ಬಂಡಾಯ ಮನಸಿನ ಯತ್ನಾಳರ ಈಗಿನ ಯತ್ನ.. ಯಾರ ವಿರುದ್ಧ, ಉದ್ದೇಶ ಏನು? ವಿವರವಾಗಿದೆ ಓದಿ
ವರ್ಣರಂಜಿತ ರಾಜಕಾರಣಿ, ಮೊನಚು ಮಾತಿನ ಮೋಡಿಗಾರ, ಮುಸ್ಲಿಂ ವಿರೋಧಿ, ಕಟ್ಟರ್ ಹಿಂದೂ ಎಂಬೆಲ್ಲಾ ಬಿರುದುಬಾವಲಿಗೆ ಪಾತ್ರವಾದ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ನಗರದ ಹಾಲಿ ಬಿಜೆಪಿ ಶಾಸಕ. ಶಾಸಕ ಯತ್ನಾಳ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮುಖಮೂತಿ ನೋಡದೇ, ಮನಸ್ಸಿಗೆ ಬಂದಂತೆ ಮಾತನಾಡಿ, ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಯತ್ನಾಳ್ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಅಗ್ರ. ಅದು 1990 ರ ಸಮಯ.. ವಿಜಯಪುರ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿಯಾಗಿ ರಾಜಕೀಯದಲ್ಲಿ ಗುರುತಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್ 1994 ರಲ್ಲಿ […]
ವರ್ಣರಂಜಿತ ರಾಜಕಾರಣಿ, ಮೊನಚು ಮಾತಿನ ಮೋಡಿಗಾರ, ಮುಸ್ಲಿಂ ವಿರೋಧಿ, ಕಟ್ಟರ್ ಹಿಂದೂ ಎಂಬೆಲ್ಲಾ ಬಿರುದುಬಾವಲಿಗೆ ಪಾತ್ರವಾದ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ನಗರದ ಹಾಲಿ ಬಿಜೆಪಿ ಶಾಸಕ. ಶಾಸಕ ಯತ್ನಾಳ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮುಖಮೂತಿ ನೋಡದೇ, ಮನಸ್ಸಿಗೆ ಬಂದಂತೆ ಮಾತನಾಡಿ, ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಯತ್ನಾಳ್ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಅಗ್ರ.
ಅದು 1990 ರ ಸಮಯ.. ವಿಜಯಪುರ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿಯಾಗಿ ರಾಜಕೀಯದಲ್ಲಿ ಗುರುತಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್ 1994 ರಲ್ಲಿ ವಿಧಾನಸೌಧದ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತುತ್ತಾರೆ.
ಎಲ್ಲಾ ಕಾಲದ ಮಹಿಮೆ! ಹೇಗೆ ಅಂತೀರಾ.. ಬಳಿಕ ಅವರ ರಾಜಕೀಯ ಪ್ರಯಾಣ ದೆಹಲಿಯತ್ತ ಸಾಗುತ್ತದೆ. ನಂತರ ಎರಡು ಬಾರಿ ಸಂಸತ್ ಪ್ರವೇಶ ಮಾಡುತ್ತಾರೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಜುಲೈ 2002 ರಿಂದ ಸಪ್ಟೆಂಬರ್ 2003 ರವರೆಗೆ ಕೇಂದ್ರ ಸರ್ಕಾರದಲ್ಲಿ ಜವಳಿ ಖಾತೆ ರಾಜ್ಯ ಸಚಿವರಾಗಿ ಸೇವೆ ಮಾಡಿದ್ದಾರೆ. ನಂತರ ಸಪ್ಟೆಂಬರ್ 2003 ರಿಂದ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ.
