ಬೆಳಗಾಗುವಷ್ಟರಲ್ಲಿ 13 ವರ್ಷದ ಬಾಲಕಿ ಸಾವು: 2 ತಿಂಗಳ ಬಳಿಕ ಪಿಎಂ ವರದಿಯಲ್ಲಿ ಸಾವಿನ ರಹಸ್ಯ ಬಯಲು
ಮುರುಳೀಧರ್ ಹಾಗೂ ಶೃತಿ ದೇಶಪಾಂಡೆ ದಂಪತಿಯ ಒಬ್ಬಳೇ ಮಗಳು ಗರ್ಗಿ. ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಉಷಾ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಅದೊಂದು ದಿನ ರಾತ್ರಿ ಮಲಗಿದವಳು ಬೆಳಿಗ್ಗೆ ಎದ್ದೇಳಲಿಲ್ಲ. ಮೊದಲಿಗೆ ಅಸಹಜ ಸಾವು ಅಂದುಕೊಂಡಿದ್ದು, ಬಳಿಕ ಪಿಎಂ ಮತ್ತು ಎಫ್ಎಸ್ಎಲ್ ವರದಿಯಲ್ಲಿ ಕೊಲೆ ವಿಚಾರ ಬೆಳಕಿಗೆ ಬಂದಿತ್ತು. ಸದ್ಯ ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿದೆ.
ಬೆಂಗಳೂರು, ಅಕ್ಟೋಬರ್ 04: ನಗರದಲ್ಲಿ ನಡೆದ ಅದೊಂದು ಬಾಲಕಿ (girl) ಕೊಲೆ ಕೇಸ್ ತಿಲಕನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಗರ್ಗಿ ಮುರುಳೀಧರ್ ನಿಗೂಢವಾಗಿ ಸಾವನ್ನಪ್ಪಿದ 13 ವರ್ಷದ ಬಾಲಕಿ. ನಿದ್ದೆಗೆ ಜಾರಿದ್ದ ವೇಳೆಯೇ ಗರ್ಗಿ ಮೃತಪಟ್ಟಿದ್ದಳು. ಹಾಗಿದ್ದರೆ ಬಾಲಕಿಯನ್ನು ಕೊಲೆ ಮಾಡಿದ್ದು ಯಾರು ಎಂಬ ಹಲವು ಅನುಮಾಗಳು ಹುಟ್ಟಿಕೊಂಡಿದ್ದವು. ಮೊದಲು ಅಸಹಜ ಸಾವು ಅಂದುಕೊಂಡಿದ್ದ ಪೊಲೀಸರಿಗೆ ಪಿಎಂ ಹಾಗೂ ಎಫ್ಎಸ್ಎಲ್ ವರದಿಯಲ್ಲಿ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಮುರುಳೀಧರ್ ಹಾಗೂ ಶೃತಿ ದೇಶಪಾಂಡೆ ದಂಪತಿಯ ಒಬ್ಬಳೇ ಮಗಳು ಗರ್ಗಿ. ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಉಷಾ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಮೃತ ಗರ್ಗಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು.
ಬೆಳಗಾಗುವಷ್ಟರಲ್ಲಿ ಬಾಲಕಿ ಸಾವು
ಬೇಸಿಗೆ ರಜೆ ಹಿನ್ನೆಲೆ ಎರಡು ತಿಂಗಳು ಟ್ಯೂಷನ್ಗೆ ತೆರಳುತ್ತಿದ್ದ ಗರ್ಗಿ, ಮೇ 22 ರಂದು ಬೆಳಿಗ್ಗೆ 8:45 ಅಮ್ಮನ ಜೊತೆ ಅಶೋಕ ನಗರದಲ್ಲಿರುವ ತಾತನ ಮನೆಗೆ ಹೋಗಿದ್ದಾಳೆ. ಸಂಜೆ 5:30ಕ್ಕೆ ತಾಯಿ ಶೃತಿ ದೇಶಪಾಂಡೆ ಹಾಗೂ ಗರ್ಗಿ ಮುರುಳೀಧರ್ ವಾಪಸ್ ಆಗಿದ್ದಾರೆ. ಸಂಜೆ 7 ಕ್ಕೆ ಶೃತಿ ದೇಶಪಾಂಡೆ ಮತ್ತು ಮಗಳು ಗರ್ಗಿ ಹಾಗೂ ಶೃತಿ ಸಹೋದರಿ ಚಾಟ್ಸ್ ತಿನ್ನಲು ಹೊರಗೆ ಹೋಗಿದ್ದಾರೆ. ವಾಪಸ್ 8 ಗಂಟೆಗೆ ಬಂದಿದ್ದು, ರಾತ್ರಿ 10:30 ಕ್ಕೆ ರೂಂಗೆ ಹೋಗಿ ಮಲಗಿಕೊಂಡಿದ್ದಾಳೆ. ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪೋಷಕರು ನೋಡಿದಾಗ ಗರ್ಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರು: ಮತ್ತೆ ಮೂವರು ಪಾಕಿಸ್ತಾನ ಪ್ರಜೆಗಳ ಬಂಧನ, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು
ಘಟನೆ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು. ಯುಡಿಆರ್ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಆದರೆ 2 ತಿಂಗಳ ನಂತರ ಪಿಎಂ ಮತ್ತು ಎಫ್ಎಸ್ಎಲ್ ವರದಿಯಲ್ಲಿ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಉಸಿರುಗಟ್ಟಿಸಿ ಕೊಲೆ: ಪಿಎಂ ವರದಿ ಬಹಿರಂಗ
ಪಿಎಂ ವರದಿಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಜುಲೈ 18 ರಂದು ಯುಡಿಆರ್ ಪ್ರಕರಣವನ್ನ ಕೊಲೆ ಪ್ರಕರಣವನ್ನಾಗಿ ಮಾಡಿಕೊಳ್ಳಲಾಗಿತ್ತು. ಬಳಿಕ ತನಿಖೆಗಿಳಿದ ಪೊಲೀಸರಿಂದ ಕುಟುಂಬಸ್ತರ ವಿಚಾರಣೆ ಮಾಡಿದ್ದಾರೆ. ಘಟನೆ ಸಂಬಂಧ ಪೋಷಕರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಬಾಲಕಿ ಸಾವನ್ನಪ್ಪಿದ್ದ ದಿನ ಪೋಷಕರು ಮಾತ್ರ ಮನೆಯಲ್ಲಿದ್ದರು. ಹೀಗಾಗಿ ಗರ್ಗಿ ಪೋಷಕರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರೀತ್ಸೇ ಪ್ರೀತ್ಸೇ ಎಂದು ಯುವಕನ ಬಲಿ ಪಡೆದ ಕನ್ನಡ ಸೀರಿಯಲ್ ನಟಿ
ಸದ್ಯ ಬಾಲಕಿ ಮೃತಪಟ್ಟು 4 ತಿಂಗಳು ಕಳೆದರೂ ಸಾವಿಗೆ ನಿಖರ ಕಾರಣ ಸಿಕ್ಕಿಲ್ಲ. ಕೇಸ್ ದಾಖಲಾಗಿ 2 ತಿಂಗಳಾದರೂ ಆರೋಪಿಗಳ ಪತ್ತೆ ಆಗಿಲ್ಲ. ಬೇರೆ ಬೇರೆ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು ಸದ್ಯ ಪ್ರಕರಣದ ತನಿಖೆ ಎಸಿಪಿ ಹೆಗಲಿಗೆ ನೀಡಲಾಗಿದೆ.
ವರದಿ: ಪ್ರದೀಪ್ ಕ್ರೈಂ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.