ನೇತ್ರದಾನಕ್ಕೆ ನೋಂದಾಯಿಸಿ ಅಪ್ಪು ಭಾವಚಿತ್ರದೊಂದಿಗೆ ರಾಹುಲ್ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಯುವಕ-ಯುವತಿಯರು
ನಟ ಪುನೀತ್ ರಾಜ್ಕುಮಾರ್ ಸಾವಿನಲ್ಲೂ ಹಲವರ ಕಣ್ಣಿಗೆ ಬೆಳಕಾಗಿ ಸಾರ್ಥಕತೆ ಮೆರೆದರು. ಅವರು ನೇತ್ರದಾನ ಮಾಡಿದ್ದು ರಾಜ್ಯಾದ್ಯಂತ ಅಸಂಖ್ಯಾತ ಅಭಿಮಾನಿಗಳಿಗೆ ಪ್ರೇರಣೆ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾಗಿ ವರ್ಷವಾಗುತ್ತಾ ಬಂತು. ಆದರೂ ಅಭಿಮಾನಿಗಳ ಮನದಲ್ಲಿ ಅಪ್ಪು ನೆನಪು ಇನ್ನೂ ಹಸಿರಾಗಿಯೇ ಉಳಿದಿದೆ. ಇದಕ್ಕೆ ಪೂರಕವೆಂಬಂತೆ ಜಾತ್ರೆ, ಯಾತ್ರೆ, ಸಭೆ, ಸಮಾರಂಭಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತಿವೆ. ಇದೀಗ ಭಾರತ್ ಜೋಡೋ ಯಾತ್ರೆಯಲ್ಲೂ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗಿದೆ.
ಹೌದು.. ಪುನೀತ್ ರಾಜ್ ಕುಮಾರ್ ಅವರ ಉತ್ತೇಜನದಿಂದ ಅನೇಕರು ಅಂಗಾಗ ದಾನಕ್ಕೆ ಮುಂದಾಗಿದ್ದಾರೆ. 33 ಯುವಕ-ಯುವತಿಯರು ನೇತ್ರದಾನ ನೋಂದಣಿ ಮಾಡಿಸಿದ್ದಾರೆ. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನೇತ್ರದಾನ ನೋಂದಾಣಿ ಮಾಡಿಸಿ ಪ್ರಮಾಣ ಪತ್ರಪಡೆದುಕೊಂಡಿದ್ದಾರೆ. ನೇತ್ರದಾನ ಮಾಡಿ ಎಂದು ಹೇಳುತ್ತ ಪುನೀತ್ ಭಾವಚಿತ್ರ ಹಿಡಿದು ರಾಹುಲ್ ಗಾಂಧಿ ಅವರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡಿರುವುದು ವಿಶೇಷವಾಗಿದೆ.
ನೇತ್ರದಾನ ನೋಂದಾಣಿ ಮಾಡಿಸಿದ ಮೂಲಕ ಮತ್ತಷ್ಟು ಜನರಿಗೆ ನೇತ್ರದಾನ ಮತ್ತು ಅಂಗಾಗ ದಾನಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ನೇತ್ರದಾನಿಗಳು ರಾಹುಲ್ ಗಾಂಧಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದನ್ನು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
33 Bharat Yatris inspired by late Puneeth Rajkumar have pledged their eyes to the JSS hospital in Mysuru. They received the certificates today from the hospital. Here they are with @RahulGandhi this afternoon. pic.twitter.com/9JG1iMieD0
— Jairam Ramesh (@Jairam_Ramesh) October 12, 2022
ನಟ ಪುನೀತ್ ರಾಜ್ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದು ನೇತ್ರದಾನ ಮಾಡಿದ್ದರು. ಅವರಿಂದಾಗಿ ನಾಲ್ವರಿಗೆ ದೃಷ್ಟಿ ಬಂದಿತ್ತು. ಪುನೀತ್ ನಡೆ ರಾಜ್ಯದಲ್ಲಿ ಬಹುದೊಡ್ಡ ಪ್ರಭಾವ ಬೀರಿದ್ದು, ಹಲವರು ನೇತ್ರದಾನಕ್ಕೆ ನೋಂದಣಿ ಮಾಡುತ್ತಿದ್ದಾರೆ. ಕೇವಲ ಪುನೀತ್ ಅಭಿಮಾನಿಗಳಲ್ಲದೇ ಇತರರೂ ನೇತ್ರದಾನವನ್ನು ಮಾಡಲು ನೋಂದಣಿ ಮಾಡಿಕೊಳ್ಳುತ್ತಿದ್ದು, ದಾಖಲೆಯ ಮಟ್ಟದಲ್ಲಿ ರಾಜ್ಯದಲ್ಲಿ ನೇತ್ರದಾನದ ಪ್ರಮಾಣ ಹೆಚ್ಚಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