ಕಬಾಬ್ ತರಲು ಹೋದ ಯುವಕ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮೈಲಾಪುರ ಗ್ರಾಮದ ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಸದ್ಯ ಯುವಕನ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 30: ಕಬಾಬ್ ತರಲು ಮನೆಯಿಂದ ಹೋದ ಯುವಕ (boy) ಶವವಾಗಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ನಾರಾಯಣಪುರ ಗ್ರಾಮದ ನಿವಾಸಿ ವಿನಾಯಕ (23) ಮೃತ ಯುವಕ. ಮೈಲಾಪುರ ಗ್ರಾಮದ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದೆ.
ಕೃಷಿ ಹೊಂಡದ ಬಳಿ ಮೊಬೈಲ್, ಬೈಕ್, ಚಪ್ಪಲಿ ಪತ್ತೆ ಆಗಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಯುವಕನ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
ಆಟೋಗೆ ಬೈಕ್ ಡಿಕ್ಕಿ: ಸವಾರ ಸಾವು
ಮತ್ತೊಂದು ಪ್ರಕರಣದಲ್ಲಿ ನಂದಿಗಿರಿಧಾಮದ ಬಳಿ ಆಟೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕೇರಳ ಮೂಲದ ಕಿರಣ್ (24) ಮೃತ ಬೈಕ್ ಸವಾರ. ಹಿಂಬದಿ ಸವಾರ ಆನಂದ್ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರರ ಶವ ಪತ್ತೆ
ಗದಗ: ನರಗುಂದ ತಾಲೂಕಿನ ಹುಣಸಿಕಟ್ಟಿ ಬಳಿ ಒಡ್ಡಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಬೈಕ್ ಸವಾರರ ಶವ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಣಿಕಠ ಮಲ್ಲಾಪುರ(26) ಮತ್ತು ಶಿವಪ್ಪ ಅವರಾದಿ(25) ಶವ ಪತ್ತೆ ಆಗಿದೆ.
ಮಣಿಕಠನ ಪತ್ನಿಯನ್ನ ಕರೆತರಲು ನರಗುಂದಕ್ಕೆ ತೆರಳುವಾಗ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಶವಪತ್ತೆ
ರಾಮನಗರ: ಚನ್ನಪಟ್ಟಣದ ಪಿಟಿಎಸ್ ಮೈದಾನ ಸಮೀಪದ ರೈಲ್ವೆಹಳಿ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಶವಪತ್ತೆ ಆಗಿದೆ. ಆನೆ ಓಡಿಸುವ ತಂಡದಲ್ಲಿದ್ದ ರಾಕೇಶ್(24) ಮೃತ ವ್ಯಕ್ತಿ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.