ಇದಾದ ಬಳಿಕ ರಾಜ್ಯ ರಾಜಕಾರಣಕ್ಕೆ ಮರಳಿದ ಯತ್ನಾಳ್ ಸಿಹಿಗಿಂತ ಕಹಿಯನ್ನೇ ಉಂಡಿದ್ದಾರೆ. 2008 ರ ವಿಧಾನಸಭಾ ಚುನಾವಣೆಗೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದ ಬಿಜೆಪಿ ಹಿರಿಯಾಳಾಗಿ ಸ್ಪರ್ಧಿಸಿ, ಸೋಲುತ್ತಾರೆ. ಕೈ ಪಕ್ಷದ ಎ ಎಸ್ ಪಾಟೀಲ್ ನಡಹಳ್ಳಿ ಎದುರು ಸೋಲುತ್ತಾರೆ.
ಸದ್ಯ ಅದೇ ನಡಹಳ್ಳಿ ಬಿಜೆಪಿಯಲ್ಲಿ ಶಾಸಕರಾಗಿರೋದು ಕಾಲದ ಮಹಿಮೆ! ಆ ಸೋಲು ಯತ್ನಾಳ್ ಪಾಲಿಗೆ ನೋವಿನ ಹಾದಿಯನ್ನೇ ನಿರ್ಮಿಸಿಬಿಡುತ್ತದೆ. ಆಗ ಸಿಎಂ ಆಗಿದ್ದ ಯಡಿಯೂರಪ್ಪರ ಜೊತೆಗೆ ವೈಷಮ್ಯ ಬೆಳೆಯುತ್ತದೆ. ಸಿಎಂ ಬಿಎಸ್ವೈ ವಿರುದ್ಧವಾಗಿ ಹೇಳಿಕೆ ನೀಡಿದ್ದಕ್ಕೆ ಹಾಗೂ ಪಕ್ಷದ ಚೌಕಟ್ಟು ಮೀರಿ ಮಾತನಾಡಿದ ಕಾರಣ ಅವರಿಗೆ ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಉಡುಗೊರೆ ಸಿಗುತ್ತದೆ.
ಕಮಲ ಬಿಟ್ಟು ತೆನೆ ಹೊತ್ತ ಮಹಿಳೆ ಜೊತೆಗೆ ಹೆಜ್ಜೆ ಹಾಕಿದ ಯತ್ನಾಳ್ ಇಷ್ಟರಲ್ಲಿಯೇ ಜೆಡಿಎಸ್ ಪಕ್ಷದ ಬಾಗಿಲಲ್ಲಿ ರೆಡ್ ಕಾರ್ಪೆಟ್ ಹಾಸಿ ಯತ್ನಾಳ್ ಸ್ವಾಗತಕ್ಕೆ ಕರೆ ಬರುತ್ತದೆ. ಆಗ ಕಮಲ ಬಿಟ್ಟು ತೆನೆ ಹೊತ್ತ ಮಹಿಳೆ ಜೊತೆಗೆ ಹೆಜ್ಜೆ ಹಾಕುತ್ತಾರೆ ಯತ್ನಾಳ್. 2013 ರ ವಿಧಾನಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಡಾ ಮಕ್ಬೂಲ್ ಭಗವಾನ್ ಎದುರು ಸೋಲುತ್ತಾರೆ. ಇದು ಮೊನಚು ಮಾತುಗಾರ ಯತ್ನಾಳ್ ಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ನಂತರ ಗುರು ಬಲವೋ ಏನೋ 2014 ರ ಲೋಕಸಭಾ ಚುನಾವಣೆ ಸಮಯ. ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಪ್ರಧಾನಿ ಹುರಿಯಾಳಾಗಿದ್ದ ಮೋದಿ ಅವರಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಹಠ ಇತ್ತು. ಆ ಕಾರಣದಿಂದ ಒಂದೊಂದು ಲೋಕಸಭಾ ಕ್ಷೇತ್ರವೂ ಮಹತ್ವ ಪಡೆದುಕೊಂಡಿದ್ದವು. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕಿತ್ತು. ಆಗಲೇ ತುಸು ಸೋಲುವ ಭಯದಲ್ಲಿದ್ದ ಹಾಲಿ ಸಂಸದ ರಮೇಶ ಜಿಗಜಿಣಗಿಯನ್ನು ಗೆಲ್ಲಿಸಲು ಪ್ರಬಲ ಸಮುದಾಯದ ಮತಗಳು ಅವಶ್ಯಕವಾಗಿದ್ದವು. ಲಿಂಗಾಯತ ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ್ ಯತ್ನಾಳ್ ಅವಶ್ಯಕತೆ ಅಲ್ಲಿ ಕಂಡು ಬಂದಿತ್ತು.
