ಬಳ್ಳಾರಿಯಲ್ಲಿ ಬಾಣಂತಿಯರ ಮರಣಮೃದಂಗ: ಅಧಿಕಾರಿಗಳಿಗೆ ಸಿಎಂ ಸೂಚನೆ, ವರದಿ ನೀಡಲು ಗಡುವು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2024 | 7:32 PM

ಬಳ್ಳಾರಿಯಲ್ಲಿ ಐವರು ಬಾಣಂತಿಯರು ಸಾವಿನ ಮನೆ ಸೇರ್ತಿದ್ದಂತೆ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು. ಹೀಗಾಗಿ ಇವತ್ತು ಮುಖ್ಯಮಂತ್ರಿಗಳೇ ಸಭೆ ನಡೆಸಿ ಸಾವಿನ ಸತ್ಯ ಅರಿಯಲು ಅಧಿಕಾರಿಗಳಿಗೆ ಡೆಡ್‌ಲೈನ್‌ ನೀಡಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.

ಬಳ್ಳಾರಿಯಲ್ಲಿ ಬಾಣಂತಿಯರ ಮರಣಮೃದಂಗ: ಅಧಿಕಾರಿಗಳಿಗೆ ಸಿಎಂ ಸೂಚನೆ, ವರದಿ ನೀಡಲು ಗಡುವು
ಬಳ್ಳಾರಿಯಲ್ಲಿ ಬಾಣಂತಿಯರ ಮರಣಮೃದಂಗ: ಅಧಿಕಾರಿಗಳಿಗೆ ಸಿಎಂ ಸೂಚನೆ, ವರದಿ ನೀಡಲು ಗಡುವು
Follow us on

ಬೆಂಗಳೂರು, ನವೆಂಬರ್​ 30: ಬಳ್ಳಾರಿ (Ballari) ಜಿಲ್ಲಾಸ್ಪತ್ರೆಗೆ ಹೆರಿಗೆಗೆ ಅಂತಾ ದಾಖಲಾಗಿದ್ದ 7 ಗರ್ಭಿಣಿಯರಿಗೆ ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗೆ ಎರಡ್ಮೂರು ವಾರದ ಅಂತರದಲ್ಲೇ ಐವರು ಬಾಣಂತಿಯರು ಸಾವನ್ನಪ್ಪಿದ್ದರು. ಐವಿ ಗ್ಲುಕೋಸ್‌ ಇದಕ್ಕೆ ಕಾರಣವೆಂಬುದು ಗೊತ್ತಾಗಿದೆ. ಇದರ  ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದು, ಖಡಕ್​ ಎಚ್ಚರಿಕೆ ನಿಡಿದ್ದಾರೆ. 7 ದಿನಗಳಲ್ಲಿ ವರದಿ ನೀಡಲು ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಇನ್ನು ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಕಂಪನಿಯಿಂದಲೂ ಪರಿಹಾರ ಮತ್ತು ಆಸ್ಪತ್ರೆ ಎಂಡಿಗೆ ನೋಟಿಸ್ ಕೊಡಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣ ಬಹಿರಂಗ!

ಸಿಸೇರಿಯನ್ ವೇಳೆ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ ಸಿಸೇರಿಯನ್ ವೇಳೆ ಮೃತಪಟ್ಟ ಉದಾಹರಣೆ ಇಲ್ಲ. ಲಿಂಗರ್ ಲ್ಯಾಕ್ಟೇಟ್ ಪೂರೈಸಿದ್ದು ಬಂಗಾಳದ ಔಷಧ ಕಂಪನಿ. ಪಶ್ಚಿಮ ಬಂಗಾಳದ ಕಂಪನಿಯನ್ನ ಬ್ಲಾಕ್‌ಲಿಸ್ಟ್‌ಗೆ ಹಾಕಿದ್ದೇವೆ. ಬಳ್ಳಾರಿ ಜಿಲ್ಲಾ ಔಷಧ ನಿಯಂತ್ರಕನನ್ನ ಸಸ್ಪೆಂಡ್‌ ಮಾಡಿದ್ದೇವೆ ಎಂದಿದ್ದಾರೆ.

ಈಗ ಪೂರೈಕೆಯಾಗಿರುವ ಔಷಧಗಳನ್ನ ಹಿಂಪಡೆಯಲಾಗುತ್ತೆ. ಚೆನ್ನೈ ಮಾದರಿಯಲ್ಲಿ ಮೆಡಿಕಲ್ ಸ್ಟ್ರಕ್ಚರ್ ಜಾರಿಗೆ ಬಳ್ಳಾರಿಯ ಸರ್ಜನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆಪರೇಷನ್​ ಮಾಡಿದ ವೈದ್ಯರ ತಪ್ಪಿಲ್ಲ ಎಂದು ಪ್ರಾಥಮಿಕ ವರದಿ ಇದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ನಮಗೆ ಐವಿ ದ್ರಾವಣದ ಮೇಲೆ ಸಂಶಯವಿದೆ: ಸಚಿವ ದಿನೇಶ್‌

