ಆಕೆ ಹುಟ್ಟುತ್ತಲ್ಲೇ ಅಂಧೆ ಅಲ್ಲ, ಎಲ್ಲ ಮಕ್ಕಳಂತೆ ಬದುಕಿನ ಬಾಲ್ಯದ ಹದಿಹರೆಯದ ಸುಂದರ ಕ್ಷಣಗಳನ್ನು ನೋಡುತ್ತಾ ಆಡುತ್ತಾ ಬೆಳೆದವಳು. ಎಲ್ಲ ಯುವತಿಯರಂತೆ ಇದ್ದ ಆಕೆಗೆ ಯಾವಾಗ ವಯಸ್ಸು 22 ದಾಟಿತೋ ಯುವತಿ ಬಾಳಲ್ಲಿ ಅಂಧಕಾರ (Visually Impaired) ಆವರಿಸಿತು. ಆದರೆ ಭರವಸೆಯನ್ನು ಕಳೆದುಕೊಳ್ಳದ ಆ ಯುವತಿ ಬರೊಬ್ಬರಿ ಮೂರು ಸರಕಾರಿ ನೌಕರಿಗೆ ಆಯ್ಕೆಯಾಗಿ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ (Tallent). ಮೊಬೈಲ್ ನಲ್ಲಿ ಆನ್ ಲೈನ್ ಯುಟ್ಯೂಬ್ ಮೂಲಕ ಅಭ್ಯಾಸ, ಪಕ್ಕದಲ್ಲಿ ಸಹೋದರಿಯಿಂದ ಪುಸ್ತಕ ಓದುವುದನ್ನು ಗ್ರಹಿಸಿಕೊಳ್ಳುತ್ತಿರುವ ಯುವತಿ. ಮಗಳ ನೆನೆದು ತಾಯಿಯ ಆನಂದಬಾಷ್ಪ. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ (Success Story).
ಹೌದು ಚಿತ್ರದಲ್ಲಿ ಕಾಣುತ್ತಿರುವ ಈ ಯುವತಿಯ ಹೆಸರು ಪ್ರೀತಿ ಕಾರುಡಗಿಮಠ (Preeti Karudagimath achievement). ಇವರ ಜೀವನವೇ ಎಷ್ಟೋ ಜನರಿಗೆ ಮಾದರಿ ಅಂದರೆ ತಪ್ಪಿಲ್ಲ. ಈಕೆ ಕಣ್ಣು ಕಾಣದಿದ್ದರೂ ಆನ್ ಲೈನ್ ಹಾಗೂ ಯುಟ್ಯೂಬ್ ಮೂಲಕ ಅಭ್ಯಾಸ ಮಾಡಿ ಸಹೋದರಿಯರ ಮೂಲಕ ಪುಸ್ತಕ ಓದಿಸಿಕೊಂಡು ವಿದ್ಯಾಭ್ಯಾಸ ಗ್ರಹಣ ಮಾಡಿ ಒಟ್ಟು ಮೂರು ಸರಕಾರಿ ನೌಕರಿಗೆ ಅರ್ಹಳಾಗಿದ್ದಾಳೆ.
