Mother of all marshal arts ವುಶು ಆಟದಲ್ಲಿ ಚಿನ್ನದ ಪದಕಗಳ ಸರದಾರಿಣಿ ಬಾಗಲಕೋಟೆಯ ಶ್ರುತಿ ದಾಸರ
Mother of all marshal arts Wushu | ವುಶು ಮಾರ್ಷಲ್ ಆರ್ಟ್ಸ್ ಮಾದರಿ ಕ್ರೀಡೆಯಾಗಿದ್ದು, ಬಾಕ್ಷಿಂಗ್, ಕಿಕ್ ಬಾಕ್ಷಿಂಗ್, ಕರಾಟೆ ಪಟ್ಟು ಹೊಂದಿರುವ ಕ್ರೀಡೆಯಾಗಿದೆ. ಇದನ್ನು ಮದರ್ ಆಪ್ ಆಲ್ ಮಾರ್ಷಲ್ ಆರ್ಟ್ಸ್ ಎಂದು ಕರೆಯುತ್ತಾರೆ.
ಬಾಗಲಕೋಟೆ: ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎನ್ನುವುದು ಎಷ್ಟು ನಿಜವೋ ಬಡತನವನ್ನೇ ಅಸ್ತ್ರವನ್ನಾಗಿಸಿಕೊಂಡು, ಸಾಧನೆ ಮಾಡಿರುವ ಅನೇಕರು ನಮ್ಮಲ್ಲಿ ಇದ್ದಾರೆ ಎನ್ನುವುದು ಅಷ್ಟೇ ನಿಜ. ವ್ಯಾಪಾರ, ಉದ್ದಿಮೆ, ಶಿಕ್ಷಣ, ಕ್ರೀಡೆ, ಸಿನಿಮಾ ಹೀಗೆ ಹಲವಾರು ಕ್ಷೇತ್ರದಲ್ಲಿ ತಳಮಟ್ಟದಿಂದ ಆಕಾಶದೆತ್ತರಕ್ಕೆ ಹಾರಿ ಎಲ್ಲರ ಸ್ಪೂರ್ತಿಗೆ ಪಾತ್ರರಾದವರನ್ನು ಇಂದಿಗೂ ಜನ ಸ್ಮರಿಸುತ್ತಾರೆ. ಅದೇ ರೀತಿ ಬಾಗಲಕೋಟೆಯ ಬಡ ದಂಪತಿಯ ಮಗಳು ಇಂದು ತನ್ನ ಬಡತನವನ್ನೇ ಸವಾಲಾಗಿಸಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದಿಲ್ಲದೇ ಹೆಸರು ಮಾಡುತ್ತಿದ್ದಾಳೆ.
ಒಂದಲ್ಲ ಎರಡಲ್ಲ ಬರೊಬ್ಬರಿ ಏಳು ಚಿನ್ನದ ಪದಕ, ಮೂರು ಬೆಳ್ಳಿಯ ಪದಕ, ಎರಡು ಬಾರಿ ಕಂಚಿನ ಪದಕ ಪಡೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಈ ಯುವತಿ ಓರ್ವ ಬಡ ಕೃಷಿಕನ ಹಾಗೂ ಓರ್ವ ಆಯಾ ಅವರ ಮಗಳು ಎಂಬುವುದೇ ವಿಶೇಷ. ಹೌದು ಈ ಯುವತಿಯ ಹೆಸರು ಶ್ರುತಿ ತುಳಸಪ್ಪ ದಾಸರ, 23 ವರ್ಷದ ಶ್ರುತಿ ದಾಸರ ಇಂದು ವುಶು ಕ್ರೀಡೆಯಲ್ಲಿ ರಾಜ್ಯ , ರಾಷ್ಟ್ರಮಟ್ಟದಲ್ಲಿ ಮಿಂಚಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದು ವುಶು ಕ್ರೀಡೆಗೆ ಮತ್ತಷ್ಟು ಮೆರುಗನ್ನು ತಂದಿದ್ದಾಳೆ.
