ಕರೆಂಟ್ ಇಲ್ಲದೆ ಎಣ್ಣೆ ದೀಪದ ಬೆಳಕಿನಲ್ಲಿ ಮಕ್ಕಳ ವಿದ್ಯಾಭ್ಯಾಸ; ಮನೆ ಮುಂದೆ ನಿಂತು ಮತದಾನ ಬಹಿಷ್ಕಾರಕ್ಕೆ ಮುಂದಾದ ಜನ
ಅವರು ಹೊಲದಲ್ಲಿ ಮನೆ ಮಾಡಿಕೊಂಡು ಕೃಷಿ ಮಾಡುವ ರೈತರು. ಹಗಲು -ರಾತ್ರಿ ಹೊಲದಲ್ಲೇ ಅವರ ವಾಸ. ಆದರೆ, ಈಗ ಅವರು ರಾತ್ರಿ ಕತ್ತಲಲ್ಲಿ ಬದುಕಬೇಕಾಗಿದೆ. ಗೃಹಜ್ಯೋತಿ ಅವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಬೆಳಕು ಕೊಡಿ ಎಂದು ಎಷ್ಟು ಮನವಿ ಮಾಡಿದರೂ ಯಾರು ಕೇರ್‌ಮಾಡಿಲ್ಲ. ಇದರಿಂದ ಆ ಜನರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ..

ಬಾಗಲಕೋಟೆ, ಏ.23: ತಾಲ್ಲೂಕಿನ ಯಡಳ್ಳಿ ತೋಟದ ವಸತಿ ಪ್ರದೇಶದಲ್ಲಿ ಐವತ್ತು ಕುಟುಂಬ ವಾಸ ಮಾಡುತ್ತಾರೆ. ಹೊಲದಲ್ಲೇ ಇವರ ಕೆಲಸ, ಅಲ್ಲೇ ಬದುಕು. ಆದರೆ, ಇವರ ಬದುಕು ರಾತ್ರಿ ಕತ್ತಲಲ್ಲಿ ಕನವರಿಸುವಂತಾಗಿದೆ. ಹೌದು, ಇವರ ಮನೆಗಳಿಗೆ ಗೃಹಜ್ಯೋತಿ ನಿರಂತರ ವಿದ್ಯುತ್(Electricity) ಭಾಗ್ಯವಿಲ್ಲ. ಇದರಿಂದ ಮನೆಯಲ್ಲಿ ಅಡುಗೆ ಮಾಡುವಾಗ , ಊಟ ಮಾಡುವಾಗ ಮಕ್ಕಳು ವಿದ್ಯಾಭ್ಯಾಸ ಮಾಡುವಾಗ ಕತ್ತಲಲ್ಲೆ ಕಾಲ ಕಳೆಯಬೇಕಾಗಿದೆ. ಸರಿಯಾಗಿ ಓದಲು ಆಗದೆ ಮಕ್ಕಳು ಪರದಾಡುವಂತಾಗಿದೆ. ರಾತ್ತಿ ತಮಗಾಗುವ ಕಷ್ಟ ನೆನೆದೆ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಯಡಳ್ಳಿ ತೋಟದ ವಸತಿ ಪ್ರದೇಶ ಬಾಗಲಕೋಟೆ ತಾಲ್ಲೂಕು ಬೀಳಗಿ ವಿಧಾನಸಭೆ ಕ್ಷೇತ್ರದದಲ್ಲಿ ಬರುತ್ತದೆ. ಇವರಿಗೆ ಕೇವಲ ಬೋರ್ವೆಲ್ಗೆ ವಿದ್ಯುತ್ ಇದ್ದಾಗ ಮಾತ್ರ ಮನೆಯಲ್ಲಿ ಬೆಳಕು. ಉಳಿದ ಅವಧಿಯಲ್ಲಿ ಕರೆಂಟ್ ಮನೆಗಳಿಗೆ ಇರೋದೆ ಇಲ್ಲ. ಇದರಿಂದ ಸಂಜೆ ಆರರಿಂದ ತಮ್ಮ ಎಲ್ಲ ಕೆಲಸ ಕಾರ್ಯ ಅಡುಗೆ, ಊಟ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಎಲ್ಲ ಸಮಯದಲ್ಲೂ ಬರಿ ಕತ್ತಲೇ ಇರುತ್ತದೆ. ಅದರಲ್ಲೇ ನಿತ್ಯ ಜೀವನ ಸಾಗಿಸಬೇಕಾಗಿದೆ. ಈ ಕುರಿತು ತಮ್ಮ ಸಮಸ್ಯೆ ಹೇಳಿದರೆ ಇದು ಮುಳುಗಡೆ ಪ್ರದೇಶ, ಇಲ್ಲಿ ನಿರಂತರ ಜ್ಯೋತಿ ವಿದ್ಯುತ್ ಕೊಡುವುದಕ್ಕೆ ಬರುವುದಿಲ್ಲ ಎನ್ನುತ್ತಾರಂತೆ.
ಇದನ್ನೂ ಓದಿ:1 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ವಿಶ್ವವಿದ್ಯಾಲಯ: ಕರೆಂಟ್ ಕಟ್ ಆತಂಕ
ಮತದಾನ ಬಹಿಷ್ಕಾರ
ಇದರಿಂದ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ, ಇವರಿಗೆ ಇದ್ದೂ ಇಲ್ಲದಂತಾಗಿದೆ. ಇನ್ನು ತಮ್ಮ ಸಮಸ್ಯೆ ಬಗ್ಗೆ ಹೇಳಿದರೆ ಯಾವ ಜನಪ್ರತಿನಿಧಿಯಾಲಿ, ಅಧಿಕಾರಿಗಳಾಗಲಿ ಕೇರ್ ಮಾಡಿಲ್ಲವಂತೆ. ಇನ್ನು ಇಲ್ಲಿ ರಸ್ತೆ ಕೂಡ ವ್ಯವಸ್ಥಿತವಾಗಿಲ್ಲ. ತಮ್ಮ ಸಮಸ್ಯೆಯನ್ನು ಯಾರು ಸರಿಪಡಿಸಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಮನೆ ಬಳಿ ಬರುತ್ತಾರೆ, ಓಟ್ ಕೇಳ್ತಾರೆ. ಈಗ ಲೋಕಸಭೆ ಚುನಾವಣೆ ಬಂದಿದ್ದು, ನಾವು ಯಾವುದೇ ಕಾರಣಕ್ಕೂ ಮತ ನೀಡುವುದಿಲ್ಲ, ನಮ್ಮ ಬಳಿ ಯಾರು ಬರಬೇಡಿ ಎನ್ನುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ತೋಟದಲ್ಲಿರುವ ಇವರು, ಕರೆಂಟ್ ಹಾಗೂ ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು, ಸರಕಾರ ಇವರ ಸಮಸ್ಯೆ ಸರಿಪಡಿಸಿ ಪ್ರಜಾಪ್ರಭುತ್ವದ ಹಕ್ಕು ಮತದಾನದಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