Tv9 Digital Live: ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲು ಭಾರತಕ್ಕೆ ಬೇಕು 5ಜಿ ತಂತ್ರಜ್ಞಾನ: ಅಪಾಯಗಳೇನು? ಪರಿಹಾರವುಂಟೆ?

Tv9 Digital Live: ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲು ಭಾರತಕ್ಕೆ ಬೇಕು 5ಜಿ ತಂತ್ರಜ್ಞಾನ: ಅಪಾಯಗಳೇನು? ಪರಿಹಾರವುಂಟೆ?
ಫೇಸ್​ಬುಕ್ ಲೈವ್​ನಲ್ಲಿ ಟಿವಿ9 ಹಿರಿಯ ವರದಿಗಾರ ಎಸ್.ಚಂದ್ರಮೋಹನ್ ಮತ್ತು ಟೆಲಿಕಾಂ ತಜ್ಞ ಶರತ್​ಕುಮಾರ್

ರೇಡಿಯೇಶನ್​ನಿಂದ ತೊಂದರೆಯಾಗುತ್ತೆ ಎನ್ನಲು ಇದಮಿತ್ಥಂ ಎನ್ನುವಂಥ ಡೇಟಾ ಯಾರೂ ಕೊಡ್ತಿಲ್ಲ. ತಂತ್ರಜ್ಞಾನಗಳನ್ನು ಆಧಾರವಿಲ್ಲದೆ ಅನುಮಾನಿಸಿದರೆ ದೇಶ ಮುಂದುವರಿಯಲು ಸಾಧ್ಯವಿಲ್ಲ ಎಂದು ಟೆಲಿಕಾಂ ತಜ್ಞ ಶರತ್​ಕುಮಾರ್ ಹೇಳಿದರು.

