AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್-ಬಿಜೆಪಿ ಮಧ್ಯೆ KSRTC ಬಸ್ ಕ್ರೆಡಿಟ್ ವಾರ್: ಒಂದೇ ಬಸ್ಸಿಗೆ ಮೂರು ಕಡೆ ಭರ್ಜರಿ ಸ್ವಾಗತ

ದಕ್ಷಿಣ ಕನ್ನಡದ ಮಂಗಳೂರಿನಿಂದ ಮೂಡಬಿದ್ರೆ, ಕಾರ್ಕಳ ಮಾರ್ಗಕ್ಕೆ ದಶಕಗಳ ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈ ಸಾಧನೆಯ ಕ್ರೆಡಿಟ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಜನರಿಗೆ ಬಸ್ ಸೌಲಭ್ಯ ದೊರೆತಿದ್ದರೂ, ರಾಜಕೀಯ ಕಚ್ಚಾಟ ಮುಂದುವರಿದಿದೆ. ಆದರೆ ಬಸ್​ ಬಂದಿದ್ದರಿಂದ ಪ್ರಯಾಣಿಕರು ಸಂತೋಷಗೊಂಡಿದ್ದಾರೆ.

ಕಾಂಗ್ರೆಸ್-ಬಿಜೆಪಿ ಮಧ್ಯೆ KSRTC ಬಸ್ ಕ್ರೆಡಿಟ್ ವಾರ್: ಒಂದೇ ಬಸ್ಸಿಗೆ ಮೂರು ಕಡೆ ಭರ್ಜರಿ ಸ್ವಾಗತ
ಕಾಂಗ್ರೆಸ್-ಬಿಜೆಪಿ ಮಧ್ಯೆ KSRTC ಬಸ್ ಕ್ರೆಡಿಟ್ ವಾರ್: ಒಂದೇ ಬಸ್ಸಿಗೆ ಮೂರು ಕಡೆ ಭರ್ಜರಿ ಸ್ವಾಗತ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Dec 14, 2024 | 10:07 PM

Share

ಮಂಗಳೂರು, ಡಿಸೆಂಬರ್​ 14: ಸರ್ಕಾರಿ ಬಸ್​ಗಳ ಓಡಾಟವೇ ಇಲ್ಲದ ದಕ್ಷಿಣ ಕನ್ನಡ ಜಿಲ್ಲೆಯ ಆ ಮಾರ್ಗದಲ್ಲಿ ಕೊನೆಗೂ ದಶಕದ ಹೋರಾಟದ ಬಳಿಕ ಕೆಎಸ್​​ಆರ್​ಟಿಸಿ ಬಸ್​​ (KSRTC bus) ಸಂಚಾರ ಆರಂಭವಾಗಿದೆ. ಆದರೆ ಬಸ್ ಬಂದಿದ್ದೆ ತಡ ಇದೀಗ ರಾಜಕೀಯ ಕಚ್ಚಾಟ ಶುರುವಾಗಿದೆ. ಬಸ್​ ತಂದಿದ್ದು ನಾವು ಎಂದು ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ಕ್ರೆಡಿಟ್ ವಾರ್​ ಶುರು ಮಾಡಿಕೊಂಡಿದ್ದಾರೆ.

ರಾಜಕೀಯ ನಾಯಕರ ನಡುವೆ ಕ್ರೆಡಿಟ್‌ ವಾರ್‌

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಮೂಡಬಿದ್ರೆ, ಕಾರ್ಕಳ ಮಾರ್ಗಗೆ ಈವರೆಗೂ ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆಯಿರಲಿಲ್ಲ. ಇಲ್ಲಿನ ಖಾಸಗಿ ಬಸ್​​ಗಳ ದರ್ಬಾರು ಹಾಗೂ ಹಲವು ಅಡೆತಡೆಗಳಿಂದಾಗಿ ಕೆಎಸ್​ಆರ್​ಟಿಸಿ ಬಸ್​ ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಆದರೆ ಬಸ್ ವ್ಯವಸ್ಥೆ ಮಾಡುವಂತೆ ದಶಕಗಳಿಂದ ಹೋರಾಟ ನಡೆದಿತ್ತು. ಕೊನೆಗೂ ಜನರ ಬೇಡಿಕೆಗೆ ಮಣಿದ ಆಡಳಿತ ವ್ಯವಸ್ಥೆ ಈ ಮಾರ್ಗಕ್ಕೆ ಬಸ್​ ಪರ್ಮಿಟ್ ಮಂಜೂರು ಮಾಡಿದೆ. ಆದರೆ ಇದರ ಬೆನ್ನಲ್ಲೆ ರಾಜಕೀಯ ನಾಯಕರ ನಡುವೆ ಕ್ರೆಡಿಟ್‌ ವಾರ್‌ ಕೂಡ ಶುರುವಾಗಿದೆ. ಕೆಎಸ್​ಆರ್​ಟಿಸಿ ಬಸ್ ಭಾಗ್ಯ ಬಂದಿದ್ದು ನಮ್ಮಿಂದ, ಬಸ್​ ತರಿಸಿದ್ದು ನಾವು. ಇದು ನಮ್ಮ ಸಾಧನೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಮಾತಿನ ಯುದ್ದ ಶುರು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನ: ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಉದ್ಘಾಟನೆಗೆ ಸಜ್ಜು, ಕಾಮಗಾರಿಯೇ ಮುಗಿದಿಲ್ಲ!

