ಬಾಗಲಕೋಟೆ: ವಜಾಗೊಂಡ ಪೊಲೀಸ್ ಕಾನ್ಸ್ಟೇಬಲ್ನಿಂದ ಅಧಿಕಾರಿಯ ಅಪಹರಣಕ್ಕೆ ಯತ್ನ; ಬೆಚ್ಚಿಬಿದ್ದ ಸ್ಥಳೀಯರು
ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಅವರನ್ನು ಅಪಹರಿಸಲು ಮುಂದಾಗಿದ್ದು 10 ವರ್ಷದ ಹಿಂದೆ ವಜಾಗೊಂಡ ಓರ್ವ ಪೊಲೀಸ್ ಕಾನ್ಸ್ಟೇಬಲ್ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಬಾಗಲಕೋಟೆ: ಶಾಂತಿಗೆ ಹೆಸರಾದ ಬಾಗಲಕೋಟೆ ನಗರದಲ್ಲೇ ಹಾಡಹಗಲೇ ಅಧಿಕಾರಿಯೊಬ್ಬರ ಅಪಹರಣ (Kidnap) ಯತ್ನ ನಡೆದಿದೆ. ಇದರಿಂದ ಸರಕಾರಿ ವಲಯದಲ್ಲಿನ ಅಧಿಕಾರಿಗಳು(Officers) ಭಯದಲ್ಲಿ ಕೆಲಸ ಮಾಡುವಂತಾಗಿದೆ. ಹೌದು ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶಂಕರಲಿಂಗ ಗೋಗಿ(Shivalinga gogi) ಅವರ ಅಪಹರಣಕ್ಕೆ ಯತ್ನಿಸಲಾಗಿದೆ. ನಿನ್ನೆ (ಜನವರಿ 28) ಬೆಳಿಗ್ಗೆ 11 ಗಂಟೆಗೆ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಜಾಗೊಂಡ ಪೊಲೀಸ್ ಕಾನ್ಸ್ಟೇಬಲ್ನಿಂದ ಅಪಹರಣ ಯತ್ನ
ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಅವರನ್ನು ಅಪಹರಿಸಲು ಮುಂದಾಗಿದ್ದು 10 ವರ್ಷದ ಹಿಂದೆ ವಜಾಗೊಂಡ ಓರ್ವ ಪೊಲೀಸ್ ಕಾನ್ಸ್ಟೇಬಲ್ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇಳಕಲ್ ಮೂಲದ ವಜಾಗೊಂಡ ಕಾನ್ಸ್ಟೇಬಲ್ ಈರಣ್ಣ ಅಂಬಿಗೇರ ನಿನ್ನೆ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಶಂಕರಲಿಂಗ ಗೋಗಿ ಅವರ ನವನಗರದ 55 ನೇ ಸೆಕ್ಟರ್ನ ಮನೆ ಬಳಿ ರಸ್ತೆಯಲ್ಲಿ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ. ಈ ವೇಳೆ ಕಚೇರಿಗೆ ಹೊರಟಿದ್ದ ಅಧಿಕಾರಿಯ ಕಾರಿಗೆ ಅಡ್ಡಗಟ್ಟಿ, ತಮ್ಮ ಕಾರು ಚಾಲಕನ ಸಮೇತ ಮೂರು ಜನ ಕೆಳಗಿಳಿದು ಅಧಿಕಾರಿ ಶಂಕರಲಿಂಗ ಗೋಗಿ ಕೈ ಬೆನ್ನು ಹಿಡಿದು ಎಳೆದಾಡಿ ತನ್ನ ಇನ್ನೋವಾ ಕಾರಿನಲ್ಲಿ, ಈರಣ್ಣ ಅಂಬಿಗೇರ ಕೂರಿಸಿಕೊಂಡಿರುತ್ತಾನೆ. ಈ ವೇಳೆ ಅಧಿಕಾರಿಯ ಕಾರು ಚಾಲಕ ಮೊಬೈಲ್ ಕಸಿದುಕೊಂಡಾಗ ಮೊಬೈಲ್ ಕೊಡು ಎಂದು ಆತನ ಬಳಿ ಹೋದಾಗ ಶಂಕರಲಿಂಗ ಗೋಗಿ ಕಾರಿನಿಂದ ಹೊರಗಡೆ ಬಂದಿದ್ದಾರೆ. ಅಪಹರಣದಿಂದ ಪಾರಾಗಿದ್ದಾರೆ. ಅಷ್ಟರಲ್ಲಿ ಜನ ಸೇರಿರುವುದನ್ನು ಗಮನಿಸಿ ಅಲ್ಲಿಂದ ಆರೋಪಿ ಈರಣ್ಣ ಅಂಬಿಗೇರ ಪರಾರಿ ಆಗಿದ್ದಾರೆ.