Ghanashyam D M | ಡಿ.ಎಂ.ಘನಶ್ಯಾಮ

| Edited By: Skanda

Jun 02, 2021 | 8:49 AM


ಭಾರತದಲ್ಲಿ 5ಜಿ ತಂತ್ರಜ್ಞಾನ ಜಾರಿಗೊಳಿಸುವುದನ್ನು ವಿರೋಧಿಸಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ನಂತರ 5ಜಿ ತಂತ್ರಜ್ಞಾನದ ಅಳವಡಿಕೆ ಮತ್ತು ಬಳಕೆ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯುತ್ತಿದೆ. ಈ ತಂತ್ರಜ್ಞಾನ ಬಳಕೆಯಿಂದ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಆಗಲ್ಲ ಅಂತ ಖಾತ್ರಿಪಡಿಸಿಕೊಂಡೇ 5ಜಿ ತಂತ್ರಜ್ಞಾನ ಜಾರಿ ಮಾಡಬೇಕು ಎಂದು ಜೂಹಿ ಚಾವ್ಲಾ ತಿಳಿಸಿದ್ದರು. ಕೇಂದ್ರ ಸರ್ಕಾರವು ಈ ಬಗ್ಗೆ ಇನ್ನೂ ತನ್ನ ನಿಲುವು ತಿಳಿಸಬೇಕಿದೆ. 5 ಜಿ ತಂತ್ರಜ್ಞಾನ ಬಳಕೆಯ ಸಾಧಕ-ಬಾಧಕ ಕುರಿತು ಟಿವಿ9 ಕನ್ನಡ ಡಿಜಿಟಲ್ ಮಂಗಳವಾರ (ಜೂನ್ 1) ಆನ್​ಲೈನ್ ಸಂವಾದ ನಡೆಸಿತು. ಹಿರಿಯ ವರದಿಗಾರ ಎಸ್.ಚಂದ್ರಮೋಹನ್ ಸಂವಾದ ನಿರ್ವಹಿಸಿದರು. ಟೆಲಿಕಾಂ ಕ್ಷೇತ್ರದ ತಜ್ಞ ಶರತ್ ಕುಮಾರ್, ವಕೀಲ ಜಿ.ಆರ್.ಮೋಹನ್ ಮತ್ತು ಬಿಎಸ್​ಎನ್​ಎಲ್ ಕಾರ್ಮಿಕರ ಸಂಘದ ಮುಖಂಡ ಗುಂಡಣ್ಣ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಂವಾದದ ಆರಂಭದಲ್ಲಿ ಮಾತನಾಡಿದ ಟೆಲಿಕಾಂ ತಜ್ಞ ಶರತ್​ಕುಮಾರ್, ಮೊಬೈಲ್ ಟವರ್​ಗಳಿಂದ ಹೊಮ್ಮುವ ರೇಡಿಯೇಷನ್​ಗಳಿಂದ ಆರೋಗ್ಯ ಸಮಸ್ಯೆಗಳಾಗುತ್ತವೆ ಎನ್ನುವ ವಾದ ಮೊಬೈಲ್ ಫೋನ್ ಬಂದಾಗಿನಿಂದಲೂ ಇದೆ. ಭಾರತಕ್ಕೆ ಮೊಬೈಲ್ ಬಂದಿದ್ದು 1995ರಲ್ಲಿ. ಅಂದಿನಿಂದಲೂ ಈ ಅಭಿಪ್ರಾಯ ಕೆಲವರಲ್ಲಿ ಮೂಡಿದೆ. ಬೇರೆ ದೇಶಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಖಾಸಗಿ-ಸರ್ಕಾರಿ ಅನುದಾನದಿಂದ ಸಂಶೋಧನೆ ನಡೆದಿದೆ. ಈ ಸಂಶೋಧನೆಯಲ್ಲಿ ಯಾವುದೇ ವ್ಯತಿರಿಕ್ತ ಅಡ್ಡಪರಿಣಾಮಗಳು ಸಾಬೀತಾಗಿಲ್ಲ. ತೊಂದರೆ ಆಗುತ್ತೆ ಎನ್ನುವವರೂ ಸಾಕಷ್ಟು ಕೇಸ್​ಸ್ಟಡಿಗಳನ್ನು ಕೊಡುತ್ತಿದ್ದಾರೆ. ಎರಡನ್ನೂ ಗಮನಿಸಿ, ರೇಡಿಯೇಶನ್​ನಿಂದ ತೊಂದರೆಯಾಗುತ್ತೆ ಎನ್ನಲು ಇದಮಿತ್ಥಂ ಎನ್ನುವಂಥ ಡೇಟಾ ಯಾರೂ ಕೊಡ್ತಿಲ್ಲ. ಯಾವುದೇ ತಂತ್ರಜ್ಞಾನವನ್ನು ಒಂದು ಮಿತಿಯಲ್ಲಿ ಬಳಸಬೇಕು. ರೇಡಿಯೇಷನ್ ಪೊಲ್ಯೂಶನ್​ಗೂ ಒಂದು ಮಿತಿ ವಿಧಿಸಲಾಗಿದೆ. ಇದನ್ನು ನಿರ್ವಹಿಸಲೆಂದೇ ಟೆಲಿಕಾಂ ಇಲಾಖೆ ಇದೆ. ರೇಡಿಯೇಷನ್ ಎಷ್ಟು ಹೊಮ್ಮಬೇಕು ಎನ್ನುವ ಬಗ್ಗೆ ಪ್ರತಿ ಉಪಕರಣಕ್ಕೂ ಒಂದೊಂದು ಸ್ಟ್ಯಾಂಡರ್ಡ್​ ನಿರ್ಧರಿಸಲಾಗಿದೆ. ಉಪಕರಣಗಳು ಮತ್ತು ಕಾರ್ಯಾಚರಣೆಯನ್ನು ಅದಕ್ಕೆ ಅನುಗುಣವಾಗಿ ನಿರ್ವಹಿಸಬೇಕು ಎಂದರು.

