ಬಾಗಲಕೋಟೆ: ಜಿಲ್ಲೆಯ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು(Vijayanand Kashappanavar) ನಟಿಯೊಬ್ಬರ ಜೊತೆ ಎರಡನೇ ಮದುವೆಯಾಗಿದ್ದು, ನಟಿ ಜೊತೆಗಿನ ಫೋಟೋ ಹಾಗೂ ಅವರಿಬ್ಬರಿಗೆ ಮಗು ಜನಿಸಿದೆ ಎಂಬ ಸುದ್ದಿ ಹೊರ ಬಿದ್ದಿತ್ತು. ಮಗುವಿನ ಜನನ ಪ್ರಮಾಣಪತ್ರ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿ ವಿಜಯಾನಂದ ಪತ್ನಿ ವೀಣಾ(Veena Kashappanavar) ಪ್ರತಿಕ್ರಿಯೆ ನೀಡಿದ್ದಾರೆ.
ಹುನಗುಂದ ಕ್ಷೇತ್ರದಲ್ಲಿ ವೈಯಕ್ತಿಕ ವಿಚಾರ ಹರಿದಾಡ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ವೀಣಾ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಕಲೆ ಹಾಕಿದ ಮೇಲೆ ಸುದ್ದಿಗೋಷ್ಠಿ ನಡೆಸುತ್ತೇನೆ. ಈ ಬಗ್ಗೆ ಸಂಬಂಧಿಸಿದವರನ್ನೇ ಕೇಳಬೇಕು ಎಂದು ಪತಿ ವಿಜಯಾನಂದ ಕಾಶಪ್ಪನವರ್ ಹೆಸರು ಪ್ರಸ್ತಾಪಿಸದೆ ವೀಣಾ ಪ್ರತಿಕ್ರಿಯೆ ನೀಡಿದರು.
ಮಾಧ್ಯಮದಲ್ಲಿ ಮಗುವಿನ ಬರ್ತ್ ಸರ್ಟಿಫಿಕೆಟ್ ತೋರಿಸಲಾಗಿದೆ. ಮಾಧ್ಯಮದಲ್ಲಿ ತೋರಿಸಿದ ಸರ್ಕಾರಿ ದಾಖಲಾತಿ ಸುಳ್ಳಾಗುತ್ತಾ? ಮಾಹಿತಿ ಕಲೆ ಹಾಕಿ ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸುವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ತಿಳಿಸಿದರು.
ಏನಿದು ಪ್ರಕರಣ?
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸದಾ ಒಂದಿಲ್ಲ ಒಂದು ವಿವಾದದಲ್ಲಿ ಸುದ್ದಿಯಾಗ್ತಾರೆ. ಸುಮಾರು ವರ್ಷಗಳ ಹಿಂದೆ ಬೆಂಗಳೂರು ಸ್ಕೈ ಬಾರ್ ನಲ್ಲಿ ಗಲಾಟೆ ಮಾಡಿದ್ದರು. ಕಳೆದ ವರ್ಷವಷ್ಟೆ ಹುನಗುಂದ ಸಿಪಿಐಗೆ ಆವಾಜ್ ಹಾಕಿದ್ದರು. ಇನ್ನು ಪತ್ನಿ ವೀಣಾ ಕಾಶಪ್ಪನವರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಮನೆಗೆ ಬಂದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿ ಕೆಂಡಾಮಂಡಲರಾಗಿದ್ದರು. ನಂತರ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವರ್ಷವೇ ಒಬ್ಬ ನಟಿ ಜೊತೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಇದ್ದರೂ, ಬಹಿರಂಗವಾಗಿರಲಿಲ್ಲ.
ಜುಲೈ 23 ರಂದು ವಿಜಯಾನಂದ ಕಾಶಪ್ಪನವರ್ ನಟಿ ಕಂ ಮಾಡಲ್ ಸಾನಿಕಾ ಜೊತೆಗೆ ಇರುವ ಫೋಟೋ ಬಹಿರಂಗವಾಗಿತ್ತು. ಕಾಶಪ್ಪನವರ ಹಾಗೂ ನಟಿಗೆ ಹೆಣ್ಣು ಮಗು ಜನಿಸಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಹೆಣ್ಣು ಮಗುವಿನ ಜನನ ಪ್ರಮಾಣಪತ್ರ ಪತ್ತೆಯಾಗಿತ್ತು. ಮಗುವಿನ ತಂದೆ ಹೆಸರಿನ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಹೆಸರು ಉಲ್ಲೇಖವಾಗಿತ್ತು. ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಯಲ್ಲಿ ಮಗು ಜನಿಸಿದೆ ಎಂದು ಪ್ರಮಾಣ ಪತ್ರದಲ್ಲಿತ್ತು. ಇನ್ನು ನಟಿ ಕೊರಳಲ್ಲಿ ತಾಳಿ ಕೂಡ ಕಂಡು ಬಂದಿದ್ದು, ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.
