ಬೆಳಗಾವಿ, ಏಪ್ರಿಲ್ 15: ನೂರಕ್ಕೂ ಹೆಚ್ಚು ಗೂಂಡಾಗಳ ಮೂಲಕ ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬೆಂಬಲಿಗರ ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವಾಚ್ಛ ಶಬ್ಧಗಳಿಂದ ನಿಂದಿಸಿದ್ದು, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಗಾಜಿನ ಬಾಟಲ್, ಕಲ್ಲುಗಳನ್ನು ಹಿಡಿದು ಮನೆಯೊಳಗೆ ನುಗ್ಗಲು ಯತ್ನಿಸಿದ್ದು, ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಇದಕ್ಕೆಲ್ಲ ನೇರವಾಗಿ ಅವರೇ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ. ಹೀಗಾಗಿ ಪ್ರಚೋದನೆ ನೀಡಿದವರು ಮತ್ತು ನನ್ನ ಕೊಲೆಗೆ ಯತ್ನಿಸಿದವರು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆಯಿಷಾ ಸನದಿ, ಸುಜಯ್ ಜಾಧವ್, ಜಯಶ್ರೀ ಸೂರ್ಯವಂಶಿ, ಪ್ರಭಾವತಿ ಮಾಸ್ತಮರಡಿ, ರೋಹಿಣಿಬಾಬ್ಟೆ, ಮುಷ್ತಾಕ್ ಮುಲ್ಲಾ, ಸದ್ದಾಂ, ಶಂಕರಗೌಡ ಪಾಟೀಲ, ಸಂಗನಗೌಡ ಪಾಟೀಲ್, ಭಾರತಿ ಸೇರಿ ನೂರಕ್ಕೂ ಅಧಿಕ ಜನರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಜಯ್ ಪಾಟೀಲ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ: ಸಂಜಯ್ ಪಾಟೀಲ್ ವಿರುದ್ಧ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ
ಈ ವಿಚಾರವಾಗಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತೆಯರು ಬೆಳಗಾವಿಯ ಆದರ್ಶ ನಗರದಲ್ಲಿರುವ ಸಂಜಯ್ ಪಾಟೀಲ್ ಮನೆ ಎದುರು ಪ್ರತಿಭಟನೆ ಮಾಡಿದ್ದರು. ಬಳಿಕ ನಿನ್ನೆ ಸಂಜಯ್ ಪಾಟೀಲ್ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿತ್ತು.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಸಂಜಯ್ ಪಾಟೀಲ್ ಮನೆ ಎದುರು ‘ಕೈ’ ಕಾರ್ಯಕರ್ತೆಯರಿಂದ ಪ್ರತಿಭಟನೆ
ಸಂಜಯ್ ಪಾಟೀಲ್ ಹೇಳಿಕೆ ಕಾಂಗ್ರೆಸ್ಗೆ ಅಸ್ತ್ರವಾಗಿ ಪರಿಣಮಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಈ ಕುರಿತಾಗಿ ಈಗಾಗಲೇ ಮಾತನಾಡಿದ್ದು, ನಾಲಿಗೆ ಮೇಲೆ ಹಿಡಿತ ಇರಬೇಕು. ಇದು ನನಗೆ ಅಲ್ಲ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದ್ದಾರೆ.
ಸಂಜಯ್ ಪಾಟೀಲ್ ತಮ್ಮ ಹೇಳಿಕೆಯನ್ನ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದು, ನಾನು ಅಕ್ಕಾಬಾಯಿ ಎಂದಿರುವೇ ಹೊರತು ಅವರ ಹೆಸರು ತೆಗೆದುಕೊಂಡಿಲ್ಲ. ಎಕ್ಸ್ಟ್ರಾ ಪೆಗ್ ಅಂದರೆ ಎನರ್ಜಿ ಡ್ರಿಂಕ್ ಅಂತಾ ಉಲ್ಟಾ ಹೊಡೆದಿದ್ದಾರೆ. ಚುನಾವಣೆಯಲ್ಲಿ ಆರೋಪ, ಪ್ರತ್ಯಾರೋಪಗಳನ್ನ ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ನಿನ್ನೆ ನಮ್ಮ ಮನೆ ಮುಂದೆ ಪ್ರತಿಭಟನೆ ಮಾಡಿದ್ದವರ ವಿರುದ್ಧ ಕೋರ್ಟಿನಲ್ಲಿ ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.