ಈಗ 5ಜಿಗೆ ಬರೋಣ. ನಮ್ಮ ದೇಶದಲ್ಲಿ 5ಜಿ ತಂತ್ರಜ್ಞಾನ ಅಳವಡಿಕೆಯಾದೆ ಕಾರ್ಯಕ್ಷಮತೆ ಸುಧಾರಿಸುತ್ತೆ. ಮೊಬೈಲ್ ಫೋನ್ ಸುಧಾರಿಸುತ್ತೆ, ಟವರ್​ಗಳು ಸಣ್ಣದಾಗುತ್ತವೆ, ಫೋನ್​ಗಳಲ್ಲಿ ರೇಡಿಯೇಶನ್ ಕಡಿಮೆಯಾಗುತ್ತೆ. ಪ್ರತಿಬಾರಿ ಹೊಸ ತಂತ್ರಜ್ಞಾನ ಅಳವಡಿಸುವಾಗಲೂ ಇಂಥ ವಾದ-ವಿವಾದಗಳು ನಡೆಯುತ್ತವೆ. ಪೂರಕವಾದ ಆಧಾರ ಇಟ್ಟುಕೊಂಡು ಯೋಚನೆ ಮಾಡಬೇಕು. 5ಜಿಯಿಂದ ಶಿಕ್ಷಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹಲವು ಅನುಕೂಲಗಳಿವೆ.

ಮೊಬೈಲ್ ಟವರ್ ಮತ್ತು ಮೊಬೈಲ್ ಉಪಕರಣಗಳ ರೇಡಿಯೇಷನ್​ನಿಂದ ಮನುಷ್ಯನಿಗೆ ತೊಂದರೆಯಾಗುತ್ತೆ ಎಂದು ಹೇಳಲು ಸಹ ಇದಮಿತ್ಥಂ ಎನ್ನುವ ಸಾಕ್ಷ್ಯಗಳು ಇಲ್ಲ. ಎಕ್ಸ್​ರೇ ತೆಗೆದ್ರೂ ರೇಡಿಯೇಶನ್ ಇದೆ. ಆದರೆ ಅದನ್ನು ಅಯನೈಸಿಂಗ್ ರೇಡಿಯೇಶನ್ ಅಂತಾರೆ. ಅದರಲ್ಲಿ ಜೀವಕೋಶಗಳ ಮೇಲೆ ಪರಿಣಾಮ ಆಗುತ್ತೆ. ಮೊಬೈಲ್​ನಲ್ಲಿ ಇರುವುದು ನಾನ್ ಅಯನೈಸಿಂಗ್ ರೇಡಿಯೇಶನ್. ಅದರಲ್ಲಿ ಜೀವಕೋಶಗಳಿಗೆ ತೊಂದರೆ ಆಗಲ್ಲ. ಟಿವಿ, ರೇಡಿಯೊ ತರಂಗಳು ಇಂಥವೇ.

ವಿಶ್ವಸಂಸ್ಥೆಯ ಎಫ್​ಸಿಸಿ ಫೆಡರಲ್ ಕಮ್ಯುನಿಕೇಶನ್ ಕಾರ್ಪೊರೇಶನ್ ಇಂಥ ಉಪಕರಣ ಇಂತಿಷ್ಟು ರೇಡಿಯೇಶನ್ ಹೊಮ್ಮಿಸಬೇಕು ಎಂದು ಮಿತಿ ವಿಧಿಸುತ್ತದೆ. ಹಿಂದೆ ಟಿವಿ ಟವರ್​ಗಳು ದೊಡ್ಡದಿದ್ದವು. ಅದರಲ್ಲಿ ಮೆಗಾವಾಟ್​ಗಟ್ಟಲೆ ಪವರ್ ಟ್ರಾನ್ಸ್​ಮಿಟ್ ಆಗ್ತಿತ್ತು. ಹಿಂದೆ ಮೊಬೈಲ್​ ಟವರ್ ಎತ್ತರಕ್ಕೆ ಹಾಕ್ತಿದ್ರು. ಈಗ ಮೊಬೈಲ್ ಟವರ್​ಗಳ ಎತ್ತರ ಕಡಿಮೆ ಆಗಿದೆ. ಸೆಟಲೈಟ್ ಹತ್ತಿರಕ್ಕೆ ಬಂದಿವೆ. ಹೀಗಾಗಿ ತಂತ್ರಜ್ಞಾನ ಸುಧಾರಿಸಿದೆ. ಒಂದು ಮಿತಿಯಲ್ಲಿ ಬಳಸಿದರೆ ತೊಂದರೆಗಿಂತಲೂ ಲಾಭವೇ ಹೆಚ್ಚು. ಹೆದರಿ ಕೂತರೆ ನಾವು ಹಿಂದುಳಿಯುತ್ತೇವೆ.