ಕೇಂದ್ರ ನಾಯಕರಿಗೆ ಅನಿವಾರ್ಯವಾಗಿತ್ತು.. ಮಾತೃ ಪಕ್ಷಕ್ಕೆ ಮರಳಿದ ಯತ್ನಾಳ್ ಕೇಂದ್ರ ಬಿಜೆಪಿ ನಾಯಕರಿಗೆ ಯತ್ನಾಳ್ ಮರು ಆಗಮನ ಅನಿವಾರ್ಯವಾಗಿತ್ತು. ಕೇಂದ್ರದ ನಾಯಕರ ಸಲಹೆ ಮೇರೆಗೆ ಯತ್ನಾಳ್ 2014 ರ ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ತವರು ಪಕ್ಷವು ಅವರಿಗೆ ಬಾಗಿಲು ತೆರೆಯಿತು. ಮಾತೃ ಪಕ್ಷಕ್ಕೆ ಮರಳಿ ಬಂದ ಯತ್ನಾಳ್, ಹಾಲಿ ಸಂಸದ ರಮೇಶ ಜಿಗಜಿಣಗಿಯನ್ನು ಜಿಲ್ಲೆಯಿಂದ ಎರಡನೇ ಬಾರಿಗೆ ಗೆಲ್ಲಲು ಕೊಡುಗೆ ನೀಡುತ್ತಾರೆ.
ನಂತರ ಮುಂದಿನ ವರ್ಷವೇ ಮತ್ತೆ ಯತ್ನಾಳ್ ಗೆ ಸಿಹಿ-ಕಹಿ ನೀಡಿದ ವರ್ಷ 2015. ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕ್ಷೇತ್ರದ ಚುನಾವಣೆ ಮತ್ತೆ ಯತ್ನಾಳ್ ಪಾಲಿಗೆ ಬಿಸಿ ತುಪ್ಪವಾಗುತ್ತದೆ. ಕಾರಣ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುವ ಆಸೆ ಹೊಂದಿದ್ದ ಯತ್ನಾಳ್ ಗೆ ಟಿಕೆಟ್ ನೀಡದೇ ಜಿ ಎಸ್ ನ್ಯಾಮಗೌಡ ಅವರಿಗೆ ಟಿಕೆಟ್ ನೀಡುತ್ತಾರೆ. ಇದನ್ನು ಬಹಿರಂಗವಾಗಿ ಪ್ರಶ್ನಿಸಿ ಮತ್ತೇ ಪಕ್ಷದ ವಿರುದ್ಧ ಯತ್ನಾಳ್ ತೊಡೆ ತಟ್ಟುತ್ತಾರೆ.
ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಾಮಪತ್ರ ಸಲ್ಲಿಸುತ್ತಾರೆ. ಇದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಸಿಟ್ಟು ತರಿಸುತ್ತದೆ. ಆಗ ಮತ್ತೇ ಯತ್ನಾಳ್ ರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡುತ್ತದೆ. ನಂತರ ನಡೆದ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಅವಶ್ಯ ಮತಗಳ ಮೂಲಕ ಯತ್ನಾಳ್ ಗೆದ್ದು ವಿಧಾನ ಪರಿಷತ್ ಪ್ರವೇಶ ಮಾಡುತ್ತಾರೆ. ಈ ಗೆಲುವಿನಲ್ಲಿ ವಿಜಯಪುರ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರ ಪಾತ್ರ ಮುಖ್ಯವಾಗಿರುತ್ತದೆ.
