ಸರ್ಕಾರದ ಇಬ್ಬಗೆಯ ನೀತಿಗೆ ವಿದ್ಯಾರ್ಥಿನಿಯರ ಆಕ್ರೋಶ; ದುಡ್ಡು ಕಟ್ಟಿಸಿಕೊಂಡು ಬಸ್​ಪಾಸ್ ನೀಡುತ್ತಿರುವ KSRCT ಸಿಬ್ಬಂದಿ

ಚುನಾವಣೆಗೂ ಮುಂಚೆ ಮಹಿಳೆಯರಿಗೆ ಫ್ರೀ ಬಸ್ಸ್ ಪಾಸ್, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಮನೆಯ ಯಜಮಾನಿಗೆ 2 ಸಾವಿರ ರೂ. ಹೀಗೆ ಹತ್ತು ಹಲವಾರು ಭರವಸೆಗಳನ್ನು ನೀಡಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸರ್ಕಾರ ರಚನೆಯಾಗಿ ಒಂದು ವಾರ ಕಳೆದ್ರೂ, ಚುನಾವಣೆಗೂ‌ ಮುನ್ನ ನೀಡಿರುವ ಭರವಸೆ ಈಡೇರಿಸಲು ಹೆಣಗುತ್ತಿದೆ. ಇತ್ತ ನಿನ್ನೆ ಸಾರಿಗೆ ಸಚಿವರು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಘೋಷಣೆ ಮಾಡಿದ್ರೂ ಸಹ, ಕೆಎಸ್.ಆರ್​ಟಿಸಿ ಅಧಿಕಾರಿ ವರ್ಗ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ನೀಡಲು ದುಡ್ಡು ಪಡೆಯುತ್ತಿದ್ದು, ಸರ್ಕಾರದ ಈ ಕ್ರಮಕ್ಕೆ ವಿದ್ಯಾರ್ಥಿನಿಯರ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ಸರ್ಕಾರದ ಇಬ್ಬಗೆಯ ನೀತಿಗೆ ವಿದ್ಯಾರ್ಥಿನಿಯರ ಆಕ್ರೋಶ; ದುಡ್ಡು ಕಟ್ಟಿಸಿಕೊಂಡು ಬಸ್​ಪಾಸ್  ನೀಡುತ್ತಿರುವ KSRCT ಸಿಬ್ಬಂದಿ
ದುಡ್ಡು ಕಟ್ಟಿ ಬಸ್​ಪಾಸ್ ಪಡೆಯುತ್ತಿರುವ ವಿದ್ಯಾರ್ಥಿಗಳು​
Follow us
|

Updated on: Jun 01, 2023 | 9:10 AM

ಬಾಗಲಕೋಟೆ: ಬಸ್​ಪಾಸ್ ಪಡೆಯಲು ಕ್ಯೂ ನಿಂತಿರುವ ವಿದ್ಯಾರ್ಥಿನಿಯರು. ದುಡ್ಡು ಕಟ್ಟಿ, ಮುಗಿಬಿದ್ದು ಬಸ್ ಪಾಸ್ ಪಡೆಯುತ್ತಿರುವ ವಿದ್ಯಾರ್ಥಿ ವರ್ಗ. ಸರ್ಕಾರದ ಕ್ರಮಕ್ಕೆ ವಿದ್ಯಾರ್ಥಿನಿಯರ ಆಕ್ರೋಶ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಬಾಗಲಕೋಟೆ(Bagalkote) ಜಿಲ್ಲೆಯ ಬಸ್ ನಿಲ್ದಾಣದ ಆವರಣದಲ್ಲಿ. ಅಂದ ಹಾಗೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಭರವಸೆಗಳನ್ನ ನೀಡಿತ್ತು. ಅದರಂತೆ ರಾಜ್ಯದ ಜನರು ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸವಿಟ್ಟು, ಅಧಿಕಾರದ ಗದ್ದುಗೆಗೆ ಕೂರಿಸಿದ್ರು. ಆದ್ರೆ, ಸರ್ಕಾರ ರಚನೆಯಾಗಿ ಒಂದು ವಾರ ಕಳೆದ್ರೂ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಪಕ್ಷ ಗೊಂದಲಕ್ಕೀಡಾಗಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ನೂತನ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು, ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಘೊಷಣೆಯನ್ನ ಮಾಡಿದ್ದಾರೆ. ಆದರೆ ನಿನ್ನೆ(ಮೇ.31) ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ನೀಡಲು, ಕೆಎಸ್ಆರ್​ಟಿಸಿ ಸಿಬ್ಬಂದಿ ವರ್ಗ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಂದ 400 ರೂ ಕಲೆಕ್ಟ್ ಮಾಡಿ, ಪಾಸ್ ವಿತರಣೆ ಮಾಡುತ್ತಿದ್ದಾರೆ.

ಇದರಿಂದ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಸರ್ಕಾರದ ಇಬ್ಬಗೆ ನೀತಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ರು. ಸರ್ಕಾರ ಹೇಳೋದೊಂದು ಮಾಡೋದು ಮತ್ತೊಂದು. ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಎಂದು ಹೇಳಿ ಈಗ ನಮ್ಮಿಂದ ದುಡ್ಡು ಪಡೆಯುತ್ತಿದ್ದಾರೆ ಎಂದು ಆಕ್ಷೇಪ ಎತ್ತಿದ್ರು. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿನಿಯರು ಸರ್ಕಾರ ಚುನಾವಣೆಗೂ‌ ಮುಂಚೆ ನೀಡಿದ ಗ್ಯಾರೆಂಟಿ ಈಡೇರಿಸಬೇಕು. ಕೊಟ್ಟ ಮಾತಿನಂತೆ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ರು.

