ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ 1600 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಆರೋಪ
ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ವಿರುದ್ಧ ಎನ್ಆರ್ ರಮೇಶ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ. 1600 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಡಿಸೆಂಬರ್ 17: ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ ವಿರುದ್ಧ 1600 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಆರೋಪ ಕೇಳಿಬಂದಿದೆ. ಈ ಸಂಬಂಧ ಎನ್ಆರ್ ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೂ ಇದರ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕೆಂಗೇರಿಯ ಸರ್ವೇ ನಂಬರ್ 69 ರಲ್ಲಿ ಇರುವ 183 ಎಕರೆ ಜಾಗದ ಕುರಿತು ವಿವಾದಗಳು ಎದ್ದಿದ್ದು, 1973 ರಲ್ಲಿ 25 ಜನ ಜಮೀನುರಹಿತರಿಗೆ ಈ ಜಾಗ ಹಂಚಿಕೆಯಾಗಿತ್ತು. ಇದರಲ್ಲಿ SC/ST ಸಮುದಾಯದವರಿಗೆ ಪ್ರತಿ ವ್ಯಕ್ತಿಗೂ 1.20 ಎಕರೆ ಹಂಚಿಕೆಯಾಗಿತ್ತು. ಉತ್ತರಹಳ್ಳಿ-ಕೆಂಗೇರಿ ನಡು ಭಾಗದಲ್ಲಿ ಇರುವ ಈ ಜಾಗದಲ್ಲಿ ಹಲವು ಫಲಾನುಭವಿಗಳು ನಿಧನರಾದರು.
ಇತ್ತ, ಸರ್ಕಾರದ ಅನುಮತಿಯಿಲ್ಲದೆ ಈ ಜಾಗವನ್ನು ಮಾರಾಟ ಮಾಡಿರುವ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ. ಸುರೇಂದ್ರ ಎಂಬ ವ್ಯಕ್ತಿ ಮಾರಾಟಕ್ಕೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿದೆ. ಸುರೇಂದ್ರ ಕೆಎಸ್ಎಸ್ ರೆಸಿಡೆನ್ಸಿ ಕಂಪನಿಯ ಮಾಲೀಕರಾಗಿದ್ದು, ಹೆಚ್ಸಿ ಬಾಲಕೃಷ್ಣ ಮತ್ತು ಕೆಲ ಪ್ರಭಾವಿಗಳ ಸಹಕಾರದಿಂದ ಮಾರಾಟಕ್ಕೆ ಮಾಡಿದ್ದಾರೆ ಎಂಬ ಆರೋಪಗಳಿವೆ.
ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲೇನಿದೆ?
ಕೆಂಗೇರಿ ಗ್ರಾಮದ ಸರ್ವೇ ನಂ: 69 ರ 183 ಎಕರೆ ಸರ್ಕಾರೀ ಸ್ವತ್ತು ಸಂಪೂರ್ಣವಾಗಿ ‘‘ಸರ್ಕಾರಿ ಬಂಡೆ’’ ಪ್ರದೇಶವಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಕಾನೂನು ರೀತ್ಯಾ ಅವಕಾಶವೇ ಇರುವುದಿಲ್ಲ. ಹೀಗಿದ್ದಾಗ್ಯೂ, ಕೆಎನ್ ಸುರೇಂದ್ರ ಅವರ ಬೆನ್ನಿಗಿದ್ದ ಪ್ರಭಾವಿಗಳ ಒತ್ತಡಗಳಿಗೆ ಒಳಗಾಗಿದ್ದ ಕಂದಾಯ ಇಲಾಖೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ, ಒಂದರ ಹಿಂದೆ ಮತ್ತೊಂದು ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಾ ನಕಲಿ ದಾಖಲೆಗಳ ತಯಾರಿಕೆಗೆ ಅವಕಾಶ ಮಾಡಿಕೊಡುತ್ತಾ, 1,600 ಕೋಟಿ ರೂ. ಮೌಲ್ಯದ ಸರ್ಕಾರಿ ಭೂ ಕಬಳಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೊದಲಿಗೆ ರವಿಶಂಕರ್ ಎಂಬ ಸರ್ವೇಯರ್ ಇದಕ್ಕೆ ಸಂಬಂಧಿಸಿದಂತೆ ಸ್ಕೆಚ್ ತಯಾರು ಮಾಡಿದ್ದರೆ, ಲಕ್ಷ್ಮೀದೇವಿ ಎಂಬ ಮತ್ತೊಬ್ಬ ಸರ್ವೇಯರ್ ಇದಕ್ಕೆ ಕಂಪೇರ್ ಸರ್ವೇ ಮಾಡಿ ಕೊಟ್ಟಿರುತ್ತಾರೆ. ಎಡಿಎಲ್ಆರ್ ಸಚಿನ್ ಮತ್ತು ಡಿಎಇಎಲ್ಆರ್ ಮಂಜುನಾಥ್ ಥವನೆ ಅವರು ರಾತ್ರೋರಾತ್ರಿ ಸದರಿ ಸ್ವತ್ತಿಗೆ “ಪೋಡಿ” ಮಾಡಿದ್ದಾರೆ. ಇತ್ತೀಚೆಗೆ ಡಿಸಿಎಲ್ಆರ್ ಹುದ್ದೆಗೆ ಬಂದಿರುವ ಕುಸುಮ ಲತಾ ಅವರು ಇದಕ್ಕೆ “ಪಹಣಿ” ನೀಡಲು ಅನುಮೋದನೆ ನೀಡಲು ಕಡತವನ್ನು ಮುಂದಕ್ಕೆ ಕಳುಹಿಸುತ್ತಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾಲು ಉತ್ಪಾದಕರಿಗೆ 9 ತಿಂಗಳಿನಿಂದ ಬಿಡುಗಡೆಯಾಗಿಲ್ಲ ಪ್ರೋತ್ಸಾಹ ಧನ: ಖುದ್ದು ಸಚಿವರೇ ನೀಡಿದ್ರು ಮಾಹಿತಿ
ಪ್ರಭಾವಿಗಳಲ್ಲದ ಸಾಮಾನ್ಯ ಜನರು ಅವರ ಸ್ವತ್ತುಗಳಿಗೆ ಪೋಡಿ ಮಾಡಲು ಅರ್ಜಿಗಳನ್ನು ನೀಡಿ ವರ್ಷಾನುಗಟ್ಟಲೇ ಇವರ ಕಚೇರಿಗಳಿಗೆ ಅಲೆದಾಡಿದರೂ ಸಹ ಪೋಡಿ ಮಾಡಿಕೊಡದ ಈ ಅಧಿಕಾರಿಗಳು ಈ ಪ್ರಕರಣದಲ್ಲಿ ಕೇವಲ 15 ದಿನಗಳಲ್ಲಿ ಕಾನೂನು ಬಾಹಿರವಾಗಿ ಪೋಡಿ ಮಾಡಿಕೊಟ್ಟಿರುತ್ತಾರೆ ಎಂದೂ ಉಲ್ಲೇಖಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