5ಜಿ ತಂತ್ರಜ್ಞಾನದಲ್ಲಿ ಪ್ರತಿ 100-200 ಮೀಟರ್​ಗೆ ಆ್ಯಂಟೆನಾ ಅಳವಡಿಸಬೇಕಾಗುತ್ತೆ. ಇದಕ್ಕೆ ಮೈಮೊ ಟೆಕ್ನಾಲಜಿ ಅಂತ ಕರೀತಾರೆ. ಹಿಂದೆ ಬೀದಿ ದೀಪದಲ್ಲಿ ನಿಯಾನ್ ಬಲ್ಪ್ ಹಾಕಿದ್ರೆ ಎಲ್ಲ ಕಡೆ ಬೆಳಕು ಬರ್ತಿತ್ತು. ಈಗ ಸಣ್ಣ ಎಲ್​ಇಡಿ ಬಲ್ಪ್ ಹಾಕುತ್ತಾರೆ. ಅಂದರೆ ಒಂದು ದೊಡ್ಡ ಬಲ್ಪ್ ಬದಲಿಗೆ, ಹಲವು ಸಣ್ಣ ಬಲ್ಪ್​ಗಳ ಬಳಕೆಯಿದೆ 5ಜಿ ಕೆಲಸ ಮಾಡುವ ತತ್ವ ಇದು. ಉನ್ನತ ತಂತ್ರಜ್ಞಾನದ ಪುಟ್ಪಪುಟ್ಟ ಟವರ್​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸುತ್ತಾರೆ. ಇದರಿಂದ ಮೊಬೈಲ್ ತಂತ್ರಜ್ಞಾನದ ಕಾರ್ಯಕ್ಷಮತೆ ಹೆಚ್ಚಾಗುತ್ತೆ.

ಟವರ್ ಹತ್ತಿರಹತ್ತಿರ ಹಾಕೋದ್ರಿಂದ ಪವರ್ ಟ್ರಾನ್​ಮಿಷನ್ ಹೆಚ್ಚಾಗಲ್ಲ. 5ಜಿಗೆ ಮೈಮೊ ಟೆಕ್ನಾಲಜಿ ಬಳಕೆ ಆಗುತ್ತೆ. ತಂತ್ರಜ್ಞಾನದಲ್ಲಿ ಬದಲಾವಣೆ ಆದಾಗ ಅನುಕೂಲವೇ ಹೆಚ್ಚು. ರಿಮೋಟ್ ಮಾನಿಟರಿಂಗ್ ವಿಚಾರದಲ್ಲಿ 5ಜಿ ಗೇಮ್ ಚೇಂಜರ್ ಎನಿಸಿಕೊಂಡಿದೆ. 4ಜಿಯಿಂದ ಇವತ್ತು ನಮ್ಮ ವರ್ಕ್​ಫ್ರಂ ಹೋಂ ಸರಿಯಾಗಿ ನಡೀತಾ ಇದೆ. ಇದನ್ನು ಮತ್ತೊಂದು ಹಂತಕ್ಕೆ ತಗೊಂಡು ಹೋಗೋಕೆ 5ಜಿ ಅನುಕೂಲ ಮಾಡಿಕೊಡುತ್ತೆ.