ಇನ್ನು ಎರಡನೇ ಮದುವೆ ಆಗಿದ್ದು ನಟಿಯನ್ನು ಮನೆಗೆ ಕರೆತಂದ ಹಿನ್ನೆಲೆ ಕಳೆದ ವರ್ಷ ಜೂನ್ 26 ರಂದು ವಿಜಯಾನಂದ ಕಾಶಪ್ಪನವರ್ ಹಾಗೂ ವೀಣಾ ಕಾಶಪ್ಪನವರ್ ಮಧ್ಯೆ ಜಗಳ ನಡೆದಿತ್ತು. ವೀಣಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಇಳಕಲ್ ಪೊಲೀಸರು ಕಾಶಪ್ಪನವರ್ ಮನೆಗೆ ಹೋದಾಗ ಕಾಶಪ್ಪನವರ್ ಪೊಲೀಸರ ಜೊತೆಗೆ ವಾಗ್ವಾದ ಮಾಡಿದ್ದರು. ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದರು. ಅಂದಿನಿಂದ ಪತ್ನಿ ವೀಣಾ ಕಾಶಪ್ಪನವರ್ ಬೆಂಗಳೂರಿನ ಜೀವನದಿ ಅಪಾರ್ಟ್‌ಮೆಂಟ್ ನಲ್ಲಿ ನೆಲೆಸಿದ್ದಾರೆ. ಇದೀಗ ನಟಿ ಕೊರಳಲ್ಲಿ ತಾಳಿ ಕೂಡ ಇದೆ. ಇನ್ನು ಈ ಮದುವೆ ಪುರಾಣದ ಬಗ್ಗೆ ವೀಣಾ ಕಾಶಪ್ಪನವರ್ ಅವರನ್ನು ಕೇಳಿದರೆ ಉತ್ತರಿಸೋದಕ್ಕೆ ನಿರಾಕರಿಸಿದ್ದರು. ಮೊದಲು ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ ಕೊಡಲಿ, ನಂತರ ನಾನು ಮಾತಾಡೋದಾಗಿ ಹೇಳಿದ್ದರು. ಘಟನೆಗೆ ಸಂಬಂಧಿಸಿದಂತೆ ಆಗ ಮಾತಾಡಿದ್ದ ವಿಜಯಾನಂದ ಕಾಶಪ್ಪನವರ ಇದು ನನಗೆ ಗೊತ್ತಿಲ್ಲ. ಫೊಟೋ ವೈರಲ್ ವಿಚಾರ, ನನಗೆ ಈ ಬಗ್ಗೆ ಗೊತ್ತಿಲ್ಲ. ನನಗೆ ದಾಖಲೆ ಕೊಡಿ, ದಾಖಲೆ ಕೊಟ್ರೆ ನಾನು ಮಾತಾಡ್ತೀನಿ. ನಾನು ಇದಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದರು. ವೈಯಕ್ತಿಕ ಬದುಕಿಗೆ ಹೋಗಬಾರದು. ಯಾರು ವೈಯಕ್ತಿಕ ಬದುಕಿಗೆ ಹೋಗಬಾರ್ದು. ವೈಯಕ್ತಿಕ ಜೀವನವೇ ಬೇರೆ, ರಾಜಕೀಯವೇ ಬೇರೆ. ವಿರೋಧಿಗಳು ಹೀಗೆ ಮಾಡೋದು ಸಹಜ ಎಂದು ಜಾರಿಕೊಂಡಿದ್ದರು.
ಸದ್ಯ ಈಗ ಈ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ ವೀಣಾ ಕಾಶಪ್ಪನವರ್, ವಿಜಯಾನಂದ ಕಾಶಪ್ಪನವರ್ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದ್ದು,ನಾನು ಆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಕಲೆ ಹಾಕಿದ ಮೇಲೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
Published On - 6:07 pm, Sun, 4 September 22