ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ; ನೀರಿನಲ್ಲಿ ಕೊಚ್ಚಿ ಹೋದ 45 ವರ್ಷದ ರೈತ
ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾದರೂ ಸಹ ಪ್ರವಾಹ ಇನ್ನೂ ತಗ್ಗಿಲ್ಲ. ನದಿಯ ಅಕ್ಕ-ಪಕ್ಕದಲ್ಲಿರುವ ರೈತ ಜಮೀನಿಗೆ ಪ್ರವಾಹದ ಛಾಯೆ ಆವರಿಸಿದೆ.
ಬೆಳಗಾವಿ: ಜಿಲ್ಲೆಯಲ್ಲಿ ಭಾರೀ ಮಳೆಯ ಆರ್ಭಟದಿಂದಾಗಿ ಪ್ರವಾಹ ಉಂಟಾಗಿದೆ. ನದಿಯ ಪಕ್ಕದಲ್ಲಿದ್ದ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ನಡೆದಿದೆ. ರೈತ ಸಿದ್ರಾಯ ದೊಡ್ರಾಮ ಸುತಗಟ್ಟಿ(45) ಎಂದು ತಿಳಿದು ಬಂದಿದೆ. ಕಾಕತಿ ಗ್ರಾಮದ ಮಾರ್ಕಾಂಡೇಯ ನದಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ವ್ಯಕ್ತಿಗಾಗಿ ಶೋಧಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತಂತೆ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾದರೂ ಸಹ ಪ್ರವಾಹ ಇನ್ನೂ ತಗ್ಗಿಲ್ಲ. ನದಿಯ ಅಕ್ಕ-ಪಕ್ಕದಲ್ಲಿರುವ ರೈತ ಜಮೀನಿಗೆ ಪ್ರವಾಹ ಆವರಿಸಿದೆ. ನದಿ ತೀರದಲ್ಲಿರುವ ಸಾವಿರಾರು ಹೆಕ್ಟೇರ್ ಕಬ್ಬಿನ ಗದ್ದೆಗಳು ಜಲಾವೃತಗೊಂಡಿವೆ. ಮಳೆಯ ಆರ್ಭಟದಿಂದಾಗಿ ಹಿರಣ್ಯಕೇಶಿ , ಮಲಪ್ರಭಾ, ಘಟಪ್ರಭಾ ನದಿಗಳು ಮೈದುಂಬಿ ಹರಿಯುತ್ತಿವೆ. ಮೂಡಲಗಿ ತಾಲೂಕಿನ ಆರು ಸೇತುವೆಗಳು ಮುಳುಗಡೆಯಾಗಿವೆ ಹಾಗೂ ಚಿಕ್ಕೋಡಿ ತಾಲ್ಕೂಕಿನಲ್ಲಿ ಏಳು ಸೇತುವೆಗಳು ಜಲಾವೃತಗೊಂಡಿವೆ.
ಬಾಗಲಕೋಟೆ ಹೊಳೆಬಸವೇಶ್ವರ ದೇವಾಲಯ ಮತ್ತಷ್ಟು ಮುಳುಗಡೆ ಜಿಲ್ಲೆತಲ್ಲಿ ಘಟಪ್ರಭಾ ನದಿ ನೀರಿನ ಹರಿವು ಮತ್ತಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ಮುಧೋಳ ತಾಲೂಕಿನ ಮಾಚಕನೂರು ಹೊಳೆಬಸವೇಶ್ವರ ದೇಗುಲ 10 ಅಡಿಯಷ್ಟು ಮುಳುಗಡೆಯಾಗಿದೆ.
ದೇವಸ್ಥಾನದೊಳಗೆ ಹತ್ತು ಅಡಿಗೂ ಹೆಚ್ಚಾದ ನೀರು ಸೇರಿಕೊಂಡಿದೆ. ಕಳೆದ ಎರಡು ದಿನಗಳಿಂದಲೂ ದೇವಸ್ಥಾನ ಜಲಾವೃತ ಸ್ಥಿತಿಯಲ್ಲಿದೆ ಹಾಗೂ ಮಿರ್ಜಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಬಳಿ ಇರುವ ನೂರಾರು ಎಕರೆಯಲ್ಲಿದ್ದ ಕಬ್ಬು ಬೆಳೆ ಜಲಾವೃತಗೊಂಡಿದೆ. ಮಳೆಯ ಆರ್ಭಟದಿಂದ ಬೆಳೆದ ಬೆಳೆಗಳು ನಾಶಗೊಂಡಿದ್ದು ರೈತರಿಗೆ ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿಗೆ ಡಿಕೆಶಿ ಠಕ್ಕರ್: ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ
ಬ್ರೇಕಿಂಗ್: ಬೆಳಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ರಸ್ತೆ ಅಪಘಾತ