ಜಮೀನು ವಿವಾದ: ಯೋಧನ ಮನೆ ಮೇಲೆ ದಾಳಿ; ಸಮವಸ್ತ್ರ ಧರಿಸಿ ಡಿಸಿ ಕಚೇರಿಯಲ್ಲಿ ದೂರು ನೀಡಿದ ಸೈನಿಕ
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ. ಹಲವು ದಿನಗಳಿಂದ ಯೋಧ ದೀಪಕ್ ಪಾಟೀಲ್ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.
ಬೆಳಗಾವಿ: ದೇಶ ಕಾಯುವ ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ ಹಾಕಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ. ನ್ಯಾಯಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಸೇನಾ ಸಮವಸ್ತ್ರ ಧರಿಸಿ ಯೋಧ ತನ್ನ ಕುಟುಂಬ ಸಮೇತ ಆಗಮಿಸಿದ್ದಾರೆ. ಜಮೀನು ವಿವಾದ ಹಿನ್ನಲೆ ಗೌಂಡವಾಡ ಗ್ರಾಮದಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪ ಕೇಳಿಬಂದಿದೆ.
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ. ಹಲವು ದಿನಗಳಿಂದ ಯೋಧ ದೀಪಕ್ ಪಾಟೀಲ್ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಊರಲ್ಲಿರುವ ಯೋಧನ ಜಮೀನು ಕೆಲಸಕ್ಕೂ ಯಾರು ತೆರಳದಂತೆ ತಾಕೀತು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೆಂಡತಿ, ಮಕ್ಕಳನ್ನು ಯಾರಾದರೂ ಮಾತನಾಡಿಸಿದ್ರೆ 1000ರೂಪಾಯಿ ದಂಡ ವಿಧಿಸುತ್ತಾರೆಂದು ಯೋಧ ಆರೋಪ ಮಾಡಿದ್ದಾರೆ. ಗೌಂಡವಾಡ ಗ್ರಾಮದ ಪಂಚಕಮಿಟಿ ವಿರುದ್ಧ ಯೋಧ ದೀಪಕ್ ಪಾಟೀಲ್ ಆರೋಪಿಸಿದ್ದಾರೆ. ಯೋಧ ದೀಪಕ್ ಸಂಬಂಧಿ ಅಶೋಕ್ ಕೇದಾರಿ ಪಾಟೀಲ್ ಹಾಗೂ ಊರಿನ ಪಂಚ ಕಮೀಟಿ ಮಧ್ಯೆ ವಿವಾದ ನಡೆದಿತ್ತು ಎಂದು ಗಲಾಟೆಯ ವಿಚಾರ ತಿಳಿದುಬಂದಿದೆ.
ಭೂಮಿಯನ್ನು ಗಣಪತಿ, ಕಲ್ಲೇಶ್ವರ, ಕಾಲಭೈರವ ದೇವಸ್ಥಾನಕ್ಕೆ ಸೇರಿದ ಜಮೀನು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಐದು ಎಕರೆ ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿ ಇದೆ. 2020ರ ನವೆಂಬರ್ 30ರಂದು ಯೋಧನ ಮನೆ ಮೇಲೆ ದಾಳಿ ಮಾಡಿದ್ದರು. ಈಗ ಮತ್ತೆ ಜೂನ್ 6ರಂದು ಮತ್ತೆ ಯೋಧನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಗೌಂಡವಾಡ ಗ್ರಾಮದ ಪಂಚಕಮೀಟಿ ಮತ್ತು 20ಕ್ಕೂ ಹೆಚ್ಚು ಜನರಿಂದ ದಾಳಿ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಯೋಧ ದೀಪಕ್‌ಗೆ ಸೇರಿದ ರೈಸ್ ಮಿಲ್ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಉಪಟಳ ನೀಡಿದ್ದಾರೆ. ಮನೆಗೆ ನುಗ್ಗಿ ಪೀಠೋಪಕರಣ, ಟಿವಿ ಧ್ವಂಸ, ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಈ ಕುರಿತು ಪರ ವಿರೋಧ ಸೇರಿ 16 ಜನರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಯೋಧನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಯೋಧ ದೀಪಕ್ ಪಾಟೀಲ್ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: Indian Army: ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗಾಗಿ ಭಾರತೀಯ ಸೇನೆಯಿಂದ ಗಾಯನ ನಮನ; ವಿಡಿಯೋ ವೈರಲ್
ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