ಉತ್ತರ ಕನ್ನಡದಲ್ಲಿ ಶ್ರೀಗಂಧ ಕಲಾಕೃತಿ ರಚನೆ ಭಾರೀ ಪ್ರಮಾಣದಲ್ಲಿ ಇಳಿಕೆ: ಕಾರಣವೇನಿರಬಹುದು?

|

Updated on: Jan 21, 2021 | 1:43 PM

ಉತ್ತರಕನ್ನಡ ಕೆಲ ತಾಲೂಕುಗಳಲ್ಲಿ ಶ್ರೀಗಂಧದಿಂದ ತಯಾರಿಸುವ ಕಲಾಕೃತಿಗಳು ಹೆಚ್ಚು ಕಾಣಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿಯೇ ಬೇಡಿಕೆ ಇಲ್ಲವೇ ಎಂಬ ಗೊಂದಲ ಸೃಷ್ಟಿಸಿದೆ. ಹಾಗಾದಾರೆ, ಶ್ರೀಗಂಧದ ವಿವಿಧ ವಿನ್ಯಾಸದ ಕಲಾಕೃತಿಗಳ ಬೇಡಿಕೆ ಕಡಿಮೆಯಾಗುತ್ತಿರಲು ಕಾರಣವೇನಿರಬಹುದು?

ಉತ್ತರ ಕನ್ನಡದಲ್ಲಿ ಶ್ರೀಗಂಧ ಕಲಾಕೃತಿ ರಚನೆ ಭಾರೀ ಪ್ರಮಾಣದಲ್ಲಿ ಇಳಿಕೆ: ಕಾರಣವೇನಿರಬಹುದು?
ಶ್ರಿಗಂಧದಿಂದ ಕಲಾಕೃತಿ
Follow us on

ಉತ್ತರ ಕನ್ನಡ:ಹಲವು ತಲೆಮಾರುಗಳಿಂದ ವಿಧ ವಿಧದ ಕಲಾಕೃತಿ ಸಿದ್ಧಪಡಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಕರಕುಶಲಕರ್ಮಿಗಳಿಗೆ ಈಗ ಶ್ರಿಗಂಧ ಲಭ್ಯತೆ ವಿರಳವಾಗಿರುವುದು ಚಿಂತೆ ತಂದಿದೆ. ದುಬಾರಿ ಬೆಲೆ ನೀಡಿ ಕಟ್ಟಿಗೆ ಖರೀದಿ ಅಸಾಧ್ಯ ಎಂಬ ನಿರ್ಣಯಕ್ಕೆ ಬಹುತೇಕ ಕಲಾಕಾರರು ಬಂದಿದ್ದಾರೆ.

ಇನ್ನು, ಶ್ರೀಗಂಧ ಕಲಾಕೃತಿ ಬದಲು ಇತರ ಮರಗಳ ಕಟ್ಟಿಗೆ ಬಳಸಿ ಸಿದ್ಧಪಡಿಸುವ ಕಲಾಕೃತಿಗಳೇ ಹೆಚ್ಚುತ್ತಿದೆ. ಗಂಧದಿಂದ ಸಿದ್ಧಪಡಿಸುವ ಹಾರ, ಆಭರಣ ಪೆಟ್ಟಿಗೆ, ಮೂರ್ತಿಗಳ ತಯಾರಿಕೆ ಪ್ರಮಾಣ ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.

ಪ್ರಸ್ತುತದಲ್ಲಿ, ಪ್ರತಿ ಕೆಜಿ ಶ್ರೀಗಂಧದ ಬೆಲೆ 15 ಸಾವಿರ ರೂ.ದಷ್ಟಿದೆ. ಅದನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಖರೀದಿಸಿ, ನೊಂದಾಯಿತ ಕರಕುಶಲ ಕರ್ಮಿಗಳಿಗೆ 9.5 ಸಾವಿರ ದರದಲ್ಲಿ ಪೂರೈಕೆ ಮಾಡುತ್ತದೆ.

ಸಾಂಪ್ರದಾಯಿಕ ಕಲೆಯಿಂದ ಯುವಪೀಳಿಗೆ ದೂರ:

ಜಿಲ್ಲೆಯ ಶಿರಸಿ, ಕುಮಟಾ ಮತ್ತು ಮುಂಡಗೋಡದಲ್ಲಿ ಕುಶಲಕರ್ಮಿಗಳಿಗೆ ಶ್ರೀಗಂಧ ಪೂರೈಸಲು ವ್ಯವಸ್ಥೆ ಇದೆ. ಶಿರಸಿಯಲ್ಲಿ ಶ್ರೀಗಂಧ ಕಲಾಕೃತಿ ಸಿದ್ಧಪಡಿಸುವವರ ಸಂಖ್ಯೆ ಕೆಲ ವರ್ಷಗಳ ಹಿಂದೆ ಇನ್ನೂರಕ್ಕಿಂತ ಹೆಚ್ಚಿತ್ತು. ಈಗ ಆ ಸಂಖ್ಯೆ ತೀರಾ ಕಡಿಮೆಯಾಗಿದೆ.

ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ದುಬಾರಿ ಬೆಲೆ:

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರಿಗಂಧದ ಕಲಾಕೃತಿಗಳಿಗೆ ಬಹುಬೇಡಿಕೆ ಈಗಲೂ ಇದೆ. ಆದರೆ, ದುಬಾರಿ ದರದ ಕಾರಣಕ್ಕೆ ಕಲಾಕೃತಿಗಳಿಗೆ ಸ್ಥಳೀಯವಾಗಿ ಮಾರುಕಟ್ಟೆಯಿಲ್ಲ. ಕೊರೊನಾ ನಂತರ ವಿದೇಶಿ ಪ್ರವಾಸಿಗರ ಸಂಖ್ಯೆಯೂ ತೀವ್ರವಾಗಿ ಇಳಿಕೆಯಾಗಿದ್ದರಿಂದ ಹೊರಗಿನ ಮಾರುಕಟ್ಟೆಯಲ್ಲೂ ಬೇಡಿಕೆ ಸಿಗುತ್ತಿಲ್ಲ ಎಂದು ಕರಕುಶಲಕರ್ಮಿ ರಾಜೇಶ್​ ಗುಡಿಗಾರ Tv9 ಡಿಜಿಟಲ್ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಇನ್ನು, ಈಚೆಗೆ ಶಿರಸಿಯಲ್ಲೇ 22ಕ್ಕೂ ಹೆಚ್ಚು ಕಾರ್ವಿಂಗ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಸಾಂಪ್ರದಾಯಿಕ ಕೆತ್ತನೆ ಕೆಲಸ ಕಡಿಮೆಯಾಗುತ್ತಿದೆ. ಆದ್ರೆ ಯುವ ಪೀಳಿಗೆ ಸಾಂಪ್ರದಾಯಿಕ ಕಲೆಯಿಂದ ದೂರವಾಗುತ್ತಿದೆ ಎಂದು ರಾಜೇಶ್ ತಿಳಿಸಿದ್ದಾರೆ.

ಶ್ರೀಗಂಧದ ಮರಗಳು (ಕೃಪೆ: ಫೇಸ್​ಬುಕ್)

ಶ್ರೀಗಂಧದ ಹೊರತಾಗಿ ಬೇರೆ ಕಟ್ಟಿಗೆಗೆ ಮೊರೆ:

ಹತ್ತಾರು ವರ್ಷದ ಹಿಂದೆ ಪ್ರತಿ ನೊಂದಾಯಿತ ಕಾರ್ಡ್‍ಗೆ ತಿಂಗಳಿಗೆ 9 ಕೆಜಿ ಶ್ರೀಗಂಧ ಪೂರೈಕೆ ಮಾಡಲಾಗುತ್ತಿತ್ತು. ಈಗ ವರ್ಷಕ್ಕೆ ಎರಡು ಕೆಜಿ ಸಿಗುವುದೂ ಕಷ್ಟ. ಬೆಲೆಯೂ ದುಪ್ಪಟ್ಟಾಗಿದೆ. ಹೀಗಾಗಿ, ಶ್ರೀಗಂಧದ ಹೊರತಾಗಿ ಬೇರೆ ಕಟ್ಟಿಗೆಗಳನ್ನು ಬಳಸಿ ಕಲಾಕೃತಿ ರಚಿಸುತ್ತಿದ್ದೇವೆ ಎಂದು ಕುಶಲಕರ್ಮಿ ಮಹೇಶ ಗುಡಿಗಾರ ಅಭಿಪ್ರಾಯಪಟ್ಟಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಇಲ್ಲ:

ಎರಡು ವರ್ಷದ ಹಿಂದೆ ಶಿರಸಿಯಲ್ಲೇ ವರ್ಷಕ್ಕೆ 25ರಿಂದ 30 ಲಕ್ಷ ಮೌಲ್ಯದ ಶ್ರೀಗಂಧದ ಕಲಾಕೃತಿ ಖರೀದಿಸಲಾಗುತ್ತಿತ್ತು. ಈಗ ಆ ಪ್ರಮಾಣ ಅರ್ಧಕ್ಕಿಂತ ಕಡಿಮೆ ಆಗಿದೆ. ಶ್ರೀಗಂಧ ಅಗತ್ಯ ಪ್ರಮಾಣದಷ್ಟು ಲಭ್ಯವಿಲ್ಲ. ಬೆಳೆಯುವವರ ಸಂಖ್ಯೆ ಕೂಡ ಕಡಿಮೆ ಆಗಿರುವುದರಿಂದ ರಾಜ್ಯದಲ್ಲಿ ಶ್ರೀಗಂಧ ಕೊರತೆ ಎದುರಾಗಿದೆ. ಹೀಗಾಗಿ, ನಿಗಮದಿಂದ ನೊಂದಾಯಿತ ಕರಕುಶಲ ಕರ್ಮಿಗಳಿಗೆ ಪೂರೈಸುವುದು ಕಡಿಮೆ ಆಗಿದೆ. ಜತೆಗೆ ಬೆಲೆಯೂ ದುಬಾರಿಯಾಗಿದೆ ಎಂದು ಶಿರಸಿ ವಲಯದ ಕರಕುಶಲಕರ್ಮಿ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ಗಣೇಶ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಮಾತನಾಡುತ್ತಿದ್ದ ಗಣೇಶ ಸಿಂಗ್, ಶ್ರೀಗಂಧ ನೀಡಿದ ಬಳಿಕ ಕುಶಲಕರ್ಮಿಗಳು ಕಲಾಕೃತಿ ಸಿದ್ಧಪಡಿಸುತ್ತಾರೆ. ಅವುಗಳ ದರ ಹೆಚ್ಚಳವಿರುವ ಕಾರಣಕ್ಕೆ ಸ್ಥಳೀಯ ಮಾರಾಟ ಕಷ್ಟ. ಹೀಗಾಗಿ, ಕುಶಲಕರ್ಮಿಗಳಿಗೆ ಪ್ರೋತ್ಸಾಹಿಸಲು ಸಿದ್ಧಗೊಂಡ ವಸ್ತುಗಳನ್ನು ನಿಗಮವೇ ಖರೀದಿ ಮಾಡುತ್ತದೆ. ಬಳಿಕ ಅವುಗಳನ್ನು ನಿಗಮದ ಮಳಿಗೆಗಳಲ್ಲಿಟ್ಟು ಮಾರಾಟ ಮಾಡಲಾಗುತ್ತದೆ. ಈಗ ಅಲ್ಲೂ ಹೆಚ್ಚು ಬೇಡಿಕೆ ಇಲ್ಲ ಎಂದು ಸಮಸ್ಯೆ ಹಂಚಿಕೊಂಡಿದ್ದಾರೆ.

ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಹೇಳೋದೇನು?

ಕರ್ನಾಟಕ ಕರಕುಶಲ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ

ಶ್ರೀಗಂಧ ಒಂದೇ ಅಲ್ಲದೇ ರೋಸ್​ವುಡ್, ಶಿವಾನಿವುಡ್​ ಹೀಗೆ ಹಲವಾರು ಕಟ್ಟಿಗೆಗಳಿಂದ ಕಲಾಕೃತಿಗಳನ್ನು ತಯಾರಿಸಲಾಗುತ್ತದೆ. ಬೇರೆ ಬೇರೆ ಜಿಲ್ಲೆಯ ಜನ ಅಲ್ಲಿ ಬೆಳೆಯುವ ಅಥವಾ ಹೆಚ್ಚು ಸಿಗುವ ಕಟ್ಟಿಗೆಯಿಂದ ಕಲಾಕೃತಿಗಳನ್ನು ಹೆಚ್ಚು ಸಿದ್ಧ ಪಡಿಸುತ್ತಾರೆ. ಶ್ರೀಗಂಧ ಸಂರಕ್ಷಿತ ಸಸ್ಯ. ಅದನ್ನು ಹೆಚ್ಚು ಸಂರಕ್ಷಣೆ ಮಾಡುತ್ತೇವೆ. ಅದಕ್ಕಾಗಿಯೇ ಅದರ ಬೆಲೆ ಹೆಚ್ಚು. ಅರಣ್ಯ ಇಲಾಖೆಯಿಂದ ಕಟ್ಟಿಗೆಯನ್ನು ತೆಗೆದುಕೊಂಡು ಕುಶಲ ಕರ್ಮಿಗಳಿಗೆ ನೀಡುತ್ತೇವೆ. ಕೋವಿಡ್​ನಿಂದಾಗಿ ಎಲ್ಲಾ ವಿಭಾಗಗಳಿಗೂ ಹೊಡೆತಬಿದ್ದಿದೆ. ಆದರೆ, ಶ್ರೀಗಂಧದಿಂದ ತಯಾರಿಸುವ ಕಲಾಕೃತಿಗಳು ಕಡಿಮೆಯಾಗಿಲ್ಲ ಎಂದು ಕರ್ನಾಟಕ ಕರಕುಶಲ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಗಂಧ ಬೆಳೆಗಾರರಿಂದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ

Published On - 1:38 pm, Thu, 21 January 21