ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಖ್ಯಾತಿಯ ಟಗರು ಸಾವು; ಅಂತಿಮ ದರ್ಶನಕ್ಕೆ ಹೊರ ರಾಜ್ಯಗಳಿಂದ ಬಂದ ಜನ
ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ವಿಶ್ವವಿಖ್ಯಾತ ಮೈಸೂರು ದಸರಾ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ಟಗರಿನ ಕಾಳಗದಲ್ಲಿ ಹೆಸರು ಮಾಡಿದ್ದ ಟಗರು ಸಾವು.

ಬಾಗಲಕೋಟೆ: ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರುವಾಸಿಯಾದ ಟಗರು ಮೃತಪಟ್ಟಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿಯ ಪಾಂಡು ಗಣಿಗೆ ಸೇರಿದ ಈ ಟಗರು ಅನಾರೋಗ್ಯದಿಂದ ಸಾವನ್ನಪ್ಪಿದೆ.
ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡ್ತಾರೆ. ಆದರೆ ಪ್ರಾಣಿಗಳು ಮೃತಪಟ್ಟರೆ ಅಂತಹ ಸನ್ನಿವೇಶ ಸಿಗೋದು ಕಡಿಮೆ.ಆದರೂ ಅಲ್ಲೋ ಇಲ್ಲೋ ಕೆಲವರು ತಮ್ಮ ಪ್ರೀತಿಯ ಪ್ರಾಣಿ ಮೃತಪಟ್ಟಾಗ ಅನೇಕರು ಕಣ್ಣೀರು ಹಾಕಿ ಅದಕ್ಕೆ ಮನುಷ್ಯರಂತೆ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿ ಶ್ರದ್ದಾಂಜಲಿ ಸಲ್ಲಿಸುತ್ತಾರೆ. ಇನ್ನು ಅದೊಂದು ಊರಲ್ಲಿ ಒಂದು ಟಗರು ಅನಾರೋಗ್ಯದಿಂದ ಮೃತಪಟ್ಟಾಗ ಮಾಡಿದ ಅಂತ್ಯಸಂಸ್ಕಾರ ಎಲ್ಲರಿಂದಲೂ ಮೆಚ್ಚುಗೆ ಜೊತೆಗೆ ಅಚ್ಚರಿ ಮೂಡಿಸಿದೆ. ಹೌದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ “ಬೆಟ್ಟದ ಹುಲಿ” ಎಂದು ಖ್ಯಾತಿ ಪಡೆದಿದ್ದ ಟಗರನ್ನು ಮೆರವಣಿಗೆ ಮಾಡಿ ವಿಧಿವಿಧಾನದ ಮೂಲಕ ನೆರವೇರಿಸಿ ಗೌರವ ಸಲ್ಲಿಸಿದ್ದಾರೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದ ಪಾಂಡು ಗಣಿ ಎಂಬುವರ ಬೆಟ್ಟದ ಹುಲಿ ಎಂಬ ಟಗರು ಇಂತಹದ್ದೊಂದು ಗೌರವಪೂರ್ವಕ ಅಂತ್ಯಸಂಸ್ಕಾರ ಪಡೆದುಕೊಂಡು ಸಾವಿನಲ್ಲೂ ದಾಖಲೆ ಮಾಡಿದೆ.
ಟಗರು ಸಾವಿನಿಂದ ಬಿಕ್ಕಿ ಬಿಕ್ಕಿ ಅತ್ತ ಮಾಲೀಕ ಹೌದು ಪಾಂಡು ಗಣಿ ಎಂಬ ರೈತ ಏಳು ವರ್ಷದ ಹಿಂದೆ ಈ ಟಗರನ್ನು ಐದು ಲಕ್ಷ ಕೊಟ್ಟು ಖರೀದಿ ಮಾಡಿದ್ದು. ಟಗರನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ಪ್ರೀತಿಯ ಟಗರು ಮೃತಪಟ್ಟಿದ್ದಕ್ಕೆ ಗೋಳಾಡಿ ಅತ್ತಿದ್ದು ಮನ ಕಲುಕುವಂತಿತ್ತು. ಮೃತಪಟ್ಟಾಗ ಅದರ ಪಕ್ಕ ಮಲಗಿ ಕಣ್ಣೀರು ಹಾಕಿದ್ದಾರೆ.
