ಆಸ್ತಿ ತೆರಿಗೆ ಪಾವತಿಗೆ ಬಿಬಿಎಂಪಿಯಿಂದ ಜೂನ್ 30ರ ಗಡುವು, ಶೇ 5ರ ರಿಯಾಯ್ತಿ: ತೆರಿಗೆ ವಿನಾಯ್ತಿಗಾಗಿ ವಿವಿಧ ಉದ್ಯಮಗಳಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ
ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು 2020-21ನೇ ಸಾಲಿನ ಆಸ್ತಿಗಳ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯ್ತಿ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು 2020-21ನೇ ಸಾಲಿನ ಆಸ್ತಿಗಳ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯ್ತಿ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಸ್ತಿ ತೆರಿಗೆ ಪಾವತಿಗೆ ಜೂನ್ 30ರವರೆಗೆ ಗಡುವು ವಿಸ್ತರಿಸಲಾಗಿದೆ. ಈ ನಡುವೆ ರಾಜ್ಯದ ವಿವಿಧ ಉದ್ಯಮಗಳು ತೆರಿಗೆ ರಿಯಾಯ್ತಿ ನೀಡಬೇಕೆಂದು ವಿನಂತಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿವೆ. ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯು (Karnataka Tourism Society – KTS) 2021-22ರ ಅವಧಿಯ ಆಸ್ತಿ ತೆರಿಗೆ ಪಾವತಿಯ ಗಡುವು ವಿಸ್ತರಿಸಬೇಕು. ಕೊರೊನಾ ಕಾರಣದಿಂದಾಗಿ ಪ್ರವಾಸೋದ್ಯಮವು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಪ್ರವಾಸೋದ್ಯಮ ಸಂಸ್ಥೆ ಮನವಿಯಲ್ಲಿ ತಿಳಿಸಿದೆ.
‘ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ನಗರಾಡಳಿತ ಸಂಸ್ಥೆಗಳಿಗೆ ಶೇ 5ರ ರಿಯಾಯ್ತಿಯೊಂದಿಗೆ ಆಸ್ತಿ ತೆರಿಗೆ ಪಾವತಿಸಲು ಮೇ 31, 2021ರ ಗಡುವು ನೀಡಲಾಗಿದೆ. ಆದರೆ ನಮ್ಮ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡು ಶೇ 5ರ ರಿಯಾಯ್ತಿಯೊಂದಿಗೆ ಅರ್ಧದಷ್ಟು ಆಸ್ತಿ ತೆರಿಗೆ ಪಾವತಿಗೆ ಅಕ್ಟೋಬರ್ 31ರವರೆಗೆ ಗಡುವು ವಿಸ್ತರಿಸಬೇಕು. ಉಳಿದ ಅರ್ಧ ಆಸ್ತಿ ತೆರಿಗೆಯನ್ನು ಯಾವುದೇ ದಂಡವಿಲ್ಲದರೆ ಪಾವತಿಸಲು 31ನೇ ಮಾರ್ಚ್ 2022ರವರೆಗೆ ಕಾಲಾವಕಾಶ ನೀಡಬೇಕು’ ಎಂದು ವಿನಂತಿಸಿಕೊಂಡಿದೆ.
2019ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಗೆ ಹೋಲಿಸಿದರೆ 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಪ್ರವಾಸೋದ್ಯಮವು ಶೇ 73ರಷ್ಟು ನಷ್ಟ ಅನುಭವಿಸಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಮಹಲಿಂಗಯ್ಯ ಹೇಳಿದ್ದಾರೆ.
ವಿದ್ಯುತ್ ಮತ್ತು ನೀರಾವರಿ ಶುಲ್ಕ ವಿನಾಯಿತಿಗೆ ಒತ್ತಾಯ ಲಾಕ್ಡೌನ್ನಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ವಿತರಣಾ ಕಂಪನಿಗಳು ಕನಿಷ್ಠ ಶುಲ್ಕ ಪಾವತಿಯಿಂದ ರಿಯಾಯ್ತಿ ನೀಡಬೇಕು. ಕುಡಿಯುವ ನೀರಿನ ಬಿಲ್ ಪಾವತಿ ಜವಾಬ್ದಾರಿಯಿಂದಲೂ ಜನರಿಗೆ ವಿನಾಯ್ತಿ ಸಿಗಬೇಕು. ಬಿಬಿಎಂಪಿ ಈ ವರ್ಷದ ಆಸ್ತಿ ತೆರಿಗೆ ಮತ್ತು ಪರವಾನಗಿ ಶುಲ್ಕದಿಂದಲೂ ವ್ಯಾಪಾರಸ್ಥರಿಗೆ ವಿನಾಯ್ತಿ ನೀಡಬೇಕು. ಜಿಎಸ್ಟಿ ಮೇಲಿನ ಶುಲ್ಕ ಮತ್ತು ಬಡ್ಡಿ ಮನ್ನಾ ಮಾಡಬೇಕು. ಬಾಕಿ ಉಳಿದಿರುವ ಎಲ್ಲ ಬಗೆಯ ಸಾಲಗಳ ಅಸಲು ಮತ್ತು ಬಡ್ಡಿಯನ್ನು ಮೂರು ತಿಂಗಳ ಅವಧಿಗೆ ಮರುಹೊಂದಾಣಿಕೆ ಮಾಡಿಕೊಡಬೇಕು ಎಂದು ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಒತ್ತಾಯಿಸಿದ್ದಾರೆ.
(BBMP extends deadline to pay property tax upto june 30 with 5 percent discount)
ಇದನ್ನೂ ಓದಿ: ಕರ್ನಾಟಕ ಲಾಕ್ಡೌನ್ ಹಿನ್ನೆಲೆ; ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ
ಇದನ್ನೂ ಓದಿ: ಜೂನ್ 7ಕ್ಕೆ ಆದಾಯ ತೆರಿಗೆ ಇಲಾಖೆ ಇ- ಪೋರ್ಟಲ್ ಶುರು; ಜೂನ್ 1ರಿಂದ 6ರ ತನಕ ಈಗಿನ ಪೋರ್ಟಲ್ ಮಾಡಲ್ಲ ಕೆಲಸ