ಕಾರವಾರ: ಸೀಬರ್ಡ್ ನೌಕಾನೆಲೆ ಫೋಟೋ, ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಮೂವರು ಎನ್ಐಎ ವಶಕ್ಕೆ
ಹಣಕ್ಕಾಗಿ ಸೀಬರ್ಡ್ ನೌಕಾನೆಲೆ ಫೋಟೋ ಹಾಗೂ ಇತರೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ್ದ ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಕಾರವಾರಕ್ಕೆ ಎನ್ಐಎ ಮತ್ತೆ ಎಂಟ್ರಿ ಕೊಟ್ಟಿದೆ. ರಾಷ್ಟ್ರವಿರೋಧಿ ಚಟುವಟಿಕೆಯಡಿ 2023ರಲ್ಲಿ ಹೈದ್ರಾಬಾದ್‌ನಲ್ಲಿ ಎನ್ಐಎ ದೀಪಕ್ ಹಾಗೂ ಇತರರನ್ನು ಬಂಧಿಸಲಾಗಿತ್ತು.
ಉತ್ತರ ಕನ್ನಡ, ಆಗಸ್ಟ್ 28: ಹಣಕ್ಕಾಗಿ ಸೀಬರ್ಡ್ ನೌಕಾನೆಲೆ ಫೋಟೋ, ಇತರೆ ಮಾಹಿತಿಯನ್ನು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನೀಡಿದ್ದ ಮೂವರು ಆರೋಪಿಗಳನ್ನು ಎನ್ಐಎ (NIA) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ತೋಡೂರಿನ ಸುನೀಲ್ ನಾಯ್ಕ್, ಮುದುಗಾದ ವೇತನ್ ತಾಂಡೇಲ್ ಮತ್ತು ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ವಶಕ್ಕೆ ಪಡೆದು ಎನ್ಐಎ ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳಿಂದ ವಿಚಾರಣೆ ಮಾಡಲಾಗಿದೆ.
ದೀಪಕ್ ಹಾಗೂ ಇತರರ ಬಂಧನ
ಓರ್ವನನ್ನು ಗೋವಾದಿಂದ ವಶಕ್ಕೆ ಪಡೆದಿದ್ದು, ಇನ್ನಿಬ್ಬರನ್ನು ಸೀಬರ್ಡ್‌ನಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸೀಬರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರವಿರೋಧಿ ಚಟುವಟಿಕೆಯಡಿ 2023ರಲ್ಲಿ ಹೈದ್ರಾಬಾದ್‌ನಲ್ಲಿ ಎನ್ಐಎ ದೀಪಕ್ ಹಾಗೂ ಇತರರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಕಾರವಾರ: ಭೀಕರ ಸಮುದ್ರ ಕೊರೆತಕ್ಕೆ ಕೊಚ್ಚಿ ಹೋದ ಮನೆಗಳು, ವಿಡಿಯೋ ನೋಡಿ
ವಿದೇಶಿ ಅಧಿಕಾರಿಗಳಿಗೆ ದೀಪಕ್ ಹಾಗೂ ಇತರರು ಮಾಹಿತಿ ರವಾನಿಸುತ್ತಿದ್ದರು. ದೀಪಕ್ ಹಾಗೂ ಇತರರನ್ನು ತನಿಖೆ ಮಾಡುವ ವೇಳೆ ಸುನೀಲ್ ನಾಯ್ಕ್, ವೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್ ಹೆಸರು ಕೂಡ ಬಹಿರಂಗವಾಗಿದೆ.
ಮಾಹಿತಿ ರವಾನೆ ಆರೋಪ
ಸೀಬರ್ಡ್ ನೌಕಾನೆಲೆ ಫೋಟೋ ಹಾಗೂ ಇತರೆ ಮಾಹಿತಿಯನ್ನು ದೀಪಕ್ ಹಾಗೂ ಇತರರಿಗೆ ರವಾನಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೇ, ಮಾಹಿತಿ ನೀಡಿದ್ದಕ್ಕೆ ಸುನೀಲ್ ನಾಯ್ಕ್, ವೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್ ಖಾತೆಗೆ ಹಣ ಕೂಡ ಜಮಾ ಆಗಿತ್ತು. ಅಕ್ಷಯ್ ನಾಯ್ಕ್ ಈ ಹಿಂದೆ ಸೀಬರ್ಡ್ ಒಳಗೆ ಕೆಲಸ ಮಾಡುತ್ತಿದ್ದನಾದರೂ ಬಳಿಕ ಗೋವಾದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸಕ್ಕೆ ಸೇರಿದ್ದ.
ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮೀನುಗಾರಿಕೆ ಸಂಪೂರ್ಣ ಬಂದ್
ಸದ್ಯ ವಶಕ್ಕೆ ಪಡೆದಿರುವ ಆರೋಪಿ ಅಕ್ಷಯ್ ರವಿ ನಾಯ್ಕ್ ಮೊಬೈಲ್, ಎಲೆಕ್ಟ್ರಾನಿಕ್ ವಸ್ತು ಜಪ್ತಿ ಮಾಡಿ ನೋಟಿಸ್ ನೀಡಿ NIA ಅಧಿಕಾರಿಗಳು ಬಿಟ್ಟಿದ್ದಾರೆ. ಆದರೆ, ವೇತನ್ ತಾಂಡೇಲ್‌ನನ್ನು ಹಾಗೂ ಅಕ್ಷಯ್ ನಾಯ್ಕ್‌ನನ್ನು ರಹಸ್ಯ ಸ್ಥಳದಲ್ಲಿ ತನಿಖೆಗೆ ಒಳಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:59 pm, Wed, 28 August 24