ಆಕೆಗೆ ಕಣ್ಣು ಕಾಣೊಲ್ಲ ಆದರೆ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ; ಈಕೆಗಿದೆ ಐಎಎಸ್ ಅಧಿಕಾರಿಯಾಗುವ ಅಚಲ ಛಲ
ಕಣ್ಣು ಕಾಣೋದಿಲ್ಲ ಎಂಬ ಕೊರಗು ಇವರನ್ನು ಯಾವತ್ತೂ ಕಾಡಿಲ್ಲ. ಜೊತೆಗೆ ಇವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಸದ್ಯ ಈಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇವರು ಮಾಡಿದ ಸಾಧನೆ ಅಮೋಘ. ಕಣ್ಣು ಕಾಣಿಸದ ಜ್ಯೋತಿ ಕಟಕೋಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಗಲಕೋಟೆ: ಕೊರೊನಾ, ಲಾಕ್ಡೌನ್, ಸ್ಯಾನಿಟೈಸರ್, ಮಾಸ್ಕ್ ಲಸಿಕೆ ಹೀಗೆ ಈ ಎಲ್ಲ ಗದ್ದಲ ಗೊಂದಲಗಳ ಮಧ್ಯೆ ಕೆಲ ಕಾಲ ಶಾಲೆಗಳು ಆರಂಭವಾಗಿ ಮತ್ತೆ ಆನ್ಲೈನ್ ಕ್ಲಾಸ್ಗಳು ಶುರುವಾದವು. ಈ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರದಲ್ಲೂ ಸಾಕಷ್ಟು ಗೊಂದಲಗಳು ಪರ ವಿರೋಧ ಚರ್ಚೆಗಳು ನಡೆದವು. ಆದರೂ ಸರಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿ ಇತ್ತೀಚೆಗೆ ಫಲಿತಾಂಶ ಕೂಡ ಹೊರಬಿದ್ದಿದೆ. ಫಲಿತಾಂಶದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಉತ್ತಮ ಅಂಕ ಪಡೆದು ಕೊರೊನಾ ಹಾವಳಿ ಮಧ್ಯೆಯೂ ಉತ್ತಮ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಇಲ್ಲೊಬ್ಬ ವಿದ್ಯಾರ್ಥಿನಿಯ ಸಾಧನೆ ಮಾತ್ರ ಎಲ್ಲರಿಗಿಂತಲೂ ವಿಭಿನ್ನ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಉತ್ತೂರು ಗ್ರಾಮದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಜ್ಯೋತಿ ಕಟಕೋಳ ಸಾಮಾನ್ಯ ವಿದ್ಯಾರ್ಥಿಗಳಿಗಿಂತಲೂ ವಿಭಿನ್ನ. ಏಕೆಂದರೆ ಆಕೆಗೆ ಕಣ್ಣು ಕಾಣೋದಿಲ್ಲ.. ಇಡೀ ಜಗತ್ತು ಕತ್ತಲಾಗಿ ಕಾಣುತ್ತೆ. ಆದರೂ ಜ್ಯೋತಿ ಅವರ ಅಂತರಾತ್ಮ ಸದಾ ಜ್ಯೋತಿಯಂತೆ ಬೆಳಗುತ್ತಿರುತ್ತದೆ. ಕಣ್ಣು ಕಾಣೋದಿಲ್ಲ ಎಂಬ ಕೊರಗು ಇವರನ್ನು ಯಾವತ್ತೂ ಕಾಡಿಲ್ಲ. ಜೊತೆಗೆ ಇವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಸದ್ಯ ಈಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇವರು ಮಾಡಿದ ಸಾಧನೆ ಅಮೋಘ. ಕಣ್ಣು ಕಾಣಿಸದ ಜ್ಯೋತಿ ಕಟಕೋಳ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹುಟ್ಟು