Toll plaza tax: ಈ ರಾಜ್ಯ ಸರ್ಕಾರದಿಂದ ಖಾಸಗಿ ವಾಹನಗಳಿಗೆ ಟೋಲ್ ಪ್ಲಾಜಾ ತೆರಿಗೆ ವಿನಾಯಿತಿ
ಮಧ್ಯಪ್ರದೇಶ ರಾಜ್ಯ ಸರ್ಕಾರವು ಖಾಸಗಿ ವಾಹನಗಳಿಗೆ ಟೋಲ್ ತೆರಿಗೆಯಿಂದ ವಿನಾಯಿತಿ ನೀಡಲಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿ ನೀಡಲಾಗಿದೆ.
ಖಾಸಗಿ ವಾಹನಗಳಿಗೆ ಟೋಲ್ ತೆರಿಗೆಯಿಂದ ವಿನಾಯಿತಿ ನೀಡುವುದಕ್ಕೆ ಮಧ್ಯಪ್ರದೇಶದ ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದರಿಂದ ಅಲ್ಲಿನ ಪ್ರಯಾಣಿಕರು ನಿರಾಳ ಆಗುವಂತಾಗಿದೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಹೊಸ ರಸ್ತೆಗಳಲ್ಲಿ ಈ ನಿರ್ಧಾರವನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶ ಸರ್ಕಾರವು ಟೋಲ್ ತೆರಿಗೆಗೆ (Toll tax) ಸಂಬಂಧಿಸಿದ ನೀತಿಯಲ್ಲಿ ಹೊಸ ನಿಬಂಧನೆಗಳನ್ನು ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಟೋಲ್ ತೆರಿಗೆ ಪಾವತಿಯಿಂದ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ಲೋಕೋಪಯೋಗಿ ಇಲಾಖೆಯಿಂದ ಸುಮಾರು 200 ರಸ್ತೆಗಳ ಸಮೀಕ್ಷೆ ನಡೆಸಲಾಗಿತ್ತು. ರಾಜ್ಯದ ಬಹುತೇಕ ಪ್ರಮುಖ ರಸ್ತೆಗಳನ್ನು ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಬಿಲ್ಡ್ ಆಪರೇಟ್ ಮತ್ತು ಟ್ರಾನ್ಸ್‌ಫರ್ (ಬಿಒಟಿ) ವಿಧಾನವನ್ನು ಬಳಸಿ ನಿರ್ಮಿಸಿದೆ. ಶೇ 80ರಷ್ಟು ಟೋಲ್ ತೆರಿಗೆಯನ್ನು ವಾಣಿಜ್ಯ ವಾಹನಗಳಿಂದ ಸಂಗ್ರಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಬಹಿರಂಗಪಡಿಸಿದೆ. ಖಾಸಗಿ ವಾಹನಗಳಿಗೆ ಕೇವಲ ಶೇ 20ರಷ್ಟು ತೆರಿಗೆ ವಿಧಿಸಲಾಗಿದೆ.
ಟೋಲ್ ಪ್ಲಾಜಾಗಳ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಗ್ರಹಿಸಿದ ಎಲ್ಲ ಟೋಲ್ ತೆರಿಗೆಗಳಲ್ಲಿ ಐದನೇ ಒಂದು ಭಾಗವನ್ನು ಖಾಸಗಿ ವಾಹನಗಳು ಕೊಡುಗೆ ನೀಡುತ್ತವೆಯಾದರೂ ಅವು ಆಗಾಗ ಸಂಚಾರ ದಟ್ಟಣೆಗೆ ಕಾರಣವಾಗುತ್ತವೆ. ಇಂತಹ ಸನ್ನಿವೇಶವನ್ನು ತಪ್ಪಿಸಲು ರಾಜ್ಯ ಸಾರಿಗೆ ಇಲಾಖೆಯು ಖಾಸಗಿ ವಾಹನಗಳಿಗೆ ಟೋಲ್ ತೆರಿಗೆಯಿಂದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿತ್ತು. ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀರಜ್ ಮಂಡ್ಲೋಯ್ ಪ್ರಕಾರ, ಈಗ ಟೋಲ್ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಲಾಗುವುದು, ಖಾಸಗಿ ವಾಹನಗಳಿಂದ ತೆರಿಗೆ ವಸೂಲಿ ಮಾಡದಿರುವ ನಿಯಮವನ್ನು ಸೇರಿಸಲಾಗುವುದಿಲ್ಲ.
ವಿಐಪಿಗಳಿಗೆ ಸಾಮಾನ್ಯವಾಗಿ ಟೋಲ್ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಮಂತ್ರಿಗಳಿಂದ ಮೊದಲುಗೊಂಡು ಸಂಸದರಿದ್ದಾರೆ. ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್‌ಗಳು, ರಕ್ಷಣೆ, ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್‌ಗಳು, ಆಟೋಮೊಬೈಲ್‌ಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದವರಿಗೆ ವಿನಾಯಿತಿ ಇದೆ.
ಇದನ್ನೂ ಓದಿ: ವರ್ಷದೊಳಗೆ ಜಿಪಿಎಸ್ ಆಧರಿತ ಟೋಲ್, ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ: ನಿತಿನ್ ಗಡ್ಕರಿ