಿಯ ಜೊತೆಗೆ ರಾಹು ಕೂಡ ಜನ್ಮ ರಾಶಿಯಲ್ಲಿ ಫಲ ಕೊಡುವುದರಿಂದ ಬೆಂಕಿ ಹಾಗೂ ಬಿರುಗಾಳಿ ಸೇರಿದಂತೆ ಆಗುತ್ತದೆ. ನಿಮ್ಮ ಆಲಸ್ಯ, ಆಲಕ್ಷ್ಯ, ಜೊತೆಗೆ ಯಾರ ಮಾತನ್ನೂ ಕೇಳದ ಸ್ವಭಾವ ಸೇರಿಹೋಗಿ ನೀವಾಗಿಯೇ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.
ಮೀನ: ಧರ್ಮ- ಕರ್ಮದ ಆಲೋಚನೆ ಮಾಡಿ, ಹೆಜ್ಜೆಯನ್ನು ಇಡಿ. ಹೇಗಾದರೂ ಹಣ ಮಾಡಿಬಿಡಬೇಕು ಎಂದು ಹೊರಡುವುದು ಸರಿಯಲ್ಲ. ವಿಪರೀತದ ಖರ್ಚು ವೆಚ್ಚವನ್ನು ಕಾಣಲಿದ್ದೀರಿ. ಮುಖ್ಯವಾಗಿ ನಿಮ್ಮಲ್ಲಿ ಹಲವರು ಈ ಸಮಯದಲ್ಲಿಯೇ ಸೈಟು ಖರೀದಿ, ಮನೆ ಖರೀದಿ, ಫ್ಲ್ಯಾಟ್ ಖರೀದಿ ಎಂದು ಹೊರಟು, ನಿಮ್ಮ ಕೈಯಲ್ಲಿರುವ ಹಣವನ್ನು ಮೀರಿ ಅಥವಾ ನಿಮ್ಮ ಸಾಮರ್ಥ್ಯವನ್ನು ಮೀರಿ, ಸಾಲಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಪರಿಹಾರ: ಈ ನಾಲ್ಕೂವರೆ ತಿಂಗಳು ಮಾತ್ರವೇ ತಾನೆ ಎಂಬ ಉದಾಸೀನ ಮಾಡದೆ ವೈಯಕ್ತಿಕ ಜಾತಕವನ್ನೂ ಒಮ್ಮೆ ಪರಿಶೀಲನೆ ಮಾಡಿಸಿಕೊಳ್ಳುವುದು ಕ್ಷೇಮ. ಯಾಕೆಂದರೆ ಜನ್ಮ ಜಾತಕದಲ್ಲಿ ಶನಿಯು ಯಾವ ಸ್ಥಾನದಲ್ಲಿದೆ ಹಾಗೂ ಅವನಿಗೆ ಬಲ ಇದೆಯಾ ಅಥವಾ ದುರ್ಬಲನೋ ಹಾಗೂ ಸದ್ಯಕ್ಕೆ ನಡೆಯುತ್ತಿರುವ ದಶಾ- ಭುಕ್ತಿ ಇತ್ಯಾದಿಗಳನ್ನು ಸಹ ಸಾಧ್ಯವಿದ್ದಲ್ಲಿ ಒಮ್ಮೆ ಕೂಲಂಕಷವಾಗಿ ಪರಿಶೀಲಿಸಿಕೊಂಡು ಬಿಡುವುದು ಕ್ಷೇಮ. ಅಗತ್ಯ ಅಥವಾ ಅನಿವಾರ್ಯ ಇದ್ದಲ್ಲಿ ಶನಿಗೆ ಯಥಾಶಕ್ತಿ ಶಾಂತಿ- ಆರಾಧನೆಗಳನ್ನು ಮಾಡಿಸಿಕೊಳ್ಳಬಹುದು. ಇದು ಕೂಡ ಈ ಸಂದರ್ಭಕ್ಕೆ ಸಲಹೆಯೇ ವಿನಾ ಒತ್ತಾಯವಲ್ಲ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)




