ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ: ಮಹದೇವ ಶಿವಾಚಾರ್ಯ ಪೀಠಾರೋಹಣ, ಮುಂಚೂಣಿಯಲ್ಲಿ ನಿಂತ ಮುರುಗೇಶ್ ನಿರಾಣಿ

ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ: ಮಹದೇವ ಶಿವಾಚಾರ್ಯ ಪೀಠಾರೋಹಣ, ಮುಂಚೂಣಿಯಲ್ಲಿ ನಿಂತ ಮುರುಗೇಶ್ ನಿರಾಣಿ
ಜಮಖಂಡಿ ತಾಲ್ಲೂಕು ಆಲಗೂರು ಗ್ರಾಮದಲ್ಲಿ ನಡೆದ ಪಂಚಮಸಾಲಿ 3ನೇ ಪೀಠದ ಪಟ್ಟಾಧಿಕಾರ ಸಮಾರಂಭದಲ್ಲಿ ಮರುಗೇಶ್ ನಿರಾಣಿ ದಂಪತಿಗಳನ್ನು ಅಭಿನಂದಿಸಲಾಯಿತು.

ಪಂಚಮಸಾಲಿ ಮೂರನೇ ಪೀಠಕ್ಕೆ ಸಚಿವ ಮುರುಗೇಶ್ ನಿರಾಣಿ ಕುಟುಂಬದಿಂದ ₹ 1 ಕೋಟಿ ದೇಣಿಗೆ ನೀಡಲಾಗಿದೆ. ಪೀಠಾರೋಹಣ ಕಾರ್ಯಕ್ರಮಕ್ಕೆ ₹ 50 ಲಕ್ಷ ನೀಡಲಾಗಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 13, 2022 | 4:30 PM


ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ (Panchamasali) ಸಮುದಾಯದ ಮೂರನೇ ಗುರುಪೀಠವು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಮಹದೇವ ಶಿವಾಚಾರ್ಯ ಅವರ ಸಿಂಹಾಸನಾರೋಹಣ ಕಾರ್ಯಕ್ರಮವು ಭಾನುವಾರ (ಫೆ.13) ಸಡಗರ, ಸಂಭ್ರಮಗಳಿಂದ ನೆರವೇರಿತು. ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ, ನಿಡಸೋಸಿ ಮಠದ ಸ್ವಾಮೀಜಿ ರುದ್ರಾಕ್ಷಿ ಕಿರೀಟಧಾರಣೆ ನೆರವೇರಿಸಿದರು. ಸಚಿವ ಮುರುಗೇಶ್ ನಿರಾಣಿ (Murugesh Nirani) ಭಾಗವಹಿಸಿದ್ದರು.

ಸಮಾಜದ ಹಾಗೂ ಪೀಠದ ಭಕ್ತರಿಂದ ಬೆಳ್ಳಿಗದೆ ಕೊಟ್ಟು ಗೌರವ ಸಮರ್ಪಿಸಲಾಯಿತು. ನಿರಾಣಿ ದಂಪತಿಗೆ ಇಂದು 25ನೇ ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪೀಠಾರೋಹಣ ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ ಹಾಗೂ ಪತ್ನಿ ಕಮಲಾ ನಿರಾಣಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಅವರ ತಮ್ಮ ಸಂಗಮೇಶ್ ನಿರಾಣಿ, ಮುರುಗೇಶ್ ನಿರಾಣಿ ಉತ್ತರ ಕರ್ನಾಟಕದವರು. ಸಂತ-ಮಹಾಂತರ ಆಶಿರ್ವಾದ ಹಾಗೂ ರೈತರ ಪ್ರೀತಿ, ಅಂತಃಕರಣ ಅವರ ಮೇಲಿದೆ. ಕಾರ್ಮಿಕರ ಹಾರೈಕೆ ಅವರ ಮೇಲಿದೆ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಅವರನ್ನು ವಿರೋಧಿಸುವವರು, ತೇಜೋವಧೆಗೆ ನಿಂತವರು ಸುಟ್ಟು ಹೋಗುತ್ತಾರೆ ನಾಶವಾಗುತ್ತಾರೆ. ಜನರು ಪ್ರೀತಿಯಿಂದ ಬೆಳೆಸಿದ ನಾಯಕ ಅವರು. ಯಾರು ಎಷ್ಟೇ ಅಸೂಯೆ ಪಟ್ಟುಕೊಂಡರೂ ಅವರು ಎತ್ತರಕ್ಕೆ ಬೆಳೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.