BSY ಬಗ್ಗೆ ಯತ್ನಾಳ್ ಅಭಿಪ್ರಾಯ ಸರಿಯಿತ್ತು, ನಿಜವಾಯ್ತು. . ಇಷ್ಟರ ಮಧ್ಯೆ ಎಲ್ಲಾ ಪಕ್ಷಗಳು ಮುಂದಿನ 2018 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂದು ತಂತ್ರಗಳನ್ನು ಹೆಣೆಯಲು ಆರಂಭಿಸಿದ್ದವು. ಆಗ ಆಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತೇ ಆಧಿಕಾರ ಪಡೆಯುವ ಯೋಜನೆ ಹಾಕಿಕೊಳ್ಳುತ್ತಿತ್ತು. ಬಿಜೆಪಿ ಆಧಿಕಾರ ಹಿಡಿಯೋ ಪ್ಲ್ಯಾನ್ ಮಾಡುತ್ತಿತ್ತು. ಇಬ್ಬರ ನಡುವೆ ನಾವು ಆಧಿಕಾರ ಹಿಡಿಯೋದು ಹೇಗೆ ಎಂದು ಜೆಡಿಎಸ್ ಕನಸು ಕಾಣುತ್ತಿತ್ತು.
ಇದೇ ವೇಳೆ ಯತ್ನಾಳ್ ಬಿಜೆಪಿಯಿಂದ ದೂರ ಹೋಗಿ, ಕೆಜೆಪಿ ಕಟ್ಟಿದ್ದ ಯಡಿಯೂರಪ್ಪನನ್ನು ವಾಪಸ್ ಬಿಜೆಪಿಗೆ ಕರೆ ತರಬೇಕು. ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕೆಂದು ಹೇಳಿಕೆ ನೀಡಿ ಯಡಿಯೂರಪ್ಪ ಪರ ನಿಂತಿದ್ದರು. ಯತ್ನಾಳ್ ಹೇಳಿಕೆಯ ಮಾತು ನಿಜವಾಗಿತ್ತು. ಬಿಜೆಪಿಗೆ ಯಡಿಯೂರಪ್ಪರನ್ನು ವಾಪಸ್ ಕರೆ ತಂದು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಸಿಎಂ ಕ್ಯಾಂಡಿಡೇಟ್ ಎಂದು ಘೋಷಣೆಯೂ ಮಾಡಿದ್ದರು.
ಯಾವಾಗ 2018 ರಲ್ಲಿ ವಿಧಾನ ಸಭಾ ಚುನಾವಣೆ ಬಂದವೋ ಆಗ ಆಧಿಕಾರದಲ್ಲಿದ್ದ ಕಾಂಗ್ರೆಸ್ ನ್ನು ಸೋಲಿಸಬೇಕು. ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಕಮಲ ಪಡೆಯ ನಾಯಕರ ದೂರದೃಷ್ಟಿ ಮತ್ತೇ ಯತ್ನಾಳ್ ರನ್ನು ವಾಪಸ್ ಪಕ್ಷಕ್ಕೆ ಕರೆ ತರುತ್ತದೆ. ಮೋದಿ ಹಾಗೂ ಅಮಿತ್ ಶಾ ಅವರ ಆಣತಿಯಂತೆ ಯತ್ನಾಳ್ ಮರಳಿ ಪಕ್ಷಕ್ಕೆ ವಾಪಸ್ ಆಗುತ್ತಾರೆ. ಜೊತೆಗೆ ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್ ನ ಹಮೀದ್ ಮುಶ್ರೀಫ್ ಗೆ ಸೋಲುಣಿಸಿ ಗೆದ್ದು ಬೀಗುತ್ತಾರೆ.
