Tomato Price: ಟೊಮೆಟೊ ಬೆಲೆ ಕುಸಿತ; ಬೆಳೆಗಾರರಿಗೆ ಸಿಗದಂತಾಯ್ತು ಕೆಜಿಗೆ 6 ರೂಪಾಯಿ, ರೈತರಲ್ಲಿ ಹೆಚ್ಚಿದ ಆತಂಕ
ಟೊಮೆಟೊ ಒಂದು ಟ್ರೇಗೆ (25 ಕೆಜಿ ಟ್ರೇ) ವ್ಯಾಪಾರಸ್ಥರು 100 ರೂಪಾಯಿಯಿಂದ 150 ರೂಪಾಯಿವರೆಗೆ ಕೇಳುತ್ತಿದ್ದಾರೆ. ಇದರಿಂದ ಕೂಲಿ ಖರ್ಚು ಸಹ ಬೆಳೆಗಾರನಿಗೆ ಸಿಗದಂತಾಗಲಿದೆ. ಹೀಗಾಗಿ ಬೆಳೆಗಾರರು ಬೆಳೆ ಸಾಗಾಣಿಕೆಯ ವ್ಯರ್ಥ ಖರ್ಚು ಏಕೆ? ಎಂಬ ಆಲೋಚನೆ ಮಾಡಿ ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ.
ಬಾಗಲಕೋಟೆ: ಕಳೆದೆರಡು ವರ್ಷಗಳಿಂದ ಅತೀವೃಷ್ಟಿ, ಕೊವಿಡ್ನಿಂದ ಟೊಮೆಟೋ(Tomato) ಬೆಳೆಗಾರರು ಕಂಗಾಲಾಗಿದ್ದರು. ಈ ಬಾರಿ ಯಾವುದೇ ಸಮಸ್ಯೆ ಇಲ್ಲದೇ ಭರ್ಜರಿಯಾಗಿ ಬೆಳೆಯೇನೋ ಬಂದಿದೆ. ಆದರೆ ಈಗ ಮತ್ತೆ ಬೆಳೆಗಾರನಿಗೆ ಬೆಲೆ ಕೈ ಕೊಟ್ಟಿದೆ. ದರ ಪಾತಾಳಕ್ಕೆ ಕುಸಿದ ಕಾರಣ, ಸತತ ಎರಡು ವರ್ಷ ನಷ್ಟ ಅನುಭವಿಸಿ ಲಾಭದ ನಿರೀಕ್ಷೆಯಲ್ಲಿದ್ದ ರೈತನ( Farmers) ಕನಸು ನುಚ್ಚುನೂರಾಗಿದೆ. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ(Price) ಸಿಗದ ಕಾರಣ ಭರ್ಜರಿಯಾಗಿ ಬಂದಿದ್ದ ಬೆಳೆ ಜಮೀನಿನಲ್ಲೇ ಕೊಳೆಯುತ್ತಿದೆ.
ಬಾಗಲಕೋಟೆ ತಾಲ್ಲೂಕಿನಲ್ಲಿ ಹೊನ್ನಾಕಟ್ಟಿ, ಶಿರೂರು, ಬೆನಕಟ್ಟಿ ಭಾಗದಲ್ಲಿ ಬೆಳೆದ ಟೊಮೆಟೊ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಕಳೆದೆರಡು ವರ್ಷಗಳಿಂದ ಅತೀವೃಷ್ಟಿ ಹಾಗೂ ಕೊವಿಡ್ ಹಾವಳಿಗೆ ತುತ್ತಾಗಿ ಟೊಮೆಟೊ ಬೆಳೆಗಾರರು ಕೈ ಸುಟ್ಟುಕೊಂಡಿದ್ದರು. ಈ ಸಾರಿಯೂ ಯಾವುದೇ ಸಮಸ್ಯೆ ಇಲ್ಲದೇ ಸಮೃದ್ಧವಾಗಿ ಟೊಮೆಟೊ ಬೆಳೆ ಕೂಡಾ ತೆಗೆದಿದ್ದರು. ಇನ್ನೇನು ಸಮೃದ್ಧವಾಗಿ ಬಂದ ಟೊಮೆಟೊ ಬೆಳೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಆಲೋಚನೆ ಮಾಡಿದ್ದ ಬೆಳೆಗಾರರಿಗೆ ದರ ಬರಸಿಡಿಲಿನಂತೆ ಬಂದಪ್ಪಳಿಸಿದೆ.