ನಿರಾಣಿಯನ್ನು ಹೊಗಳಿದ ಸ್ವಾಮೀಜಿ
ಕಲಬುರ್ಗಿ ಸುಲಫಲ ಮಠದ ಸಾರಂಗದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮುಂದಿನ 12 ತಿಂಗಳ ಕಾಲ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಂದೆ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.

ನಾವು ಯಾರ ವಿರುದ್ಧವೂ ಅಲ್ಲ: ನಿರಾಣಿ
ಅಲಗೂರು ವೀರಶೈವ ಲಿಂಗಾಯತ ಪಂಚಮಸಾಲಿ ಮೂರನೇ ಪೀಠದ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಮಧ್ಯಮ, ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಈ ಸಮಾಜ ಯಾರ ವಿರೋಧವೋ ಅಲ್ಲ, ಪರವೂ ಅಲ್ಲ ಎಂದರು ಪಂಚಮಸಾಲಿ ಪೀಠಗಳು ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿವೆ. ನನಗಂತೂ ಇದರಿಂದ ತುಂಬಾ ಸಂತೋಷವಾಗಿದೆ. 2010-11ರಲ್ಲಿ 2ಎ ವರ್ಗಕ್ಕೆ ಸೇರಿಸಲು ಬಿ.ಎಸ್.ಯಡಿಯೂರಪ್ಪ ಪ್ರಯತ್ನಿಸಿದ್ದರು. ಯಾವುದೇ ಜಾತಿ ಕಾಲಂನಲ್ಲಿರದ ನಮ್ಮ ಸಮಾಜವನ್ನು 3ಬಿಗೆ ಸೇರಿಸಿದವರು ಬಿಎಸ್​ವೈ ಎಂದು ನೆನಪಿಸಿಕೊಂಡರು. ನನ್ನ ಜೀವನದಲ್ಲಿ ಕೊನೆಯ ಉಸಿರು ಇರುವವರೆಗೂ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಪಂಚಮಸಾಲಿ ಸಮುದಾಯದ ಮೂರೂ ಪೀಠಗಳ ಟ್ರಸ್ಟ್ ವತಿಯಿಂದ ಸಚಿವ ‌ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು. ಕೂಡಲಸಂಗಮ ಪಂಚಮಸಾಲಿ ಪೀಠ, ಹರಿಹರ ಪಂಚಮಸಾಲಿ ಪೀಠ, ಅಲಗೂರು ಪಂಚಮಸಾಲಿ 3ನೇ ಪೀಠದ ಟ್ರಸ್ಟ್ ಸದಸ್ಯರು ಪಾಲ್ಗೊಂಡಿದ್ದರು. ಸಚಿವ ಮುರುಗೇಶ್ ನಿರಾಣಿ ಭಾಷಣ ಮಾಡುವಾಗ ಅಭಿಮಾನಿಗಳು ಜಯಕಾರ ಕೂಗಿದರು.

