ವಾಟ್ಸಾಪ್, ಎಐ ಯುಗದಲ್ಲೂ ಪತ್ರ ಸಂಸ್ಕೃತಿ ಜೀವಂತವಾಗಿಟ್ಟ ಶಿಕ್ಷಕ! 53 ಸಾವಿರ ಪತ್ರ ಬರೆದು ದಾಖಲೆ

ವಾಟ್ಸಾಪ್ ಮತ್ತು ಎಐ ಯುಗದಲ್ಲೂ ಪತ್ರ ಬರೆಯುವ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ ಬಾಗಲಕೋಟೆಯ ಶಿಕ್ಷಕ ಬಸವರಾಜ ಬಾಡಗಿ. 37 ವರ್ಷಗಳಲ್ಲಿ 53 ಸಾವಿರಕ್ಕೂ ಅಧಿಕ ಪತ್ರಗಳನ್ನು ಬರೆದಿರುವ ಇವರು ಫ್ರಾನ್ಸ್ ಅಧ್ಯಕ್ಷರಿಂದಲೂ ಪ್ರತ್ಯುತ್ತರ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೂ ಪತ್ರ ಬರೆಯುವ ಅಭ್ಯಾಸ ಕಲಿಸುತ್ತಿರುವ ಇವರು 2027ರ ಹೊಸ ವರ್ಷ ಮತ್ತು ಸಂಕ್ರಾಂತಿ ಪ್ರಯುಕ್ತ 3000 ಪತ್ರ ಬರೆಯುವ ಗುರಿ ಹೊಂದಿದ್ದಾರೆ.

ವಾಟ್ಸಾಪ್, ಎಐ ಯುಗದಲ್ಲೂ ಪತ್ರ ಸಂಸ್ಕೃತಿ ಜೀವಂತವಾಗಿಟ್ಟ ಶಿಕ್ಷಕ! 53 ಸಾವಿರ ಪತ್ರ ಬರೆದು ದಾಖಲೆ
ಶಿಕ್ಷಕ ಬಸವರಾಜ ಬಾಡಗಿ
Edited By:

Updated on: Nov 23, 2026 | 12:38 PM

ಮುಖ್ಯಾಂಶಗಳು

  • ಡಿಜಿಟಲ್ ಯುಗದಲ್ಲೂ 37 ವರ್ಷಗಳಿಂದ ಪತ್ರ ಬರೆಯುತ್ತಿರುವ ಶಿಕ್ಷಕ.
  • ಈವರೆಗೆ 53 ಸಾವಿರಕ್ಕೂ ಅಧಿಕ ಪತ್ರಗಳನ್ನು ಬರೆದು ದಾಖಲೆ.
  • ಫ್ರಾನ್ಸ್ ಅಧ್ಯಕ್ಷರಿಂದ ಪ್ರತ್ಯುತ್ತರ, 2027ಕ್ಕೆ 3000 ಪತ್ರ ಬರೆಯುವ ಗುರಿ.

ಬಾಗಲಕೋಟೆ, ನವೆಂಬರ್ 23: ಇದು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಎಐ ಯುಗ. ಕ್ಷಣಾರ್ಧದಲ್ಲಿ ಮೊಬೈಲ್ ಮೂಲಕ ಸಂದೇಶ ಕಳುಹಿಸುವ ಕಾಲದಲ್ಲಿ ಪತ್ರ ಬರೆಯುವ ಸಂಸ್ಕೃತಿ ಬಹುತೇಕ ಮರೆಯಾಗುತ್ತಿದೆ. ಆದರೆ ಇಂತಹ ಡಿಜಿಟಲ್ ಯುಗದಲ್ಲೂ ಬಾಗಲಕೋಟೆ ಜಿಲ್ಲೆಯ ಶಿಕ್ಷಕರೊಬ್ಬರು ಕೈಯಾರೆ ಪತ್ರ ಬರೆಯುವ ಹವ್ಯಾಸವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ . ಬರೋಬ್ಬರಿ 37 ವರ್ಷಗಳಿಂದ ಪತ್ರ ಬರೆಯುತ್ತಿರುವ ಇವರು ಈವರೆಗೆ 53 ಸಾವಿರಕ್ಕೂ ಅಧಿಕ ಪತ್ರಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳಿಗೂ ಪತ್ರ ಬರೆಯುವ ಅಭ್ಯಾಸ ಕಲಿಸುತ್ತಿರುವ ಬಸವರಾಜ ಬಾಡಗಿ ಅವರ ಕಾರ್ಯ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

37 ವರ್ಷಗಳಿಂದ ಪತ್ರ ಬರೆಯುವ ನಿರಂತರ ಹವ್ಯಾಸ!

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮದನಮಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಬಾಡಗಿ ಅವರಿಗೆ ಪತ್ರ ಬರೆಯುವುದೆಂದರೆ ಅಚ್ಚುಮೆಚ್ಚು. 1989ರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ ದೊಡ್ಡಪ್ಪ ಡಿ.ಬಿ. ಬಾಡಗಿ ಅವರ ಪತ್ರ ಬರೆಯುವ ಹವ್ಯಾಸದಿಂದ ಪ್ರೇರಣೆ ಪಡೆದಿದ್ದರು. ಅಂದಿನಿಂದ ಆರಂಭವಾದ ಈ ಹವ್ಯಾಸ ಇಂದಿಗೂ ಮುಂದುವರಿದಿದೆ.

