AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಅಕ್ರಮ ಸಾಗಾಟಕ್ಕೆ ಸಂಗ್ರಹಿಸಿಟ್ಟಿದ್ದ ಅಂಗನವಾಡಿಯ ಆಹಾರ ಧಾನ್ಯ ತೋಟದ ಮನೆಯಲ್ಲಿ ಪತ್ತೆ

ಮಾಳಪ್ಪ ಪೂಜಾರಿ ಎನ್ನುವವರ ಜಮೀನಿನಲ್ಲಿ ಎರಡು ಕ್ವಿಂಟಲ್ ಪುಷ್ಟಿ ಆಹಾರ, ಒಂದು ಕ್ವಿಂಟಲ್ ಅಕ್ಕಿ ಸೇರಿದಂತೆ ಅನೇಕ ಆಹಾರ ಸಾಮಾಗ್ರಿಗಳು ಕಳೆದ ರಾತ್ರಿ ಪತ್ತೆಯಾಗಿವೆ. ಅಂಗನವಾಡಿಗಳ ಮೂಲಕ ಮಕ್ಕಳಿಗೆ ಸೇರಬೇಕಿದ್ದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟಿದ್ದರ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು, ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕಲಬುರಗಿ: ಅಕ್ರಮ ಸಾಗಾಟಕ್ಕೆ ಸಂಗ್ರಹಿಸಿಟ್ಟಿದ್ದ ಅಂಗನವಾಡಿಯ ಆಹಾರ ಧಾನ್ಯ ತೋಟದ ಮನೆಯಲ್ಲಿ ಪತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 30, 2021 | 11:41 AM

Share

ಕಲಬುರಗಿ: ಸರ್ಕಾರ ಬಾಣಂತಿಯರು, ಗರ್ಭಿಣಿಯರು, ಮತ್ತು ಆಪೌಷ್ಟಿಕ ಮಕ್ಕಳಿಗೆ ಅನುಕೂಲವಾಗಲಿ ಅಂತ ಅಂಗನವಾಡಿಗಳ ಮೂಲಕ ಆಹಾರ ಧಾನ್ಯಗಳನ್ನು ನೀಡುತ್ತದೆ. ಅದಕ್ಕಾಗಿ ಸರ್ಕಾರ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಆಹಾರ ಧಾನ್ಯಗಳು ಸೇರದೆ, ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಅನೇಕ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ಆಹಾರ ಧಾನ್ಯಗಳು ಕೃಷಿ ಜಮೀನಿನಲ್ಲಿರುವ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಅವರಾದ ಗ್ರಾಮದಲ್ಲಿ ನಡೆದಿದೆ.

ಅವರಾದ ಗ್ರಾಮದ ಮಾಳಪ್ಪ ಪೂಜಾರಿ ಎನ್ನುವವರ ಜಮೀನಿನಲ್ಲಿ ಎರಡು ಕ್ವಿಂಟಲ್ ಪುಷ್ಟಿ ಆಹಾರ, ಒಂದು ಕ್ವಿಂಟಲ್ ಅಕ್ಕಿ ಸೇರಿದಂತೆ ಅನೇಕ ಆಹಾರ ಸಾಮಾಗ್ರಿಗಳು ಕಳೆದ ರಾತ್ರಿ ಪತ್ತೆಯಾಗಿವೆ. ಅಂಗನವಾಡಿಗಳ ಮೂಲಕ ಮಕ್ಕಳಿಗೆ ಸೇರಬೇಕಿದ್ದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟಿದ್ದರ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು, ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಆಹಾರ ಪದಾರ್ಥಗಳು ಇರುವುದು ಬೆಳಕಿಗೆ ಬಂದಿದೆ. ಅಫಜಲಪುರ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಸಿಬ್ಬಂದಿ ಮತ್ತು ಸಾಗಾಟ ಮಾಡುವ ಗುತ್ತಿಗೆದಾರರು ಸೇರಿಕೊಂಡು ಹಣ ಪಡೆದು, ಮಾಳಪ್ಪಾ ಎನ್ನುವವರಿಗೆ ಮಾರಾಟ ಮಾಡಿದ್ದಾರಂತೆ.

ಹೆಚ್ಚಾದ ಅಕ್ರಮ ದಂಧೆ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಧಾನ್ಯಗಳಲ್ಲಿ ದೊಡ್ಡ ಗೋಲ್ ಮಾಲ್ ನಡೆಯುತ್ತಿದೆ. ಅಂಗನವಾಡಿಗಳಿಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುವ ಸಿಬ್ಬಂದಿ, ಉಳಿದ ಆಹಾರ ಧಾನ್ಯಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿ ಹಣ ಗಳಿಸುವ ಅಡ್ಡ ದಂಧೆಯನ್ನು ಅನೇಕ ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳು ಆಗದೇ ಇರುವುದರಿಂದ ಮತ್ತು ಅಕ್ರಮದಲ್ಲಿ ಮೇಲಾಧಿಕಾರಿಗಳು ಕೂಡಾ ಶಾಮೀಲಾಗಿರುವುದರಿಂದ ಇಂತಹ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಸದ್ಯ ಅವರಾದ ಗ್ರಾಮದಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗಬೇಕಿದ್ದ ಆಹಾರ ಧಾನ್ಯ ಅಕ್ರಮವಾಗಿ ಮಾರಾಟವಾಗಿದ್ದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ತನಿಖೆಗೆ ಆದೇಶ ನೀಡಿದ್ದಾರೆ. ಈ ಬಗ್ಗೆ ರೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಅವರಾದ ಗ್ರಾಮದ ಮನೆಯಲ್ಲಿ ಪತ್ತೆಯಾದ ಆಹಾರ ಧಾನ್ಯಗಳ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜೊತೆಗೆ ಇಲಾಖೆ ವತಿಯಿಂದ ಕೂಡಾ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಹೇಳಿದರು.

ಇದನ್ನೂ ಓದಿ

ಮೈಸೂರು ವಿವಿಯ ಉತ್ತರ ಪತ್ರಿಕೆ ಅಕ್ರಮ ಜಾಲ ಕೇಸ್; ಆರೋಪಿ ಇನ್ಸ್ಪೆಕ್ಟರ್ ಜಾಮೀನು ಅರ್ಜಿ ವಜಾ

ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ.. ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ

(Anganawadi food grain stored for illegal shipment was found in house at Kalaburagi)