ಅದು ರಾಜ್ಯದಲ್ಲೇ ಅತಿ ಹೆಚ್ಚು ಜನ ನೇಕಾರರನ್ನು (Weavers) ಹೊಂದಿರುವ ಜಿಲ್ಲೆ (Bagalkot). ಇಂದಿಗೂ ಕೈ ಮಗ್ಗ (handlooms), ವಿದ್ಯುತ್ ಮಗ್ಗ ನಂಬಿ ಲಕ್ಷಾಂತರ ನೇಕಾರರು ಜೀವನ ಮಾಡುತ್ತಿದ್ದಾರೆ. ಅವರಿಗೆ ಅನುಕೂಲ ಆಗಲಿ ಅಂತ ಸಮವಸ್ತ್ರ ಬಟ್ಟೆ ನೇಯೋಕೆ ಅವಕಾಶ ಕಲ್ಪಿಸಿದೆ. ಆದರೆ ಸಮಯಕ್ಕೆ ಸರಿಯಾಗಿ ಕಚ್ಚಾ ವಸ್ತು (raw material) ಸಿಗುತ್ತಿಲ್ಲ. ಇದರಿಂದ ನೇಕಾರರಿಗೆ ಕೈ ತುಂಬ ಕೆಲಸವಿಲ್ಲದಂತಾಗಿದೆ. ಕೆಲ ಕಡೆ ಕುಂಟುತ್ತಾ ಸಾಗಿರುವ ಮಗ್ಗಗಳು. ಇನ್ನೊಂದು ಕಡೆ ಸಂಪೂರ್ಣ ಬಂದ್ ಆಗಿರುವ ಮಗ್ಗಗಳು. ತಮಗಾದ ಸಂಕಷ್ಟದ ಬಗ್ಗೆ ಅಳಲು ತೋಡಿಕೊಳ್ಳುತ್ತಿರುವ ನೇಕಾರರು. ಇವು ನೇಕಾರರ ಸಂಕಷ್ಟಕ್ಕೆ ಸಾಕ್ಷಿಯಾದ ದೃಶ್ಯಗಳು. ಹೌದು ಜನರ ಮಾನ ಮುಚ್ಚುವವರು ನೇಕಾರರು. ಆದರೆ ಅವರ ಬದುಕು ಮಾತ್ರ ಸದಾ ಆತಂತ್ರ ಸ್ಥಿತಿಯಲ್ಲಿರುತ್ತದೆ.
ಇಂತಹ ನೇಕಾರರಿಗೆ ಅನುಕೂಲ ಆಗಲಿ ಅಂತ ಸರಕಾರ ವಿಶೇಷ ಯೋಜನೆ ರೂಪಿಸಿದೆ. ಅದು ಸರಕಾರಿ ಶಾಲಾಮಕ್ಕಳ ಸಮವಸ್ತ್ರ ಬಟ್ಟೆ ನೇಯೋದು. ಇದರಿಂದ ಮಕ್ಕಳಿಗೆ ಬಟ್ಟೆ ಸಿದ್ದವಾದರೆ, ಅದನ್ನು ನೇಯುವ ನೇಕಾರರಿಗೆ ಉಪಜೀವನಕ್ಕೆ ಆಧಾರ. ನೇಕಾರರಿಗೆ ಕೆಲಸ ಕೊಡುವ ಯೋಜನೆಯಾಗಿದೆ. ಆ ಪ್ರಕಾರ ಕೆ ಹೆಚ್ ಡಿ ಸಿ ಮೂಲಕ ನೇಕಾರರಿಗೆ ಕಚ್ಚಾವಸ್ತು ವಿತರಿಸಲಾಗುತ್ತದೆ. ಕಚ್ಚಾ ವಸ್ತುವನ್ನು ನೇಯ್ದು ನೇಕಾರರು ಕೆಹೆಚ್ ಡಿಸಿ (Karnataka Handloom Development Corporation – KHDC) ಗೆ ಮರಳಿಸಬೇಕು.
ಆಗ ಅದಕ್ಕೆ ಒಂದು ಮೀಟರ್ ಗೆ ಇಂತಿಷ್ಟು ಅಂತ ಸರಕಾರ ಕೆ ಹೆಚ್ ಡಿ ಸಿ ಮೂಲಕ ಹಣ ಸಂದಾಯ ಮಾಡುತ್ತದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೆ ಹೆಚ್ ಡಿ ಸಿ ಮೂಲಕ ಸಮವಸ್ತ್ರ ನೇಯಲು ಪೂರಕ ಕಚ್ಚಾವಸ್ತು ನೂಲನ್ನು ನೀಡುತ್ತಿಲ್ಲವಂತೆ. ಇದರಿಂದ ಕೈಗೆ ಕೆಲಸವಿಲ್ಲದೇ ನೇಕಾರರು ಮಗ್ಗ ಬಂದ್ ಮಾಡುವಂತಾಗಿದೆ. ಸಮಯಕ್ಕೆ ಸರಿಯಾಗಿ ಕಚ್ಚಾವಸ್ತು ಕೊಡಬೇಕೆಂದು ನೇಕಾರರು ಆಗ್ರಹ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ರಬಕವಿ-ಬನಹಟ್ಟಿ, ಗುಳೇದಗುಡ್ಡ, ಇಳಕಲ್, ಬಾಗಲಕೋಟೆ, ತೇರದಾಳ ಭಾಗದಲ್ಲಿ ನೇಕಾರ ಜನರು ಹೆಚ್ಚಿದ್ದಾರೆ. ಲಕ್ಷಾಂತರ ಜನರು ನೇಕಾರಿಕೆ ಮೇಲೆ ಅವಲಂಬಿತರಾಗಿದ್ದಾರೆ. ಇಂತಹವರಿಗೆ ಸರಕಾರ ಕೆ ಹೆಚ್ ಡಿ ಸಿ ಮೂಲಕ ನೀಡುತ್ತಿರುವ ಸಮವಸ್ತ್ರ ನೇಯುವ ಕಾರ್ಯ ತೀರಾ ಅನಿವಾರ್ಯವಾಗಿದೆ.
