ಬಾಗಲಕೋಟೆ: ಗುಜರಿ ಕೆಲಸ ಮಾಡುವ ಕುಟುಂಬದ ಅಜರುದ್ಧೀನ್ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನೇಕಾರ ಕಾಲೋನಿಯ ಮಹಮ್ಮದ್ ಅಜರುದ್ಧಿನ್ ಹಾಲ್ಯಾಳ ಎಂಬ ಯುವಕ ಸತತ ನಾಲ್ಕನೇ ಪ್ರಯತ್ನದಲ್ಲೇ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. 2024ರ ಜುಲೈ 5 ರಂದು ಫಲಿತಾಂಶ ಹೊರಬಿದ್ದಿದ್ದು, 163 ನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಾಗಲಕೋಟೆ, ಜುಲೈ 08: ಯುಪಿಎಸ್ಸಿ ನಡೆಸುವ ಸಿಎಪಿಎಫ್ ಪರೀಕ್ಷೆ ಪಾಸು ಮಾಡುವ ಮೂಲಕ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ (assistant commandant) ಹುದ್ದೆಗೆ ಜಿಲ್ಲೆಯ ಇಳಕಲ್ನ (Ilkal) ಯುವಕ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಇಳಕಲ್ ನಗರದ ನೇಕಾರ ಕಾಲೋನಿಯ ಮಹಮ್ಮದ್ ಅಜರುದ್ಧಿನ್ ಹಾಲ್ಯಾಳ ಇವರೇ ಆ ಸಾಧನೆ ಮಾಡಿದ ಯುವಕ. 2023ರಲ್ಲಿ ಪರೀಕ್ಷೆ ನಡೆದಿದ್ದು, 2024ರ ಜುಲೈ 5 ರಂದು ಫಲಿತಾಂಶ ಹೊರಬಿದ್ದಿದ್ದು, 163 ನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲೇ ಪರೀಕ್ಷೆ ಪಾಸು ಮಾಡಿರುವುದು ಮತ್ತೊಂದು ವಿಶೇಷ.
ಮನೆಯಲ್ಲಿ ಬಡತನ ಇದ್ದರೂ ತಾಯಿ ಬಿಬಿಜಾನ್ ಮಗ ಅಜರುದ್ಧಿನ್ ಓದಿಗೆ ಯಾವುದೇ ಕೊರತೆ ಮಾಡಿಲ್ಲ. ಕುಟುಂಬ ಗುಜರಿ ತುಂಬುವ ಕಾಯಕ ಮಾಡುತ್ತಾರೆ. ಪ್ರಾಥಮಿಕ ಶಾಲೆ ಇಳಕಲ್ ನಗರದ ಮಹಾಂತ ಗುರುಗಳ ಶಾಲೆಯಲ್ಲಿ ಓದಿದ ಅಜರುದ್ಧಿನ್, 6ನೇ ತರಗತಿಗೆ ನವೋದಯ ಶಾಲೆ, ಧಾರವಾಡ ಕೃಷಿ ವಿವಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಸಿಬ್ಬಂದಿಗೆ ಬರ: 490 ಹುದ್ದೆಗಳು ಖಾಲಿ
ಮುಂಬೈ ಹಾಗೂ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆದುಕೊಂಡಿದ್ದು, ತನ್ನ ಶೈಕ್ಷಣಿಕ ಜೀವನದಲ್ಲಿ ತನಗೆ ತಾಯಿ ಹಾಗೂ ಸಹೋದರರು ಬಡತನ ತೋರಿಸಲೇ ಇಲ್ಲ. ಅವರು ಕಷ್ಟಪಟ್ಟು ನನ್ನ ಓದಿಗೆ ತೊಂದರೆ ಆಗದಂತೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಒಂದು ಸಲ ಫೇಲ್ ಆಗಿದ್ದೇನೆಂದು ಪ್ರಯತ್ನ ನಿಲ್ಲಿಸಬೇಡಿ. ಆತ್ಮವಿಶ್ವಾಸ, ನಿಷ್ಠೆಯಿಂದ ಪ್ರಯತ್ನ ಮಾಡಿ, ಯಶಸ್ಸು ಸಿಗುತ್ತೆ ಎಂದು ಯುಪಿಎಸ್ಸಿ ಕನಸು ಹೊತ್ತವರಿಗೆ ಅಜರುದ್ಧೀನ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 15 ವರ್ಷದ ಬಾಲಕನಿಗೆ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ; ಉತ್ತರ ಕರ್ನಾಟಕದಲ್ಲೇ ಇದೇ ಮೊದಲು
ಮಗನ ಸಾಧನೆಗೆ ತಾಯಿ ಬಿಬಿಜಾನ್ ಭಾವುಕರಾಗಿದ್ದಾರೆ. ಇದನ್ನು ನೋಡಲು ಆತನ ತಂದೆ ಇರಬೇಕಿತ್ತು ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಅಜರುದ್ಧೀನ್ ಮನೆಯಲ್ಲಿ ಸಂಭ್ರಮ ಶುರುವಾಗಿದೆ. ಇಂದು ಇಳಕಲ್ ನಗರದಲ್ಲಿ ಸನ್ಮಾನ ಕೂಡ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.