
ಬೆಂಗಳೂರು, ಆಗಸ್ಟ್ 28: ಸಚಿವ ಬಿ. ನಾಗೇಂದ್ರ (B Nagendra) ರಾಜೀನಾಮೆ ವಿಚಾರ ಇದೀಗ ದೆಹಲಿ ಅಂಗಳ ತಲುಪಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೈಕಮಾಂಡ್‌ನ ಸ್ಪಷ್ಟ ಸಂದೇಶದೊಂದಿಗೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಪಕ್ಷದ ಹಿತದೃಷ್ಟಿಯಿಂದ ನಾಗೇಂದ್ರ ರಾಜೀನಾಮೆ ನೀಡುವುದು ಸೂಕ್ತ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೀಗಾಗಿ ಒಂದೆರಡು ದಿನಗಳಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯುವ ದಿಕ್ಕಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ನಾಗೇಂದ್ರ ಪ್ರಕರಣದ ಸದ್ಯದ ಕಾನೂನು ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣದ ತನಿಖೆ ಯಾವ ಹಂತದಲ್ಲಿದೆ, ಪ್ರತಿಪಕ್ಷಗಳ ಹೋರಾಟದಿಂದ ಸರ್ಕಾರಕ್ಕೆ ಆಗುತ್ತಿರುವ ರಾಜಕೀಯ ಹಾನಿ, ಮುಂದಿನ ದಿನಗಳಲ್ಲಿ ರಾಜ್ಯಪಾಲರ ಮಟ್ಟದಲ್ಲಿ ನಡೆಯಬಹುದಾದ ಬೆಳವಣಿಗೆಗಳು ಹಾಗೂ ನಾಗೇಂದ್ರ ಸಚಿವ ಸಂಪುಟದಲ್ಲಿ ಮುಂದುವರಿದರೆ ಪಕ್ಷ ಮತ್ತು ಸರ್ಕಾರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಹೈಕಮಾಂಡ್ ನಾಯಕರು ಅವಲೋಕಿಸಿದ್ದಾರೆ.
ಈ ಸಮಾಲೋಚನೆಯ ಬಳಿಕ ವ್ಯಕ್ತಿಗಿಂತ ಪಕ್ಷ ಮತ್ತು ಸರ್ಕಾರದ ಹಿತ ಮುಖ್ಯ ಎಂಬ ನಿಲುವಿಗೆ ಹೈಕಮಾಂಡ್ ಬಂದಿದೆ. ಹೀಗಾಗಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಹೈಕಮಾಂಡ್ ಭೇಟಿಯ ನಂತರ ದೆಹಲಿಯಲ್ಲಿ ಗುರುವಾರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು. ಇದು ನಾಗೇಂದ್ರ ಅವರ ರಾಜೀನಾಮೆ ಕುರಿತ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.
ನಾಗೇಂದ್ರ ವಿರುದ್ಧದ ಪ್ರಕರಣ ಇದೀಗ ಕೇವಲ ರಾಜ್ಯ ರಾಜಕೀಯದ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಿಲ್ಲ. ವಾಲ್ಮೀಕಿ ನಿಗಮ ಪ್ರಕರಣದಲ್ಲಿ ನಾಗೇಂದ್ರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಸಿಬಿಐ ರಾಜ್ಯಪಾಲರ ಅನುಮತಿ ಕೋರಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಒಂದು ವೇಳೆ ರಾಜ್ಯಪಾಲರು ಅನುಮತಿ ನೀಡಿದರೆ ಸರ್ಕಾರಕ್ಕೆ ರಾಜಕೀಯವಾಗಿ ಹಿನ್ನಡೆಯಾಗಬಹುದು. ಪ್ರತಿಪಕ್ಷಗಳು ಇದೇ ವಿಚಾರವನ್ನು ಪ್ರಮುಖ ಅಸ್ತ್ರವಾಗಿ ಬಳಸುವ ಸಾಧ್ಯತೆಯೂ ಇದೆ. ಬಿಜೆಪಿ ಪಾದಯಾತ್ರೆ ಮೂಲಕ ಕಾಂಗ್ರೆಸ್ ವಿರುದ್ಧ ಸಮರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ವಿಚಾರ ದಲಿತ ಸಮುದಾಯದ ಮೇಲೂ ರಾಜಕೀಯ ಪರಿಣಾಮ ಬೀರಬಹುದು ಎಂಬ ಆತಂಕ ಹೈಕಮಾಂಡ್ ಮಟ್ಟದಲ್ಲಿದೆ.

ಹೀಗಾಗಿ ರಾಜ್ಯಪಾಲರ ಕಡೆಯಿಂದ ಮುಂದಿನ ಹೆಜ್ಜೆ ಪ್ರಕಟಗೊಳ್ಳುವ ಮೊದಲೇ ರಾಜಕೀಯವಾಗಿ ಮುನ್ನೆಚ್ಚರಿಕೆ ವಹಿಸಿ, ಪ್ರತಿಪಕ್ಷಗಳ ಕೈಯಲ್ಲಿರುವ ಪ್ರಮುಖ ಅಸ್ತ್ರವನ್ನು ಕಸಿದುಕೊಳ್ಳಬೇಕು ಎಂಬ ಚರ್ಚೆ ಕಾಂಗ್ರೆಸ್‌ನ ಉನ್ನತ ಮಟ್ಟದಲ್ಲಿ ನಡೆದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಸಮಾಲೋಚನೆಯಲ್ಲಿ ಹೈಕಮಾಂಡ್ ಮೂರು ಪ್ರಮುಖ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದೆ.