ಕುಖ್ಯಾತಿಯ ಜೊತೆಗೆ ದೊಡ್ಡ ಮಟ್ಟದ ಖ್ಯಾತಿಯನ್ನೂ ತಂದುಕೊಟ್ಟಿತು ಗೆದ್ದ ಖುಷಿಯಲ್ಲಿದ್ದ ಯತ್ನಾಳ್ ಕಟ್ಟರ್ ಹಿಂದೂ ಶಾಸಕರಾಗಿ ಗುರುತಿಸಿಕೊಳ್ಳುತ್ತಾರೆ. ಟೋಪಿ ಹಾಗೂ ಬುರ್ಕಾದವರು ನನ್ನ ಹಿಂದೆ ಬರಬೇಡಿ. ನಿಮ್ಮ ಕೆಲಸ ನಾನು ಮಾಡಲ್ಲಾ ಎಂದು ವಿವಾದದ ಮಾತನ್ನಾಡಿ.. ತೀವ್ರ ಚರ್ಚೆಗೆ ಗ್ರಾಸವಾಗುತ್ತಾರೆ. ಇವರ ಖಟ್ಟರ್ ಹಿಂದೂತನ ಕುಖ್ಯಾತಿಯ ಜೊತೆಗೆ ದೊಡ್ಡ ಮಟ್ಟದ ಖ್ಯಾತಿಯನ್ನೂ ತಂದು ಕೊಡುತ್ತದೆ.
ಕಾಂಗ್ರೆಸ್ ಅನ್ನು ಸೋಲಿಸಿ ಆಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೆಲ ದಿನಗಳ ಕಾಲ ಕೆಳಗಿಳಿಯಬೇಕಾಗುತ್ತದೆ. ನಂತರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಧಿಕಾರ ನಡೆಸಿ ಅಪಮೈತ್ರಿಯಾಗಿದ್ದು ಆಪರೇಷನ್ ಕಮಲದ ಮೂಲಕ ಮತ್ತೇ ಬಿಜೆಪಿ ಆಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿ. ಯಾವಾಗ ಯಡಿಯೂರಪ್ಪ ಸಿಎಂ ಆದರೋ ಆಗ ಸಚಿವರಾಗುವ ಕನಸು ಕಂಡಿದ್ದ ಯತ್ನಾಳ್ ಅವರ ಕನಸು ನನಸಾಗೊಲ್ಲಾ. ಬೇಗುದಿಯನ್ನು ಮುಚ್ಚಿಕೊಂಡು ಹೋಗುತ್ತಿದ್ದ ಯತ್ನಾಳ್ ಅವರಿಗೆ ಸಿಎಂ ಗಾದಿಯಲ್ಲಿದ್ದ ಯಡಿಯೂರಪ್ಪರ ನಿರ್ಲಕ್ಷ್ಯವೂ ಆಘಾತವನ್ನು ಉಂಟು ಮಾಡಿತ್ತು.
ಆದರೂ ಯಡಿಯೂರಪ್ಪ ನಮ್ಮ ನಾಯಕರೇ ಎಂದು ಯತ್ನಾಳ್ ಹೇಳಿಕೊಂಡು ಓಡಾಡುತ್ತಿದ್ದರು. ಬಟ್ ಸಿಎಂ ಅವರ ನಿರ್ಲಕ್ಷ್ಯ ಯತ್ನಾಳರನ್ನು ಮತ್ತಷ್ಟು ಕಂಗೆಡಿಸಿತು. ಯಡಿಯೂರಪ್ಪರ ಪರವಾಗಿ ಮೊದಲು ನಿಂತಿದ್ದೇ ನಾನು. ಈಗಾ ನನ್ನನ್ನೇ ದೂರ ಮಾಡಿದ್ರಲ್ಲಾ ಸಿಎಂ ಎಂದು ಕೋಪ ಮನಸ್ಸಿನಲ್ಲಿ ಕುದಿಯುತ್ತಿತ್ತು.