ಟಗರಿನ ಕಾಳಗದಲ್ಲಿ ಈ ಬೆಟ್ಟದ ಹುಲಿಯದ್ದೆ ದರ್ಬಾರ್ ಬೆಟ್ಟದ ಹುಲಿ ಎಂಬ ಹೆಸರು ಇದಕ್ಕೆ ಹಾಗೆ ಬಂದಿರಲಿಲ್ಲ.ಟಗರು ಕಾಳಗದಲ್ಲಿ ಎದುರಾಳಿಯನ್ನು ಮಣ್ಣು ಮುಕ್ಕಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದ ಟಗರು ಫೀಲ್ಡಿಗಿಳಿದರೆ ಎದುರಾಳಿ ಟಗರುಗಳು ಪತರಗುಟ್ಟಿ ಹೋಗುತ್ತಿದ್ದವು.ಸಿಡಿಲಬ್ಬರ ಡಿಚ್ಚಿಗೆ ಮಕಾಡೆ ಮಲಗುತ್ತಿದ್ದವು. ಅದರ ಕಾಳಗ ನೋಡೋದಕ್ಕೆ ಧಾರವಾಡ, ಗದಗ,ವಿಜಯಪುರ, ಬೆಳಗಾವಿ, ಮಹಾರಾಷ್ಟ್ರದಿಂದಲೂ ಜನರು ಬರುತ್ತಿದ್ದರು.ಇದರಿಂದಲೇ ಈ ಟಗರಿಗೆ ಬೆಟ್ಟದ ಹುಲಿ ಎಂದು ಹೆಸರು ಬಂದಿತ್ತು. ಮೈಸೂರ ದಸರಾ ಸೇರಿ ರಾಜ್ಯ ಮತ್ತು ಹೊರರಾಜ್ಯಗಳ ಟಗರಿನ ಕಾಳಗದಲ್ಲಿ ಹೆಸರು ಮಾಡಿದ್ದ ಬೆಟ್ಟದ ಹುಲಿ,ಈ ವರೆಗೂ 80 ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಬೆಟ್ಟದ ಹುಲಿಗೆ ಅಭಿಮಾನಿಗಳಿಂದ ಶ್ರದ್ದಾಂಜಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟದ ಹುಲಿಗೆ ಅಭಿಮಾನಿಗಳು ಇದ್ದರು. ಟಗರು ಸತ್ತ ಸುದ್ದಿ ಕೇಳಿ ಕಲಹಳ್ಳಿಗೆ ನೂರಾರು ಅಭಿಮಾನಿಗಳು ಬಂದಿದ್ದರು. ಗ್ರಾಮದಲ್ಲಿ ಟ್ರ್ಯಾಕ್ಟರ್ ನಲ್ಲಿ ಮೃತ ಟಗರಿನ ಮೆರವಣಿಗೆ ನಡೆಸಲಾಯಿತು.ಟಗರಿಗೆ ಭಂಡಾರ ಬಳಿದು ದುಃಖದಿಂದ ಮೆರವಣಿಗೆ ಮಾಡಿದರು. ಅಂತಿಮ ಸಂಸ್ಕಾರದಲ್ಲಿ ಗದಗ, ಧಾರವಾಡ, ಮೈಸೂರ,ವಿಜಯಪುರ,ಗಜೇಂದ್ರಗಡ ಮಹಾರಾಷ್ಟ್ರ ಸೇರಿ ವಿವಿಧೆಡೆಯಿಂದ ಟಗರಿನ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಬಂದಿದ್ದರು. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಯುವಕರಿಂದ ವೃತ್ತದಲ್ಲಿ ಟಗರಿನ ಕಟೌಟ್ ಕಟ್ಟಿ, ದೀಪ ಬೆಳಗಿ ಶ್ರದ್ದಾಂಜಲಿ ಸಲ್ಲಿಸಲಾಗಿದೆ. ಇನ್ನು ಟಗರಿನ ಭಾವಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನೋವು ಭರಿತ ಹಾಡನ್ನು ಅಳವಡಿಸುವ ಮೂಲಕ ಪೋಸ್ಟ್ ಮಾಡಿ ಬೆಟ್ಟದ ಹುಲಿ ಅಭಿಮಾನಿಗಳು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
“ನಾನು ಟಗರನ್ನು ಮಕ್ಕಳಂತೆ ಬೆಳೆಸಿದ್ದೆ,ಎಲ್ಲೇ ಕಾಳಗಕ್ಕೆ ಹೋದರೂ ಅದು ಸ್ಪರ್ಧೆಯಲ್ಲಿ ಪ್ರಶಸ್ತಿ ತಂದು ಕೊಡುತ್ತಿತ್ತು.ಅದರಿಂದಲೇ ನನಗೆ ಹೆಸರು ಬಂದಿತ್ತು. ನನ್ನನ್ನು ಜನರು ಗುರುತಿಸುತ್ತಿದ್ದರು.ಈಗ ಅದರ ಸಾವು ಬಹಳ ದುಃಖ ತಂದಿದೆ. ನನ್ನ ಪ್ರೀತಿಯ ಬೆಟ್ಟದ ಹುಲಿಯನ್ನು ಮರೆಯೋಕೆ ಸಾಧ್ಯವಿಲ್ಲ ಎಮದು ಟಗರು ಮಾಲೀಕ ಪಾಂಡು ಗಣಿ ನೋವು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಅಖಾಡದಲ್ಲಿ ಕಾಲು ಕೆರೆದು ಗುಟುರು ಹಾಕಿ ಗುಮ್ಮುತ್ತಿದ್ದ ಬೆಟ್ಟದ ಹುಲಿ ಟಗರು ಈಗ ಎಲ್ಲರನ್ನೂ ಅಗಲಿದೆ.ಅಗಲಿದ ಟಗರಿಗೆ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿದ್ದು ನಿಜಕ್ಕೂ ಶ್ಲಾಘನೀಯ.

ಟಗರನ್ನ ತಬ್ಬಿ ಮಾಲೀಕನ ಕಣ್ಣೀರ ವಿದಾಯ

ಬೆಟ್ಟದ ಹುಲಿ ಖ್ಯಾತಿಯ ಟಗರು
ಇದನ್ನೂ ಓದಿ: ಅಬ್ಬಬ್ಬಾ! ಮಂಡ್ಯದಲ್ಲಿ 1 ಲಕ್ಷ 91 ಸಾವಿರ ರೂ.ಗೆ ಈ ಟಗರು ಮಾರಾಟ
Published On - 8:18 am, Thu, 16 December 21




