ಕರುಣಾಜನಕ ಕಥೆ: 14 ವರ್ಷ ಬಳಿಕ ಕುಟುಂಬ ಸೇರಿದ ವ್ಯಕ್ತಿ, ಮಗನನ್ನು ಕಾಣದೇ ಕಣ್ಮುಚ್ಚಿದ ಹಡೆದವ್ವ
ಶಿವಕುಮಾರ್, ಛತ್ತೀಸಗಢದ ನಿವಾಸಿ, 14 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದರು. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮಂಗಳೂರಿನ ವೈಟ್‌ಡೌಸ್ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ತಮ್ಮ ಕುಟುಂಬದ ಮಾಹಿತಿಯನ್ನು ನೆನಪಿಸಿಕೊಂಡ ಅವರು, ಸಂಸ್ಥೆಯ ಸಹಾಯದಿಂದ ಕುಟುಂಬಕ್ಕೆ ಮರಳಿದ್ದಾರೆ. ಆದರೆ, ಅವರು ಕುಟುಂಬ ಸೇರುವಷ್ಟರಲ್ಲಿ ತಾಯಿ ನಿಧನರಾಗಿದ್ದಾರೆ.
ಮಂಗಳೂರು, ಡಿಸೆಂಬರ್ 16: ಆತ ಕಳೆದ ಹದಿನಾಲ್ಕು ವರ್ಷಗಳಿಂದ ತನ್ನ ಕುಟುಂಬದಿಂದ ದೂರವಾಗಿದ್ದ. ಮಾನಸಿಕ ಸ್ಥಿಮಿತ ಕಳೆದುಕೊಂಡು ಊರೂರು ಅಲೆಯುತ್ತಾ ಬಂದು ತಲುಪಿದ್ದು, ಮಾತ್ರ ಕಡಲನಗರಿ ಮಂಗಳೂರಿಗೆ. ಮನೆಯವರು ಎಷ್ಟು ಹುಡುಕಿದರು ಪತ್ತೆಯಾಗದ ಆತ ಇದೀಗ ಮತ್ತೆ ಮರಳಿ ಗೂಡಿಗೆ ಸೇರಿದ್ದಾನೆ. ಆದರೆ ದುರಂತ ಅಂದರೆ ಮಗನ (son) ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ತಾಯಿ ಮಾತ್ರ ಮಗ ಬರುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಾರೆ.
14 ವರ್ಷಗಳ ಬಳಿಕ ಮರಳಿಗೂಡಿಗೆ
2010ರಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ವೈಟ್‌ಡೌಸ್ ಸಂಸ್ಥೆಯನ್ನು ಸೇರಿದ್ದ ಛತ್ತಿಸ್‌ಗಡ ಮೂಲದ ಶಿವಕುಮಾರ್. ಮಂಗಳೂರಿನ ಎಸ್ಪಿ ಕಚೇರಿ ಬಳಿಯಿದ್ದ ಈತನಿಗೆ ವೈಟ್‌ಡೌಸ್ ಸಂಸ್ಥಾಪಕಿ ಕೊರಿನ್ ರಸ್ಕಿನಾ ಆಸರೆ ನೀಡಿದ್ದರು. ಮಾನಸಿಕ ಸ್ವಾಸ್ಥ್ಯವಿಲ್ಲ, ಮಾತು ಕಡಿಮೆ, ಒಮ್ಮೊಮ್ಮೆ ಏಕಾಏಕಿ ಬೊಬ್ಬೆ ಹೊಡೆಯುವುದು ಬಿಟ್ಟರೆ ಬೇರೇನೂ ಇಲ್ಲ. ಆದ್ದರಿಂದ ಈತನ ಹಿನ್ನೆಲೆ ತಿಳಿಯಲು ವೈಟ್‌ಡೌಸ್ ಸಂಸ್ಥೆಗೆ ಸಾಧ್ಯವಾಗಿರಲ್ಲ.
ಇದನ್ನೂ ಓದಿ: ಮಂಗಳೂರಿನಲ್ಲಿ ಅಯ್ಯಪ್ಪಸ್ವಾಮಿ ಪವಾಡ: ಮಾಲೆ ಹಾಕಿದ ಬಳಿಕ ಬಾಲಕನಿಗೆ ಬಂತು ಮಾತು
ನಿರಂತರ ಚಿಕಿತ್ಸೆ, ಔಷಧೋಪಚಾರದಿಂದ ಸ್ವಲ್ಪ ಚೇತರಿಸಿಕೊಂಡಿದ್ದ. ಇತ್ತೀಚಿಗೆ ತನ್ನ ಹೆಸರು ಶಿವಕುಮಾರ್, ಊರು ಛತ್ತಿಸ್‌ಗಡ, ತನ್ನ ಕುಟುಂಬದ ಇಬ್ಬರು ಸದಸ್ಯರ ಹೆಸರನ್ನು ಹೇಳಿದ್ದಾನೆ. ಇದರ ಫಲವಾಗಿ ಹದಿನಾಲ್ಕು ವರ್ಷಗಳ ಬಳಿಕ ಶಿವಕುಮಾರ್ ವಾಪಸ್ಸು ತನ್ನ ಮನೆಯವರನ್ನು ಸೇರಿದ್ದಾನೆ.
