ರಕ್ತ ಕುದಿಯುತ್ತದೆ, ರೋಷ ಉಕ್ಕುತ್ತದೆ: ಕಾರ್ಗಿಲ್​ ಯುದ್ದದಲ್ಲಿ 2 ಕೈ, ಬಲಗಾಲು ಕಳೆದುಕೊಂಡಿದ್ದ ನಿವೃತ್ತ ಸೈನಿಕನ ರೋಷಾಗ್ನಿ

ಬಾಗಲಕೋಟೆಯ ನಿವೃತ್ತ ಯೋಧ ರಂಗಪ್ಪ ಆಲೂರ ಅವರು ಕಾರ್ಗಿಲ್ ಯುದ್ಧದಲ್ಲಿ ತಾವು ಹೋರಾಡಿದ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಯುದ್ಧದ ಕಾರ್ಮೋಡ ಕಂಡು ದೇಶಕ್ಕಾಗಿ ಮತ್ತೆ ಹೋರಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ಕೈ ಮತ್ತು ಬಲಗಾಲು ಕಳೆದುಕೊಂಡಿದ್ದರೂ, ಅವರ ದೇಶಪ್ರೇಮ ಅಚಲವಾಗಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ರಕ್ತ ಕುದಿಯುತ್ತದೆ, ರೋಷ ಉಕ್ಕುತ್ತದೆ: ಕಾರ್ಗಿಲ್​ ಯುದ್ದದಲ್ಲಿ 2 ಕೈ, ಬಲಗಾಲು ಕಳೆದುಕೊಂಡಿದ್ದ ನಿವೃತ್ತ ಸೈನಿಕನ ರೋಷಾಗ್ನಿ
ನಿವೃತ್ತ ಯೋಧ ರಂಗಪ್ಪ ಅಲೂರ
Edited By:

Updated on: May 11, 2025 | 4:13 PM

ಬಾಗಲಕೋಟೆ, ಮೇ 11: ಪಾಕಿಸ್ತಾನದ (Pakistan) ಕುತಂತ್ರ ಬುದ್ದಿ ಮತ್ತು ಭಾರತದ (India) ಮೇಲೆ ಮಾಡುತ್ತಿರುವ ದಾಳಿಯನ್ನು ಕಂಡು ನನಗೆ ರಕ್ತ ಕುದಿಯುತ್ತದೆ. ಈಗಲೂ ಗಡಿಗೆ ಹೋಗಿ ಯುದ್ಧ ಮಾಡಬೇಕೆಂದು ರೋಷ ಉಕ್ಕುತ್ತದೆ ಎಂದು ಬಾಗಲಕೋಟೆಯ (Bagalkot) ನಿವೃತ್ತ ಯೋಧ ರಂಗಪ್ಪ ಆಲೂರ ಹೇಳಿದ್ದಾರೆ. ಬಾಗಲಕೋಟೆ ಸಮೀಪದ ಹುಲಸಗೇರಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಯೋಧ ರಂಗಪ್ಪ ಆಲೂರ ಅವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ತಮ್ಮ ಎರಡೂ ಕೈ ಮತ್ತು ಬಲಗಾಲು ಕಳೆದುಕೊಂಡಿದ್ದಾರೆ.

ನಿವೃತ್ತ ಯೋಧ ರಂಗಪ್ಪ ಆಲೂರ ಅವರು ಕಾರ್ಗಿಲ್‌ ಯುದ್ಧದ ನೆನಪನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ. “ನಮ್ಮದು ಒಂಬತ್ತು ಜನರ ತಂಡವಿತ್ತು. ಒಬ್ಬರು ಅದರಲ್ಲಿ ನೀರು ಕುಡಿಯಲು ಹೋಗಿದ್ದರು. ನಾವು ಎಂಟು ‌ಜನರಿದ್ದೆವು. ಪಾಕಿಸ್ತಾನದ ಸೈನ್ಯದ ಮೇಲೆ ಸತತ ಗುಂಡಿನ ಮಳೆ ಸುರಿಸುತ್ತಿದ್ದೆವು. ಆಗ ನಮ್ಮ ಎದುರಾಳಿ ಪಾಕಿಸ್ತಾನ, ನಾವಿದ್ದ ಜಾಗದ ಮೇಲೆ ಮಿಸೈಲ್ ದಾಳಿ ಮಾಡಿತು. ಮಿಸೈಲ್ ದಾಳಿಯಿಂದ ನಾನು ಗಾಯಗೊಂಡು, ಪ್ರಜ್ಞೆ ಕಳೆದುಕೊಂಡಿದ್ದೆ. ನನ್ನ ಎರಡೂ ಕೈ ಮತ್ತು ಬಲಗಾಲು ತುಂಡಾಗಿದ್ದು ಮತ್ತು ನನ್ನ ಜೊತೆಗಿದ್ದ ಏಳು ಜನ ಯೋಧರು ಸ್ಥಳದಲ್ಲೇ ಮೃತಟ್ಟಿರುವ ವಿಚಾರ ನನಗೆ ಗೊತ್ತಾಗಿದ್ದು ಆರು ತಿಂಗಳ ನಂತರ. ನನಗೆ ದೇಶಕ್ಕಾಗಿ ಹೋರಾಡಿದ ಹೆಮ್ಮೆಯಿದೆ. ಭಾರತ‌ ಮಾತೆಗಾಗಿ ಹೋರಾಡಿದ್ದು ಸಾರ್ಥಕತೆ ಇದೆ. ನಾನು ಹುತಾತ್ಮನಾಗಬೇಕಿತ್ತು. ಆದರೆ ಅದೃಷ್ಟವಶಾತ್ ಬದುಕಿದ್ದೇನೆ” ಎಂದರು.

