ಅತುಲ್ ಆತ್ಮಹತ್ಯೆ ಕೇಸ್: ಬೆಂಗಳೂರು ಪೊಲೀಸ್ ಮೂವರು ಆರೋಪಿಗಳನ್ನು ಖೆಡ್ಡಾಕ್ಕೆ ಬೀಳಿಸಿದ್ದೇ ರೋಚಕ
ಕೊನೆಗೂ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತುಲ್ ಪತ್ನಿ ನಿಖಿತಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್ ಸಿಂಘಾನಿಯಾ ಬಂಧಿಸಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದೇ ಒಂದು ರಣರೋಚಕ ಕಥೆ.
ಬೆಂಗಳೂರು, ಡಿಸೆಂಬರ್ 15: ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಕೇಸ್‌ನಲ್ಲಿ ಕೊನೆಗೂ ಮೂವರು ಆರೋಪಿಗಳನ್ನು ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಬಲೆಗೆ ಕೆಡವಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿದ್ದ ಎ-1 ಆರೋಪಿ ಪತ್ನಿ ನಿಖಿತಾ ಬಂಧನವಾಗಿದ್ದರೆ, ಅತ್ತ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಅತ್ತೆ ಎ2 ಆರೋಪಿ ನಿಶಾ ಸಿಂಘಾನಿಯಾ ಹಾಗೂ ಎ-3 ಬಾಮೈದ ಅನುರಾಗ್ ಸಿಂಘಾನಿಯಾರನ್ನ ಪೊಲೀಸರು ಅರೆಸ್ಟ್ ಮಾಡಿದಾರೆ. ಉತ್ತರ ಪ್ರದೇಶಕ್ಕೆ ತೆರಳಿದ್ದ ಕರ್ನಾಟಕ ಪೊಲೀಸ್ ಆರೋಪಿಗಳನ್ನು ಬಂಧಿಸಿದ್ದೇ ರೋಚಕ ಕಥೆ.
ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದು, ಪ್ರಮುಖವಾಗಿ ಪತ್ನಿ, ಅತ್ತೆ ಮತ್ತು ಬಾಮೈದನ ಹೆಸರು ಉಲ್ಲೇಖ ಮಾಡಿದ್ದರು. ಇತ್ತೀಚೆಗೆ ಬೆಂಗಳೂರು ಪೊಲೀಸರು ಬಾಮೈದ ಮತ್ತು ಅತ್ತೆಯನ್ನು ಬಂಧಿಸಿದ್ದರು. ಇದೀಗ ಅತುಲ್ ಪತ್ನಿಯನ್ನು ಬಂಧಿಸಿದ್ದಾರೆ. ಅತುಲ್ ಪತ್ನಿ ನಿಖಿತಾಗಾಗಿ 2 ದಿನ ಪೊಲೀಸರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ: ಟೆಕ್ಕಿಯ ಪತ್ನಿ, ಅತ್ತೆ ಮತ್ತು ಭಾಮೈದ ಅರೆಸ್ಟ್
ಹೀಗಾಗಿ ತಲೆಮರೆಸಿಕೊಂಡಿದ್ದ ನಿಖಿತಾ ಸೇರಿ ಎಲ್ಲ ಆರೋಪಿಗಳು ಅಲಹಾಬಾದ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಯುಪಿ ಬಿಟ್ಟು ಬೇರೆಡೆ ತಲೆಮರೆಸಿಕೊಂಡಿದ್ದ ಶಂಕೆ ಇತ್ತು. ಮೊಬೈಲ್ಗಳನ್ನ ಸ್ವಿಚ್ ಆಪ್ ಮಾಡಿಕೊಂಡು ಸ್ನೇಹಿತರ ಸಹಾಯ ಪಡೆದು ಒಂದು ಕಡೆ ಇರದೆ, ವಾಸಸ್ಥಳ ಬದಲಿಸುತ್ತಿದ್ದರು. ಆದರೆ ಒಂದು ಬಾರಿ ಕರೆ ಮಾಡಿ ನೆರವು ಕೇಳಿದ್ದರಿಂದ ಮೊಬೈಲ್ ಟವರ್ ಮೂಲಕ ಲಾಕ್ ಆಗಿದ್ದಾರೆ.
ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ: ಡಿಸಿಪಿ ಡಾ.ಶಿವಕುಮಾರ್ ಗುಣಾರೆ
ಈ ಬಗ್ಗೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ಮಾಧ್ಯಮದವರೊಂದಿಗೆ ಮಾತನಾಡಿ, ನಿಖಿತಾಳನ್ನು ಗುರುಗ್ರಾಮದ ಪಿಜಿಯೊಂದರಲ್ಲಿ ಬಂಧಿಸಲಾಗಿದೆ. ಇನ್ನಿಬ್ಬರನ್ನು ಪ್ರಯಾಗ್ ರಾಜ್ನ ಹೋಟೆಲ್ ಬಳಿ ಬಂಧಿಸಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಮಾಡಿದೆ. ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು? ಪರಮೇಶ್ವರ್ ಹೇಳಿದ್ದಿಷ್ಟು
ಇನ್ನು ಅತುಲ್ ಸೂಸೈಡ್ ಕೇಸ್ ಕುರಿತಂತೆ ಟೆಕ್ನಿಕಲ್ ಟೀಂ ತನಿಖೆ ಚುರುಕುಗೊಳಿಸಿದೆ. ಪೊಲೀಸರಿಗೆ ಅತುಲ್‌ನ ಲ್ಯಾಪ್‌ಟಾಪ್, ಮೊಬೈಲ್ ಪಾಸ್‌ವರ್ಡ್ ಪತ್ತೆಯಾಗಿದ್ದರಿಂದ ತನಿಖೆ ಚುಕುಗೊಳಿಸಲು ನೆರವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.