ಸಣ್ಣ ವಯಸ್ಸಿನಿಂದಲೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶಿವಕುಮಾರ್‌ಗೆ ಕುಟುಂಬಸ್ಥರು ಮದುವೆ ಮಾಡಿದ್ದರು. ಆದರೆ ಪತ್ನಿ ಒಂದೇ ತಿಂಗಳಲ್ಲಿ ತೊರೆದು ಹೋಗಿದ್ದರು. ಕುಟುಂಬ ಕಟ್ಟಡ ಕೆಲಸಕ್ಕೆಂದು ದೆಹಲಿಗೆ ಹೋದಾಗ ತಾಯಿ ಕಟ್ಟಡದ ಮೇಲಿನಿಂದ ಬಿದ್ದು, ಸೊಂಟ ಮುರಿದುಕೊಂಡಿದ್ದರು. ಮತ್ತೆ ಕುಟುಂಬ ಛತ್ತಿಸ್‌ಗಡಕ್ಕೆ ಹೊರಟು ನಿಂತಾಗ, ತಾನು ದೆಹಲಿಯಲ್ಲೇ ಇರುತ್ತೇನೆಂದು ಶಿವಕುಮಾರ್ ರೈಲು ನಿಲ್ದಾಣವನ್ನೇ ಆಶ್ರಯಿಸಿಕೊಂಡ. ಆದರೆ ಮತ್ತೆ ಬಂದು ನೋಡಿದಾಗ ಆತ ಅಲ್ಲಿರಲಿಲ್ಲ. ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಮಧ್ಯೆ KSRTC ಬಸ್ ಕ್ರೆಡಿಟ್ ವಾರ್: ಒಂದೇ ಬಸ್ಸಿಗೆ ಮೂರು ಕಡೆ ಭರ್ಜರಿ ಸ್ವಾಗತ
ಆದಾದ ಬಳಿಕ ಆತ ಬಂದು ಸೇರಿದ್ದು ಮಂಗಳೂರಿನ ವೈಟ್ ಡೌಸ್ ಸಂಸ್ಥೆಯನ್ನು. ಇಲ್ಲಿ ಬಂದ ಬಳಿಕ ಶಿವಕುಮಾರ್ ವರ್ಷ ಕಳೆದಂತೆ ಮಾನಸಿಕವಾಗಿ ಸದೃಢನಾಗದಿದ್ದರೂ ದೈಹಿಕವಾಗಿ ಬಲನಾಗಿದ್ದ. ವೈಟ್‌ಡೌಸ್ ಸಂಸ್ಥೆಯಲ್ಲಿ ಹಾಸಿಗೆ ಹಿಡಿದವರನ್ನು ಬಹಳ ಚೆನ್ನಾಗಿ ಶುಶ್ರೂಷೆ ಮಾಡುತ್ತಿದ್ದ. ಇತ್ತೀಚೆಗೆ ಏಕಾಏಕಿ ತನ್ನ ಪೂರ್ವಾಪರ, ಕುಟುಂಬಿಕರ ಮಾಹಿತಿಯನ್ನು ನೀಡಿದ್ದಾನೆ. ಅದರ ಜಾಡುಹಿಡಿದ ವೈಟ್‌ಡೌಸ್ ಸಂಸ್ಥೆಗೆ ಆತನ ಕುಟುಂಬಸ್ಥರು ಸಿಕ್ಕರು. ಈತನ ಇರುವು ತಿಳಿಯುತ್ತಿದ್ದಂತೆ ಆತನ ಚಿಕ್ಕಪ್ಪ, ಭಾವ ಮಂಗಳೂರಿಗೆ ಆಗಮಿಸಿದ್ದಾರೆ. ಶಿವಕುಮಾರ್‌ಗೆ ಆಶ್ರಯ ಕಲ್ಪಿಸಿದ ವೈಟ್‌ಡೌಸ್ ಸಂಸ್ಥೆಯೇ ಈಗ ಮರಳಿ ಮನೆಗೆ ಹೋಗಲು ದಾರಿ ತೋರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:41 pm, Mon, 16 December 24