ನಿವೃತ್ತ ಯೋಧ ರಂಗಪ್ಪ ಆಲೂರ ಅವರು ರಂಗಪ್ಪ 1993 ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು. ಮರಾಠಾ ರೆಜಿಮೆಂಟ್ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ರಂಗಪ್ಪ ಆಲೂರ ಅವರು, ಅಸ್ಸಾಮ್, ಗುಜರಾತ್, ಕಾರ್ಗಿಲ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆ ಸೇರಿ ಆರೇ ವರ್ಷದಲ್ಲಿ ಅಂದರೆ ತಮ್ಮ 25ನೇ ವಯಸ್ಸಿನಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾದರು. ಜುಲೈ 22 ವರೆಗೂ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು. ಜುಲೈ 22 ರಂದು ಮಿಸೈಲ್ ದಾಳಿಗೆ ಸಿಲುಕಿದರು. ದೇಹದ ತುಂಬ 28 ಆಪರೇಷನ್ ಆಗಿವೆ. ಮೂರು ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಿವೃತ್ತ ಯೋಧ ರಂಗಪ್ಪ ಆಲೂರ ಅವರು ಅವಿವಾಹಿತರು. ಕಾರ್ಗಿಲ್​ ಯದ್ಧದಲ್ಲಿ ಹೋರಾಡಿದಾಗ ರಂಗಪ್ಪ ಆಲೂರ ಅವರಿಗೆ ವಯ , ಆಗ ಯೋಧ ರಂಗಪ್ಪ ಮದುವೆಯಾಗಿರಲಿಲ್ಲ, ನಂತರ ಕೊನೆಗೂ ಮದುವೆಯಾಗಲೇ ಇಲ್ಲ.

ಇದನ್ನೂ ಓದಿ
ಭಾರತಕ್ಕೆ ಬ್ರಹ್ಮೋಸ್‌ ಮಿಸೈಲ್​​ ಬಲ: ಏನಿದರ ಮಹತ್ವ, ಸಾಮಾರ್ಥ್ಯ?
ಟೆರಿಟೋರಿಯಲ್ ಆರ್ಮಿಗೆ ಸೇರಲು ನಾಗರಿಕರಿಗೆ ಆಹ್ವಾನ
ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿ ಟ್ರೋಲ್ ಆದ ಅಮಿತಾಭ್
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್

ಪಾಕಿಸ್ತಾನದ್ದು ಯಾವಾಗಲೂ ನರಿ ಬುದ್ದಿ: ರಂಗಪ್ಪ

ಭಾರತ ಕದನ ವಿರಾಮಕ್ಕೆ ಒಪ್ಪಿಕೊಳ್ಳಬಾರದಿತ್ತು. ಪಾಕಿಸ್ತಾನದ ಹುಟ್ಟಡಗಿಸಬೇಕಿತ್ತು. ಪಾಕಿಸ್ತಾನದ ಉಗ್ರರನ್ನು ಒಂದು ದಂಡೆಗೆ ಹಚ್ಚಬೇಕಿತ್ತು. ಪಾಕಿಸ್ತಾನದ್ದು ಯಾವಾಗಲೂ ನರಿ ಬುದ್ದಿ. ಕದನ ವಿರಾಮ ಘೋಷಣೆ ಮಾಡಿದ ಮೇಲೂ ದಾಳಿ ಮಾಡಿದ್ದಾರೆ. ಡ್ರೋನ್​ ಮೂಲಕ ದಾಳಿ ಮಾಡಲು ಯತ್ನಿಸಿದರು. ಪಾಕಿಸ್ತಾನ ಇಷ್ಟಕ್ಕೆ ಸುಮ್ಮನಿರುವುದಿಲ್ಲ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ ಎಂದ ಯೋಗಿ

ಪಾಕಿಸ್ತಾನಕ್ಕೆ ಈಗ ಭಾರತದ ಬಗ್ಗೆ ಭಯ ಶುರುವಾಗಿದೆ. ನನಗೆ ಈಗಲೂ ರಕ್ತ ಕುದಿಯುತ್ತದೆ. ಈಗಲೂ ಗಡಿಗೆ ಹೋಗಿ ಯುದ್ಧ ಮಾಡಬೇಕೆಂದು ರೋಷ ಉಕ್ಕುತ್ತದೆ. ಜೊತೆಗೆ ‌ಇಂದಿರಾ ಕಾಲದಲ್ಲಿ‌ ಮಂಡಿಯೂರಿಸಿಂತೆ ಈಗಲೂ ಪಾಕಿಸ್ತಾನ ಯೋಧರು‌ ಮಂಡಿಯೂರುವಂತೆ ಮಾಡಬೇಕಿತ್ತು ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Sun, 11 May 25