ಇದೇ ಸಮಯಕ್ಕೆ 2019 ರಲ್ಲಿ ಪ್ರವಾಹ ಬಂದು ಇಡೀ ರಾಜ್ಯ ಕೊಚ್ಚಿ ಹೋಗುತ್ತದೆ. ಆಗ ಪ್ರಧಾನಿ ಮೋದಿ ಅವರು ನಮ್ಮ ರಾಜ್ಯಕ್ಕೆ ಹಣ ನೀಡುತ್ತಿಲ್ಲ, ನಮ್ಮ ರಾಜ್ಯಕ್ಕೆ ಹಣ ನೀಡಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾರೆ. ಈ ಹೇಳಿಕೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೇಂದ್ರ ನಾಯಕರ ಕಣ್ಣು ಕೆಂಪಗಾಗಿಸಿತ್ತು.
ನಂತರ ದಿನದಿಂದ ದಿನಕ್ಕೆ ಯತ್ನಾಳ್ ಸಿಎಂ ಅವರ ನಿರ್ಲಕ್ಷ್ಯಕ್ಕೆ ಈಡಾಗುತ್ತಾರೆ. ಕೊರೊನಾ ಕಾಲದಲ್ಲಿ ಸಿಎಂ ಅವರ ಪುತ್ರ ವಿಜಯೇಂದ್ರ ಸೂಪರ್ ಸಿಎಂ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಯತ್ನಾಳ್ ಮಾಡುತ್ತಾರೆ. ಇದೇ ಕೊರೊನಾ ಕಾಲದಲ್ಲಿ ನಗರದ ಅಭಿವೃದ್ದಿಗೆ ಹಿಂದಿನ ಕುಮಾರಸ್ವಾಮಿ ಸರ್ಕಾರ ನೀಡಿದ್ದ ಅನುದಾನವನ್ನು ಯಡಿಯೂರಪ್ಪ ವಾಪಸ್ ಪಡೆದುಕೊಂಡಿದ್ದು ಯತ್ನಾಳ್ ರನ್ನು ಮತ್ತಷ್ಟು ಕೋಪಗೊಳ್ಳುವಂತೆ ಮಾಡುತ್ತದೆ.
ಮತ್ತೆ ಯಡಿಯೂರಪ್ಪರಿಂದ ದೂರವಾದ ಯತ್ನಾಳ್ ಇಷ್ಟರ ಮಧ್ಯೆ ಸಿಎಂ ಬದಲಾವಣೆ ಮಾತು ಹಾಗೂ ಸಚಿವ ಸ್ಥಾನ ಸಿಗದೇ ಇರುವವರ ಬೇಗುದಿ ಜೋರಾಗಿರುತ್ತದೆ. ಬೆಂಗಳೂರಿನಲ್ಲಿನ ಉಮೇಶ ಕತ್ತಿ ಅವರ ಮನೆಗೆ ಊಟಕ್ಕೆ ಹೋಗಿದ್ದ ನೆಪದಲ್ಲಿ ಯಡಿಯೂರಪ್ಪ ವಿರುದ್ದ ಸಮರ ಸಾರಲು ಟೀಂ ರೆಡಿ ಮಾಡುತ್ತಾರೆ. ಮಾರನೇ ದಿನವೇ ಯತ್ನಾಳ್ ಹಾಗೂ ಕತ್ತಿ ಅವರಿಗೆ ಸಿಎಂ ಭೇಟಿಯಾಗಿ ಬೇಗುದಿಯನ್ನು ಶಮನ ಮಾಡುತ್ತಾರೆ. ಇಷ್ಟರ ಮಧ್ಯೆ ಬಸನಗೌಡ ಪಾಟೀಲ್ ಯತ್ನಾಳ್ ದಿನದಿಂದ ದಿನಕ್ಕೆ ಸಿಎಂ ಅವರಿಂದ ದೂರ ಸರಿಯುತ್ತಾರೆ.
