ಕರ್ನಾಟಕ ಬಂದ್ ಆಯ್ತು ಈಗ ರೈಲು ಬಂದ್ಗೆ ಕರೆ ನೀಡಿದ ವಾಟಾಳ್ ನಾಗರಾಜ್
ಮುಂದಿನ ತಿಂಗಳು ಜನವರಿ 9ರಂದು ರೈಲ್ ಬಂದ್ ನಡೆಯಲಿದೆ. ಮುಂಜಾನೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ರೈಲ್ವೆ ಸಂಚಾರ ಬಂದ್ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಜನವರಿ 9ರಂದು ರೈಲ್ ಬಂದ್ ನಡೆಯಲಿದೆ. ಮುಂಜಾನೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ರೈಲ್ವೆ ಸಂಚಾರವನ್ನು ತಡೆಯುತ್ತೇವೆ. ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಹಾಗೂ ರೈತರ ಸಮಗ್ರ ಬೇಡಿಕೆ ಈಡೇರಬೇಕೆಂದು ಕೋರಿ ಬಂದ್ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ಮಾಧ್ಯಮದವರಿಗೆ ತಿಳಿಸಿದರು.
ವಿವಿಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಇದರ ಮುಂದಾಳತ್ವ ವಹಿಸಿದ್ದ ವಾಟಾಳ್ ನಾಗರಾಜ್ ಈಗ ಕರ್ನಾಟಕ ರೈಲ್ ಬಂದ್ಗೆ ಕರೆ ನೀಡಿದ್ದಾರೆ.
ಮರಾಠ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಮಸೂದೆಯನ್ನು ಸರ್ಕಾರಗಳು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ನಾವು ರೈಲು ತಡೆ ನಡೆಸುತ್ತಿದ್ದೇವೆ. ಎಲ್ಲಾ ಕನ್ನಡ ಪರ ಸಂಘಟನೆಗಳು ನಮ್ಮ ಜೊತೆಗಿವೆ. ಇದಕ್ಕೆ ಕರ್ನಾಟಕದ ಜನರು ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ಕೋರಿದರು.
ಡಿಸೆಂಬರ್ 5ರ ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಸರ್ಕಾರ ನೇರ ಕಾರಣ ಎಂದು ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಬಂದ್ ವಿಫಲಗೊಳಿಸಬೇಕೆಂದು ಸರ್ಕಾರ ಪಣ ತೊಟ್ಟಿತ್ತು. ಪೊಲೀಸರು ದಬ್ಬಾಳಿಕೆ ನಡೆಸಿದ್ದರು. ಹೀಗಾಗಿ ಬಂದ್ ವಿಫಲವಾಗಿದೆ. ಇಲ್ಲಿರುವ ತಮಿಳರು, ಮಲಯಾಳಿಗಳು, ಗುಜರಾತಿಗಳು ಬಿಜೆಪಿ ಏಜೆಂಟ್ಗಳು ಎಂದು ಅವರು ಹೇಳಿದರು.
ಬೆಂಗಳೂರಿನ ಹಲವೆಡೆ ಕನ್ನಡ ಪರ ಹೋರಾಟಗಾರರು ಡಿಸೆಂಬರ್ 5ರಂದು ಬಂದ್ ನಡೆಸಿದರೂ ಜನಜೀವನದಲ್ಲಿ ಅಷ್ಟೇನೂ ವ್ಯತ್ಯಾಸ ಆಗಿರಲಿಲ್ಲ. ಹಲವೆಡೆ ಅಂಗಡಿಮುಂಗಟ್ಟುಗಳು ತೆರಿದಿತ್ತು. ಬಸ್, ವಾಹನ ಸಂಚಾರವೂ ಸಹಜ ಸ್ಥಿತಿಯಲ್ಲಿತ್ತು.
ಈಚೆಗಷ್ಟೇ ಭಾರತ್ ಬಂದ್ ನಡೆದಿದೆ. ಈಗ ನೀವು ಮತ್ತೊಮ್ಮೆ ರೈಲು ತಡೆಗೆ ಕರೆ ನೀಡಿದ್ದು ಏಕೆ ಎಂದು ಟಿವಿ9 ಪ್ರಶ್ನಿಸಿದಾಗ, ‘ಬಂದ್ ಮಾಡುವ ನಮ್ಮ ಪ್ರಯತ್ನವನ್ನು ವಿಫಲಗೊಳಿಸಲು ಸರ್ಕಾರ ಪ್ರಯತ್ನಿಸಿತು. ಮರಾಠ ಅಭಿವೃದ್ಧಿ ಪ್ರಾಧಿಕಾರ ನಿರ್ಣಯವನ್ನು ಹಿಂದೆ ತೆಗೆದುಕೊಳ್ಳುವವರೆಗೂ ನಾವು ಸುಮ್ಮನಿರುವುದಿಲ್ಲ. ಒಂದಲ್ಲ ಒಂದು ರೀತಿ ಪ್ರತಿಭಟನೆ ಮಾಡುತ್ತಲೇ ಇರುತ್ತೇವೆ. ಜ.9ರಂದು ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳ ಸದಸ್ಯರೂ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತಾರೆ. ಕರ್ನಾಟಕದಿಂದ ಹೊರಗೆ ಹೋಗಲು ಮತ್ತು ಒಳಗೆ ಬರಲು ಯಾವುದೇ ರೈಲಿಗೆ ಅವಕಾಶ ಕೊಡುವುದಿಲ್ಲ’ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು.
Karnataka Bandh | ವಾಟಾಳ್ ನಾಗರಾಜ್ ಬಂಧನದ ಬಳಿಕವೂ ಮುಂದುವರಿದ ಪ್ರತಿಭಟನೆ
Published On - 6:10 pm, Wed, 9 December 20