ಅದರಲ್ಲಿ ಒಂದು ಸರಕಾರಿ ನೌಕರಿಯಲ್ಲಿ ಕಳೆದ ಮೂರು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾಳೆ. ಪ್ರೀತಿ 2020 ರಲ್ಲಿ 10 ನೇ ತರಗತಿ ಮೇಲೆ ಕೋರ್ಟ್ ನಲ್ಲಿ ಪ್ರೊಸೆಸಿಂಗ್ ಸರ್ವರ್ ಹುದ್ದೆ, ನಂತರ 2021 ಫಸ್ಟ್ ಗ್ರೇಡ್ ರೆವೆನ್ಯೂ ಇನ್ಸ್ಪೆಕ್ಟರ್ ಹುದ್ದೆ, ಜೊತೆಗೆ 2021 ರಲ್ಲೇ ಎಫ್ ಡಿ ಎ ಪಾಸ್ ಆಗಿ ಇದೀಗ ಕರ್ನಾಟಕ ಬಯಲಾಟ ಅಕಾಡೆಮಿಯಲ್ಲಿ ಎಫ್ ಡಿ ಎ ಆಗಿ ಮೂರು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರೀತಿ ರೆವೆನ್ಯೂ ಇನ್ಸ್ಪೆಕ್ಟರ್ ಹುದ್ದೆ ಸಿಕ್ಕಿದ್ದರೂ ಎಫ್ ಡಿ ಎ ಆಗಿ ಕೆಲಸ ಮಾಡುತ್ತಿರುವುದು ಒಂದು ಕಡೆ ಕುತೂಹಲಕಾರಿ ಮತ್ತೊಂದೆಡೆ ಆಕೆಗೆ ಇರುವ ಛಲವನ್ನು ರುಜುವಾತುಪಡಿಸುತ್ತದೆ. ವೃತ್ತಿ ಜೀವನದ ಆರಂಭದಲ್ಲೇ.. ರೆವೆನ್ಯೂ ಇನ್ಸ್ಪೆಕ್ಟರ್ ಹುದ್ದೆ ನಿಭಾಯಿಸಲು ಸಾಕಷ್ಟು ಸಮಯ ವ್ಯಯಿಸಬೇಕಾದೀತು. ಅದರ ಬದಲು ಕ್ಲರ್ಕ್ ಆಗಿ ನೆಮ್ಮದಿಯಿಂದ ಜೀವನ ಸಾಗಿಸಿದರೆ ಮುಂದೆ ಕೆಎಎಸ್/ ಐ ಎಎಸ್ ಪಾಸ್ ಆಗಲು ಶ್ರಮ ಹಾಕಬಹುದು ಎಂಬುದು ಆಕೆಯ ದೃಢನಿರ್ಧಾರದ ಹಿಂದಿನ ಚಿಕ್ಕ ಲೆಕ್ಕಾಚಾರವಾಗಿದೆ.
ನಾವು ಅಂಧರು ವಿಕಲಚೇತನರು ಅಂತ ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ವಿಕಲತೆಯನ್ನೆ ಮೆಟ್ಟಲು, ಅದನ್ನೇ ಮೆಟ್ಟಿಲು ಮಾಡಿಕೊಂಡು ಸಾಧಿಸಬೇಕು. ನನಗೆ ಕಣ್ಣು ಹೋದಾಗ ಸಾಕಷ್ಟು ನೋವಾಗಿದ್ದು ನಿಜ. ಆದರೆ ಅದಕ್ಕೆ ಎದೆಗುಂದದೆ ಓದಿದ ಪರಿಣಾಮ ಇಂತಹ ಸಾಧನೆ ಮಾಡೋಕೆ ಆಯ್ತು. ಮುಂದೆ ನಾನು ಕೆ ಎ ಎಸ್ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದ್ದೇನೆ ಎನ್ನುವ ಮೂಲಕ ಮತ್ತಷ್ಟು ಸಾಧಿಸುವ ಕಿಚ್ಚು ಹಚ್ಚಿದ್ದಾರೆ.
ಪ್ರೀತಿ ಕಾರುಡಗಿಮಠ ಹುಟ್ಟುತ್ತಲೇ ಅಂಧೆಯಲ್ಲ. ಮೊದಲು ಎಲ್ಲ ಮಕ್ಕಳಂತೆ ಕಣ್ಣುಗಳಿದ್ದು, ದೃಷ್ಟಿ ಸ್ಪಷ್ಟವಾಗಿತ್ತು. ಎಲ್ಲರಂತೆ ಓಡಾಡಿಕೊಂಡು ಬದುಕಿನ ಸುಂದರ ಚಿತ್ರಣವನ್ನು ಕಣ್ಣಾರೆ ಕಂಡು ನಲಿದಾಡಿದವಳು. ಆದರೆ ವಯಸ್ಸು 15 ದಾಟುತ್ತಿದ್ದಂತೆ ಕನ್ನಡಕ ಬಂತು. ಮುಂದೆ ಕಾಲ ಕ್ರಮೇಣ 22 ನೇ ವಯಸ್ಸಿಗೆ ಪೂರ್ಣ ದೃಷ್ಟಿ ಕಳೆದುಕೊಳ್ಳಬೇಕಾಯಿತು.