ಆರೋಗ್ಯ ಸಚಿವ ದಿನೇಶ್‌ ಪ್ರತಿಕ್ರಿಯಿಸಿದ್ದು, ಡಿಸೆಂಬರ್‌ 9ರಂದು ವರದಿ ನೀಡುವುದಾಗಿ ಹೇಳಿದ್ದಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಸಿಎಂ ಜೊತೆ ನಾವು ಚರ್ಚೆ ಮಾಡಿದ್ದೇವೆ. ನಮಗೆ ಅನುಮಾನ ಇರೋದು ದ್ರಾವಣದ ಮೇಲೆ. ಅದರ ಲ್ಯಾಬ್ ವರದಿ ಬರಬೇಕಿದೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ. ನಮಗೆ ಐವಿ ದ್ರಾವಣದ ಮೇಲೆ ಸಂಶಯವಿದೆ. ಒಟ್ಟು ನಾಲ್ವರು ಬಾಣಂತಿಯರಲ್ಲಿ ಇಬ್ಬರಿಗೆ ಮೊದಲ ಹೆರಿಗೆ ಆಗಿತ್ತು. ಆರೋಗ್ಯವೂ ಉತ್ತಮವಿತ್ತು, ಮೃತಪಟ್ಟಿರೋದು ನೋವಿನ ಸಂಗತಿ ಎಂದು ಹೇಳಿದ್ದಾರೆ.

ಬಳ್ಳಾರಿ ಆಸ್ಪತ್ರೆಯಲ್ಲಿ 2600 ಸರ್ಜರಿ ಆಗಿತ್ತು. ಸಿಜೇರಿಯನ್​ಗಳಲ್ಲಿ ಯಾರು ಮೃತಪಟ್ಟಿಲ್ಲ. ದ್ರಾವಣ ಗುಣಮಟ್ಟದ ಬಗ್ಗೆ ಕಳಿಸಿದ್ದೇವೆ. ವರದಿ ಬರಲು ಎಂಟು ಒಂಭತ್ತು ದಿನಗಳ ಆಗಬಹುದು. ವರದಿ ಬಂದ ನಂತರ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.

ನಾವು ಮೊದಲು ಅವರನ್ನ ಬ್ಲಾಕ್​ಗೆ ಹಾಕಿದ್ದೆವು. ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಸೆಂಟ್ರಲ್​ ಲ್ಯಾಬ್​ನಲ್ಲಿ ಅದು ಕರೆಕ್ಟ್ ಇದೆ ಅಂತ ಬರುತ್ತೆ. ಎನ್​ಇಎ ಲ್ಯಾಬ್​ನಲ್ಲಿ ಉಪಯೋಗ ಮಾಡಬಹುದು ಅಂತಿದೆ. ಡ್ರಗ್ ಕಂಟ್ರೋಲ್ 92 ಬ್ಯಾಚ್ ಪರೀಕ್ಷೆ ಮಾಡಿತ್ತು. ಆದರೆ 22 ಬ್ಯಾಚ್​ಗಳ ಬಗ್ಗೆ ವರದಿ ಸರಿಯಾಗಿ ಬರಲಿಲ್ಲ. ಬಳ್ಳಾರಿ ಬ್ಯಾಚ್ ವರದಿ ಪರೀಕ್ಷೆಗೆ ಹೋಗಿದೆ. ಈ ಹಿಂದೆ ಸಂಶಯ ಬಂದಾಗ ನಾವು ಪರೀಕ್ಷೆಗೆ ಕಳಿಸಿದ್ದೆವು. ವೈದ್ಯರು ಕೆಲಸ ಮಾಡಿದ್ದಾರೆ, ಐವಿ ದ್ರಾವಣ ಮೇಲೆ ಸಂಶಯ ಬಂದಿದೆ. ಈಗ ಎಕ್ಸ್​ಪರ್ಟ್ ಕಮಿಟಿ ಮಾಡಿದ್ದೇವೆ, ಅವರೂ ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ 7 ಮಂದಿ ಗರ್ಭಿಣಿಯರಲ್ಲಿ ಮೂವರಿಗೆ ಇಲಿ ಜ್ವರ

ದಾವಣಗೆರೆ, ಪಾವಗಡಕ್ಕೆ ಪೂರೈಕೆಯಾಗಿದ್ದ ಐವಿ ದ್ರಾವಣ ಪರೀಕ್ಷೆ ಮಾಡಲಾಗಿತ್ತು. ಇದರಿಂದ ಸಮಸ್ಯೆ ಇಲ್ಲ ಅಂತಾ ರಿಪೋರ್ಟ್​​ ಬಂದಿತ್ತು. ಈಗ 22 ಬ್ಯಾಚ್ ಕ್ವಾಲಿಟಿ ಇಲ್ಲ ಅಂತಾ ಆರೋಪ ಬಂದಿದೆ. ನಾವು ಇದರ ಆಧಾರದ ಮೇಲೆ ಪ್ರಾಸಿಕ್ಯೂಟ್ ಮಾಡಬಹುದಿತ್ತು. ಕೆಎಸ್​​​ಸಿ ಲ್ಯಾಬ್​ನಲ್ಲೂ ಪರೀಕ್ಷೆಯಾಗಿದೆ ಎಂದಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:31 pm, Sat, 30 November 24