ಹರಿ ಹರ ಬ್ರಹ್ಮಯೋಗ ಎಂದರೇನು? ಈ ಯೋಗ ಯಾರಿಗೆ ಮತ್ತು ಹೇಗೆ ಲಭಿಸುತ್ತದೆ?
Hari Hara Brahma Yoga: ಹರಿ ಹರ ಬ್ರಹ್ಮ ಯೋಗಗಳೂ ಸಮಾನವಾಗಿದ್ದು ಒಂದೇ ಫಲವನ್ನು ಕೊಡುತ್ತವೆ ಎನ್ನುವುದು ವಿಶೇಷ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಮೇಲ್ನೋಟಕ್ಕೆ ಬೇರೆ ಎಂದು ಕಂಡರೂ ಅವರೆಲ್ಲರೂ ಒಂದೇ ಆದ ಕಾರಣ ಒಂದೇ ಫಲ ಎಲ್ಲರಿಂದ ಸಿಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹದ್ದೊಂದು ಯೋಗವಿದೆ. ಇದು ಊರ ಹೆಸರಲ್ಲ. ಹರಿಯೋಗ ಮತ್ತು ಹರಯೋಗ ಬ್ರಹ್ಮ ಯೋಗ ಎನ್ನುವ ಮೂರು ಯೋಗಗಳು ಜಾತಕದಲ್ಲಿ ಕಾಣಸಿಗುತ್ತವೆ. ಯಾವಾಗ ಹೇಗೆ ಯೋಗ ಸಂಭವಿಸುತ್ತದೆ ಎನ್ನುವುದನ್ನು ನೋಡುವುದಾದರೆ ಹರಿ ಯೋಗವು ನೀವು ಹುಟ್ಟಿದಾಗಿನ ಲಗ್ನದಿಂದ ಎರಡನೇ ರಾಶಿಯ ಅಧಿಪತಿ ಜಾತಕದಲ್ಲಿ ಎಲ್ಲಿರುತ್ತಾನೆ ಎನ್ನುವುದು ನೋಡಬೇಕು.
ಹರಿಯೋಗ
ಮೇಷದಲ್ಲಿ ಲಗ್ನ ಎಂದು ಬರೆದಿದ್ದರೆ ವೃಷಭವು ದ್ವಿತೀಯ ರಾಶಿ. ಅದರ ಅಧಿಪತಿ ಶುಕ್ರ. ಅವನು ಹನ್ನೆರಡು ರಾಶಿಗಳಲ್ಲಿ ಎಲ್ಲಿಯೂ ಇರಬಹುದು. ಅವನಿರುವ ರಾಶಿಯಿಂದ ಎರಡು, ಎಂಟು ಮತ್ತು ಹನ್ನೆರಡನೇ ರಾಶಿಯಲ್ಲಿ ಶುಭಗ್ರಹರು ಅಂದರೆ ಗುರು, ಶುಕ್ರ, ಪೂರ್ಣ ಚಂದ್ರ, ಪಾಪಸಂಸರ್ಗವಿಲ್ಲದ ಬುಧ ಇದ್ದರೆ ಹರಿಯೋಗ.
ಹರಯೋಗ
ಮೇಷ ಲಗ್ನವಾಗಿದ್ದರೆ ಅದರಿಂದಿ ಸಪ್ತಮ ಸ್ಥಾನ ಎಂದರೆ ತುಲಾ ರಾಶಿಯಾಗಿದ್ದು, ಅದರ ಅಧಿಪತಿ ಶುಕ್ರನು ಹನ್ನೆರಡು ರಾಶಿಯಲ್ಲಿ ಎಲ್ಲಿಯಾದರೂ ಇದ್ದರೆ, ಅಲ್ಲಿಂದ ಎರಡು, ಎಂಟು ಹಾಗೂ ಒಂಭತ್ತರಲ್ಲಿ ಗುರು, ಶುಕ್ರ, ಬುಧರಿದ್ದರೆ ಹರಯೋಗ.
ಬ್ರಹ್ಮಯೋಗ
ಇನ್ನೊಂದು ಬ್ರಹ್ಮ ಯೋಗ. ಮೇಷ ಲಗ್ನವಾಗಿದ್ದರೆ ಆ ರಾಶಿಯ ಅಧಿಪತಿ ಕುಜನು ಹನ್ನೆರಡು ರಾಶಿಯಲ್ಲಿ ಎಲ್ಲಿಯಾದರೂ ಇದ್ದರೆ, ಅಲ್ಲಿಂದ ನಾಲ್ಕು, ಒಂಭತ್ತು ಹಾಗೂ ಹನ್ನೊಂದನೇ ರಾಶಿಯಲ್ಲಿ ಸೂರ್ಯ, ಶುಕ್ರ ಹಾಗು ಕುಜರಿದ್ದರೆ ಬ್ರಹ್ಮ ಯೋಗ.
