ಬಿಹಾರ ಸಿಎಂ ನಿತೀಶ್ ಕುಮಾರ್ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಕರ್ನಾಟಕದಲ್ಲಿ ಬಂಧನ
Death Threat to Nitish Kumar: ಬಿಹಾರ ಸಿಎಂ ನಿತೀಶ್ ಕುಮಾರ್ಗೆ ಕೊಲೆ ಬೆದರಿಕೆ ಹಾಕಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಕರ್ನಾಟಕದ ದಾವಣಗೆರೆಯಿಂದ ಬಂಧಿಸಲಾಗಿದೆ. ಸಂದೇಶ ಬಂದಿದ್ದ ಮೊಬೈಲ್ ಸಂಖ್ಯೆಯ ಮೂಲ ಪತ್ತೆಹಚ್ಚುವ ಮೂಲಕ ಆರೋಪಿಯನ್ನು ಕರ್ನಾಟಕ ಪೊಲೀಸರ ಸಹಾಯದೊಂದಿಗೆ ಬಂಧಿಸಿರುವ ಬಿಹಾರ ಪೊಲೀಸರು, ಸದ್ಯ ಆತನನ್ನು ಪಾಟ್ನಾಕ್ಕೆ ಕರೆದೊಯ್ದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 15: ಬಿಹಾರ ಸಿಎಂ ನಿತೀಶ್ ಕುಮಾರ್ಗೆ (Nitish Kumar) ಕೊಲೆ ಬೆದರಿಕೆ (Death Threat) ಹಾಕಿದ್ದ ಆರೋಪಿ ಸೋನು ಪಾಸ್ವಾನ್ ಅನ್ನು ಕರ್ನಾಟಕದಲ್ಲಿ (Karnataka) ಬಿಹಾರ ಪೊಲೀಸರು ಬಂಧಿಸಿದ್ದಾರೆ. ಸೋನು ಪಾಸ್ವಾನ್ ಕರ್ನಾಟಕದ ದಾವಣಗೆರೆಯಲ್ಲಿ (Davanagere) ರೈಸ್ ಮಿಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಮೂಲತಃ ಬಿಹಾರದ ಸಮಸ್ತಿಪುರ ನಿವಾಸಿ ಎಂಬುದು ತಿಳಿದುಬಂದಿದೆ. ಬಂಧಿತನನ್ನು ಬುಧವಾರ ರಾತ್ರಿ ಬಿಹಾರದ ಪಾಟ್ನಾಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳದಿದ್ದರೆ ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ನಿತೀಶ್ ಕುಮಾರ್ಗೆ ಬೆದರಿಕೆ ಹಾಕಿದ್ದ.
ಆರೋಪಿಯು ಜನವರಿ 30 ರಂದು ಬಿಹಾರದ ಪೊಲೀಸ್ ಮಹಾನಿರ್ದೇಶಕ ಆರ್‌ಎಸ್ ಭಟ್ಟಿ ಅವರಿಗೆ ವಾಟ್ಸಾಪ್ ಸಂದೇಶ ಮತ್ತು ಆಡಿಯೊ ಕ್ಲಿಪ್ ಕಳುಹಿಸಿದ್ದ. ಡಿಜಿಪಿಗೆ ಕಳುಹಿಸಿದ ಸಂದೇಶ ಮತ್ತು ಆಡಿಯೊ ಕ್ಲಿಪ್‌ನಲ್ಲಿ, ‘ಬಿಜೆಪಿಯಿಂದ ಬೇರ್ಪಡದಿದ್ದರೆ ಸಿಎಂ ನಿತೀಶ್ ಕುಮಾರ್ ಮತ್ತು ಇತರ ಶಾಸಕರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಿಹಾರ ಪೊಲೀಸರು ಈ ಬಗ್ಗೆ ತಕ್ಷಣವೇ ತನಿಖೆ ಆರಂಭಿಸಿದ್ದು, ಆರೋಪಿಯ ಪತ್ತೆಗೆ ಬಲೆಬೀಸಿದ್ದರು.
ಡಿಜಿಪಿಗೆ ಸಂದೇಶ ಬಂದಿದ್ದ ಮೊಬೈಲ್ ಸಂಖ್ಯೆಯ (8431233508) ಮೂಲ ಪರಿಶೀಲಿಸಿದಾಗ ಆ ಸ್ಥಳ ಕರ್ನಾಟಕದ ದಾವಣಗೆರೆ ಎಂಬದು ತಿಳಿದುಬಂದಿದೆ. ಆರೋಪಿಗಳ ಪತ್ತೆಗೆ ಬಿಹಾರ ಪೊಲೀಸರ ತಂಡ ಕರ್ನಾಟಕಕ್ಕೆ ಬಂದಿತ್ತು. ನಂತರ ಕರ್ನಾಟಕ ಪೊಲೀಸರ ಸಹಾಯದಿಂದ ಆರೋಪಿಯನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ. ಆರೋಪಿಯು ದಾವಣಗೆರೆಯ ಬಿಎನ್‌ಎಂ ಹೈಟೆಕ್ ಆಗ್ರೋ ಇಂಡಸ್ಟ್ರೀಸ್ ರೈಸ್ ಮಿಲ್‌ನಲ್ಲಿ ಗೋಣಿಚೀಲ ಹೊಲಿಗೆ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ: ಮೂರನೇ ದಿನಕ್ಕೆ ಕಾಲಿಟ್ಟ ರೈತರ ಚಳವಳಿ, ಪಂಜಾಬ್ನಲ್ಲಿ ಇಂದು ರೈಲು ತಡೆದು ಪ್ರತಿಭಟನೆ
ಬಿಹಾರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನಕ್ಕೆ ಅಲ್ಲಿನ ಸರ್ಕಾರವೇ ಹೊಣೆ ಎಂದು ವಿಚಾರಣೆ ವೇಳೆ ಆತ ದೂರಿದ್ದಾನೆ. ಆರೋಪಿಯ ಕುಟುಂಬದವರು ಹಸನ್‌ಪುರದ (ಸಮಸ್ತಿಪುರ) ದಯಾನಗರದಲ್ಲಿ ವಾಸಿಸುತ್ತಿದ್ದಾರೆ. ಇಷ್ಟು ಕ್ಲಿಪ್‌ಗಳನ್ನು ಕಳುಹಿಸಿದ ನಂತರವೂ ಬಿಹಾರದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ಚಲನವಲನ ಕಂಡುಬಂದಿರಲಿಲ್ಲ. ಆದ್ದರಿಂದ ಎಲ್ಲಾ ಕ್ಲಿಪ್‌ಗಳನ್ನು ಕೆಲವು ಮಾಧ್ಯಮಗಳಿಗೆ ನೀಡಲು ಹೊರಟಿದ್ದಾಗಿ ಸೋನು ಹೇಳಿದ್ದಾನೆ. ಆದರೆ ಅದಕ್ಕೂ ಮೊದಲು ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