ಪ್ರೀತಿ ಮೊದಲಿಂದಲೂ ಪ್ರತಿಭಾವಂತೆ ಬಿ ಎಸ್ ಸಿ ಯಲ್ಲಿ 88 % ಅಂಕ ಪಡೆದವಳು. ನಂತರ ಎಂಎಸ್ ಸಿ ಗಣಿತ ವಿಭಾಗದಲ್ಲಿ ಅಧ್ಯಯನದ ವೇಳೆ ಕಣ್ಣು ಕಾಣಿಸದಾದಾಗ ಎಂ ಎಸ್ ಸಿ ಅರ್ಧಕ್ಕೆ ಬಿಡಬೇಕಾಯಿತು. ಆದರೆ ಹದಿಹರೆಯದ ವಯಸ್ಸಿನಲ್ಲಿ ಕಣ್ಣು ಹೋದರೂ ಛಲ ಬಿಡದ ಪ್ರೀತಿ ಅವರು ಮೊದಲ ಅವಕಾಶದಲ್ಲೇ ಎಫ್ ಡಿ ಎ ಪಾಸ್ ಆಗಿದ್ದು ವಿಶೇಷ. ಇಲ್ಲಿ ಈಕೆಗೆ ಸಹೋದರಿ ದೀಪಾ ಪುಸ್ತಕ ಓದಿ ಹೇಳುವುದರಲ್ಲಿ ನೆರವಾದರೆ, ಇನ್ನೊಬ್ಬ ಸಹೋದರಿ ಜ್ಯೋತಿ ಅಂಧರಿಗೆ ಅವಕಾಶವಿರುವ “ಸ್ಕ್ರೈಬ್ ಪದ್ದತಿ” ಪ್ರಕಾರ (scribe assistance) ಇವಳ ಪರವಾಗಿ ಪರೀಕ್ಷೆ ಬರೆಯುತ್ತಿದ್ದರು.
ತಂದೆ ಪುಸ್ತಕ ಅಭ್ಯಾಸ ಯಾವುದಕ್ಕೂ ಕೊರತೆ ಮಾಡುತ್ತಿರಲಿಲ್ಲ. ತಂದೆ ತಾಯಿ ಸಹೋದರ, ಸಹೋದರಿಯರ ಪ್ರೋತ್ಸಾಹದಿಂದ ಪ್ರೀತಿ ಕಣ್ಣು ಕಾಣದಿದ್ದರೂ ಮೂರು ಸರಕಾರಿ ನೌಕರಿ ಪಡೆಯುವ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ. ಇನ್ನು ಮಗಳ ಸಾಧನೆ ಬಗ್ಗೆ ಆನಂದಬಾಷ್ಪ ಹಾಗೂ ಮದುವೆ ಮಾಡುವ ವಯಸ್ಸಲ್ಲಿ ಕಣ್ಣು ಕಾಣದಾಯಿತಲ್ಲ ಎಂದು ಹೆತ್ತಮ್ಮ ಕಣ್ಣೀರು ಹಾಕಿದ್ದು ಮನಕಲುಕುವಂತಿತ್ತು.
ಇದೆಲ್ಲ ಒಂದು ಕಡೆ ನೋವು ಇದ್ದರೂ ಮಗಳ ಸಾಧನೆ ಮುಂದೆ ಎಲ್ಲ ಮರೆತ ಕುಟುಂಬ, ವಿಕಲಚೇತನರಿಗೆ, ಅಂಧರಿಗೆ ಮೊದಲು ಕುಟುಂಬ ಸಾಥ್ ನೀಡಬೇಕು. ಎಲ್ಲರೂ ಪ್ರೋತ್ಸಾಹ ನೀಡಿದ್ದಲ್ಲಿ ವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ. ಇದಕ್ಕೆ ನಮ್ಮ ಸಹೋದರಿಯೇ ಸಾಕ್ಷಿ ಅಂತಾ ಸಹೋದರ ಹೇಳಿದರೆ, ತಂದೆ ಮಗಳನ್ನು ಐಎ ಎಸ್ ಮಾಡಬೇಕು, ಇಲ್ಲ ಕೆಎಎಸ್ ಅಧಿಕಾರಿ ರೂಪದಲ್ಲಾದರೂ ನಾವು ನೋಡುವಂತಾಗಲೇ ಬೇಕು ಅಂತಿದ್ದಾರೆ.
ವರದಿ: ರವಿ ಮೂಕಿ, ಟಿವಿ 9, ಬಾಗಲಕೋಟೆ