ಮೊದಲನೆಯದು, ನಾಗೇಂದ್ರ ಸಂಪುಟದಲ್ಲೇ ಮುಂದುವರಿದರೆ ಬಿಜೆಪಿ ಪಾಲಿಗೆ ದೊಡ್ಡ ರಾಜಕೀಯ ಅಸ್ತ್ರವಾಗಬಹುದು ಎಂಬ ಆತಂಕ. ವಾಲ್ಮೀಕಿ ನಿಗಮ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ನಿರಂತರವಾಗಿ ಮಾಡುತ್ತಿವೆ. ನಾಗೇಂದ್ರ ಸಚಿವ ಸಂಪುಟದಲ್ಲೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಇದೇ ವಿಚಾರ ಸರ್ಕಾರದ ವಿರುದ್ಧ ದೊಡ್ಡ ರಾಜಕೀಯ ಅಸ್ತ್ರವಾಗಬಹುದು ಎಂಬ ಲೆಕ್ಕಾಚಾರವಿದೆ.
ಎರಡನೆಯದು, ಸಿಬಿಐ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದರೆ ಎದುರಾಗಬಹುದಾದ ಕಾನೂನು ಮತ್ತು ರಾಜಕೀಯ ಪರಿಣಾಮ. ಮುಂದಿನ ಕಾನೂನು ಪ್ರಕ್ರಿಯೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಮೊದಲೇ ಅಂದಾಜಿಸಿ ರಾಜಕೀಯ ಹಾನಿಯನ್ನು ನಿಯಂತ್ರಿಸುವ ಲೆಕ್ಕಾಚಾರವನ್ನು ಹೈಕಮಾಂಡ್ ನಡೆಸಿದೆ ಎನ್ನಲಾಗಿದೆ.
ಮೂರನೆಯದು, ಕಾನೂನು ಹೋರಾಟದ ಹೊರೆ ಸರ್ಕಾರದ ಮೇಲೆ ಬೀಳಬಾರದು ಎಂಬ ನಿಲುವು. ನಾಗೇಂದ್ರ ರಾಜೀನಾಮೆಯನ್ನೇ ಕೇಂದ್ರವಾಗಿಟ್ಟುಕೊಂಡು ಬಿಜೆಪಿ ತನ್ನ ಹೋರಾಟವನ್ನು ಮತ್ತಷ್ಟು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ರಾಜೀನಾಮೆ ಪಡೆಯುವ ಮೂಲಕ ಪ್ರತಿಪಕ್ಷದ ಪ್ರಮುಖ ರಾಜಕೀಯ ಅಸ್ತ್ರವನ್ನು ನಿಷ್ಕ್ರಿಯಗೊಳಿಸಬಹುದು ಎಂಬ ಲೆಕ್ಕಾಚಾರವೂ ಇದೆ.
ಹೈಕಮಾಂಡ್‌ನ ಅಭಿಪ್ರಾಯವನ್ನು ಈಗಾಗಲೇ ನಾಗೇಂದ್ರ ಅವರಿಗೂ ತಲುಪಿಸಲಾಗಿದೆ ಎನ್ನಲಾಗಿದೆ. ಒಂದು ವೇಳೆ ಅವರು ರಾಜೀನಾಮೆ ನೀಡಿದರೆ, ಅದನ್ನು ತಪ್ಪೊಪ್ಪಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಂತೆ ಬಿಂಬಿಸಬಾರದು. ಬದಲಾಗಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ತೆಗೆದುಕೊಂಡ ರಾಜಕೀಯ ನಿರ್ಧಾರ ಎಂಬ ರೀತಿಯಲ್ಲಿ ಅದನ್ನು ಪ್ರಸ್ತುತಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ನಾಗೇಂದ್ರ ರಾಜೀನಾಮೆಗೆ ಸಿದ್ಧರಾಗಿದ್ದಾರೆ ಎಂಬ ವರದಿಗಳು ಹೊರಬಂದಿದ್ದರೂ, ಆಗಸ್ಟ್ 26ರಂದು ನಾಗೇಂದ್ರ ಅವರು ಸ್ವತಃ ಅಂತಹ ವರದಿಗಳನ್ನು ನಿರಾಕರಿಸಿದ್ದರು.
ಇದನ್ನೂ ಓದಿ: ಹೊಸ ಸರ್ಕಾರದ ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಗಾಂಧಿ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಒಟ್ಟಿನಲ್ಲಿ ನಾಗೇಂದ್ರ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೀಗ ‘ಡ್ಯಾಮೇಜ್ ಕಂಟ್ರೋಲ್’ ಮೋಡ್‌ಗೆ ಬಂದಿದೆ ಎನ್ನುವ ಲಕ್ಷಣಗಳು ಗೋಚರಿಸುತ್ತಿವೆ. ದೆಹಲಿ ಮೂಲಗಳ ಪ್ರಕಾರ, ಮುಂದಿನ ಒಂದೆರಡು ದಿನಗಳಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