ಇನ್ನು ಈಗ್ಗೆ ಮೂರು ದಿನಗಳ ಹಿಂದೆ ವಿಜಯಪುರ ನಗರದ ವಾರ್ಡ್ ನಂಬರ್ 3 ರ ಹನುಮಂತ ದೇವಸ್ಥಾನ ಪೌಂಡ್ ನಿರ್ಮಾಣದ ಕಾಮಗಾರಿ ಪೂಜೆ ಕಾರ್ಯದಲ್ಲಿ ಮಾತನಾಡಿದ ಯತ್ನಾಳ್. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದವರೇ ಸಿಎಂ ಆಗುತ್ತಾರೆ. ಬಿಎಸ್ವೈ ಬಹಳ ದಿನಗಳ ಕಾಲ ಸಿಎಂ ಆಗಿ ಇರೋದಿಲ್ಲಾ ಎಂದು ಭಾಷಣ ಮಾಡುತ್ತಾರೆ.
ಪ್ರಧಾನಿ ಭರವಸೆಯನ್ನೇ ನೆಚ್ಚಿಕೊಂಡು ಮತ್ತೆ ಬಿಎಸ್ವೈ ವಿರುದ್ಧ ಕೆಂಪು ಬಾವುಟ ಉತ್ತರ ಕರ್ನಾಟಕದವರನ್ನೇ ಸಿಎಂ ಆಗಿ ಮಾಡೋದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಧಿಕಾರಕ್ಕೆ ಬರಲು ಉತ್ತರ ಕರ್ನಾಟಕದ ಶಾಸಕರೇ ಕಾರಣ. 100 ಕ್ಕಿಂತ ಆಧಿಕ ಶಾಸಕರು ಈ ಭಾಗದಿಂದ ಆಯ್ಕೆಯಾಗುತ್ತಾರೆ. ದಕ್ಷಿಣ ಭಾಗದಿಂದ ಕೇವಲ 15-20 ಶಾಸಕರು ಆಯ್ಕೆಯಾಗಿ ಅವರಲ್ಲಿಯೇ ಸಿಎಂ ಆಗುತ್ತಾರೆ. ಆದ ಕಾರಣ ಮುಂದಿನ ಬಾರಿ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ ಎಂದು ತಾವೂ ಸಿಎಂ ಆಗೋ ರೇಸ್ ನಲ್ಲಿರುವ ಸುಳಿವನ್ನು ಪರೋಕ್ಷವಾಗಿ ಮಾತನಾಡಿದ್ದಾರೆ.
ಸದ್ಯ ಸಿಎಂ ಬಿಎಸ್ವೈ ಹಾಗೂ ನನ್ನ ಮಧ್ಯೆ ಜಗಳ ಶುರುವಾಗಿದೆ. ನನ್ನ ಮತ ಕ್ಷೇತ್ರದ 125 ಕೋಟಿ ಅನುದಾನ ಕಡಿತ ಮಾಡಿದ್ದಾರೆ. ಅದನ್ನು ವಾಪಸ್ ತಂದೇ ತರುವೆ ಎಂದು ಯತ್ನಾಳ್ ಭಾಷಣದಲ್ಲಿ ಹೇಳಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೂ ಕಾರಣವಾಗಿದೆ. ಇದರ ಜೊತೆಗೆ ಇಂದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಬದಲಾಗುತ್ತಾರೆ ಎಂದು ಪೋಸ್ಟ್ ಮಾಡುವುದರ ಮೂಲಕ ಯತ್ನಾಳ್ ಸಮರ ಸಾರಿದ್ದಾರೆ. ಇದು ಯಡಿಯೂರಪ್ಪ ಪಾಲಿಗೆ ಬಿಸಿ ತುಪ್ಪಗಾಗಿದೆ.
ಕಳೆದ ಎರಡು ದಿನಗಳ ಹಿಂದೆ ಯತ್ನಾಳ್ ಟ್ವಿಟರ್ ನಲ್ಲಿ ಹಾಕಿದ್ದ ಪೋಸ್ಟ್ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದ ಅಭಿವೃದ್ದಿಗೆ ಹಾಗೂ ಜನರ ಧ್ವನಿಯಾಗಿ ಆತ್ಮಸಾಕ್ಷಿಯಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಸಚಿವನಾಗುವುದಕ್ಕೆ ಯಾರದೋ ಕಾಲು ಹಿಡಿದು, ತಲೆ ಹಿಡಿಯೋ ಕೆಲಸ ಮಾಡಿಲ್ಲಾ. ಅದು ನನ್ನ ಜಾಯಮಾನವೂ ಅಲ್ಲಾ ಎಂದು ಟ್ವೀಟ್ ಮಾಡಿದ್ದಾರೆ.