ಈ ಮೂರೂ ಯೋಗಗಳೂ ಸಮಾನವಾಗಿದ್ದು ಒಂದೇ ಫಲವನ್ನು ಕೊಡುತ್ತವೆ ಎನ್ನುವುದು ವಿಶೇಷ. ತ್ರಿಮೂರ್ತಿಗಳು ಮೇಲ್ನೋಟಕ್ಕೆ ಬೇರೆ ಎಂದು ಕಂಡರೂ ಅವರೆಲ್ಲರೂ ಒಂದೇ ಆದ ಕಾರಣ ಒಂದೇ ಫಲ ಎಲ್ಲರಿಂದ ಸಿಗುತ್ತದೆ.
ವಿದ್ಯಾಪಾರಂಗತ : ಋಕ್ – ಯಜುಸ್ – ಸಾಮ ವೇದಗಳನ್ನು ಅಧ್ಯಯನ ಸಂಪನ್ನರು, ಪ್ರಾಚೀನ ಶಾಸ್ತ್ರ, ವಿದ್ಯೆಗಳ ತಲಸ್ಪರ್ಶಿಯಾದ ಅಧ್ಯಯನವನ್ನೂ ಮಾಡುವರು. ವಿಶೇಷ ಜ್ಞಾನಾರ್ಜನೆಯನ್ನು ಮಾಡಿದವರಾಗುವರು.
ಸಕಲಸುಖ : ಈ ಯೋಗದವರಿಗೆ ಎಲ್ಲ ರೀತಿಯ ಸುಖ ವೈಭೋಗಗಳೂ ಸಿಗಲಿದೆ. ಮಾತ್ರವಲ್ಲ ಜೀವನದಲ್ಲಿ ಸಿಗುವುದೆಲ್ಲವೂ ನಿಮಗೆ ಸುಖವನ್ನೇ ನೀಡುವುದಾಗಿರುತ್ತದೆ.
ಆಕರ್ಷಕ ಮಾತು : ಇವರ ಮಾತುಗಳು ಎಲ್ಲರಿಗೂ ಆಕರ್ಷಕವಾಗಿರಲಿದ್ದು, ಹಿತವೂ ಮಿತವೂ ಸ್ಪಷ್ಟವೂ ಮಧುರವೂ ಆಗಿರಲಿದೆ. ಅಷ್ಟೇ ಅಲ್ಲದೇ ಮಾತಿನಲ್ಲಿ ಸತ್ಯವೂ ಇರುವುದು.
ಸರ್ವೋಪಕಾರೀ : ಎಲ್ಲ ಸ್ತರದ ಜನರಿಗೂ ಇವರಿಂದ ಆ ಸಂದರ್ಭಕ್ಕೆ ಬೇಕಾದ ಸಹಕಾರ ಇವರಿಂದ ಸಿಗಲಿದೆ. ಎಲ್ಲರ ಹಿತವನ್ನೂ ಬಯಸುವ ಮತ್ತು ಉಪಕಾರದ ಮನೋಭಾವವುಳ್ಳ ವ್ಯಕ್ತಿತ್ವ ಇವರದಾಗಿರುತ್ತದೆ.
ಇದಲ್ಲದೇ ಪುತ್ರನ್ನು ಪಡೆಯುವರು, ಸಂಪತ್ತು ಉಳ್ಳವರೂ ಆಗಿರುತ್ತಾರೆ.
ಸದ್ಯದ ಕುಂಡಲಿಯನ್ನು ಗಮನಿಸಿದಾಗ ಆ ಯೋಗ ಕಂಡುಬಂದರೆ ಯೋಗಕ್ಕೆ ಹೇಳಿದ ಕೆಲವು ಅಂಶಗಳು ಕಾಣಿಸುತ್ತವೆ. ಅಲ್ಪವಾದರೂ ಯೋಗವು ಯಾವುದಾದರೂ ಒಂದು ರೀತಿಯಲ್ಲಿ ಫಲವನ್ನು ಕೊಟ್ಟು ಹೋಗುತ್ತದೆ.
– ಲೋಹಿತ ಹೆಬ್ಬಾರ್ – 8762924271




