ಭಾರತದಲ್ಲಿ ಎಲೆಕ್ಟ್ರಿಕ್ ವಾಹನವು ನಿಧಾನವಾಗಿ ತನ್ನ ಛಾಪನ್ನು ಮೂಡಿಸುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹಾಗೆಯೇ ದ್ವಿಚಕ್ರ ವಾಹನಗಳ ಕ್ಷೇತ್ರದಲ್ಲೂ ಎಲೆಕ್ಟ್ರಿಕ್ ವಾಹನಗಳು ಹೊಸ ಸಂಚಲನ ಸೃಷ್ಟಿಸುತ್ತಿದೆ. ಓಲಾ, ಬಜಾಜ್, ಹೋಂಡಾ ಸೇರಿದಂತೆ ಪ್ರಮುಖ ಕಂಪೆನಿಗಳು ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣದತ್ತ ಮುಖ ಮಾಡಿದೆ. ಇದಾಗ್ಯೂ ಸಾಮಾನ್ಯ ಜನರಲ್ಲಿ ಮೂಡಿದ ಪ್ರಶ್ನೆಯೆಂದರೆ ಚಾರ್ಜ್ ಮಾಡಿಕೊಳ್ಳೋದು ಹೇಗೆ ಎಂಬುದು.
ಹೌದು, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗಾಗಿ ಪ್ರಮುಖ ನಗರಗಳಲ್ಲೇ ಸ್ಟೇಷನ್ಗಳ ಕೊರತೆಯಿದೆ. ಇನ್ನು ಮನೆಯಲ್ಲಿಯೇ ಚಾರ್ಜ್ ಮಾಡಬೇಕಿದ್ದರೂ 3 ರಿಂದ 4 ಗಂಟೆ ತೆಗೆದುಕೊಳ್ಳುತ್ತದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ನಂಬೋದು ಹೇಗೆ ಎಂಬುದು ಅನೇಕರ ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪೆನಿ ಜಿಎಸಿ ಅಯಾನ್ ಮುಂದಾಗಿದೆ.
ಈ ಕಂಪೆನಿಯು ತಯಾರಿಸಿದ ಎಲೆಕ್ಟ್ರಿಕ್ ವಾಹನವನ್ನು ಮಿಂಚಿನ ವೇಗದಲ್ಲಿ ಚಾರ್ಜ್ ಮಾಡಬಹುದು. ಅದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ತುಂಬುವುದಕ್ಕಿಂತ ವೇಗವಾಗಿ ಎಂದರೆ ನಂಬಲೇಬೇಕು. ಈ ವಾಹನದಲ್ಲಿ ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಅದರಂತೆ ಅತೀ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿಕೊಳ್ಳಬಹುದು.
ಅಯಾನ್ ಕಂಪನಿ ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ವಾಹನ ಅಯಾನ್ ವಿ ಈ ಹೊಸ ತಂತ್ರಜ್ಞಾನದೊಂದಿಗೆ ಬರಲಿದ್ದು, ಈ ವಾಹನವನ್ನು ಕೇವಲ 10 ನಿಮಿಷಗಳಲ್ಲಿ 30-80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಹಾಗೆಯೇ 16 ನಿಮಿಷದಲ್ಲಿ 0 ದಿಂದ 80 ಶೇಕಡ ಚಾರ್ಜ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಪ್ರಸ್ತುತ, ಎಲೆಕ್ಟ್ರಿಕ್ ವಾಹನಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತಿದ್ದು, ಆದರೆ ಚೀನಾದ ಈ ಕಂಪನಿಯು ತನ್ನ ವಾಹನದಲ್ಲಿ ಸ್ಕೇಲೆಬಲ್ ಗ್ರ್ಯಾಫೀನ್ ಬ್ಯಾಟರಿಯನ್ನು ಬಳಸಿದೆ. ಈ ಬ್ಯಾಟರಿಯು ಲಿಥಿಯಂ-ಐಯಾನ್ ಬ್ಯಾಟರಿಗಿಂತ ಹೆಚ್ಚು ವೇಗವಾಗಿ ಚಾರ್ಜ್ ಆಗುತ್ತದೆ. ಕಂಪನಿಯ ಪ್ರಕಾರ, ಈ ಸ್ಕೇಲೆಬಲ್ ಗ್ರ್ಯಾಫೀನ್ ಬ್ಯಾಟರಿಯನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದ್ರೆ 1,000 ಕಿ.ಮೀ.ವರೆಗೆ ಚಲಿಸಬಹುದು.
ಆದಾಗ್ಯೂ ತಜ್ಞರ ಪ್ರಕಾರ, ಸ್ಕೇಲೆಬಲ್ ಗ್ರ್ಯಾಫೀನ್ ಬ್ಯಾಟರಿಗಳ ತಂತ್ರಜ್ಞಾನವು ಇನ್ನು ಅಭಿವೃದ್ಧಿಯಲ್ಲಿದ್ದು, ಹೀಗಾಗಿ ಇದು ಮಾರುಕಟ್ಟೆಗೆ ಬರಲು ಬಹಳ ಸಮಯ ತೆಗೆದುಕೊಳ್ಳಲಿದೆ. ಅಯಾನ್ ಕಂಪನಿಯು ಇದುವರೆಗೆ ತನ್ನ 4 ಎಲೆಕ್ಟ್ರಿಕ್ ವಾಹನಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಕಂಪೆನಿಯು ಸ್ಕೇಲೆಬಲ್ ಗ್ರ್ಯಾಫೀನ್ ಬ್ಯಾಟರಿ ಮಾರಾಟಕ್ಕೆ ಹೆಚ್ಚು ಒತ್ತು ನೀಡುವುದರಿಂದ ಭಾರತ ಸೇರಿ ವಿಶ್ವದೆಲ್ಲೆಡೆ ಈ ತಂತ್ರಜ್ಞಾನದ ಎಲೆಕ್ಟ್ರಿಕ್ ವಾಹನಗಳು ಲಭ್ಯವಾಗಲಿದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
( Electric car will charge faster by filling petrol )