ಕಿಡ್ನಾಪ್ ಮಾಡೋದಕ್ಕೆ ಮೂಲ ಕಾರಣ ಏನು?
ಸದ್ಯ ನಿನ್ನೆ ಅಪಹರಣಕ್ಕೆ ಯತ್ನದ ವೇಳೆ ಈರಣ್ಣ ಅಂಬಿಗೇರ ನಾನು ನಿರ್ಮಿತಿ ಕೇಂದ್ರದ ಕಾಮಗಾರಿಗೆ ಮರಳು ಸಾಗಿಸಿದ್ದೇನೆ. ನನಗೆ ಬರಬೇಕಾದ 35 ಲಕ್ಷ ಹಣ ಕೊಡು ಎಂದು ಅಪಹರಣಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಅದೇ ರೀತಿ ಅಧಿಕಾರಿ ದೂರು ದಾಖಲು ಮಾಡಿದ್ದಾರೆ. ಇನ್ನು ಅಪಹರಣದ ವೇಳೆ ಶಂಕರಲಿಂಗ ಗೋಗಿ ಅವರ ಕೈ ತಿರುವಿದ ಪರಿಣಾಮ ಕೈಗೆ ಗಾಯವಾಗಿದೆ. ಕುತ್ತಿಗೆಗೆ ಪರಚಿದ್ದು, ಗಾಯವಾಗಿದೆ. ಅಪಹರಣ ಯತ್ನಕ್ಕೂ ಮುನ್ನ ಈರಣ್ಣ ಅಂಬಿಗೇರ ಕಡೆಯ ಓರ್ವ ವ್ಯಕ್ತಿ ಅವರ ಮನೆ ಬಳಿ ಬಂದು ಕಾರು ಚಾಲಕನ ವಿಚಾರಿಸಿದ್ದ. ಸರ್ ಕಚೇರಿಗೆ ಬರೋಕೆ ಹೇಳಿದ್ದರು. ಕಚೇರಿಗೆ ಹೋಗಿದ್ದಾರಾ ಅಥವಾ ಮನೆಯಲ್ಲಿ ಇದ್ದಾರಾ ಎಂದು ವಿಚಾರಿಸಿದ್ದ. ಅದಾದ ಎರಡು ನಿಮಿಷದಲ್ಲಿ ಅಧಿಕಾರಿ ತಮ್ಮ ಕಾರಿನಲ್ಲಿ ಹೊರಡುವಾಗ ಅಡ್ಡಗಟ್ಟಿ ಈ ಕೃತ್ಯವೆಸಗಿದ್ದಾರೆ. ಈ ದೃಶ್ಯ ಅಧಿಕಾರಿಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಬಕವಿಬನಹಟ್ಟಿ ವ್ಯಾಪ್ತಿಯಲ್ಲಿ ಏಳು ವರ್ಷದ ಹಿಂದೆ ನಿರ್ಮಿತಿ ಕೇಂದ್ರದ ಮೂಲಕ ಕಟ್ಟಲ್ಪಡುತ್ತಿದ್ದ ಆಶ್ರಯ ಮನೆ ನಿರ್ಮಾಣಕ್ಕೆ ಮರಳು ಹಾಕಿದ್ದೇನೆ ಎಂದು ಈರಣ್ಣ ಅಂಬಿಗೇರ ಹೇಳಿ ಹಣ ಕೇಳುತ್ತಿದ್ದಾನೆ. ಆದರೆ ದಾಖಲಾತಿ ಪರಿಶೀಲನೆ ನಡೆಸಿದಾದ ಮರಳು ಸಾಗಿಸಿದ್ದರ ಬಗ್ಗೆ ಆತನಿಗೆ ಹಣ ನೀಡುವ ಬಗ್ಗೆ ಯಾವುದೇ ದಾಖಲಾತಿ ಇರೋದಿಲ್ಲ. ಅದಕ್ಕಾಗಿ ನಾವು ಹಣ ಕೊಡೋದಿಲ್ಲ ಎಂದು ಹಿಂಬಹರ ಬರೆದು ಕಳಿಸಿದ್ದೇನೆ. ಆದರೆ ಮೇಲಿಂದ ಮೇಲೆ ಹಣಕ್ಕಾಗಿ ಕರೆ ಮಾಡುತ್ತಿದ್ದ. ಆತನಿಗೆ ಯಾವುದೇ ಹಣ ಕೊಡುವ ವ್ಯವಹಾರವಿಲ್ಲ. ಹಣ ಕೊಡಲು ನಿರಾಕರಿಸಿದ ಹಿನ್ನೆಲೆ, ನಿನ್ನೆ ಇಂತಹ ಕೃತ್ಯ ಎಸಗಿದ್ದಾನೆ. ಇಂತವರ ಮೇಲೆ ಕಠಿಣ ಕ್ರಮಕ್ಕಾಗಿ ನವನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಶಂಕರಲಿಂಗ ಗೋಗಿ ಹೇಳದ್ದಾರೆ.