5ಜಿ ನಮಗೆ ಏಕೆ ಬೇಕು ಅಂತ ನೀವು ಕೇಳಬಹುದು. 5ಜಿ ಬಳಕೆಯಿಂದ ಹಳ್ಳಿಗಳಲ್ಲಿರುವ ವೈದ್ಯರಿಗೆ ರಿಮೋಟ್​ ಆಪರೇಷನ್ ಮಾಡುವ ಸಾಮರ್ಥ್ಯ ಬರುತ್ತದೆ. 4ಜಿಯಲ್ಲಿ ಮೊಬೈಲ್​ ಟು ಮೊಬೈಲ್ ಕಮ್ಯುನಿಕೇಶನ್ ಇತ್ತು. 5ಜಿಯಲ್ಲಿ ಡಿವೈಸ್​ ಟು ಡಿವೈಸ್ ಕಮ್ಯುನಿಕೇಶನ್ ಇದೆ. 4ಜಿಗೂ 5ಜಿಗೂ ಸ್ಪೀಡ್​ ಇಂಪ್ರೂಮೆಂಟ್ ಇದೆ. 100 ಎಂಬಿ ಅಂದ್ರೆ 1 ಜಿಬಿ ಸ್ಪೀಡ್ ಇರುತ್ತೆ. ಹೆಚ್ಚುವರಿಯಾಗಿ ಒಂದು ಡಿವೈಸ್​ ಟು ಡಿವೈಸ್ ಲೇಟೆಂಜಿ ಇರುತ್ತೆ. ಅಂದ್ರೆ ಒಂದು ಉಪಕರಣವು ಮತ್ತೊಂದು ಉಪಕರಣದೊಂದಿಗೆ ಸಂವಹನ ನಡೆಸುವ ವೇಗ 1 ಮಿಲಿಸೆಕೆಂಡ್​ಗೆ ಕಡಿಮೆಯಾಗುತ್ತೆ. ಇದು 4ಜಿ ತಂತ್ರಜ್ಞಾನದಲ್ಲಿ 15ರಿಂದ 20 ಮಿಲಿ ಸೆಕೆಂಡ್ ಇತ್ತು. 5ಜಿಯಿಂದ ವಿಷ್ಯುಯಲ್ ರಿಯಲೈಸೇಶನ್​ಗೆ ಅನುಕೂಲವಾಗುತ್ತೆ ಎಂದು ಹೇಳಲು ಇದೊಂದು ಉದಾಹರಣೆ ಸಾಕಲ್ಲವೇ? ಎಂದು ವಿಸ್ತೃತವಾಗಿ ತಮ್ಮ ಅಭಿಪ್ರಾಯಗಳನ್ನು ಹರಡಿಟ್ಟರು.

ನ್ಯಾಯಾಲಯದ ಮಧ್ಯಪ್ರವೇಶ ಅನುಮಾನ: ವಕೀಲ ಜಿ.ಆರ್.ಮೋಹನ್
5ಜಿ ತಂತ್ರಜ್ಞಾನದಿಂದ ಪರಿಸರಕ್ಕೆ ತೊಂದರೆಯಿದೆ ಎಂದು ಕೆಲವರು ನ್ಯಾಯಾಲಯಕ್ಕೆ ಪ್ರಕರಣ ತಂದಿದ್ದಾರೆ. ಸಾಮಾನ್ಯವಾಗಿ ಇಂಥ ವಿಚಾರಗಳನ್ನು ನ್ಯಾಯಾಲಯಗಳು ಸರ್ಕಾರದ ನೀತಿಗೆ ಸಂಬಂಧಿಸಿದ ವಿಚಾರಗಳು ಎಂದು ಪರಿಗಣಿಸುತ್ತವೆ. ಮಧ್ಯಪ್ರವೇಶ ಮಾಡಲು ಆಗುವುದಿಲ್ಲ ಎಂಬ ನಿಲುವು ತಳೆಯುವುದೇ ಹೆಚ್ಚು. ಕೆಲವೊಮ್ಮೆ ಮಾತ್ರ ನಮಗೆ ಈ ವಿಚಾರದಲ್ಲಿ ತಜ್ಞತೆ ಇಲ್ಲ. ನೀವು ಮನವರಿಕೆ ಮಾಡಿಕೊಡಿ ಎಂದು ಕೇಳಬಹುದು. ಸ್ಥೂಲವಾಗಿ ನೋಡಿದರೆ 5ಜಿ ತಂತ್ರಜ್ಞಾನದ ಅಳವಡಿಕೆಗೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ವಕೀಲ ಜಿ.ಆರ್.ಮೋಹನ್ ಅಭಿಪ್ರಾಯಪಟ್ಟರು.