ಈ ಕ್ರೆಡಿಟ್‌ ವಾರ್‌‌ಗೆ ಸಾಕ್ಷಿ ಎಂಬಂತೆ ಮಂಗಳೂರಿನಿಂದ ಕಾರ್ಕಳಕ್ಕೆ ಸಂಚಾರ ಆರಂಭಿಸಿದ್ದ ಕೆಎಸ್​ಆರ್​ಟಿಸಿ ಬಸ್​​ಗೆ ಮೂರು ಕಡೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮೂಡುಬಿದಿರೆ ಜಂಕ್ಷನ್‌ ಹಾಗೂ ಮಂಗಳೂರಿನ ಮಲ್ಲಿಕಟ್ಟೆ ಸಮೀಪ ಕಾಂಗ್ರೆಸ್​​ ಪಡೆ ಹಸಿರು ನಿಶಾನೆ ತೋರಿಸಿ ರೈಟ್‌ ರೈಟ್‌ ಅಂದರೆ, ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಬಿಜೆಪಿ ಪಡೆ ಬಸ್‌‌ಗೆ ಹಸಿರು ನಿಶಾನೆ ತೋರಿಸಿದೆ.

ಯಾರದ್ದೊ ಮಗುವಿಗೆ ಅಪ್ಪನಾಗುವುದು ಬೇಡ: ಶಾಸಕ ಉಮಾನಾಥ್‌ ಕೋಟ್ಯಾನ್‌

ಈ ನಡುವೆ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌ ಹಾಗೂ ಮೂಲ್ಕಿ ಮೂಡಬಿದಿರೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಶ್‌ ಶೆಟ್ಟಿ ನಡುವೆ ಕ್ರೆಡಿಟ್‌ ವಾರ್‌ ನಡೆದಿದೆ. ಕಾಂಗ್ರೆಸ್​ ಮುಖಂಡರು ಶಕ್ತಿ ಯೋಜನೆಯಡಿಯಲ್ಲಿ ಬಸ್​​ ಮಂಜೂರಾಗಿದೆ. ಇದು ನಮ್ಮ ಸಾಧನೆ ಅಂದರೆ, ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌ ಇದಕ್ಕಾಗಿ ಸರಕಾರಕ್ಕೆ ಒತ್ತಡ ಹಾಕಿದ್ದು ನಾನು, ಯಾರದ್ದೊ ಮಗುವಿಗೆ ಅಪ್ಪನಾಗುವುದು ಬೇಡ ಎಂದು ಕಾಂಗ್ರೆಸ್​ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

ರಾಜಕೀಯ ನಾಯಕರ ಕಚ್ಚಾಟ ಒಂದು ಕಡೆಯಾದರೆ, ಶಕ್ತಿ ಯೋಜನೆಯಿಂದ ವಂಚಿತರಾಗಿದ್ದ ಮಹಿಳೆಯರು ವಿದ್ಯಾರ್ಥಿನಿಯರು ಫುಲ್‌ ಖುಷ್‌ ಆಗಿದ್ದಾರೆ. ಇದೆ ರೀತಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಬಸ್ಸುಗಳ ಸಂಚಾರ ಮಂಗಳೂರು ಕಾರ್ಕಳ ಮಾರ್ಗದಲ್ಲಾಗಲಿ ಎಂದು ವಿದ್ಯಾರ್ಥಿನಿ ಶಿಲ್ಪ ಹೇಳುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು ಸಿಂಗಾಪುರ ಮಧ್ಯೆ ಜನವರಿ 21ರಿಂದ ನೇರ ವಿಮಾನ ಸಂಚಾರ: ಇಲ್ಲಿದೆ ವೇಳಾಪಟ್ಟಿ

ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ 8 ಬಸ್​ಗಳು ಏಳು ಸಿಂಗಲ್‌ ಟ್ರಿಪ್‌ಗೆ ಕೆಎಸ್‌ಆರ್‌ಟಿಸಿ 2014ರಲ್ಲಿಯೇ ಅರ್ಜಿ ಸಲ್ಲಿಸಿತ್ತು. ಆದರೆ ಆ ಸಂದರ್ಭದಲ್ಲೇ ಈ ಬಗ್ಗೆ ಯಾರು ಸಹ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಇದೀಗ ಬಸ್ ಓಡಾಟಕ್ಕೆ ಪರ್ಮೀಟ್ ಮಂಜುರಾಗುತ್ತಿದ್ದಂತೆ ನಾವು ಮಾಡಿದ್ದು, ನಾವು ಮಾಡಿದ್ದು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಯಾರ ಫಲದಿಂದಾರೂ ಸರಿ ಬಸ್ ಓಡಾಟ ಆರಂಭವಾಯಿತು ಎಂಬುದಷ್ಟೇ ಪ್ರಯಾಣಿಕರಿಗೆ ಸಂತಸದ ವಿಷಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.