ಇದನ್ನೂ ಓದಿ:ಉಚಿತ ಬಸ್ ಪ್ರಯಾಣ ಗ್ಯಾರಂಟಿಗೆ ಕಿಮೀ ಮಿತಿ ನಿಗದಿಗೆ ಚಿಂತನೆ; ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

ನಾವು ಸಹ ಈ ಭರವಸೆಗಳನ್ನ ನಂಬಿ ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಿದ್ದೇವೆ. ಈಗ ಕೆ.ಎಸ್.ಆರ್​.ಟಿ.ಸಿ ಸಿಬ್ಬಂದಿಗಳು ಪಾಸ್ ನವೀಕರಣಕ್ಕೆ 400 ರೂಪಾಯಿ ಪಡೆಯುತ್ತಿರೋದು ಎಷ್ಟು ಸರಿ ಎಂದು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ರು. ಸಾರಿಗೆ ಇಲಾಖೆಯ ಸಚಿವರೇ ಕೊಟ್ಟ ಭರವಸೆಯಂತೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿ, ಇಲ್ಲದಿದ್ರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು. ಇನ್ನು ಇತ್ತ ಕೆ.ಎಸ್​ಆರ್​ಟಿಸಿ ಅಧಿಕಾರಿಗಳನ್ನ ಕೇಳಿದ್ರೆ, ನವೀಕರಣ ಬಸ್ ಪಾಸ್ ವಿತರಣೆ ಬಗ್ಗೆ ಸರ್ಕಾರದಿಂದ ಈವರೆಗೂ ನಮಗೆ ಯಾವುದೇ ಆದೇಶ ಬಂದಿಲ್ಲ. ಅಲ್ಲದೇ ಕೇಂದ್ರ ಕಛೇರಿಯಿಂದ ಆದೇಶ ಬಂದ ನಂತರ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗುತ್ತೆ ಎಂದರು.

ಇನ್ನು ವಿದ್ಯಾರ್ಥಿನಿಯರಿಗೆ ಫ್ರೀ ಬಸ್ ಪಾಸ್ ನೀಡುವ ಬಗ್ಗೆ ಸಧ್ಯ ಕೇಂದ್ರ ಕಛೇರಿಯಲ್ಲಿ ಚರ್ಚೆಗಳು ನಡೆದಿವೆ. ಅಲ್ಲಿಂದ ಸ್ಪಷ್ಟ ಆದೇಶ ಬರ್ತಿದ್ದಂತೆ ಮಹಿಳೆಯರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತೆ, ಅಲ್ಲದೇ ಈಗಾಗಲೇ ದುಡ್ಡು ಕಟ್ಟಿ ಪಾಸ್ ಪಡೆದಿರುವ ವಿದ್ಯಾರ್ಥಿಗಳು ಆತಂಕಗೊಳ್ಳುವುದು ಬೇಡ, ಒಂದು ವೇಳೆ ನವೀಕರಣದಾರರ ಬಸ್ ಪಾಸ್ ಫ್ರೀ ಎಂದಾದ್ರೆ, ಅವರಿಂದ ಪಡೆದ ದುಡ್ಡನ್ನೂ ಮರಳಿ ಅವರಿಗೆ ನೀಡುತ್ತೇವೆ ಎಂಬ ಸಮಜಾಯಿಸಿ ನೀಡುತ್ತಿದ್ದಾರೆ.

ಇದನ್ನೂ ಓದಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಕಟ್ಟಡ ಕಾರ್ಮಿಕರಿಗೆ ಅತಿ ಹೆಚ್ಚು ಉಚಿತ ಪಾಸ್ ವಿತರಣೆ

ಕೊಟ್ಟ ಮಾತಿನಂತೆ ನಮಗೂ ಫ್ರೀ ಬಸ್​ ಪಾಸ್ ನೀಡಿ ಎಂದು ವಿದ್ಯಾರ್ಥಿನಿಯರು ಆಗ್ರಹಿಸುತ್ತಿದ್ರೆ, ಇತ್ತ ಕೆಎಸ್ಆರ್​ಟಿಸಿ ಅಧಿಕಾರಿ ವರ್ಗ ನಮಗೆ ಇನ್ನೂ ಸ್ಪಷ್ಟ ಆದೇಶ ಬಂದಿಲ್ಲ, ಹೀಗಾಗಿ ನಾವು ಮಹಿಳೆಯರಿಗೆ ದುಡ್ಡು ಪಡೆದು ಬಸ್ ಪಾಸ್ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಾರಿಗೆ ಸಚಿವರು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಘೋಷಣೆ ಮಾಡಿದ ಮೇಲೆಯೂ ಬಸ್ ಪಾಸ್​ಗೆ ದುಡ್ಡು ಪಡೆಯುತ್ತಿರೋ ಸರ್ಕಾರದ ಗೊಂದಲ ನೀತಿ ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