ಬಿಎಸ್​ಎನ್​ಎಲ್​ಗೆ ಏಕೆ ಅನುಮತಿ ಇಲ್ಲ: ಗುಂಡಣ್ಣ
ಖಾಸಗಿ ಸಂಸ್ಥೆಗಳಿಗೆ 5ಜಿ ಅಳವಡಿಕೆಗೆ ಅನುಮತಿ ನೀಡಿರುವ ಸರ್ಕಾರವು ಸರ್ಕಾರದ ಅಧೀನದಲ್ಲಿಯೇ ಇರುವ ಬಿಎಸ್​ಎನ್​ಎಲ್​ಗೆ ಅನುಮತಿ ಕೊಟ್ಟಿಲ್ಲವೇಕೆ ಎಂದು ಬಿಎಸ್​ಎನ್​ಎಲ್ ಟ್ರೇಡ್ ಯೂನಿಯನ್ ಮುಖಂಡ ಗುಂಡಣ್ಣ ಪ್ರಶ್ನಿಸಿದರು. ಸರ್ಕಾರ ಬಿಎಸ್​ಎನ್​ಎಲ್ ವಿಚಾರವಾಗಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ನಮಗೆ ಈವರೆಗೆ 4ಜಿ ತಂತ್ರಜ್ಞಾನದ ಅಳವಡಿಕೆಗೂ ಅವಕಾಶಕೊಟ್ಟಿಲ್ಲ. ನಾವು 5 ಮೆಗಾವಾಟ್​ನಲ್ಲಿ (ಟ್ರಾನ್ಸ್​ಮಿಷನ್) ಕೆಲಸ ಮಾಡಬೇಕಿದೆ ಆದರೆ ರಿಲಯನ್ಸ್​ನವರಿಗೆ 10 ಮೆಗಾವಾಟ್​ನಲ್ಲಿ ಕೆಲಸ ಮಾಡಲು ಅವಕಾಶವಿದೆ. ಟ್ರಾನ್ಸ್​ಮಿಷನ್ ಪವರ್ ಹೆಚ್ಚಾಗುವುದರಿಂದ ಮಿದುಳಿನ ಮೇಲೆ ಪರಿಣಾಮ ಬೀರುತ್ತೆ ಎಂಬುದು ಅವರ ಅಭಿಪ್ರಾಯ.

(India needs 5g technology to match speed of the world in development experts discussion in tv9 digital live)

ಇದನ್ನೂ ಓದಿ: 5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ

ಇದನ್ನು ಓದಿ: ಆಪಲ್ iOS 14.5 ಅಪ್​ಡೇಟ್ ಮಾಡಿಕೊಂಡು ಐಫೋನ್ 12 ಬಳಕೆದಾರರು 5G ನೆಟ್​ವರ್ಕ್ ಸಂಪರ್ಕ ಪಡೆಯಿರಿ


Follow us on

Most Read Stories

Click on your DTH Provider to Add TV9 Kannada