ಟೊಮೆಟೊ ಒಂದು ಟ್ರೇಗೆ (25 ಕೆಜಿ ಟ್ರೇ) ವ್ಯಾಪಾರಸ್ಥರು 100 ರೂಪಾಯಿಯಿಂದ 150 ರೂಪಾಯಿವರೆಗೆ ಕೇಳುತ್ತಿದ್ದಾರೆ. ಇದರಿಂದ ಕೂಲಿ ಖರ್ಚು ಸಹ ಬೆಳೆಗಾರನಿಗೆ ಸಿಗದಂತಾಗಲಿದೆ. ಹೀಗಾಗಿ ಬೆಳೆಗಾರರು ಬೆಳೆ ಸಾಗಾಣಿಕೆಯ ವ್ಯರ್ಥ ಖರ್ಚು ಏಕೆ? ಎಂಬ ಆಲೋಚನೆ ಮಾಡಿ ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಭರ್ಜರಿಯಾಗಿ ಬಂದಿದ್ದ ಟೊಮೆಟೊ ಬೆಳೆ ಜಮೀನಿನಲ್ಲೇ ಕರಗಿ ಹೋಗುತ್ತಿದೆ.
ಟೊಮೆಟೊ ಬೆಳೆ ಬೆಳೆಯುವುದಕ್ಕೆ ಒಂದು ಎಕರೆಗೆ 50 ಸಾವಿರ ರೂಪಾಯಿವರೆಗೂ ರೈತ ಖರ್ಚು ಮಾಡಿದ್ದಾನೆ. ಇದರಲ್ಲಿ ಪ್ರತಿಯೊಬ್ಬ ಕೂಲಿಯವರ ಖರ್ಚು 4 ರಿಂದ 5 ಟ್ರೇ ಹರಿಯುವವರಿಗೆ 250 ರೂಪಾಯಿಯಿಂದ 300 ರೂಪಾಯಿ ನೀಡಲಾಗುತ್ತದೆ. ಇನ್ನು ಬೀಜ ಖರೀದಿ, ಗೊಬ್ಬರ ಸೇರಿ ಆ ಖರ್ಚು ಕೂಡಾ ಬೇರೆ. ಹೀಗಾಗಿ ಈಗ 25 ಕೆಜಿಯ ಒಂದು ಟೊಮೆಟೊ ಟ್ರೇಗೆ ಸಿಗುತ್ತಿರುವ 100 ರೂಪಾಯಿಯಿಂದ 150 ರೂಪಾಯಿ ಹಣ ಕೂಲಿಗೆ ಸಾಲೋದಿಲ್ಲ. ಇನ್ನು ಸಾಗಾಟದ ಖರ್ಚು ಬೇರೆನೆ. ಹೀಗಾಗಿ ಟೊಮ್ಯಾಟೊ ಬೆಳೆಗಾರನಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಟೊಮ್ಯಾಟೊ ಬೆಳೆಗಾರ ಈಗ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾನೆ. ಸದ್ಯ ಈ ವಾತಾವರಣದಲ್ಲಿ ರೈತರ ಬದುಕು ದುಃಸ್ಥರ ಆಗಿದೆ. ಸರ್ಕಾರದಿಂದಲೂ ಸರಿಯಾಗಿ ಸಹಾಯ ಸಿಗುತ್ತಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತು ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕಿದೆ ಎಂದು ಟೊಮೆಟೊ ಬೆಳೆಗಾರರಾದ ಪರಶುರಾಮ ಕಟಗಿ ಮನವಿ ಮಾಡಿದ್ದಾರೆ.
ಒಟ್ಟಾರೆ ಸತತ ಎರಡು ವರ್ಷ ಪ್ರಕೃತಿ ವಿಕೋಪಕ್ಕೆ ನಲುಗಿ ಕೈ ಸುಟ್ಟುಕೊಂಡಿದ್ದ ಬೆಳೆಗಾರನಿಗೆ ಈ ಬಾರಿ ಟೊಮೆಟೊ ಕೈ ಹಿಡಿದಿತ್ತು. ಆದರೆ ಬೆಳೆ ಕೈ ಹಿಡಿದರೂ ಬೆಲೆ ಕೈ ಹಿಡಿಯದ ಕಾರಣ ರೈತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಟೊಮೆಟೊ ರೈತರ ಸಹಾಯಕ್ಕೆ ದೌಡಾಯಿಸಬೇಕಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ:
Tomato Price: ಟೊಮೆಟೊ ದರ ಕಳೆದ ವರ್ಷ ನವೆಂಬರ್ಗೆ ಹೋಲಿಸಿದಲ್ಲಿ ಶೇ 142ರಷ್ಟು ಏರಿಕೆ
ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!