
ಬಾಗಲಕೋಟೆ, ಅಕ್ಟೋಬರ್ 7: ಬಾಗಲಕೋಟೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ಜಾಲ ಪತ್ತೆಹಚ್ಚಲು ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಿಳಾ ಅಧಿಕಾರಿಗಳೇ ವೇಷ ಬದಲಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದು, ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಶ್ವೇತಾ ಬಿಡಿಕರ್ ಗರ್ಭಿಣಿಯಂತೆ, ಆರೋಗ್ಯ ಸೌಧ ಡಿಡಿ ಡಾ. ಶೋಭಾ ನಾದಿನಿಯಂತೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸುವರ್ಣಾ ಕುಲಕರ್ಣಿ ತಾಯಿಯಂತೆ ವೇಷ ಧರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಾಲಿಂಗಪುರದ ಕವಿತಾ ಎಂಬ ನಕಲಿ ವೈದ್ಯೆ ನೀಡಿದ ಮಾಹಿತಿಯ ಮೇರೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿ, ಕರ್ಜಗಿ ಸೇರಿದಂತೆ ಹಲವೆಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾರುವೇಷದ ಕಾರ್ಯಾಚರಣೆ ವೇಳೆ ಜಾಡರ ಬಬಲಾದಿಯ ತೋಟದ ಮನೆಯಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಕ್ಯಾನಿಂಗ್ ಯಂತ್ರ, ಎಂಟಿಬಿ ಡ್ರಗ್ಸ್ ಹಾಗೂ ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಡಾ. ಸಂಜಯ್ ವಾಘ್ಮೋರೆ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಡಿಹೆಚ್‌ಒ ಡಾ. ರಾಜಕುಮಾರ್ ಯರಗಲ್ ಅವರ ಪುತ್ರಿ ಅಂಕಿತಾ ಅವರ ವಿಚಾರವೂ ಈ ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿದೆ. ಅಂಕಿತಾ ಯರಗಲ್ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದು, ತಾನು ವೈದ್ಯೆ ಎಂದು ವೇತನ ಪಡೆಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ಅಮಾನತಾದ ಡಿಹೆಚ್‌ಒ ಡಾ. ರಾಜಕುಮಾರ್ ಯರಗಲ್ ಮತ್ತು ಪ್ರಭಾರ ಡಿಹೆಚ್‌ಒ ಸುವರ್ಣಾ ಕುಲಕರ್ಣಿ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ. ಪ್ರಭಾರ ಡಿಹೆಚ್‌ಒ ಸುವರ್ಣಾ ಅವರು ಖಾಸಗಿ ಆಸ್ಪತ್ರೆ ಹೊಂದಿದ್ದಾರೆ ಎಂದು ಅಂಕಿತಾ ಆರೋಪಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸುವರ್ಣಾ, ಆಸ್ಪತ್ರೆ ತಮ್ಮ ಪತಿ ಹೆಸರಿನಲ್ಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ದಂಧೆ ಪ್ರಕರಣ: ತನಿಖೆ ಮುಕ್ತಾಯಗೊಳಿಸಿದ ಸಿಐಡಿ ತಂಡ
ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಹತ್ಯೆಗೆ ಸಂಬಂಧಿಸಿದ ಜಾಲ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಿಂದ ಮಹಾರಾಷ್ಟ್ರದವರೆಗೆ ವ್ಯಾಪಿಸಿರುವ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 am, Wed, 7 October 26