ಪ್ರಿಯಾಂಕ್ ಖರ್ಗೆಯನ್ನು ಟೆಡ್ಡಿ ಬಾಯ್ ಎಂದ ಅಸ್ಸಾಂ ಬಿಜೆಪಿ: ಪ್ರಬಂಧ ಬರೆದರೆ ಸೆಮಿಕಂಡಕ್ಟರ್ ತಜ್ಞ ಆಗುವುದಿಲ್ಲ ಎಂದು ವ್ಯಂಗ್ಯ
ಸೆಮಿಕಂಡಕ್ಟರ್ ಹೂಡಿಕೆಗಳನ್ನು ಕರ್ನಾಟಕದಿಂದ ಅಸ್ಸಾಂಗೆ ತಿರುಗಿಸಿದ ಆರೋಪದ ಬಗ್ಗೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಸ್ಸಾಂ ಬಿಜೆಪಿ ನಡುವೆ ತೀವ್ರ ರಾಜಕೀಯ ವಾಕ್ಸಮರ ನಡೆದಿದೆ. ಅಸ್ಸಾಂನಲ್ಲಿ ಪ್ರತಿಭೆ ಇಲ್ಲವೆಂಬ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅಸ್ಸಾಂ ಬಿಜೆಪಿ, ಕಲಬುರಗಿಯ ಬಡತನ ಶ್ರೇಯಾಂಕದ ಬಗ್ಗೆ ಗಮನಹರಿಸಲು ಸಲಹೆ ನೀಡಿದೆ.

ಬೆಂಗಳೂರು, ಅಕ್ಟೋಬರ್ 28: ಸೆಮಿಕಂಡಕ್ಟರ್ (Semiconductor) ಕೈಗಾರಿಕೆಗಳ ಕುರಿತ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಚಿದ್ದಾರೆ ಎಂಬ ಕರ್ನಾಟಕ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಅಸ್ಸಾಂ ಬಿಜೆಪಿ (Assam BJP) ತಿರುಗೇಟು ನೀಡಿದೆ. ಪ್ರಿಯಾಂಕ್ ಖರ್ಗೆ (Priyank Kharge) ಎಕ್ಸ್ ಸಂದೇಶಕ್ಕೆ ಪ್ರತಿಕ್ರಿಸಿರುವ ಅಸ್ಸಾಂ ಬಿಜೆಪಿ, ಸುದೀರ್ಘವಾದ ಪ್ರಬಂಧ ಬರೆದ ಕೂಡಲೇ ಯಾರೂ ಸೆಮಿಕಂಡಕ್ಟರ್ ತಜ್ಞ ಆಗುವುದಿಲ್ಲ. ಮೊದಲು, ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ನಿಮ್ಮ ಕಲಬುರಗಿ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಿ ಎಂದು ಚಾಟಿ ಬೀಸಿದೆ.
‘ಹಲೋ ಟೆಡ್ಡಿ ಬಾಯ್, ಎಕ್ಸ್ನಲ್ಲಿ ಸುದೀರ್ಘ ಪ್ರಬಂಧ ಬರೆಯುವುದರಿಂದ ನೀವು ಸೆಮಿಕಂಡಕ್ಟರ್ ತಜ್ಞ ಆಗಲಾರಿರಿ. ಅಸ್ಸಾಂ ಬಗ್ಗೆ ಉಪನ್ಯಾಸ ನೀಡುವ ಬದಲು ಆತ್ಮವಿಮರ್ಶೆ ಮಾಡಿಕೊಳ್ಳಿ. ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ನಿಮ್ಮ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ನಿಮ್ಮ ‘ಟ್ಯಾಲೆಂಟ್ ಟ್ಯಾಂಕ್’ ಬಗ್ಗೆ ತುಂಬಾನೇ ಹೇಳ್ತೀರಾ, ಅಲ್ವಾ?’ ಎಂದು ಅಸ್ಸಾಂ ಬಿಜೆಪಿ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದೆ.
ಅಸ್ಸಾಂ ಬಿಜೆಪಿ ಎಕ್ಸ್ ಸಂದೇಶ
Hello Teddy Boy, writing long essays on X doesn’t make you a “semiconductor expert”😂
Instead of giving lectures about Assam, maybe take a good hard look at your own backyard- your district still tops the chart of poverty in South India. So much for your “talent tank”, huh? 💀 https://t.co/a0LFTWjPPX
— BJP Assam Pradesh (@BJP4Assam) October 27, 2025
ಕರ್ನಾಟಕಕ್ಕೆ ಬರಬೇಕಿರುವ ಸೆಮಿಕಂಡಕ್ಟರ್ ಕೈಗಾರಿಕೆಗಳ ಹೂಡಿಕೆಗಳನ್ನು ಕೇಂದ್ರ ಸರ್ಕಾರ ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳಿಗೆ ತಿರುಗಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಅಲ್ಲದೆ, ಸೆಮಿಕಂಡಕ್ಟರ್ ಕೈಗಾರಿಕೆಗಳು ವಾಸ್ತವದಲ್ಲಿ ಬಯಸಿರೋದು ಬೆಂಗಳೂರನ್ನು. ಆದರೆ, ಅಸ್ಸಾಂ ಮತ್ತು ಗುಜರಾತ್‌ಗೆ ಏಕೆ ಹೋಗುತ್ತಿವೆ? ಅಲ್ಲಿ ಪ್ರತಿಭೆಗಳು ಇವೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಇದು ಅಸ್ಸಾಂನ ಯುವಕರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದ ಹಿಮಂತ ಬಿಸ್ವ ಶರ್ಮಾ, ಪ್ರಿಯಾಂಕ್ ಖರ್ಗೆ ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್ ಖರ್ಗೆ ಎಕ್ಸ್ ತಾಣದಲ್ಲಿ ಸೆಮಿಕಂಡಕ್ಟರ್ ಬಗ್ಗೆ ಹಾಗೂ ಅಸ್ಸಾಂ ಕುರಿತು ಸುದೀರ್ಘ ಬರಹ ಪ್ರಕಟಿಸಿದ್ದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ‘ಫಸ್ಟ್ ಕ್ಲಾಸ್ ಈಡಿಯಟ್’: ಕರ್ನಾಟಕದ ಐಟಿ ಸಚಿವರಿಗೆ ಅಸ್ಸಾಂ ಸಿಎಂ ಕೌಂಟರ್
ಹಿಮಂತ ಬಿಸ್ವ ಶರ್ಮಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ಸುಮಾರು ಒಂದು ದಶಕದ ಬಿಜೆಪಿ ಆಡಳಿತದ ನಂತರವೂ ಅಸ್ಸಾಂ ಇಂದು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆಯಂತಹ ನಿರ್ಣಾಯಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಅಸ್ಸಾಂ ಬಿಜೆಪಿ ತಿರುಗೇಟು ನೀಡಿದೆ.