ಕಡುಬಡತನದಲ್ಲಿ ಅರಳಿದ ಯುವತಿ:
ಶ್ರುತಿ ದಾಸರ ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕಂದಗಲ್ ಗ್ರಾಮದ ನಿವಾಸಿ. ತಂದೆ ತುಳಸಪ್ಪ ದಾಸರ ಹಾಗೂ ತಾಯಿಯ ಹೆಸರು ಸಾವಿತ್ರಿ. ದ್ವಿತೀಯ ಪಿಯುಸಿ ಮುಗಿಸಿರುವ ಶ್ರುತಿ ಅವರದ್ದು ಕಡುಬಡತನದ ಕುಟುಂಬ. ತಂದೆ ಹೆಸರಲ್ಲಿ ಇರುವುದು ಕೇವಲ ಒಂದು ಎಕರೆ ಆಸ್ತಿ ಮಾತ್ರ. ಅದರಿಂದ ಜೀವನ ಕಟ್ಟಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗಿದ್ದು, ಕೈಗೆ ಬಂದಷ್ಟು ಫಸಲು, ಒಂದು ವೇಳೆ ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಬರಲಿಲ್ಲ ಹೀಗೆ ನಾನಾ ಸಮಸ್ಯೆಗಳಿದೆ. ಇನ್ನು ಇಂತಹ ಪರಿಸ್ಥಿತಿ ಹಿನ್ನೆಲೆ ಶ್ರುತಿ ಅವರ ತಾಯಿ ಸಾವಿತ್ರಿ ಬೀಳಗಿ ಪಟ್ಟಣದ ಒಂದು ಖಾಸಗಿ ಶಾಲೆಯಲ್ಲಿ ಆಯಾ (ಡಿ ದರ್ಜೆ) ಕೆಲಸ ಮಾಡುತ್ತಾರೆ. ಆದರೆ ಬಡತನ ಪರಿಸ್ಥಿತಿಯಲ್ಲೂ ಮಗಳು ಶ್ರುತಿಗೆ ಶಿಕ್ಷಣ ಕೊಡಿಸಿ ಆಕೆಯನ್ನು ಒಬ್ಬ ಕ್ರೀಡಾಪಟುವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೊತೆಗೆ ಮಗಳು ತಂದೆ ತಾಯಿಗೆ ಗೌರವ ತರುವ ರೀತಿ ವುಶು ಕ್ರೀಡೆಯಲ್ಲಿ ಹೆಸರು ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. 2010 ರಿಂದ ವುಶು ಕ್ರೀಡೆಯಲ್ಲಿ ತೊಡಗಿಕೊಂಡಿದ್ದು, ರಾಜ್ಯಮಟ್ಟದಲ್ಲಿ ಒಟ್ಟು ಏಳು ಬಾರಿ ಬಂಗಾರದ ಪದಕ, ಮೂರು ಬಾರಿ ಬೆಳ್ಳಿಯ ಪದಕ, ಎರಡು ಬಾರಿ ಕಂಚಿನ ಪದಕ ಪಡೆದು ಸಾಧನೆಯ ಹಾದಿ ಹಿಡಿದಿದ್ದಾರೆ. 4 ಬಾರಿ ರಾಷ್ಟ್ರಮಟ್ಟದ ವುಶು ಕ್ರೀಡೆಯಲ್ಲಿ ಭಾಗಿಯಾಗಿ ಸಾಧನೆ ಮಾಡಿದ್ದಾರೆ. ಶ್ರುತಿ ಅವರ ಸಹೋದರಿ ಪದವಿ ಓದುತ್ತಿದ್ದರೆ, ಸಹೋದರ ಪ್ರೌಢ ಶಿಕ್ಷಣ ಪಡೆಯುತ್ತಿದ್ದು, ಹಿರಿಯ ಮಗಳು ಶ್ರುತಿ, ಮನೆಯ ಜವಾಬ್ದಾರಿ ಜೊತೆ ವುಶು ಕ್ರೀಡೆಯಲ್ಲಿ ಸಾಧನೆಯ ಮೆಟ್ಟಿಲು ಏರುತ್ತಿದ್ದಾಳೆ.
