ಬಳ್ಳಾರಿಗೂ ವಕ್ಕರಿಸಿದ ಹಕ್ಕಿ ಜ್ವರ: ಒಂದೇ ವಾರದಲ್ಲಿ 2 ಸಾವಿರ ಕೋಳಿಗಳ ಸಾವು
ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಹಕ್ಕಿ ಜ್ವರದಿಂದ 2400 ಕೋಳಿಗಳು ಸಾವನ್ನಪ್ಪಿವೆ. ಪ್ರಯೋಗಾಲಯ ವರದಿ ಇದನ್ನು ದೃಢಪಡಿಸಿದೆ. ಸರ್ಕಾರ ಕುರೇಕುಪ್ಪ ಗ್ರಾಮದ ಸುತ್ತ ಒಂದು ಕಿಮೀ ಅಪಾಯಕಾರಿ ವಲಯ ಮತ್ತು 10 ಕಿಮೀ ಕಣ್ಣಗಾವಲು ವಲಯವನ್ನಾಗಿ ಗುರುತಿಸಿದೆ. ಚಿಕ್ಕಬಳ್ಳಾಪುರದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಕೋಳಿಗಳನ್ನು ನಾಶಪಡಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ.

ಬಳ್ಳಾರಿ, ಮಾರ್ಚ್ 01: ಚಿಕ್ಕಬಳ್ಳಾಪುರ (Chikkaballapur) ಬಳಿಕ ಗಡಿ ಜಿಲ್ಲೆ ಬಳ್ಳಾರಿಯಲ್ಲೂ (Ballari) ಕೋಳಿ ಜ್ವರದ ಆತಂಕ ಮನೆಮಾಡಿದೆ. ಸಂಡೂರ (Sandur) ತಾಲೂಕಿನ ಕುರೇಕುಪ್ಪ ಗ್ರಾಮದ ಬಳಿಯ ಸರ್ಕಾರಿ ಪಾಲ್ಟ್ರಿ ಪಾರ್ಮನಲ್ಲಿನ 2400 ಕೋಳಿಗಳು ಹಕ್ಕಿ ಜ್ವರ (Bird Flu) ದಿಂದ ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಫೆಬ್ರವರಿ 21 ರಿಂದ ಇಲ್ಲಿಯವರೆಗೆ ಹಂತ ಹಂತವಾಗಿ 2400 ಕೋಳಿಗಳ ಮೃತಪಟ್ಟಿವೆ. ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಮಧ್ಯಪ್ರದೇಶದ ಭೂಪಾಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಹೈ ಸೆಕ್ಯೂರಿಟಿ ಅನಿಮಲ್ ದಿಸೀಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿ ಬಂದ ಬಳಿಕ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿತು. ಆಂಧ್ರಪ್ರದೇಶ, ತೆಲಂಗಾಣದಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದರು.
ಹಕ್ಕಿ ಜ್ವರ ದೃಢ ಹಿನ್ನೆಲೆಯಲ್ಲಿ ಬಳ್ಳಾರಿ ಜನರು ಆತಂಕಗೊಂಡಿದ್ದಾರೆ. ಇನ್ನು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಕುರೇಕುಪ್ಪ ಗ್ರಾಮದ ಸುತ್ತಲಿನ ಒಂದು ಕಿಮೀ ದೂರವನ್ನ ಅಪಾಯಕಾರಿ ವಲಯ ಎಂದು ಗುರುತು ಮಾಡಲಾಗಿದೆ. ತೋರಣಗಲ್ಲು, ಕುರೆಕುಪ್ಪ, ವಡ್ಡು, ತಾಳೂರು, ಬಸಾಪುರ, ದರೋಜಿ, ದೇವಲಾಪುರ ಗ್ರಾಮಗಳು ಸೇರಿದಂತೆ 10 ಕಿಮೀ ವ್ಯಾಪ್ತಿಯ ಪ್ರದೇಶವನ್ನ ಕಣ್ಣಗಾವಲು ವಲಯ ಎಂದು ಗುರುತು ಮಾಡಲಾಗಿದೆ.
ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ
ಚಿಕ್ಕಬಳ್ಳಾಪುರದಲ್ಲಿ ಕೋಳಿಗಳ ನಾಶ
ಚಿಕ್ಕಬಳ್ಳಾಪುರ ತಾಲೂಕು ವರದಹಳ್ಳಿ ಗ್ರಾಮಕ್ಕೆ ಹಕ್ಕಿ ಜ್ವರ ವಕ್ಕರಿಸಿದ್ದು, ದಿನೇ ದಿನೇ ಕೋಳಿಗಳು ಸಾಯುತ್ತಿವೆ. ಶುಕ್ರವಾರ (ಫೆ.28) ಒಂದೇ ದಿನ ಗ್ರಾಮದ ಮುನಿಕುಮಾರ್ ಎಂಬುವವರ ಮನೆಯಲ್ಲಿ 8 ಕೋಳಿಗಳು ಮೃತಪಟ್ಟಿವೆ. ಉಳಿದ ಕೋಳಿಗಳು ಕೂಡ ಸಾಯುವ ಸ್ಥಿತಿಯಲ್ಲಿವೆ. ಹೀಗಾಗಿ, ಗ್ರಾಮದಲ್ಲಿ ಹಕ್ಕಿ ಜ್ವರ ಕಡಿವಾಣ ಹಾಕಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುಂದಾಗಿದ್ದು, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಾಕು ಕೋಳಿಗಳನ್ನು ನಾಶಪಡಿಸಿದ್ದಾರೆ.
ರಾಯಚೂರಿನಲ್ಲೂ ಅಲರ್ಟ್
ರಾಯಚೂರಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನಪ್ಪುತ್ತಿರುವ ಹಿನ್ನೆಲೆಯಲ್ಲಿ ಕೋಳಿ ಉತ್ಪನ್ನಗಳ ಮೇಲೆ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ನಿತೀಶ್.ಕೆ ಆದೇಶ ಹೊರಡಿಸಿದ್ದಾರೆ. ಪಶು ಸಂಗೋಪನಾ ಅಧಿಕಾರಿಗಳು ಕೋಳಿ ಫಾರ್ಮ್ಗಳನ್ನು ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಫಾರ್ಮ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಕೋಳಿ ಫಾರ್ಮ್ ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡಣೆಗೆ ಸೂಚಿಸಿದ್ದಾರೆ. ಫಾರ್ಮ್ ಒಳಗಡೆ ಹೊಸ ವ್ಯಕ್ತಿ, ಕೋಳಿ ವಾಹನ ಪ್ರವೇಶಕ್ಕೆ ಅವಕಾಶ ನೀಡಬಾರದು. ಸ್ಯಾನಿಟೈಸರ್ ಮಾಡಿದ ಬಳಿಕವೇ ಕೋಳಿ ಫಾರ್ಮ್ ಒಳಗೆ ಪ್ರವೇಶ ನೀಡಬೇಕೆಂದು ಸೂಚನೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 am, Sat, 1 March 25