
ಬೆಂಗಳೂರು, (ಜುಲೈ 02): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮುಖಂಡರ ಉಚ್ಚಾಟನೆ ಪರ್ವ ಮುಂದುವರೆದಿದೆ. ಮೊನ್ನೆ ಅಷ್ಟೇ ರಾಜ್ಯ ಬಿಜೆಪಿ ವಕ್ತಾರ ಎಂಜಿ ಮಹೇಶ್ (MG Mahesh) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು.ಪಕ್ಷದ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯಕತ್ವದ ವಿರುದ್ಧ ಹಗುರವಾಗಿ ಮಾತನಾಡಿದ ಆರೋಪದ ಮೇಲೆ ಉಚ್ಛಾಟಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು (ಜುಲೈ 02) ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ (satish kadathanamale) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬಮೂಲ್ ನಿರ್ದೇಶಕರಾಗಿರುವ ಆಗಿರುವ ಸತೀಶ್ ಕಡತನಮಲೆ ಅವರನ್ನು ಉಚ್ಛಾಟಿಸಿ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಈ ಕ್ರಮಕೈಗೊಳ್ಳಲಾಗಿದೆ. ಸತೀಶ್ ಅವರ ನಡವಳಿಕೆ ಕುರಿತು ಸ್ಥಳೀಯ ಮುಖಂಡರು ರಾಜ್ಯ ಶಿಸ್ತು ಸಮಿತಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷವು ಅವರಿಗೆ ನೋಟಿಸ್ ನೀಡಿ ಸ್ಪಷ್ಟೀಕರಣ ಕೇಳಿತ್ತು. ಆದರೆ ಸತೀಶ್ ಕಡತನಮಲೆ ಅವರು ನೀಡಿದ ಸ್ಪಷ್ಟೀಕರಣವು ಸಮಂಜಸ ಹಾಗೂ ತೃಪ್ತಿಕರವಾಗಿಲ್ಲದ ಕಾರಣ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಆದೇಶದಲ್ಲಿ ತಿಳಿಸಿದೆ.
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಸೇರಿದಂತೆ ಸ್ಥಳೀಯ ಪ್ರಮುಖ ಬಿಜೆಪಿ ನಾಯಕರ ವಿರುದ್ಧ ಸತೀಶ್ ಕಡತನಮಲೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪದೇಪದೇ ಸುದ್ದಿಗೋಷ್ಠಿಗಳನ್ನು ನಡೆಸುವ ಮೂಲಕ ಮಾಧ್ಯಮಗಳ ಮುಂದೆ ಪಕ್ಷ ಮತ್ತು ನಾಯಕರ ವಿರುದ್ಧ ಹೇಳಿಕೆ ನೀಡಿ ಮುಜುಗರ ಉಂಟುಮಾಡಿದ್ದರು. ಸತೀಶ್ ಕಡತನಮಲೆ ಅವರು ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರಿಗೆ ಅತ್ಯಂತ ಆಪ್ತರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೂ ಹೆಚ್ಚು ಗುರುತಿಸಿಕೊಳ್ಳುತ್ತಿದ್ದರು. ಇದು ಸ್ಥಳೀಯ ಬಿಜೆಪಿ ನಾಯಕರ ಕೆಣ್ಣಿಗೆ ಗುರಿಯಾಗಿತ್ತು.
ಮೊನ್ನೇ ಅಷ್ಟೇ ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂಜಿ ಮಹೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಕಳೆದ ಜೂನ್ 19ರಂದು ನಡೆದ ಬಿಜೆಪಿಯ ಪ್ರಮುಖ ಸಭೆಯಲ್ಲಿ, ಎಂಜಿ ಮಹೇಶ್ ಪಕ್ಷದ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸ್ಪಷ್ಟೀಕರಣ ಕೋರಿ ಶಿಸ್ತು ಸಮಿತಿಯು ರಾಜ್ಯ ವಕ್ತಾರರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ತನ್ನ ನೋಟಿಸ್‌ಗೆ ಎಂಜಿ ಮಹೇಶ್ ನೀಡಿರುವ ಉತ್ತರ ಸಮಂಜಸವಾಗಿರಲಿಲ್ಲ. ಹೀಗಾಗಿ ಎಂಜಿ ಮಹೇಶ್ ವಿರುದ್ಧ ಶಿಸ್ತು ಸಮಿತಿ ನೀಡಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಲ್ಲದೇ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂಜಿ ಮಹೇಶ್ ಅವರಿಗೆ ನೀಡಲಾಗಿದ್ದ ಎಲ್ಲಾ ಜವಾಬ್ದಾರಿಗಳನ್ನೂ ಪಕ್ಷ ವಾಪಸ್ ಪಡೆದುಕೊಂಡಿದೆ.
ಎಂಜಿ ಮಹೇಶ್ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾಡಿದ ಕೀಳುಮಟ್ಟದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಯಾವುದೇ ಆಧಾರಗಳಿಲ್ಲದೇ ಅವರು ನಾಯಕತ್ವವನ್ನು ಪ್ರಶ್ನಿಸಿದ್ದು, ಇದು ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆ. ಈ ಹಿನ್ನೆಲೆಯಲ್ಲಿ ಎಂಜಿ ಮಹೇಶ್ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಶಿಸ್ತು ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.