ಶ್ರುತಿ ದಾಸರ ಪಕ್ಕಾ ವುಶು ಕ್ರೀಡೆಗೆ ಹೇಳಿ ಮಾಡಿಸಿದ ಮೈಕಟ್ಟು ಹೊಂದಿದ್ದಾರೆ. ಅವರ ಹೈಟ್, ಫಿಟ್ ನೆಸ್ ವುಶು ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಮಾಡಿದೆ. ಇನ್ನು ವುಶು ಕ್ರೀಡೆ ಹೆಚ್ಚಿನ ಜನರಿಗೆ ಇನ್ನೂ ತಲುಪಿಲ್ಲ ಎಂದು ಹೇಳಬಹುದು. ಇದೊಂದು ಮಾರ್ಷಲ್ ಆರ್ಟ್ಸ್ ಮಾದರಿ ಕ್ರೀಡೆಯಾಗಿದ್ದು, ಬಾಕ್ಸಿಂಗ್, ಕಿಕ್ ಬಾಕ್ಸಿಂಗ್, ಕರಾಟೆ ಪಟ್ಟು ಹೊಂದಿರುವ ಕ್ರೀಡೆಯಾಗಿದೆ. ಇದನ್ನು ಮದರ್ ಆಫ್ ಆಲ್ ಮಾರ್ಷಲ್ ಆರ್ಟ್ಸ್ ಎಂದು ಕರೆಯುತ್ತಾರೆ. ಆದರೆ ಕ್ರೀಡೆಗೆ ಇನ್ನೂ ಹೆಚ್ಚಿನ ಪ್ರಚಾರ ಬೇಕಾಗಿದ್ದು ನಿಜ. ಇಂತಹ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಶ್ರುತಿ ಇಂದು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾಳೆ.
ಈಕೆ ವುಶು ಕ್ರೀಡೆಯಲ್ಲಿ ಅಖಾಡಕ್ಕೆ ಇಳಿದರೆ ಎದುರಾಳಿಗಳು ತರಗುಟ್ಟಿ ಹೋಗ್ತಾರೆ. ಪಂಚ್, ಕಿಕ್ಗೆ ಅಖಾಡದಲ್ಲಿ ಮಕಾಡೆ ಮಲಗುತ್ತಾರೆ. ನೋಡ ನೋಡುತ್ತಿದ್ದಂತೆ ಎದುರಾಳಿ ಆಟಗಾರರ ಬೆವರಿಳಿಸಿ ಬೆಂಡಾಗುವಂತೆ ಮಾಡುವಂತಹ ಕಲೆ ಈ ಹಳ್ಳಿ ಪ್ರತಿಭೆಗೆ ಶ್ರುತಿಗೆ ಕರಗತವಾಗಿದೆ. ಆದರೆ ಇಂತಹ ಕ್ರೀಡಾಪಟುವಿಗೆ ಅಲ್ಲಲ್ಲಿ ಸಣ್ಣಪುಟ್ಟ ಸನ್ಮಾನ ಹೊರತುಪಡಿಸಿದರೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸರಿಯಾಗಿ ಗುರುತಿಸಿಲ್ಲ ಎನ್ನುವುದೇ ಬೇಸರದ ಸಂಗತಿ.
ಇವಳ ಪ್ರತಿಭೆ ಗುರುತಿಸಿ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ತನ್ನ ಪಾಡಿಗೆ ವುಶು ಕ್ರೀಡೆಯಲ್ಲಿ ಸಾಧನೆ ಹಾದಿ ಹಿಡಿದಿರುವ ಶ್ರುತಿ ಮುಂದೆ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆಯಬೇಕು, ಓಲಿಂಪಿಕ್ಸ್ನಲ್ಲೂ ಭಾಗಿಯಾಗಬೇಕು ಎಂಬ ಕನಸು ಹೊಂದಿದ್ದು, ನನಗೆ ಎಲ್ಲರೂ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಬೀಳಗಿ ಕಸ್ತೂರಿ ಬಾ ವಸತಿ ಶಾಲೆ ಸೇರಿದಂತೆ ವಿವಿಧ ಶಾಲೆ ಮಕ್ಕಳಿಗೆ ಹೋಗಿ ವುಶು ಬಗ್ಗೆ ತರಬೇತಿ ನೀಡಿ ಅವರು ಕೊಡುವ ಗೌರವಧನವನ್ನು ಮಾತ್ರ ಪಡೆಯುತ್ತಿದ್ದಾರೆ ಈ ಶ್ರುತಿ. ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ವುಶು ಕಡೆ ಕರೆತರುತ್ತಿದ್ದು, ಏನೆ ಆಗಲಿ ಬಡ ದಂಪತಿ ಈ ಮುದ್ದಿನ ಮಗಳ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಇವಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿಯಿಂದ ಎರಡು ಚಿನ್ನದ ಪದಕ ಪಡೆದುಕೊಂಡ ಬಿಸಿಲುನಾಡಿನ ವಿದ್ಯಾರ್ಥಿನಿ; ಮಹತ್ತರ ಸಾಧನೆಗೆ ಫುಲ್ ಖುಷ್!