ಪಂಚಮಸಾಲಿ ವಿರೋಧಿಗಳೆಂದು ಬಿಂಬಿಸಲಾಯಿತು: ವಿಜಯೇಂದ್ರ ವಿಷಾದ
ಪಂಚಮಸಾಲಿ ಮೂರನೇ ಪೀಠದ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ, ಕೆಲ ತಿಂಗಳ ಹಿಂದೆ ಯಡಿಯೂರಪ್ಪ ಹಾಗೂ ನನ್ನನ್ನು ಪಂಚಮಸಾಲಿ ವಿರೋಧಿಗಳು ಎಂದು ಬಿಂಬಿಸಲು ಕೆಲವರು ಪ್ರಯತ್ನಿಸಿದರು. ಯಡಿಯೂರಪ್ಪ ಅವರು ರಾಜ್ಯದ ಎಲ್ಲ ಜಾತಿ ಜನಾಂಗವನ್ನು ಒಂದೇ ದೃಷ್ಟಿಯಲ್ಲಿ ‌ನೋಡಿದ್ದರು. ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಬಸನಗೌಡ ಪಾಟಿಲ್ ಯತ್ನಾಳ್, ವಿಜಯಾನಂದ‌ ಕಾಶಪ್ಪನವರ ಹೆಸರು ಹೇಳದೆ ವಿಜಯೇಂದ್ರ ಟಾಂಗ್ ಕೊಟ್ಟರು. ಪೀಠದ ವತಿಯಿಂದ ವಿಜಯೇಂದ್ರ ಅವರನ್ನು ಅಭಿನಂದಿಸಲಾಯಿತು.

2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಮುರುಗೇಶ್ ನಿರಾಣಿ ಅವರು ಕೈಗಾರಿಕೆ ಸಚಿವರಾಗಿದ್ದರು. 2011ರಲ್ಲಿ ಪಂಚಮಸಾಲಿ ಸಮುದಾಯವನ್ನು 3ಬಿ ಸೇರಿಸಬೇಕು ಎಂದು ನಿರಾಣಿ ಅವರು ಬಿಎಸ್​ವೈಗೆ ಮನವಿ ಮಾಡಿದ್ದರು. ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸಲಾಯಿತು. ಸ್ವಾತಂತ್ರ್ಯ ಬಂದ ನಂತರ ಎಲ್ಲ ಸಮಾಜಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು ಬಿಎಸ್​ವೈ. ನಾಲಿಗೆ ರುಚಿ ಬಿಟ್ಟರೆ ಆರೋಗ್ಯಕ್ಕೆ ಲಾಭ, ವಾದ-ವಿವಾದ ಬಿಟ್ಟರೆ ನಮ್ಮ ಸಂಬಂಧಗಳಿಗೆ ಲಾಭ ಎಂದು ಕಿವಿಮಾತು ಹೇಳಿದರು.

3ನೇ ಪೀಠಕ್ಕೆ ನಿರಾಣಿ ಧಾರಾಳ ದೇಣಿಗೆ
ಪಂಚಮಸಾಲಿ ಮೂರನೇ ಪೀಠಕ್ಕೆ ಸಚಿವ ಮುರುಗೇಶ್ ನಿರಾಣಿ ಕುಟುಂಬದಿಂದ ₹ 1 ಕೋಟಿ ದೇಣಿಗೆ ನೀಡಲಾಗಿದೆ. ಪೀಠಾರೋಹಣ ಕಾರ್ಯಕ್ರಮಕ್ಕೆ ₹ 50 ಲಕ್ಷ ನೀಡಲಾಗಿದೆ. ಪೀಠದ ಕಟ್ಟಡ ಅಭಿವೃದ್ದಿ ಮುಂದಿನ ಕಾರ್ಯ ಚಟುವಟಿಕೆಗೆ ₹ 50 ಲಕ್ಷ ನೀಡುವುದಾಗಿ ಭರವಸೆ ನೀಡಲಾಗಿದೆ. ಪೀಠಕ್ಕಾಗಿ 10 ಎಕರೆ ಭೂಮಿ ಕೊಡಲೂ ನಿರಾಣಿ ಕುಟುಂಬ ಒಪ್ಪಿಕೊಂಡಿದೆ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ; ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ

ಇದನ್ನೂ ಓದಿ: ಪಂಚಮಸಾಲಿ ಸಮುದಾಯದ 3ನೇ ಪೀಠಕ್ಕೂ ನಮ್ಮ ಕುಟುಂಬದ ಬೆಂಬಲ ಇದೆ: ಮುರುಗೇಶ್ ನಿರಾಣಿ

Follow us on

Related Stories

Most Read Stories

Click on your DTH Provider to Add TV9 Kannada