ಜಿಎಸ್ಟಿ ವಂಚನೆ ಆರೋಪ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ 8 ಕಾಲೇಜುಗಳ ಮೇಲೆ ತೆರಿಗೆ ಅಧಿಕಾರಿಗಳಿಂದ ದಾಳಿ
ಜಿಎಸ್ಟಿ ವಂಚನೆ ಆರೋಪ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ 8 ಕಾಲೇಜುಗಳ ಮೇಲೆ ಏಕಕಾಲಕ್ಕೆ ರೇಡ್ ಮಾಡಲಾಗಿದೆ. ಕೋಚಿಂಗ್ ಹೆಸರಿನಲ್ಲಿ ವಿವಿಧ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣಕ್ಕೆ ಜಿಎಸ್ಟಿ ಕಟ್ಟದೆ ವಂಚನೆ ಆರೋಪ ಕೇಳಿಬಂದಿದೆ. ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಜಂಟಿ ಆಯುಕ್ತ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳು ವಶಕ್ಕೆ ಪಡೆಯಲಾಗಿದೆ.
ಧಾರವಾಡ, ಏಪ್ರಿಲ್ 22: ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರದ 8 ಕಾಲೇಜುಗಳ ಮೇಲೆ ಏಕಕಾಲಕ್ಕೆ ರೇಡ್ ಮಾಡಲಾಗಿದೆ. ಜಿಎಸ್ಟಿ (GST) ವಂಚನೆ ಆರೋಪ ಹಿನ್ನೆಲೆ ಧಾರವಾಡದ ಅಣ್ಣಿಗೇರಿ ಕಾಲೇಜು, ಮಹೇಶ ಪಿಯು ಕಾಲೇಜು, ಪ್ರೇರಣಾ ಕಾಲೇಜು, ಜಿಎಸ್‌ಎಸ್ ಆವಂತಿಕಾ ಕೋಚಿಂಗ್ ಸೆಂಟರ್ ಮತ್ತು ಚೇತನಾ ಪಿಯು ಕಾಲೇಜು ಸೇರಿದಂತೆ 8 ಕಾಲೇಜುಗಳ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಕೋಚಿಂಗ್ ಹೆಸರಿನಲ್ಲಿ ವಿವಿಧ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣಕ್ಕೆ ಜಿಎಸ್ಟಿ ಕಟ್ಟದೆ ವಂಚನೆ ಆರೋಪ ಕೇಳಿಬಂದಿದೆ.
ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಜಂಟಿ ಆಯುಕ್ತ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಸಿಕ್ಕ 18 ಕೋಟಿ ಹಣದ ಮೂಲ ಪತ್ತೆ: ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ!
ನಗರದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಬಸವರಾಜ ದತ್ತುನವರ ಅವರ ಮನೆ ಮೇಲೆ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಹಾಗೂ ಐಟಿ ಅಧಿಕಾರಿಗಳು ದಾಳಿ ನಡೆಸಿ 18 ಕೋಟಿ ರೂ. ಬೃಹತ್ ಮೊತ್ತವನ್ನು ಇತ್ತೀಚೆಗೆ ಸೀಜ್ ಮಾಡಿದ್ದರು. ಬಸವರಾಜ ದತ್ತುನವರ ಕೇಂದ್ರ ಸರ್ಕಾರದ ಕಾಮಗಾರಿಗಳನ್ನು ಗುತ್ತಿಗೆ ಪಡೆಯುವ ಗುತ್ತಿಗೆದಾರ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಗೊತ್ತಾಗಿದೆ. ಹೀಗಾಗಿ ದತ್ತುನವರ ಅವರ ಮನೆಯಿಂದ ಕೊಂಚ ದೂರವೇ ಇರುವ ಯು.ಬಿ.ಶೆಟ್ಟಿ ಅವರ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಧಾರವಾಡದಲ್ಲಿ ಐಟಿ ಭರ್ಜರಿ ಬೇಟೆ, ಒಂದೇ ಫ್ಲ್ಯಾಟ್ನಲ್ಲಿ ಬರೋಬ್ಬರಿ 18 ಕೋಟಿ ರೂ.ಹಣ ಜಪ್ತಿ
2021ರ ಅಕ್ಟೋಬರ್ 28 ರಂದು ಯು.ಬಿ.ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮಂಗಳೂರಿನ ಉಪ್ಪುಂದ ಮೂಲದವರಾದ ಯು.ಬಿ.ಶೆಟ್ಟಿ ಅವರ ಮನೆ ಮೇಲೆ 2021ರಲ್ಲಿ ಮಂಗಳೂರು ಹಾಗೂ ಧಾರವಾಡದ ಅವರ ಮನೆ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿತ್ತು. ಆಗ ಕೆಲಗೇರಿ ರಸ್ತೆಯಲ್ಲಿದ್ದ ಶೆಟ್ಟಿ ಅವರ ಕಚೇರಿ ಈಗ ನಾರಾಯಣಪುರ ಮುಖ್ಯ ರಸ್ತೆಗೆ ಶಿಫ್ಟ್ ಆಗಿದೆ. ಸದ್ಯ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿರುವ ದತ್ತುನವರ ಅವರನ್ನು ವಿಚಾರಣೆಗೊಳಪಡಿಸುವುದಲ್ಲದೇ ಶೆಟ್ಟಿ ಅವರ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Mon, 22 April 24