
ಬಾಗಲಕೋಟೆ, ಜೂನ್ 07: ಮುಂಗಾರು ಮಳೆ (Rain) ಸಮರ್ಪಕವಾಗಿ ಆಗಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿರುವ ಬೆನ್ನಲ್ಲೇ, ಬಾಗಲಕೋಟೆಯಲ್ಲಿ ಸುರಿದ ಧಾರಾಕಾರ ಮಳೆ ಒಂದು ಕಡೆ ಆತಂಕ ಉಂಟುಮಾಡಿದ್ದರೆ, ಮತ್ತೊಂದೆಡೆ ಪವಾಡಸದೃಶ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ನಿನ್ನೆ ವಲ್ಲಭಬಾಯಿ ನಗರದಲ್ಲಿ ಆರ್ಭಟಿಸಿದ ಮಳೆಗೆ ಮನೆಯೊಂದರ ಇಡೀ ಮೇಲ್ಛಾವಣಿಯೇ ಕುಸಿದಿದೆ. ಆದರೆ ಸಾಕು ಬೆಕ್ಕಿನಿಂದಾಗಿ (Cat) ತಂದೆ ಮತ್ತು ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಮೂಲಕ ಭಾರೀ ಅನಾಹುತವೊಂದು ತಪ್ಪಿದೆ.
ತಂದೆ ಶಬ್ಬೀರ್ ಬಾಗವಾನ್ ಮತ್ತು ಮಗ ಆರ್ಬಾಜ್ ಬಾಗವಾನ್ ಬಾಗಲಕೋಟೆಯ ವಲ್ಲಭಬಾಯಿ ನಗರದ ನಿವಾಸಿಗಳಾಗಿದ್ದು, ಹಣ್ಣಿನ ವ್ಯಾಪಾರ ಮಾಡುತ್ತಾರೆ. ನಿನ್ನೆ ತಂದೆ ಮತ್ತು ಮಗ ಮನೆಯಲ್ಲಿದ್ದಾಗ ಮಳೆಯ ತೀವ್ರತೆಗೆ ಮೇಲ್ಛಾವಣಿಯಿಂದ ಸಣ್ಣದಾಗಿ ಮಣ್ಣಿನ ತುಕಡಿಗಳು ಉದುರಲು ಆರಂಭಿಸಿದೆ. ಹೀಗಾಗಿ ಸಾಕು ಬೆಕ್ಕು ಹೊರಗೆ ಓಡಿದಿದೆ. ಇನ್ನು ಇದೇ ವೇಳೆ ಬೆಕ್ಕಿಗೆ ಹಸಿವು ಕೂಡ ಆಗಿತ್ತಂತೆ. ಹೀಗಾಗಿ ಅದಕ್ಕೆ ಏನಾದರೂ ತಿನ್ನಿಸಬೇಕು ಎನ್ನುವ ಕಾಳಜಿಯಿಂದ ಶಬ್ಬೀರ್ ಬೆಕ್ಕನ್ನು ಹಿಡಿಯಲು ಅದರ ಹಿಂದೆಯೇ ಹೊರಗೆ ಧಾವಿಸಿದ್ದಾರೆ. ತಂದೆಯನ್ನು ಕಂಡು ಆರ್ಬಾಜ್ ಕೂಡ ಅವರ ಬೆನ್ನ ಹಿಂದೆ ಮನೆಯಿಂದ ಆಚೆ ಬಂದಿದ್ದಾರೆ. ಇವರಿಬ್ಬರು ಮನೆಯ ಹೊಸ್ತಿಲು ದಾಟಿ ಹೊರಗೆ ಬರುತ್ತಿದ್ದಂತೆಯೇ ಇಡೀ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.
‘ಮನೆಯ ಮೇಲ್ಛಾವಣಿಯ ಮಣ್ಣು ಬೀಳುತ್ತಿದ್ದಂತೆ ಬೆಕ್ಕು ಹೊರಗೆ ಓಡಿತು, ಅದಕ್ಕೆ ಹಸಿವಾಗಿದ್ದರಿಂದ ಏನಾದರೂ ತಿನ್ನಿಸಲು ತಂದೆ ಅದನ್ನು ಹಿಡಿಯಲು ಹೋದರು, ನಾನು ಅವರ ಹಿಂದೆ ಹೋದೆ. ನಾವು ಹೊರಬಂದ ತಕ್ಷಣ ಇಡೀ ಮೇಲ್ಛಾವಣಿ ಕುಸಿಯಿತು. ಬೆಕ್ಕಿನಿಂದಲೇ ನಮ್ಮ ಪ್ರಾಣ ಉಳಿಯಿತು, ಇಲ್ಲದಿದ್ದರೆ ನಾವು ಜೀವ ಸಹಿತ ಉಳಿಯುತ್ತಿರಲಿಲ್ಲ’ ಎಂದು ಆರ್ಬಾಜ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರ ನೆಮ್ಮದಿ ಕಸಿದ ಮಳೆರಾಯ: ಮನೆಗಳಿಗೆ ನುಗ್ಗಿದ ನೀರು, ಕುಸಿದ ಸೇತುವೆ
ಇನ್ನು ಅದೃಷ್ಟವಶಾತ್ ಮನೆಯಲ್ಲಿ ನಡೆಯಬೇಕಿದ್ದ ಮದುವೆಯ ಕಾರ್ಯಕ್ರಮವೊಂದರ ನಿಮಿತ್ತ ಕುಟುಂಬದ ಉಳಿದ ಸದಸ್ಯರೆಲ್ಲರೂ ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಕೇವಲ ತಂದೆ-ಮಗ ಮಾತ್ರ ಮನೆಯಲ್ಲಿದ್ದು, ಸಾಕುಪ್ರಾಣಿಯ ಕಾರಣದಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಒಂದೆಡೆ ಪ್ರಾಣ ಉಳಿದರೆ, ಬಡ ವ್ಯಾಪಾರಿಯ ಬದುಕಿಗೆ ಮಳೆರಾಯ ದೊಡ್ಡ ಹೊಡೆತವನ್ನೇ ನೀಡಿದ್ದಾನೆ. ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ಪಾತ್ರೆ-ಪಗಡೆಗಳು, ದವಸ ಧಾನ್ಯಗಳು ಹಾಗೂ ವ್ಯಾಪಾರಕ್ಕಾಗಿ ತಂದಿಟ್ಟಿದ್ದ ಲಕ್ಷಾಂತರ ರೂ ಮೌಲ್ಯದ ಮಾವಿನ ಹಣ್ಣು ಸಂಪೂರ್ಣವಾಗಿ ಮಣ್ಣು ಪಾಲಾಗಿದೆ. ಸದ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿ ಶಬ್ಬೀರ್ ಬಾಗವಾನ್, ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.