ಸದ್ಯ ತಲೆಮರೆಸಿಕೊಂಡಿರವ ಈರಣ್ಣ ಅಂಬಿಗೇರ ಹಾಗೂ ಇನ್ನಿಬ್ಬರು
ಅಪಹರಣಕ್ಕೆ ಯತ್ನ ನಡೆಸಿದ ವಜಾಗೊಂಡ ಕಾನ್ಸ್ಟೇಬಲ್ ಹಾಗೂ ಆತನ ಜೊತೆಯಿದ್ದ ಇಬ್ಬರು ಸೇರಿ ಮೂವರು ತಲೆ ಮರೆಸಿಕೊಂಡಿದ್ದಾರೆ. ನವನಗರ ಠಾಣೆ ಪೊಲೀಸರು ನಿನ್ನೆಯಿಂದ ಪರಿಶೀಲನೆ ನಡೆಸುತ್ತಿದ್ದು, ಇಂದು ಕೂಡ ಬೆಳಿಗ್ಗೆ ಅಧಿಕಾರಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಶಂಕರಲಿಂಗ ಗೋಗಿ ಆತನ ಚಾಲಕ ಮಹೇಶ್ನ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಈ ಬಗ್ಗೆ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿ ಸದ್ಯ ಈರಣ್ಣ ಅಂಬಿಗೇರನನ್ನು ಮಾತ್ರ ಗುರುತಿಸಿದ್ದಾರೆ. ಇನ್ನಿಬ್ಬರು ಯಾರು ಅಂತ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರೆದಿದ್ದು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಾರೆ ಬಾಗಲಕೋಟೆ ನಗರದಲ್ಲಿ ಹಾಡಹಗಲೇ ನಡೆದ ಈ ಕೃತ್ಯ ಎಲ್ಲರಿಗೂ ಶಾಕ್ ನೀಡಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅದೇನೆ ಇರಲಿ ಕಿಡ್ನಾಪ್ಗೆ ಮುಂದಾದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವ ಮೂಲಕ ಮತ್ಯಾರು ಇಂತಹ ಕೆಲಸಕ್ಕೆ ಕೈ ಹಾಕದಂತೆ ಪೊಲೀಸರು ನೋಡಿಕೊಳ್ಳಬೇಕಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: ನಟಿಯ ಅಪಹರಣ ಪ್ರಕರಣದ ತನಿಖಾಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಆರೋಪ; ಕ್ರೈಂ ಬ್ರಾಂಚ್ ಮುಂದೆ ಹಾಜರಾದ ಮಲಯಾಳಂ ನಟ ದಿಲೀಪ್
Published On - 1:17 pm, Sat, 29 January 22