ಬಾಗಲಕೋಟೆ: ರೈತರಲ್ಲಿ ಆತಂಕ ಸೃಷ್ಟಿಸಿದ ಮೋಡ ಕವಿದ ವಾತಾವರಣ; ಈರುಳ್ಳಿ ಬೆಳೆಗೆ ಕೊಳೆ ರೋಗದ ಭೀತಿ

ಇತ್ತ ಬೆಳೆಯೂ ಚೆನ್ನಾಗಿ ಬರುತ್ತಿಲ್ಲ, ರೋಗವೂ ಹತೋಟಿಗೆ ಬರುತ್ತಿಲ್ಲ. ಈ ಹಂತದಲ್ಲಿ ರೈತರಿಗೆ ನಷ್ಟವಾದರೆ ಆರ್ಥಿಕವಾಗಿ ಚೇತರಿಸಿಕೊಳ್ಳುವುದು ತುಂಬ ಕಷ್ಟ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬಾಗಲಕೋಟೆ: ರೈತರಲ್ಲಿ ಆತಂಕ ಸೃಷ್ಟಿಸಿದ ಮೋಡ ಕವಿದ ವಾತಾವರಣ; ಈರುಳ್ಳಿ ಬೆಳೆಗೆ ಕೊಳೆ ರೋಗದ ಭೀತಿ
ತೋಟಗಾರಿಕೆ ಅಧಿಕಾರಿಗಳು ಬೆಳೆ ಪರಿಶೀಲನೆ ನಡೆಸುತ್ತಿರುವುದು
Follow us
| Updated By: preethi shettigar

Updated on: Aug 16, 2021 | 8:38 AM

ಬಾಗಲಕೋಟೆ: ಇಷ್ಟು ದಿನ ಬಾಗಲಕೋಟೆ ಜಿಲ್ಲೆಯ ರೈತರು ಪ್ರವಾಹಕ್ಕೆ ಸಿಲುಕಿ ಕಂಗಾಲಾಗಿದ್ದರು. ಬೆಳೆದು ನಿಂತ ಬೆಳೆಯ ಫಸಲು ಕೈಗೆ ಬರಬೇಕೆನ್ನುವಷ್ಟರಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಬೆಳೆ ಕೊಳೆತು ಹಾಳಾಗಿದೆ. ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್​ಗೂ ಅಧಿಕ ಬೆಳೆ ನಾಶವಾಗಿದೆ. ಆ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ರೈತರದ್ದಾಗಿದೆ. ಈ ಮಧ್ಯೆ ಮೋಡ ಕವಿದ ವಾತಾವರಣದಿಂದ ರೈತರು ಬೆಳೆದ ಈರುಳ್ಳಿ ಬೆಳೆ ಕೂಡ ಹಾಳಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬೀಳಗಿ ತಾಲೂಕಿನಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಟ ಶುರುವಾಗಿದ್ದು, ರೈತರೇ ಈರುಳ್ಳಿ ಬೆಳೆ ನಾಶ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಮೋಡ ಮುಸುಕಿದ ವಾತಾವರಣ ರೈತರ ಪಾಲಿಗೆ ಸಂಕಷ್ಟ ತಂದಿದೆ. ಈರುಳ್ಳಿಯನ್ನು ಬಿತ್ತಿ ನಾಟಿ ಮಾಡಿದಾಗಿನಿಂದಲೂ ಆಗಾಗ ಸುರಿಯುವ ಜಿಟಿಜಿಟಿ ಮಳೆ, ಮೋಡ ಮುಸುಕಿದ ವಾತಾವರಣದ ಹಿನ್ನೆಲೆ, ಈರುಳ್ಳಿ ಬೆಳೆಗೆ ಸೂರ್ಯನ ಕಿರಣಗಳ ಸ್ಪರ್ಶ ತೀವ್ರ ಕಡಿಮೆಯಾಗಿದೆ. ಇದರಿಂದ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ.

ಈರುಳ್ಳಿ ನಾಟಿ ಮಾಡಿ ಸುಮಾರು ಒಂದೆರಡು ತಿಂಗಳು ಕಳೆದಿದೆ. ಆರಂಭದಲ್ಲಿ ಚೆನ್ನಾಗಿಯೇ ಬಂದ ಈರುಳ್ಳಿ ಬೆಳೆಗೆ ಮಳೆರಾಯ ಕಂಟಕವಾಗಿದ್ದಾನೆ. ಹಲವೆಡೆ ಈರುಳ್ಳಿ ಬೆಳೆಯಲ್ಲಿ ಕೀಟಗಳು ಕೂಡ ಕಾಣಿಸಿಕೊಂಡಿವೆ. ಈರುಳ್ಳಿ ಗರಿಗಳ ಮೇಲೆ ಬಿಳಿ ಚುಕ್ಕಿ, ಗರಿ ಮುದುಡಿ ಬೀಳುವುದು, ಬಿಳಿ-ಹಳದಿ ಬಣ್ಣಕ್ಕೆ ತಿರುಗುವುದು. ಕೆಲವು ಈರುಳ್ಳಿ ಗರಿ ತುಂಡರಿಸಿ ನೆಲಕ್ಕೆ ಬೀಳುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

