ಕೋವಿಡ್- 19ಗೆ ಸಂಬಂಧಿಸಿದ ಕ್ಲೇಮ್ಗಳನ್ನು ಆದ್ಯತೆ ಮೇಲೆ ಅನುಮತಿ ನೀಡಿ, ವಿಲೇವಾರಿ ಮಾಡಬೇಕು ಎಂದು ಕಂಪೆನಿಗಳಿಗೆ ಇನ್ಷೂರೆನ್ಸ್ ನಿಯಂತ್ರಕರು ನಿರ್ದೇಶನ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಕ್ಯಾಶ್ಲೆಸ್ ಇನ್ಷೂರೆನ್ಸ್ಗಳನ್ನು ನಿರಾಕರಿಸಲಾಗುತ್ತಿದೆ ಎಂಬ ವರದಿಗಳು ಬರುತ್ತಿವೆ. ಇಂಥ ಸನ್ನಿವೇಶವನ್ನು ನಿಭಾಯಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ಅಧ್ಯಕ್ಷ ಎಸ್. ಕುಂಠಿಯಾ ಅವರೊಂದಿಗೆ ಮಾತನಾಡಿ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
2020ರ ಮಾರ್ಚ್ನಲ್ಲಿ ಕಾಂಪ್ರಹೆನ್ಸಿವ್ ಹೆಲ್ತ್ ಇನ್ಷೂರೆನ್ಸ್ನಲ್ಲಿ ಕೋವಿಡ್-19 ಅನ್ನು ಕೂಡ ಸೇರಿಸಲಾಯಿತು. ಕ್ಯಾಶ್ಲೆಸ್ ಚಿಕಿತ್ಸೆಯು ನೆಟ್ವರ್ಕ್ ಅಥವಾ ತಾತ್ಕಾಲಿಕ ಆಸ್ಪತ್ರೆಗಳಲ್ಲೂ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 20ನೇ ತಾರೀಕಿನವರೆಗೆ 9,00,000 ಕೋವಿಡ್- 19 ಆರೋಗ್ಯ ವಿಮೆ ಕ್ಲೇಮ್ಗಳು, 8,642 ಕೋಟಿ ರೂಪಾಯಿಯನ್ನು ವಿಲೇವಾರಿ ಮಾಡಲಾಗಿದೆ. ಜನರಲ್ ಇನ್ಷೂರರ್ಗಳಿಗೆ ಹತ್ತಿರ ಹತ್ತಿರ 15,000 ಕೋಟಿ ರೂಪಾಯಿ ಆರೋಗ್ಯ ವಿಮೆ ಕ್ಲೇಮ್ಗಳು ಕೊರೊನಾವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆಯೇ ಬಂದಿವೆ.
2020ರ ಜುಲೈನಲ್ಲಿ ಐಆರ್ಡಿಎಐ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಸರ್ಕಾರದಿಂದ ಮಾನ್ಯತೆ ಪಡೆದ ತಾತ್ಕಾಲಿಕ ಆಸ್ಪತ್ರೆಗಳ ಕೋವಿಡ್- 19 ಕ್ಲೇಮ್ ಕೂಡ ಎಲ್ಲ ಜನರಲ್ ಮತ್ತು ಆರೋಗ್ಯ ವಿಮೆ ಒದಗಿಸುವ ಕಂಪೆನಿಗಳು ಪರಿಗಣಿಸಬೇಕು ಎಂದಿತ್ತು. ಅಷ್ಟೇ ಅಲ್ಲ, ಟೆಲಿ- ಕನ್ಸಲ್ಟೇಷನ್ಗಳನ್ನು ಸಹ ಆರೋಗ್ಯ ವಿಮೆ ಅಡಿ ಪರಿಗಣಿಸುವಂತೆ ಸೂಚಿಸಲಾಗಿತ್ತು. ಆದರೆ ಈ ಹಿಂದೆಯೇ ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಆದಂತೆ, ಕೋವಿಡ್-19 ಚಿಕಿತ್ಸಾ ವೆಚ್ಚದ ವಿಚಾರವಾಗಿ ಆಸ್ಪತ್ರೆಗಳು ಮತ್ತು ಇನ್ಷೂರೆನ್ಸ್ ಕಂಪೆನಿಗಳ ಮಧ್ಯೆ ತಿಕ್ಕಾಟಗಳಾಗಿವೆ.
ಆಸ್ಪತ್ರೆಗಳು ಸ್ಟ್ಯಾಂಡರ್ಡ್ ರೇಟ್ ಕಾರ್ಡ್ಗಳನ್ನು ಅನುಸರಿಸುತ್ತಿಲ್ಲ ಎಂಬುದು ಇನ್ಷೂರೆನ್ಸ್ ಕಂಪೆನಿಗಳ ಆರೋಪ. ಅದನ್ನು 2020ರ ಜೂನ್ನಲ್ಲಿ ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ವಿತರಿಸಿತ್ತು. ಇತ್ತ ಆಸ್ಪತ್ರೆಗಳು ಸಹ, ಎಲ್ಲ ರೋಗಿಗಳನ್ನೂ ಮಿತಿ ಹಾಕಿದ ದರದೊಳಗೆ ಗುಣಪಡಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದವು. ಇನ್ನು ಕೋವಿಡ್- 19 ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಆಸ್ಪತ್ರೆಗಳು ಹೇಗೆ ದರಗಳನ್ನು ಏರಿಕೆ ಮಾಡಿವೆ ಎಂಬ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿ ಆಗಿವೆ. ಇದರಿಂದ ಹೆಚ್ಚಿನ ದರ ಪಾವತಿಸುವಂತಾಗುತ್ತಿದೆ. ಇನ್ಷೂರೆನ್ಸ್ ಪಡೆದವರಿಗೆ ಸಿಕ್ಕಾಪಟ್ಟೆ ದರ ಹಾಕಲಾಗುತ್ತಿದೆ ಎಂಬ ಆರೋಪವೂ ಇದೆ.
ಇದನ್ನೂ ಓದಿ: Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?
(Union finance minister said IRDAI chairman to direct insured company to prioritize covid 19 claim settlement)