ಕುರುಡಾದರೂ ಇದುವರೆಗೂ ಯಾರಿಗೂ ಹೊರೆಯಾಗಿಲ್ಲ, ಆತ್ಮವಿಶ್ವಾಸ ಕುಗ್ಗಿಲ್ಲ ಜ್ಯೋತಿ ಕಟಕೋಳ ಹುಟ್ಟು ಅಂದರಾಗಿದ್ದಾರೆ. ಕೆಲವರು ನನಗೆ ಕಣ್ಣು ಕಾಣೋದಿಲ್ಲ ನನ್ನಿಂದ ಏನು ಮಾಡೋಕೆ ಸಾಧ್ಯ ಅಂತ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಆದರೆ ಅಂದರಾದರೂ ಎಷ್ಟೋ ಮಹಾನ್ ಸಾಧನೆ ಮಾಡಿದವರು ನಮ್ಮ ಮಧ್ಯೆ ಇದ್ದಾರೆ. ಅಂತಹವರಲ್ಲಿ ಜ್ಯೋತಿ ಕಟಕೋಳ ಕೂಡ ಒಬ್ಬರು. ಮಾರುತಿ ಹಾಗೂ ಸುಮಂಗಲಾ ದಂಪತಿ ಪುತ್ರಿಯಾಗಿರುವ ಜ್ಯೋತಿ, ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬ್ರೈಲ್ ಲಿಪಿಯಲ್ಲಿ ಬರೆದು 90.24 ಪ್ರತಿಶತ ಅಂದ್ರೆ ಒಟ್ಟು 564 ಅಂಕ ಗಳಿಸಿದ್ದಾರೆ. ಅಂದಳಾದರೂ ಮನೆಯಲ್ಲಿ ಯಾರಿಗೂ ಭಾರ ಆಗಿಲ್ಲ. ಮನೆಯಲ್ಲಿ ಎಲ್ಲರಂತೆ ತನ್ನ ಕೆಲಸ ಮಾಡಿಕೊಳ್ಳುತ್ತಾರೆ. ಪಾತ್ರೆ ತೊಳೆಯೋದು ಕಸ ಗೂಡಿಸೋದು ಎಲ್ಲವನ್ನೂ ಸಾಮಾನ್ಯ ಹೆಣ್ಣುಮಕ್ಕಳಂತೆ ಅಚ್ಚಕಟ್ಟಾಗಿ ಮಾಡಿ ಮುಗಿಸುತ್ತಾರೆ.
ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುತ್ತೇನೆ ಅದೇ ನನ್ನ ಗುರಿ ಇನ್ನು ಜ್ಯೋತಿ ಕಟಕೋಳ ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆಯಾಲೂರು ಗ್ರಾಮದ ಜ್ಞಾನಸಿಂದು ಅಂದ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಬಹಳ ಪ್ರತಿಭಾವಂತೆಯಾಗಿದ್ದಾರೆ. ಓದಿನಲ್ಲಿ ಸದಾ ಮುಂದು ಜೊತೆಗೆ ಸಂಗೀತ ಕೂಡ ಕಲಿತಿದ್ದಾರೆ. ಕಂಪ್ಯೂಟರ್ ಜ್ಞಾನ ಕೂಡ ಹೊಂದಿದ್ದಾಳೆ. ಡಿಡಿ ಚಂದನವಾಹಿನಿಯಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ಜ್ಯೋತಿ ಕಟಕೋಳ ಮುಂದೆ ಐಎಎಸ್ ಅಧಿಕಾರಿ ಆಗುವ ಕನಸನ್ನು ಕಟ್ಟಿಕೊಂಡಿದ್ದಾರೆ. ಐಎಎಸ್ ಮಾಡಿ ಜನರ ಸೇವೆ ಮಾಡುವ ಆಸೆ ಹೊಂದಿದ್ದಾರೆ.
ಒಟ್ಟಿನಲ್ಲಿ ಅಂದಳಾದರೂ ಇವರ ಸಾಧನೆಗೆ ಅಂದತ್ವ ಅಡ್ಡಬಂದಿಲ್ಲ. ಇವರ ಓದು ಹೀಗೆ ಉತ್ತಮವಾಗಿ ಸಾಗಲಿ ಇವರ ಕನಸು ನನಸಾಗಲಿ ಎಂದು ಗ್ರಾಮಸ್ಥರು ಹಾಗೂ ಜ್ಞಾನಸಿಂದು ಅಂದ ಮಕ್ಕಳ ಶಾಲೆಯ ಸಿಬ್ಬಂದಿ ಎಲ್ಲರೂ ಹರಸಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷ ಎಸ್ಎಸ್ಎಲ್ಸಿ ಪಾಸ್ ಆದ ಕೊಡಗಿನ ತಾಯಿ, ಮಗ!
Published On - 1:35 pm, Thu, 12 August 21