onion crop

ಈರುಳ್ಳಿ ಬೆಳೆಗೆ ಕೊಳೆ ರೋಗ

ಎಕರೆಯೊಂದಕ್ಕೆ ಈರುಳಿ ಸಸಿ ನಾಟಿ ಮಾಡಲು ರೈತರು 50 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ ಇತ್ತ ಬೆಳೆಯೂ ಚೆನ್ನಾಗಿ ಬರುತ್ತಿಲ್ಲ, ರೋಗವೂ ಹತೋಟಿಗೆ ಬರುತ್ತಿಲ್ಲ. ಈ ಹಂತದಲ್ಲಿ ರೈತರಿಗೆ ನಷ್ಟವಾದರೆ ಆರ್ಥಿಕವಾಗಿ ಚೇತರಿಸಿಕೊಳ್ಳುವುದು ತುಂಬ ಕಷ್ಟ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈರುಳ್ಳಿ ರೋಗ ಹತೋಟಿಗೆ ಮತ್ತು ಬಿಳಿ ಚುಕ್ಕಿ ನಿಯಂತ್ರಣಕ್ಕೆ ಕ್ಲೋರೋಥಲೋನಿಲ್‌ ಹಾಗೂ ಮ್ಯಾಂಕಿಜಿಪ್‌ ಔಷಧ ಸಿಂಪಡಿಸಬೇಕು. ತಂಪು ಮತ್ತು ಮೋಡ ಕವಿದ ವಾತಾವರಣದಲ್ಲಿ ಕಪ್ಪು ಭೂಮಿಯಲ್ಲಿ ಬೆಳೆದ ಈರುಳ್ಳಿಗೆ ರೋಗ ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈರುಳ್ಳಿ ಗರಿಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಕ್ರಿಮಿಕೀಟಗಳ ನಿಯಂತ್ರಣಕ್ಕೆ ಶಿಲೀಂಧ್ರ ನಾಶಕದೊಂದಿಗೆ ಇತರೆ ಕೀಟನಾಶ ಬಳಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಹೊಬಳಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಈರುಳ್ಳಿ ಬೆಳೆಯನ್ನು ಬೆಳೆದು ಕೃಷಿ ಜೀವನ ನಡೆಸುತ್ತಾರೆ. ಮೇ ತಿಂಗಳ ಕೊನೆ ವಾರ ಇಲ್ಲವೇ ಜೂನ್ ತಿಂಗಳ ಮೊದಲೆರಡು ವಾರದಲ್ಲಿ ಬಿತ್ತನೆ ಮಾಡಿ ಹುಲುಸು ಬೆಳೆಗೆ ಹಗಲು ರಾತ್ರಿ ಶ್ರಮವಹಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆಗೆ ಕೊಳೆರೋಗ ಕಾಟ ಕಾಡಲಾರಂಭಿಸಿದೆ. ಸದ್ಯ ಕೆಲವು ರೈತರ ಈರುಳ್ಳಿ ಬೆಳೆ ಈ ಕೊಳೆರೋಗ ಕಾಟಕ್ಕೆ ಕೊಳೆಯುತ್ತಿದ್ದು, ಇನ್ನೂ ಕೆಲವು ರೈತರ ಈರುಳ್ಳಿ ಬೆಳೆಗೆ ರೋಗ ತಗುಲುವ ಪ್ರಾರಂಭ ಹಂತದಲ್ಲಿದೆ.

ಕಲಾದಗಿ ಹೊಬಳಿಯಲ್ಲಿ 2800 ಹೆಕ್ಟೇರ್ ಪ್ರದೇಶ ಈರುಳ್ಳಿಯಲ್ಲಿ 750 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆ ಈಗಾಗಲೇ ಕೊಳೆರೋಗದಿಂದ ಹಾನಿಯಾಗಿದೆ. ಇನ್ನಷ್ಟ ಬೆಳೆಯೂ ಕೂಡಾ ಕೊಳೆ ರೋಗಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಈಗಾಗಲೇ ಪ್ರವಾಹಕ್ಕೆ ಸಿಲುಕಿ ಕಬ್ಬು, ಜೋಳ ಬೆಳೆ ಹಾಳಾಗಿವೆ. ಈರುಳ್ಳಿಯೂ ರೋಗದಿಂದ ಕೈ ಕೊಟ್ಟಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಶಾರದಾಳ ರೈತ ಬಸವರಾಜ ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಪ್ರವಾಹದಿಂದಲೇ ಸಾಕಷ್ಟು ಬೆಳೆ ಹಾನಿ ಅನುಭವಿಸಿದ ರೈತರಿಗೆ ಈರುಳ್ಳಿ ಬೆಳೆಯೂ ಆಸರೆಯಾಗಿಲ್ಲ. ಮೇಲಿಂದ ಮೇಲೆ ರೈತರಿಗೆ ಹೊಡೆತ ಬೀಳುತ್ತಿದ್ದು, ಸರಕಾರ ಸೂಕ್ತ ಪರಿಹಾರ ನೀಡಿ ರೈತರಿಗೆ ಆಸರೆಯಾಗಬೇಕಿದೆ.

ವರದಿ: ರವಿ ಮೂಕಿ

ಇದನ್ನೂ ಓದಿ: ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ‌ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು

ಪ್ರವಾಹಕ್ಕೆ ನಲುಗಿದ ರೈತರ ಬದುಕು; ಬೆಳಗಾವಿಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