ಮೊದಲು ಇದೇ ಯಡಿಯೂರಪ್ಪ ಜೊತೆಗೆ ಮುನಿಸಿಕೊಂಡು ಪಕ್ಷದಿಂದ ಹೊರ ಹಾಕಿಸಿಕೊಂಡಿದ್ದರು. ನಂತರ ವಾಪಸ್ ಬಂದು ಎರಡನೇ ಬಾರಿಗೆ ತವರು ಪಕ್ಷದಿಂದ ಹೊರ ಹೋಗಿದ್ದರು. ನಂತರ ವಾಪಸ್ ಬಂದು ವಿಜಯಪುರ ನಗರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯೂ ಆಗಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಪರ ಗಟ್ಟಿಯಾಗಿ ನಿಂತುಕೊಂಡು ಮಾತನಾಡಿದ್ದರು. ಆದರೆ ಇದೀಗ ಅದೇ ಯಡಿಯೂರಪ್ಪ ವಿರುದ್ದ ಮಾತನಾಡುತ್ತಿರೋದು ರಾಜಕೀಯ ನಡೆಗಳಲ್ಲಿ ಒಂದಾಗಿದೆ.
ಲಿಂಗಾಯತರನ್ನ ಸಿಎಂ ಮಾಡಿ ಪ್ರಬಲ ಮತ ಬ್ಯಾಂಕ್ ಉಳಿಸಿಕೊಳ್ಳಲು ‘ಯತ್ನ’ ಸಚಿವ ಸ್ಥಾನ ಸಿಗದೇ ಸುಮ್ಮನಿದ್ದ ಯತ್ನಾಳ್ ಗೆ ಬಾಯಿ ಬಿಡುವಂತೆ ಮಾಡಿದ್ದು ಅವರ (ಅ)ಸಂತೋಷವೇ ಕಾರಣವೆನ್ನಲಾಗಿದೆ. ಇದರ ಹಿಂದೆ ಬಿಎಸ್ವೈ ಕಾರ್ಯ ವೈಖರಿ ಹಿನ್ನಡೆ, ಪುತ್ರ ಪ್ರೇಮವೂ ಕೇಂದ್ರದ ನಾಯಕರಿಗೆ ಕಿರಿಕಿರಿಯನ್ನು ಉಂಟು ಮಾಡಿದೆಯಂತೆ. ಸಿಎಂ ಬದಲಾವಣೆ ಮಾಡುವ ಅನಿವಾರ್ಯತೆ ಉಂಟಾದರೆ ಲಿಂಗಾಯತ ಸಮಾಜದವರನ್ನು ಸಿಎಂ ಮಾಡಿ ಪ್ರಬಲ ಮತ ಬ್ಯಾಂಕ್ ಉಳಿಸಿಕೊಳ್ಳಲು ಯತ್ನಾಳ್ ರನ್ನು ಮುಂದೆ ಬಿಟ್ಟಿದ್ದಾರೆ ಎನ್ನಲಾಗಿದೆ. ಇದೂ ಸಹ ಯತ್ನಾಳ್ ಪಾಲಿಗೆ ಸಂತೋಷತರಬಹುದಾಗಿದೆ. ಹಾಗೂ ಯಡಿಯೂರಪ್ಪ ಪಾಲಿಗೆ ಅಸಂತೋಷಕರವಾಗಲೂಬಹುದು. -ಅಶೋಕ ಯಡಳ್ಳಿ, ಟಿವಿ9 ವಿಜಯಪುರ
Published On - 2:44 pm, Wed, 21 October 20