Loading...
Teacher Basavaraj (2)

ಫ್ರಾನ್ಸ್ ಅಧ್ಯಕ್ಷರಿಂದ ಪ್ರತ್ಯುತ್ತರ

ಫ್ರಾನ್ಸ್ ಅಧ್ಯಕ್ಷರಿಂದ ಪ್ರತ್ಯುತ್ತರ!

ಕರ್ನಾಟಕದ 21 ಜಿಲ್ಲೆಗಳು, ದೇಶದ 28 ರಾಜ್ಯಗಳು ಹಾಗೂ ವಿದೇಶಗಳ 11 ರಾಷ್ಟ್ರಗಳ ಗಣ್ಯರಿಗೆ ಪತ್ರ ಬರೆದಿದ್ದಾರೆ. ಅಮೆರಿಕ, ಫ್ರಾನ್ಸ್, ರಷ್ಯಾ, ಕೆನಡಾ ಸೇರಿದಂತೆ ವಿವಿಧ ದೇಶಗಳ ರಾಷ್ಟ್ರಾಧ್ಯಕ್ಷರಿಗೆ ಹೊಸ ವರ್ಷದ ಶುಭಾಶಯಗಳನ್ನು ಪತ್ರದ ಮೂಲಕ ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರು, ರಾಹುಲ್ ಗಾಂಧಿ ಹಾಗೂ ಗೋವಾ ಮುಖ್ಯಮಂತ್ರಿಗಳಿಂದಲೂ ಪ್ರತ್ಯುತ್ತರ ಪತ್ರಗಳು ಬಂದಿರುವುದು ವಿಶೇಷ.

ಹೊಸ ವರ್ಷದ ಶುಭಾಶಯ ಕೋರಿದ್ದಕ್ಕೆ ಫ್ರಾನ್ಸ್ ಅಧ್ಯಕ್ಷರು ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಶುಭ ಹಾರೈಕೆಗಳನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದ್ದು, ಅದಕ್ಕೆ ತಾವು ಕೃತಜ್ಞರಾಗಿರುವುದಾಗಿ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 2026ನೇ ಹೊಸ ವರ್ಷವು ನಿಮಗೂ ನಿಮ್ಮ ಪ್ರೀತಿಪಾತ್ರರಿಗೂ ಸಂತೋಷ, ನೆಮ್ಮದಿ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿ ಬಸವರಾಜ್ ಅವರಿಗೆ ಪತ್ರ ಕಳುಹಿಸಿದ್ದಾರೆ.

2027ರ ಹೊಸ ವರ್ಷಕ್ಕೆ 3000 ಪತ್ರ ಬರೆಯುವ ಗುರಿ!

ಪತ್ರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಉದ್ದೇಶದಿಂದ ಬಸವರಾಜ ಬಾಡಗಿ ತಮ್ಮ ವಿದ್ಯಾರ್ಥಿಗಳಿಗೂ ಪತ್ರ ಬರೆಯಲು ಪ್ರೇರೇಪಿಸುತ್ತಿದ್ದಾರೆ. ತಿಂಗಳಿಗೆ ಕನಿಷ್ಠ 10 ಪತ್ರಗಳನ್ನು ಬರೆಯುವಂತೆ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರಿಗೂ ಪತ್ರ ಬರೆಯುವ ಹವ್ಯಾಸ ಬೆಳೆಸುತ್ತಿದ್ದಾರೆ.

ಪ್ರತಿ ವರ್ಷ ಅಕ್ಟೋಬರ್‌ನಿಂದ ಹೊಸ ವರ್ಷದ ಶುಭಾಶಯ ಪತ್ರ ಬರೆಯಲು ಆರಂಭಿಸುವ ಇವರು, ಪ್ರತಿದಿನ 60ರಿಂದ 70 ಪತ್ರಗಳನ್ನು ಬರೆಯುತ್ತಾರೆ. ಈ ಬಾರಿ 2027ರ ಹೊಸ ವರ್ಷ ಮತ್ತು ಸಂಕ್ರಾಂತಿ ಪ್ರಯುಕ್ತ ಯುರೋಪ್ ಹಾಗೂ ಏಷ್ಯಾ ಖಂಡದ 21 ದೇಶಗಳ ರಾಷ್ಟ್ರಾಧ್ಯಕ್ಷರು ಸೇರಿದಂತೆ ಸ್ನೇಹಿತರಿಗೆ ಒಟ್ಟು 3000 ಪತ್ರ ಬರೆಯುವ ಗುರಿ ಹೊಂದಿದ್ದಾರೆ. ಈಗಾಗಲೇ 1500 ಪತ್ರಗಳನ್ನು ಬರೆದಿದ್ದಾರೆ.

ಇವರ ಪತ್ರಪ್ರೇಮ ಗುರುತಿಸಿ ದೆಹಲಿಯಲ್ಲಿ ಲೆಟರ್ ರೈಟರ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ. ವರ್ಷಕ್ಕೆ ಸುಮಾರು 5ರಿಂದ 6 ಸಾವಿರ ರೂಪಾಯಿಗಳನ್ನು ಪತ್ರ ಬರೆಯಲು ಖರ್ಚು ಮಾಡುತ್ತಾರೆ. ಮೊಬೈಲ್ ಸಂದೇಶಗಳ ಯುಗದಲ್ಲಿ ಅಕ್ಷರಗಳ ಮೂಲಕ ಸಂಬಂಧಗಳನ್ನು ಬೆಸೆಯುತ್ತಿರುವ ಬಸವರಾಜ ಬಾಡಗಿ ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Loading...
Unable to load recommendations.
Follow Us