ಇದನ್ನೂ ಓದಿ: ಅಲ್ಲಿ 20 ವರ್ಷದಿಂದ ಬಿಜೆಪಿಯ ಅದೇ ಅಭ್ಯರ್ಥಿ ವಿಜಯ ಸಾಧಿಸುತ್ತಿದ್ದಾರೆ, ಕಾಂಗ್ರೆಸ್ ಮಾತ್ರ ಸೋಲುತ್ತಲೇ ಇದೆ!
ಇಲ್ಲಿ ಸಮವಸ್ತ್ರ ಶರ್ಟ್ ಬಟ್ಟೆ ನೇಯಲು ಒಂದು ಮೀ ಗೆ ೨೮ ರೂ ನೀಡಲಾಗುತ್ತದೆ. ಪ್ಯಾಂಟ್, ಸ್ಕರ್ಟ್ ಒಂದು ಮೀಟರ್ ನೇಯಲು ೩೦ ರೂ ಇದೆ. ಆದರೆ ನೇಕಾರರಿಗೆ ಕೇವಲ ಶರ್ಟ್ ಬಟ್ಟೆ ನೇಯಲು ಮಾತ್ರ ಕಚ್ಚಾ ವಸ್ತು ನೀಡಲಾಗುತ್ತಿದೆ. ಪ್ಯಾಂಟ್ ಸ್ಕರ್ಟ್ ಬಟ್ಟೆ ನೇಯಲು ಕಚ್ಚಾ ವಸ್ತು ನೀಡಿದರೆ ಸ್ವಲ್ಪ ಹೆಚ್ಚು ಆದಾಯ ಬರುತ್ತದೆ ಎಂಬುದು ನೇಕಾರರ ಆಶಯ/ವಾದವಾಗಿದೆ.
ಇನ್ನು ಈ ಬಗ್ಗೆ ಕೆಹೆಚ್ ಡಿ ಸಿ ಅಧಿಕಾರಿಗಳನ್ನು ಕೇಳಿದರೆ, ನಾವು ಅವಶ್ಯಕತೆಗೆ ತಕ್ಕಂತೆ ಕಚ್ಚಾ ವಸ್ತು ಪೂರೈಕೆ ಮಾಡುತ್ತಲೇ ಇದ್ದೇವೆ. ನಮಗೆ ಪ್ಯಾಂಟ್ ಸ್ಕರ್ಟ್ ಬಟ್ಟೆ ಈಗಾಗಲೇ ಅಗತ್ಯಕ್ಕಿಂತಲೂ ಹೆಚ್ಚಿದೆ. ಆ ಕಾರಣ ಸ್ಕರ್ಟ್, ಪ್ಯಾಂಟ್ ಬಟ್ಟೆ ನೇಯಲು ಕಚ್ಚಾವಸ್ತು ಕೊಟ್ಟಿಲ್ಲ. ಶಿಕ್ಷಣ ಇಲಾಖೆಯಿಂದ ಶರ್ಟ್ ಗೆ ಹೆಚ್ಚಿನ ಬೇಡಿಕೆ ಇದ್ದು, ಆ ಪ್ರಕಾರ ಕಚ್ಚಾವಸ್ತು ನೀಡುತ್ತಿದ್ದೇವೆ. ಆದರೆ ಕಚ್ಚಾ ವಸ್ತು ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ ಅಂತಾರೆ.
ನೇಕಾರರಿಗೆ ಆಸರೆಯಾಗಲು ಸಮವಸ್ತ್ರ ಬಟ್ಟೆ ತಯಾರಿಕೆ ಕಾರ್ಯ ಒಳ್ಳೆಯ ಯೋಜನೆಯಾಗಿದೆ. ಆದರೆ ಕಚ್ಚಾ ವಸ್ತು ಪೂರೈಕೆ ವಿಚಾರದಲ್ಲಿ ಗೊಂದಲವಿದ್ದು, ಕೆ ಹೆಚ್ ಡಿ ಸಿ ಅಧಿಕಾರಿಗಳು ಗೊಂದಲ ಸರಿಪಡಿಸಿ ನೇಕಾರರಿಗೆ ಅನುಕೂಲ ಕಲ್ಪಿಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